An unconventional News Portal.

ಬಿಜೆಪಿಯ ಕೋರ್ ಕಮಿಟಿಯಲ್ಲಿ ಮೊದಲ ಸ್ಥಾನ ಪಲ್ಲಟ

ಬಿಜೆಪಿಯ ಕೋರ್ ಕಮಿಟಿಯಲ್ಲಿ ಮೊದಲ ಸ್ಥಾನ ಪಲ್ಲಟ

ಬಿಜೆಪಿಯ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅರುಣ್ ಕುಮಾರ್ ನೇಮಕಗೊಂಡಿದ್ದಾರೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಈ ಸ್ಥಾನದಲ್ಲಿದ್ದ ಸಂತೋಷ್ ಅವರನ್ನು ಬೀಳ್ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ, ಬಿಜೆಪಿಯ ಕೋರ್ ಕಮಿಟಿ ಪುನರ್ ರಚನೆಗೂ ಮುನ್ನವೇ ಪ್ರಮುಖ ಸ್ಥಾನವೊಂದರ ಪಲ್ಲಟವಾದಂತಾಗಿದೆ.

ರಾಜ್ಯ ಬಿಜೆಪಿ ಪಾಲಿಗೆ ಸಂಘಟನಾ ಕಾರ್ಯದರ್ಶಿ ಸ್ಥಾನ ಆಯಕಟ್ಟಿನ ಹೊಣೆಗಾರಿಕೆ ಎನ್ನಲಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷದ ನಡುವಿನ ಕೊಂಡಿಯಂತೆ ಸಂಘಟನಾ ಕಾರ್ಯದರ್ಶಿ ಕೆಲಸ ಮಾಡುತ್ತಾರೆ. ಹೀಗಾಗಿ, ಪಕ್ಷದ ರಾಜ್ಯಾಧ್ಯಕ್ಷರಾದವರು, ತಮಗೆ ನಂಬಿಕಸ್ಥರನ್ನು ಈ ಸ್ಥಾನದಲ್ಲಿ ಕೂರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.

2006ರಲ್ಲಿ ಶಿವಮೊಗ್ಗದಲ್ಲಿ ಸಂಘದ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಅವರನ್ನು ಬಿಜೆಪಿಗೆ ತರೆತಂದು ರಾಜ್ಯ ಸಂಘಟನಾ ಸ್ಥಾನವನ್ನು ನೀಡಿದವರು ಬಿ. ಎಸ್, ಯಡಿಯೂರಪ್ಪ. ಮುಂದೆ ಅವರು ಮುಖ್ಯಮಂತ್ರಿಯಾದ ನಂತರ ಇಬ್ಬರ ಸಂಬಂಧ ಬಿರುಕು ಬಿಟ್ಟಿತ್ತು. ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆಯನ್ನು ಮೊದಲು ಸಂಘದ ಗಮನಕ್ಕೆ ತಂದವರು ಸಂತೋಷ್ ಎಂಬುದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ನಂತರ ಯಡಿಯೂರಪ್ಪ ಪಕ್ಷ ಬಿಟ್ಟು ಹೊರಬಂದರೂ ಸಂತೋಷ್ ಅದೇ ಸ್ಥಾನದಲ್ಲಿ ಮುಂದುವರಿದಿದ್ದರು. ಇದೀಗ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ, ಸಂತೋಷ್ ಅವರ ಸ್ಥಾನವನ್ನು ಪಲ್ಲಟಗೊಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಸಂತೋಷ್ ಅವರಿಗೆ ಪಕ್ಷ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಆಯಕಟ್ಟಿನ ಸ್ಥಾನ ನೀಡಿದೆ ಎಂದೂ ಪಕ್ಷದ ಮೂಲಗಳು ಹೇಳುತ್ತಿವೆ.

ಅವರ ಸ್ಥಾನಕ್ಕೆ ಧಾರವಾಡ ಮೂಲಕ ಅರುಣ್ ಕುಮಾರ್ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ ಬಿಜೆಪಿಯ ಕೋರ್ ಕಮಿಟಿಯ ಪುನರ್ ರಚನೆ ಇನ್ನೂ ಬಾಕಿ ಇದೆ. ಶೋಭ ಕರಂದ್ಲಾಜೆ ಅವರಿಗೆ ಜಾಗ ಸಿಗಲಿದೆಯಾ ಎಂಬುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ.

Top