An unconventional News Portal.

‘ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ’: ‘ಬಡವರ ಭೂಮಿ’ಯಲ್ಲಿ ಪಂಚರಾಜ್ಯಗಳ ಚುನಾವಣಾ ಬೆಳೆ

‘ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ’: ‘ಬಡವರ ಭೂಮಿ’ಯಲ್ಲಿ ಪಂಚರಾಜ್ಯಗಳ ಚುನಾವಣಾ ಬೆಳೆ

“ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಬಡವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಕೈಗೊಂಡ ದೂರದೃಷ್ಟಿಯ ಯೋಜನೆ ಅನಾಣ್ಯೀಕರಣ.”

ಹೀಗಂದವರು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯ ಶನಿವಾರದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕಾರಣಿಯಲ್ಲಿ ಮಾತನಾಡಿದ ಮೋದಿ, ‘ಬಡವರ ಸೇವೆ ಎಂದರೆ ದೇವರ ಸೇವೆ’ ಎಂದು ವ್ಯಾಖ್ಯಾನಿಸಿದರು. “ನನಗೆ ಅಧಿಕಾರ, ಸ್ವರ್ಗ, ಎರಡನೇ ಜನ್ಮ ಯಾವುದೂ ಬೇಕಾಗಿಲ್ಲ; ಆದರೆ ಬಡವರ ಸಮಸ್ಯೆಗಳು ಕೊನೆಯಾಗಬೇಕು,” ಎಂದು ಹೇಳಿದರು. ಇಡೀ ಭಾಷಣದುದ್ದಕ್ಕೂ ಬಡವರು,ಬಡತನದ ಬಗ್ಗೆಯೇ ಪ್ರಸ್ತಾಪಿಸಿದ ಮೋದಿ, ಚುನಾವಣಾ ಸುಧಾರಣೆ ಬಗ್ಗೆಯೂ ಮಾತನಾಡಿದರು.

“ಅನಾಣ್ಯೀಕರಣ ಮತ್ತು ಡಿಜಿಟಲ್ ಎಕಾನಮಿಯ ಮೂಲಕ ಭಾರತದಲ್ಲಿ ಪಾರದರ್ಶಕತೆ ಹೊಸ ಯುಗ ಆರಂಭವಾಗಿದೆ. ಈ ಹೊತ್ತಲ್ಲಿ ರಾಜಕೀಯ ದೇಣಿಗೆಯಲ್ಲಿಯೂ ಪಾರದರ್ಶಕತೆ ಬರಬೇಕು. ಈ ವಿಚಾರದಲ್ಲಿ ಬಿಜೆಪಿ ನಾಯಕತ್ವ ವಹಿಸಿಕೊಳ್ಳಲಿದೆ,” ಎಂದು ಹೇಳಿದರು. “ನಮಗೆ ದೇಣಿಗೆ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ರಾಜಕೀಯ ದೇಣಿಗೆಯನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಬಿಜೆಪಿ ಮುಂಚೂಣಿಯಲ್ಲಿ ನಿಲ್ಲಲಿದೆ,” ಎಂದು ಅವರು ಹೇಳಿದರು.

ಬಡವರ ಭಾಷಣ:

bjp_national_executive_meeting-new_delhi-2

ತಮ್ಮ 50 ನಿಮಿಷಗಳ ಭಾಷಣದುದ್ದಕ್ಕೂ ಬಡವರ ವಿಚಾರವನ್ನೇ ಮೋದಿ ಪ್ರಸ್ತಾಪಿಸಿದ್ದು ವಿಶೇಷ. “ಬಡ ದೇಶದ ಬಡ ಜನರು ಈ ಐತಿಹಾಸಿಕ (ಅನಾಣ್ಯೀಕರಣ) ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ಸೇರಿದಂತೆ ಸಮಾಜದ ಪಿಡುಗುಗಳಿಗೆ ಅಂತ್ಯ ಹಾಡಲು ಇದೊಂದು ಪರಿಣಾಮಕಾರಿ ಹೆಜ್ಜೆ ಎಂದು ಅವರೆಲ್ಲಾ ಒಪ್ಪಿಕೊಂಡಿದ್ದಾರೆ,” ಎಂದು ಮೋದಿ ಹೇಳಿದರು. ಸಮಾಜದ ಶಕ್ತಿ ಏನು ಎಂಬುದನ್ನು ಕಳೆದ ಎರಡು ತಿಂಗಳಲ್ಲಿ ದೇಶ ನೋಡಿದೆ ಎಂದವರು ಹೇಳಿದರು. “ಕೆಲವು ವ್ಯಕ್ತಿಗಳು ಅವರ ಜೀವನಮಟ್ಟದ ಸುಧಾರಣೆಗೆ ಮಾತ್ರ ಗಮನ ಹರಿಸಿದ್ದಾರೆ. ಆದರೆ ನಮ್ಮ ಸರಕಾರ ಬಡವರ ಜೀವನ ಮಟ್ಟ ಸುಧಾರಣೆಗೆ ಪಣತೊಟ್ಟಿದೆ,” ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಮೋದಿ ಟಾಂಗ್ ನೀಡಿದರು. ನಮ್ಮ ಸರಕಾರ ಬಡವರಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಚುನಾವಣೆಗೆ ತಯಾರಿ:

ಪಂಚ ರಾಜ್ಯಗಳ ಚುನಾವಣೆ ತಯಾರಿ ಬಿಜೆಪಿಯ ಕಾರ್ಯಕಾರಣಿಯಲ್ಲಿ ಪ್ರಮುಖವಾಗಿ ಕಂಡಿತು. ತಮ್ಮ ಭಾಷಣದಲ್ಲಿಯೂ ಚುನಾವಣೆ ವಿಚಾರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಲಕ್ನೋದಲ್ಲಿ ನಡೆದ ರ್ಯಾಲಿ ಮತ್ತು ತಮ್ಮ ಕ್ಷೇತ್ರ ವಾರಣಾಸಿಯ ಜನರೊಂದಿಗೆ ನಡೆಸಿದ ಚರ್ಚೆಯ ಮೂಲಕ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

“ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಗಮನ ಹರಿಸಬೇಕು. ಕಾರ್ಯಕರ್ತರು ಹೆಚ್ಚೆಚ್ಚು ದುಡಿದಷ್ಟೂ ಪಕ್ಷ ಹೆಚ್ಚಿನ ಫಸಲು ಪಡೆಯಲು ಸಾಧ್ಯ. ಈ ಬಾರಿಯ ಚುನಾವಣೆಯಲ್ಲಿ ಪರಿಸ್ಥಿತಿ ನಮ್ಮ ಪರವಾಗಿ ಇಲ್ಲ ಎಂಬುದನ್ನು ಮರೆಯಬಾರದು,” ಎಂದು ಎಚ್ಚರಿಕೆ ನೀಡಿದರು. ಮೂಲಗಳ ಪ್ರಕಾರ ಮೋದಿ, ಪಕ್ಷದ ನಾಯಕರ ಬಳಿ ‘ತಮ್ಮ ಸಂಬಂಧಿಕರಿಗೆಲ್ಲ ಟಿಕೆಟ್ ಕೇಳಬೇಡಿ. ಅದೆಲ್ಲವನ್ನು ಪಕ್ಷವೇ ನೋಡಿಕೊಳ್ಳುತ್ತದೆ,’ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳಿಗೆ ಕಾರ್ಯಕಾರಣಿಯ ಮಾಹಿತಿ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘ಬಡವರು ಮತ್ತು ಬಡತನ ಬಿಜೆಪಿಗೆ ಚುನಾವಣೆ ಗೆಲ್ಲಲು ಸಾಧನವಲ್ಲ. ಬಿಜೆಪಿ ಅವರತ್ತ ವೋಟ್ ಬ್ಯಾಂಕ್ ಕಾರಣಕ್ಕೆ ನೋಡುತ್ತಲೂ ಇಲ್ಲ,’ ಎಂದು ಸ್ಪಷ್ಟನೆ ನೀಡಿದರು.

ಕಾರ್ಯಕಾರಣಿಯ ನಿರ್ಧಾರಗಳು:

ಕಾರ್ಯಕಾರಣಿಯ ಮೊದಲ ದಿನ ಅಂದರೆ ಶುಕ್ರವಾರ, ನರೇಂದ್ರ ಮೋದಿ ನವೆಂಬರ್ 8ರಂದು ಘೋಷಿಸಿದ ಅನಾಣ್ಯೀಕರಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ತೀರ್ಮಾನದಲ್ಲಿ ಬಿಜೆಪಿಯು, ‘ಅನಾಣ್ಯೀಕರಣ ಒಂದು ಪವಿತ್ರ ನಿರ್ಧಾರ’ ಎಂದು ಬಣ್ಣಿಸಿದೆ. ಜನರು ಸಾಮೂಹಿಕವಾಗಿ ಭಾಗವಹಿಸಿ ತಾತ್ಕಾಲಿಕ ಸಮಸ್ಯೆಯನ್ನು ಗಟ್ಟಿಯಾಗ ನಿಂತು ಎದುರಿಸಿದ್ದಾರೆ. ಕಪ್ಪ ಹಣ ಬ್ಯಾಂಕುಗಳಲ್ಲಿ ಜಮೆಯಾಗಿದೆ. ಇದರಿಂದ ಹೆಚ್ಚಿನ ಆದಾಯ ಹರಿದು ಬರಲಿದೆ ಮತ್ತು ಜಿಡಿಪಿಯೂ ಹೆಚ್ಚಾಗಲಿದೆ. ಮಾತ್ರವಲ್ಲ ಸ್ವಚ್ಛ ಜಿಡಿಪಿಯೂ ಸೃಷ್ಟಿಯಾಗಲಿದೆ ಎಂದು ಪಕ್ಷ ಬಿಡುಗಡೆ ಮಾಡಿದ ತೀರ್ಮಾನದಲ್ಲಿ ಹೇಳಲಾಗಿದೆ.

ಈ ಕುರಿತು ಅರುಣ್ ಜೇಟ್ಲೀ ಮಾತನಾಡಿದ್ದು, “ಕಪ್ಪು ಹಣವನ್ನು ಬ್ಯಾಂಕುಗಳಿಗೆ ತರುವ ವಿಚಾರದಲ್ಲಿ ಅನಾಣ್ಯೀಕರಣ ಸಫಲವಾಗಿದೆ. ಈ ಹೆಚ್ಚಿನ ಹಣ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗಲಿದೆ,” ಎಂದಿದ್ದಾರೆ.

ಏನಿದು ರಾಷ್ಟ್ರೀಯ ಕಾರ್ಯಕಾರಣಿ? ಕರ್ನಾಟಕದಿಂದ ಯಾರು?

bjp-executive-from-karnatakaರಾಷ್ಟ್ರೀಯ ಕಾರ್ಯಕಾರಣಿ ಬಿಜೆಪಿ ಪಾಲಿನ ಹೈಕಮಾಂಡ್. ಪಕ್ಷದ ಪ್ರಮುಖ ತೀರ್ಮಾನಗಳನ್ನೆಲ್ಲಾ ಇಲ್ಲೇ ತೆಗೆದುಕೊಳ್ಳಲಾಗುತ್ತದೆ. ಪಕ್ಷದ ಅಧ್ಯಕ್ಷರೇ ಕಾರ್ಯಕಾರಣಿಯ ಅಧ್ಯಕ್ಷರಾಗಿರುತ್ತಾರೆ. ಇನ್ನು ಹಲವು ಉಪಾಧ್ಯಕ್ಷರು, ಖಜಾಂಚಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ರಾಜ್ಯ ಮಟ್ಟದ ನಾಯಕರು, ಮುಖ್ಯಮಂತ್ರಿಗಳು, ಸಚಿವರುಗಳು ಇದರಲ್ಲಿ ಭಾಗವಹಿಸುತ್ತಾರೆ. 2-3 ದಿನಗಳ ಕಾಲ ಈ ಕಾರ್ಯಕಾರಣಿ ನಡೆಯುತ್ತದೆ. ಈ ಬಾರಿ 2017ರ ರಾಷ್ಟ್ರೀಯ ಕಾರ್ಯಕಾರಣಿ ದೆಹಲಿಯ ಎನ್.ಡಿಎಂ.ಸಿ ಸೆಂಟರ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ 2ದಿನಗಳ ಕಾಲ ನಡೆಯಿತು.

ಈ ಬಾರಿಯ ನವದೆಹಲಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ರಾಜ್ಯದಿಂದ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಚಿವರಾದ ಸಿಟಿ ರವಿ ಹಾಗೂ ಆರ್. ಅಶೋಕ್ ಭಾಗಿಯಾಗಿದ್ದರು. ವಿಚಿತ್ರ ಎಂದರೆ ಇವರಲ್ಲಿ ಇಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರೆ, ಇನ್ನುಳಿದ ತಲಾ ಇಬ್ಬರು ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯದವರಾಗಿದ್ದಾರೆ. ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ರನ್ನು ಪಕ್ಷಕ್ಕೆ ಕರೆತಂದು ದಲಿತ ಸಮೀಕರಣ ಮಾಡಲು ಹೊರಟಿದ್ದ ರಾಜ್ಯ ಬಿಜೆಪಿ ಘಟಕ, ಕಾರ್ಯಕಾರಣಿಗೆ ಮಾತ್ರ ದಲಿತ ಮತ್ತು ಹಿಂದುಳಿದ ಸಮುದಾಯದ ಯಾರನ್ನೂ ಒಳಕ್ಕೆ ಬಿಟ್ಟುಕೊಂಡಿಲ್ಲ ಎಂಬುದು ವಿಪರ್ಯಾಸ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top