An unconventional News Portal.

ಅದ್ವಾನಿ ಆಸೆಗಳಿಗೆ ಕೊನೆಯ ಮೊಳೆ: ‘ಬಾಬ್ರಿ ಮಸೀದಿ ದ್ವಂಸ ಪ್ರಕರಣ’ದ ಲಾಭ ಯಾರಿಗೆ?

ಅದ್ವಾನಿ ಆಸೆಗಳಿಗೆ ಕೊನೆಯ ಮೊಳೆ: ‘ಬಾಬ್ರಿ ಮಸೀದಿ ದ್ವಂಸ ಪ್ರಕರಣ’ದ ಲಾಭ ಯಾರಿಗೆ?

ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ…ಒಂದು ಕಾಲದ ‘ಹಿಂದುತ್ವ’ ನೆಲೆಯ ರಾಜಕೀಯದ ಬ್ರಾಂಡ್‌ ಇಮೇಜ್‌ಗಳು.

90ರ ದಶಕದಲ್ಲಿ ‘ಅಟಲ್, ಅದ್ವಾನಿ, ಕಮಲ್ ನಿಶಾನ್ (ಅಟಲ್, ಅದ್ವಾನಿ, ಕಮಲ ಲಾಂಛನ) ಲೇಖರ್ ಆಯೇಂಗೇ ಹಿಂದೂಸ್ಥಾನ್’ (ತಂದೇ ತರುತ್ತಾರೆ ಹಿಂದೂಸ್ಥಾನ) ಎಂಬ ಘೋಷಣೆ ದೇಶದ ಉದ್ದಗಲಕ್ಕೂ ಮೊಳಗಿಸಲಾಗುತ್ತಿತ್ತು. ಇವತ್ತು ಹಿಂದೂಸ್ಥಾನ ಬದಿಗಿರಲಿ, ಕಮಲ ಲಾಂಛನಕ್ಕೂ ಅದ್ವಾನಿ ನೆನಪಾಗುತ್ತಿಲ್ಲ. ಆದರೆ ದೇಶದ 1992ರಲ್ಲಿ ನಡೆದ ಬಾಬ್ರಿ ಮಸೀದಿ ದ್ವಂಸ ಪ್ರಕರಣ ಮಾತ್ರ ಅವರನ್ನು ಮರೆಯುವ ಹಾಗೆ ಕಾಣಿಸುತ್ತಿಲ್ಲ.

ಬುಧವಾರ ಸುಪ್ರಿಂ ಕೋರ್ಟ್ ನೀಡಿರುವ ಮಹತ್ವದ ಆದೇಶದಲ್ಲಿ, ಬಿಜೆಪಿ ಹಿರಿಯ ನಾಯಕರಾದ ಎಲ್‌. ಕೆ. ಅದ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಹಲವರ ವಿರುದ್ಧ ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ದಾಖಲಾಗಿರುವ ‘ಒಳಸಂಚಿ’ನ ಆರೋಪವನ್ನು ಕೈಬಿಡಲು ನಿರಾಕರಿಸಿದೆ. ಅಲ್ಲದೆ, ರಾಯ್‌ಬರೇಲಿಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ಲಕ್ನೋ ನ್ಯಾಯಾಲಯಕ್ಕೆ ಸ್ಥಳಾಂತರಿಸಿದೆ. ಮುಂದಿನ 2 ವರ್ಷಗಳಲ್ಲಿ ವಿಚಾರಣೆ ಮುಗಿಸಲು ಗಡುವು ನೀಡಲಾಗಿದೆ. ದಿನನಿತ್ಯದ ಪ್ರಕಾರದಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣವನ್ನು ಹೊಸತಾಗಿ ವಿಚಾರಣೆ ನಡೆಸಲು ಅದ್ವಾನಿ ಪರ ವಕೀಲರು ಸಲ್ಲಿಸಿದ ಮನವಿಯನ್ನು ತಳ್ಳಿಹಾಕಿರುವ ನ್ಯಾಯಾಲಯ, ಪ್ರತಿ ದಿನವೂ ಸಿಬಿಐ ಒಂದಿಲ್ಲೊಂದು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ತಾಕೀತು ಮಾಡಿದೆ.

ಇದು ನಿರೀಕ್ಷಿತ ಬೆಳವಣಿಗೆಯೇ ಆದರೂ, ಮುಂದಿನ ದಿನಗಳಲ್ಲಿ ಬಿಜೆಪಿಯ ಹಿರಿತಲೆಗಳಿಗೆ ಬಾಬ್ರಿ ಮಸೀದಿ ದ್ವಂಸ ಪ್ರಕರಣ ತೂಗುಗತ್ತಿಯಾಗುವ ಸ್ಪಷ್ಟ ಸೂಚನೆ ಸಿಕ್ಕಂತಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ಶೈಶಾವಸ್ಥೆಯಲ್ಲಿದ್ದ ಹಿಂದುತ್ವ ನೆಲೆಯ ರಾಜಕಾರಣವನ್ನು, ಜತೆಗೆ ಬಿಜೆಪಿಯನ್ನು ಮುನ್ನೆಲೆಗೆ ತಂದ ನಾಯಕರೀಗ ನ್ಯಾಯದ ಭಾರವನ್ನು ಹೊತ್ತು ನಿಲ್ಲಬೇಕಾಗಿ ಬಂದಿದೆ.

ಮಹತ್ವಾಕಾಂಕ್ಷೆಯ ಹೆಜ್ಜೆಗಳು:

kamala-advani-no-more

ಲಾಲ್ ಕೃಷ್ಣ ಅದ್ವಾನಿ ಹುಟ್ಟಿದ್ದು ನವೆಂಬರ್ 8, 1927ರಲ್ಲಿ. ಅವತ್ತಿಗಿನ್ನೂ ಭಾರತದ ಜತೆಗಿದ್ದ ಇವತ್ತಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಜನಿಸಿದ ಅವರು ತಮ್ಮ 14ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಸ್ವಯಂ ಸೇವಕರಾಗಿ ರಾಜಕೀಯ ಜೀವನ ಆರಂಭಿಸಿದರು. ದೇಶ ಇಬ್ಭಾಗವಾದ ನಂತರ ಅದ್ವಾನಿ ಕುಟುಂಬ ಭಾರತಕ್ಕೆ ಬಂದಿಳಿಯಿತು. ಆಗಿನ್ನೂ ಯುವಕ ಅದ್ವಾನಿ ಆರ್‌ಎಸ್‌ಎಸ್‌ನ ಕಾರ್ಯದರ್ಶಿ ಹುದ್ದೆಯನ್ನು ಅನೇಕ ಕಡೆಗಳಲ್ಲಿ ನಿರ್ವಹಿಸುತ್ತಿದ್ದರು. 1957ರ ಸುಮಾರಿಗೆ ಅಟಲ್ ಬಿಹಾರಿ ವಾಜಪೇಯಿ ಕಣ್ಣಿಗೆ ಬಿದ್ದ ನಂತರ ಅವರ ಬದುಕು ಮತ್ತೊಂದು ತಿರುವು ಪಡೆದುಕೊಂಡಿತು. ಅವತ್ತಿನ ಜನಸಂಘದ ಪ್ರಮುಖ ನಾಯಕರಾಗಿದ್ದ ವಾಜಪೇಯಿ ಅವರಿಗೆ ಸಹಾಯಕರಾಗಿ ದಿಲ್ಲಿಯಲ್ಲಿ ಕೆಲಸ ಶುರುಮಾಡಿದರು. ಈ ಸಮಯದಲ್ಲಿ ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ನಿಯತಕಾಲಿಕದ ಸಹ ಸಂಪಾದರೂ ಆಗಿದ್ದರು.

ಮುಂದೆ, 1967ರಲ್ಲಿ ದಿಲ್ಲಿ ಮೆಟ್ರೊಪಾಲಿಟನ್ ಮಂಡಳಿಯ ಅಧ್ಯಕ್ಷರಾಗುವ ಮೂಲಕ ಅಧಿಕಾರ ರಾಜಕಾರಣಕ್ಕೆ ಕಾಲಿಟ್ಟರು. ಅದಾದ ಮೂರು ವರ್ಷಗಳಿಗೆ ಲೋಕಸಭೆಗೆ ಪ್ರವೇಶ ಪಡೆದರು. 1972ರಲ್ಲಿ ಜನಸಂಘದ ಅಧ್ಯಕ್ಷರೂ ಆದರು. ಮುಂದೆ ಜನಸಂಘ ಭಾರತೀಯ ಜನತಾ ಪಕ್ಷವಾಗಿ ಬದಲಾಗುತ್ತಿದ್ದಂತೆ ಅದ್ವಾನಿ ಹೊಸ ಪಕ್ಷದ ಸದಸ್ಯತ್ವದ ಜತೆಗೆ ಹೊಣೆಗಾರಿಕೆಗಳನ್ನು ವಹಿಸಿಕೊಂಡರು. 1986ರಲ್ಲಿ ಬಿಜೆಪಿಯ ಅಧ್ಯಕ್ಷರಾದರು.

ಅದು 90ರ ದಶಕ:

babri-advani-others

ಅದು ದೇಶದ ರಾಜಕೀಯ ಮತ್ತು ಧಾರ್ಮಿಕ ನೆಲೆಯ ಸಂಬಂಧಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ಥಿತ್ಯಂತರಕ್ಕೆ ಒಡ್ಡಿದ 90ರ ದಶಕ. ಅಷ್ಟೊತ್ತಿಗೆ ಜನಸಂಘದಿಂದ ಬಿಜೆಪಿಯಾಗಿ ಬದಲಾಗಿದ್ದ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಒಂದು ಮಟ್ಟಿಗಿನ ಪ್ರಗತಿಯನ್ನು ತೋರಿಸಿತ್ತು. ಹೀಗಾಗಿ ‘ಹಿಂದುತ್ವ’ ನೆಲೆಯ ರಾಜಕೀಯವನ್ನು ಇನ್ನಷ್ಟು ಅಗ್ರೆಸಿವ್ ಆಗಿ ಮುಂದಿಡುವ ಅನಿವಾರ್ಯತೆಯಲ್ಲಿ ಬಿಜೆಪಿ ಇತ್ತು.

ಆಗ ಅದರ ಅಜೆಂಡಾವನ್ನು ಮುಂದಕ್ಕೆ ತೆಗೆದುಕೊಂಡು ಹೋದವರು ಅದ್ವಾನಿ. ಇದೇ ಮುರಳಿ ಮನೋಹರ್ ಜೋಷಿ ಮತ್ತು ಉಮಾಭಾರತಿ ತರಹದ ನಾಯಕರ ಜತೆಯಲ್ಲಿ ರಥಯಾತ್ರೆಯನ್ನು ಶುರುಮಾಡಿದರು. ಪೌರಾಣಿಕ ಪುರುಷ ರಾಮನ ಜನ್ಮಭೂಮಿ ವಿಚಾರದಲ್ಲಿ ವಿವಾದವನ್ನು ಹುಟ್ಟುಹಾಕಿದರು.

1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಸೇರಿದ 1. 5 ಲಕ್ಷ ಕರಸೇವಕರು ಮತ್ತು ಈ ನಾಯಕರು ಉಗ್ರ ಭಾಷಣದ ಪರಿಣಾಮ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಅದರ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಕೋಮು ಗಲಭೆಗಳು ಹುಟ್ಟಿಕೊಂಡವು. ಸುಮಾರು 2 ಸಾವಿರ ಜನ ಸಾವಿಗೀಡಾದರು. ದೇಶದಲ್ಲಿ ಹಿಂದೆಂದೂ ಕಾಣದ ಹಿಂದೂ- ಮುಸ್ಲಿಂ ಧರ್ಮೀಯರ ನಡುವಿನ ಕಂದಕ ಬಾಯಿ ಬಿಟ್ಟಿತು. ಧಾರ್ಮಿಕ ನೆಲೆಯಲ್ಲಿ ದೇಶದ ಸ್ವಾತಂತ್ರ್ಯ ನಂತರ ಎರಡನೇ ಬಾರಿಗೆ ದೊಡ್ಡಮಟ್ಟದಲ್ಲಿ ಒಡೆದು ಹೋಳಾಯಿತು. ಇದರ ಫಲ ಇವತ್ತು ಕೇಂದ್ರದಲ್ಲಿ ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಎರಡೂವರೆ ದಶಕಗಳ ಹಿಂದೆ, ಇಂತಹದೊಂದು ಅಜೆಂಡಾವನ್ನು ದೇಶದ ಮುಂದಿಟ್ಟ ನಾಯಕರೀಗ ನ್ಯಾಯಾಲಯದ ತೂಗುಗತ್ತಿಯನ್ನು ಎದುರು ನೋಡುತ್ತಿದ್ದಾರೆ.

ಯಾರಿಗೆ ಲಾಭ?:

ರಥಯಾತ್ರೆಯ ಸಂದರ್ಭ ಅಡ್ವಾಣಿ ಮತ್ತು ಮೋದಿ

ರಥಯಾತ್ರೆಯ ಸಂದರ್ಭ ಅಡ್ವಾಣಿ ಮತ್ತು ಮೋದಿ

ಬಿಜೆಪಿಯ ಸಂಸ್ಥಾಪಕ ಸದಸ್ಯರು ಸೇರಿದಂತೆ 13 ಜನರ ವಿರುದ್ಧ ದಿನನಿತ್ಯ ವಿಚಾರಣೆ ಲಕ್ನೋ ನ್ಯಾಯಾಲಯದಲ್ಲಿ ಶುರುವಾಗಲಿದೆ. ಇದರಲ್ಲಿ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಆರೋಪಿಯಾಗಿರುವ ಕಲ್ಯಾಣ ಸಿಂಗ್ ಅವರು ರಾಜಸ್ಥಾನದ ರಾಜ್ಯಪಾಲರಾಗಿದ್ದಾರೆ. ಹೀಗಾಗಿ ಅವರು ಕಾನೂನು ಹಿಡಿತದಿಂದ ತಾತ್ಕಾಲಿಕವಾಗಿ ಬಿಡುಗಡೆ ಹೊಂದಿದ್ದಾರೆ. ಉಳಿದವರು ತಮ್ಮ ಭವಿಷ್ಯವನ್ನು ನ್ಯಾಯಾಲಯದ ತೀರ್ಪಿನ ಮೂಲಕ ಕಂಡುಕೊಳ್ಳಬೇಕಿದೆ.

ಇದರ ಒಟ್ಟಾರೆ ಲಾಭ ನಷ್ಟ ಲೆಕ್ಕಚಾರಗಳು ಎರಡು ರೀತಿಯಲ್ಲಿವೆ ಎಂದು ಕೆಲವು ವಿಶ್ಲೇಷಣೆಗಳು ಹೇಳುತ್ತಿವೆ. ಒಂದು, 25 ವರ್ಷಗಳ ನಂತರ ದೇಶದ ಜನರಿಗೆ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದವರಿಗೆ, ತಮ್ಮ ಭಾವನೆಯನ್ನು ದೊಡ್ಡ ಮಟ್ಟದಲ್ಲಿ ಕದಡಿದ ಪ್ರಕರಣವೊಂದರಲ್ಲಿ ನ್ಯಾಯದ ನಿರೀಕ್ಷೆ ಹುಟ್ಟಿದೆ. ಅವತ್ತು ಬಾಬ್ರಿ ಮಸೀದಿ ದ್ವಂಸ ಪ್ರಕರಣ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು. ದೇಶ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತ್ತು. ಅದಕ್ಕೆ ತಾರ್ಕಿಕ ಅಂತ್ಯ ಸಿಗುವುದು ಸಹಜವಾಗಿಯೇ ನಿರೀಕ್ಷೆ ಹುಟ್ಟಿಸುತ್ತದೆ.

ಎರಡನೇಯದು, ಬಿಜೆಪಿಯ ಸದ್ಯದ ಸ್ಥಿತಿಯಲ್ಲಿ ಹಿರಿಯ ನಾಯಕರನ್ನು ಮತ್ತಷ್ಟು ಮೂಲೆಗುಂಪು ಮಾಡಲು ಇದು ನೆರವಾಗಬಹುದು. ಈಗಾಗಲೇ ಮುರಳಿ ಮನೋಹರ್ ಜೋಷಿ ಅವರಿಗೆ ಲೋಕಸಭೆಗೆ ಕ್ಷೇತ್ರವೇ ಇಲ್ಲದಂತೆ ಮಾಡಲಾಗಿದೆ. ಅದ್ವಾನಿ ಅವರನ್ನು ಬಿಜೆಪಿಯ ಪ್ರಮುಖ ಸಭೆ ಸಮಾರಂಭಗಳಿಗೂ ಅಹ್ವಾನಿಸದ ಸ್ಥಿತಿಗೆ ತಲುಪಿದೆ ಆಂತರಿಕ ಪರಿಸ್ಥಿತಿ. ಇಂತಹ ಸಮಯದಲ್ಲಿಯೇ ಅದ್ವಾನಿ ಅವರನ್ನು ಮುಂದಿನ ರಾಷ್ಟ್ರಪತಿ ಮಾಡಬೇಕು ಎಂಬ ದನಿಗಳು ಪಕ್ಷದ ಹಾಗೂ ಸಂಘಪರಿವಾರದ ಒಳಗೆ ಕೇಳಿಬರುತ್ತಿದ್ದವು. ಇದೀಗ ಬಾಬ್ರಿ ಮಸೀದಿ ದ್ವಂಸ ಪ್ರಕರಣ ಕಾವೇರುವ ಮೂಲಕ ಅಂತಹ ಸಾಧ್ಯತೆ ಪಕ್ಕಕ್ಕೆ ಸರಿದಂತಾಗಿದೆ.

ಈ ಹೊಸ ಬೆಳವಣಿಗೆಯ ಒಟ್ಟಾರೆ ಲಾಭ ಬಿಜೆಪಿಯನ್ನು ಇವತ್ತು ಹತೋಟಿಯಲ್ಲಿ ಇಟ್ಟುಕೊಂಡಿರುವ ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಗೆ ಆಗಲಿದೆ ಎಂಬುದು ಊಹೆಗೆ ನಿಲುಕದ ವಿಚಾರವೇನಲ್ಲ. ಪಕ್ಷವನ್ನು ಒಂದು ಕಾಲದಲ್ಲಿ ಕಟ್ಟಿ ಬೆಳೆಸಿದ ನಾಯಕರು ತಮ್ಮ ಇಳೀ ವಯಸ್ಸಿನಲ್ಲಿ ಅಂದು ಎಸಗಿದ ತಪ್ಪಿಗಳಿಗೆ ಬೆಲೆ ತೆರಬೇಕಾಗಿ ಬಂದಿದೆ.

Leave a comment

Top