An unconventional News Portal.

ಕೆರೆ ಒತ್ತುವರಿ ಸದನ ಸಮಿತಿ ಬಗ್ಗೆ ‘ಗುಸುಗುಸು’: ರಾಜೀನಾಮೆ ಕಾರಣವನ್ನು ನಿಗೂಢವಾಗಿಟ್ಟ ಸುರೇಶ್ ಕುಮಾರ್

ಕೆರೆ ಒತ್ತುವರಿ ಸದನ ಸಮಿತಿ ಬಗ್ಗೆ ‘ಗುಸುಗುಸು’: ರಾಜೀನಾಮೆ ಕಾರಣವನ್ನು ನಿಗೂಢವಾಗಿಟ್ಟ ಸುರೇಶ್ ಕುಮಾರ್

‘ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ’ಗೆ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ರಾಜಿನಾಮೆ ನೀಡಿದ್ದಾರೆ. ಸಮಿತಿ ಅಧ್ಯಕ್ಷರೂ ಆದ, ಸದ್ಯ ಸ್ಪೀಕರ್ ಆಗಿರುವ ಕೆ. ಬಿ. ಕೋಳಿವಾಡರಿಗೆ ಶುಕ್ರವಾರ ಪತ್ರ ರವಾನಿಸಿದ್ದಾರೆ.

“ಸ್ಪೀಕರ್ ಆದವರು ಸದನ ಸಮಿತಿ ಅಧ್ಯಕ್ಷರಾಗಿ ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ. ಸದನ ಸಮಿತಿ ವಿಧಾನ ಸಭಾಧ್ಯಕ್ಷರಿಗೆ ವರದಿ ನೀಡಬೇಕು. ಆದರೆ ವಿಧಾನಸಭಾ ಅಧ್ಯಕ್ಷರೂ, ಸ್ಪೀಕರ್ ಒಬ್ಬರೇ ಆಗಿರುವುದರಿಂದ, ವರದಿಯನ್ನು ನೀವು ನಿಮ್ಮ ಬಲಗೈಯಿಂದ ನಿಮ್ಮದೇ ಎಡಗೈಗೆ  ಹಸ್ತಾಂತರಿಸುವ ವಿಶೇಷ ಪರಿಸ್ಥಿತಿ ಎದುರಾಗಬಹುದು. ಈ ಕಾರಣಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ,” ಎಂದು ಸಭಾಧ್ಯಕ್ಷ ಕೆ. ಬಿ. ಕೋಳಿವಾಡರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಇದಲ್ಲದೆ ಸದನ ಸಮಿತಿಯ ಒಟ್ಟು ಕಾರ್ಯ ವೈಖರಿ ಬಗ್ಗೆಯೂ ಗುಸು ಗುಸು ಸುದ್ದಿಗಳು ಕೇಳಿ ಬರುತ್ತಿವೆ. ಸದನ ಸಮಿತಿ ರಚನೆಯಾಗಿ 2 ವರ್ಷ 2 ತಿಂಗಳುಗಳಾಗಿವೆ, ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 1 ವರ್ಷ 5 ತಿಂಗಳುಗಳು ಮಾತ್ರ ಬಾಕಿಯಿದೆ. ಸದನ ಸಮಿತಿ ವರದಿ ಸಲ್ಲಿಸುವುದು ಯಾವಾಗ? ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಸಿಗುವ ಅವಧಿ ಎಷ್ಟಿರಬಹುದು?” ಎಂಬ ಪ್ರಶ್ನೆಗಳನ್ನು ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

“ಈ ಎಲ್ಲ ಕಾರಣಗಳಿಂದ ಸದನ ಸಮಿತಿ ಸದಸ್ಯನಾಗಿ ಮುಂದುವರೆಯುವುದು ನನಗೆ ಸಂಕೋಚವೆನಿಸಿದೆ. ಆದ್ದರಿಂದ ನಾನು ಈ ಸಮಿತಿಯಿಂದ ಹೊರ ಬರುತ್ತಿದ್ದೇನೆ,” ಎಂದು ಕುಮಾರ್ ವಿವರಿಸಿದ್ದಾರೆ.

suresh-kumar-resignation

ಸುರೇಶ್ ಕುಮಾರ್ ಸಭಾಧ್ಯಕ್ಷರಿಗೆ ಸಲ್ಲಿಸಿದ ರಾಜಿನಾಮೆ ಪತ್ರ

ಸುರೇಶ್ ಕುಮಾರ್ ಸಭಾಧ್ಯಕ್ಷರಿಗೆ ಸಲ್ಲಿಸಿದ 2 ಪುಟಗಳ ರಾಜಿನಾಮೆ ಪತ್ರ

ಕೆರೆ ಒತ್ತುವರಿ ಸದನ ಸಮಿತಿ

ಬೆಂಗಳೂರಿನ ಸುತ್ತ ಮುತ್ತ ಕೆರೆಗಳ ಭಾರಿ ಒತ್ತುವರಿ ಆಗಿವೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಚರ್ಚೆಯ ಆಧಾರದ ಮೇಲೆ ವರದಿ ಸಲ್ಲಿಸಲು ಅಂದಿನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಹಿರಿಯ ಕಾಂಗ್ರೆಸ್ ಶಾಸಕ ಕೆ.ಬಿ ಕೋಳಿವಾಡರ ಅಧ್ಯಕ್ಷತೆಯಲ್ಲಿ 27/10/2014ರಂದು ‘ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ’ ರಚಿಸಿದ್ದರು. ಇದರಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಕೂಡಾ ಸದಸ್ಯರಾಗಿದ್ದರು.

ಸಮಿತಿ ರಚನೆಯಾದ ನಂತರ ಸದಸ್ಯರು ಹಾಗೂ ಅಧ್ಯಕ್ಷರು ಹಲವು ಭಾಗಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ ಸುದ್ದಿಗಳು ವರದಿಯಾಗಿದ್ದವು. ಸುಮಾರು 50ಕ್ಕೂ ಹೆಚ್ಚು ಸಭೆಗಳು ನಡೆದಿವೆ ಎಂದು ಸ್ವತಃ ಸುರೇಶ್ ಕುಮಾರ್ ಹೇಳಿದ್ದಾರೆ.

ಮುಂದೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿಗಳಾದ ಬಳಿಕ ಅವರ ಜಾಗಕ್ಕೆ ಇದೇ ಸದನ ಸಮಿತಿ ಅಧ್ಯಕ್ಷರಾಗಿದ್ದ ಕೆ. ಬಿ. ಕೋಳಿವಾಡರನ್ನು ತಂದು ಕೂರಿಸಲಾಯಿತು. ಸ್ಪೀಕರ್ ಆದ ನಂತರವೂ ಕೋಳಿವಾಡ್ ಸಮಿತಿಯ ಅಧ್ಯಕ್ಷರಾಗಿಯೇ ಮುಂದುವರಿದ್ದಾರೆ. ಇದೀಗ ಇದೇ ಕಾರಣವನ್ನು ಮುಂದಿಟ್ಟು ಸುರೇಶ್ ಕುಮಾರ್ ಸದನ ಸಮಿತಿಗೆ ರಾಜಿನಾಮೆ ಬಿಸಾಕಿದ್ದಾರೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿರುವ ಸುರೇಶ್ ಕುಮಾರ್, ಪತ್ರದಲ್ಲಿ ಪ್ರಸ್ತಾಪಿಸಿರುವ ‘ಗುಸು ಗುಸು’ ವಿಚಾರವನ್ನು ಬಹಿರಂಗಪಡಿಸಲು ನಿರಾಕರಿಸಿದರು.

“ಅದು ಅವರಿಗೆ (ಕೋಳಿವಾಡ್) ಮಾತ್ರ ಗೊತ್ತಾಗಲಿ,” ಎಂದಿದ್ದಾರೆ. ಮಾತ್ರವಲ್ಲ “ಎರಡೂ ಸಮಿತಿಗೆ ಒಬ್ಬರೇ ಅಧ್ಯಕ್ಷರಾಗಿರುವುದರಿಂದ ಅಧ್ಯಕ್ಷರನ್ನು ಬದಲಾಯಿಸಿ ಎಂದು ಕೇಳಿಕೊಳ್ಳಬಹುದಾಗಿತ್ತು. ಆದರೆ ಕಳೆದ ಎಂಟು ತಿಂಗಳಿಂದ ಈ ಸಮಿತಿಯ ಕಾರ್ಯವೈಖರಿಯನ್ನು ನೋಡುತ್ತಾ ಬಂದಿದ್ದೇನೆ. ಸಮಿತಿಯಲ್ಲಿ ಒಟ್ಟು 12 ಜನರಿದ್ದಾರೆ. ಇದರಲ್ಲಿ ಸಭೆಯಲ್ಲಿ ಭಾಗವಹಿಸುವುದು ನಾನು, ಬಿ. ಆರ್. ಯಾವಗಲ್, ಎನ್. ಎ. ಹ್ಯಾರಿಸ್ ಮತ್ತು ಗೋಪಾಲಯ್ಯ ಮಾತ್ರ. ಉಳಿದವರು ಯಾರೂ ಬರುತ್ತಿಲ್ಲ. ಹಾಗಾಗಿ ರಾಜಿನಾಮೆ ಕೊಡುವುದೇ ಸೂಕ್ತ ಎಂದೆನಿಸಿತು,” ಎಂದಿದ್ದಾರೆ.

ಇನ್ನು ಪ್ರತಿಕ್ರಿಯೆಗೆ ಸಭಾಧ್ಯಕ್ಷರೂ, ಸಮಿತಿಯ ಅಧ್ಯಕ್ಷರೂ ಆದ ಕೋಳಿವಾಡರು ಲಭ್ಯರಾಗಲಿಲ್ಲ.

ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಟಿ. ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ನೈಸ್ ಅಕ್ರಮದ ಕುರಿತು ವರದಿ ನೀಡಿತ್ತು. ಇದನ್ನು ಸರಕಾರ ಸೂಕ್ತ ಕಾನೂನು ಕ್ರಮದ ಭರವಸೆ ನೀಡಿ ಸಾಗ ಹಾಕಿತ್ತು. ಈ ಕುರಿತು ವರದಿ ಇಲ್ಲಿದೆ.

Top