An unconventional News Portal.

ಬಿಜೆಪಿ ಆಂತರಿಕ ಕಲಹ: ನಾಯಕರ ಗೊಂಬೆ ಆಟ; ಕಾರ್ಯಕರ್ತರಿಗೆ ಸೂತಕದ ಊಟ!

ಬಿಜೆಪಿ ಆಂತರಿಕ ಕಲಹ: ನಾಯಕರ ಗೊಂಬೆ ಆಟ; ಕಾರ್ಯಕರ್ತರಿಗೆ ಸೂತಕದ ಊಟ!

ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಈಗ ನಡೆಯುತ್ತಿರುವುದು ‘ಬೊಂಬೆ ಆಡಿಸೋ ಆಟ’. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪಾಲಿಗೆ ಸೂತಕದ ಊಟ. ಗುರುವಾರ ನಡೆದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಹಿರಂಗ ಕಲಹದ ನಂತರ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಒಟ್ಟು ಸಾರಾಂಶ ಇಷ್ಟೆ. 

ಕರ್ನಾಟಕದ ಪಾಲಿಗೆ ಒಂದು ಕಾಲಕ್ಕೆ ಬಿಜೆಪಿ ಎಂದರೆ ಶಿಶ್ತಿನ ಪಕ್ಷ. ಅವತ್ತಿಗೆ ನಾಯಕರು ಕೂಡ ತಮ್ಮ ಇತಿಮಿತಿಗಳಲ್ಲಿಯೇ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದರು. ರಾಜಕೀಯ ಅಧಿಕಾರ ಎಂಬುದು ಅವರ ಪಾಲಿಗೆ ದೂರದ ಕನಸು. ಭಾರತೀಯ ಪರಂಪರೆಯನ್ನು ಉಳಿಸುವುದಷ್ಟೆ ಅವರ ರಾಜಕೀಯದ ಆದ್ಯತೆಗಳಾಗಿದ್ದವು. ಆದರೆ ಒಮ್ಮೆ ಅರೆಕಾಲಿಕ ಅಧಿಕಾರ, ಮತ್ತೊಮ್ಮೆ ಪೂರ್ಣಾವಧಿ ಅಧಿಕಾರ ರುಚಿ, ಈಗ ಕೇಂದ್ರದಲ್ಲಿ ಭದ್ರವಾಗಿರುವ ಅಧಿಕಾರ ಕೇಂದ್ರ, ದೇಶದ ಇತರೆ ರಾಜ್ಯಗಳಲ್ಲಿನ ಅಧಿಕಾರದ ಉಪಕೇಂದ್ರಗಳನ್ನು ಅನುಭವಿಸುತ್ತಿರುವ ಹೊತ್ತಿಗೆ, ಪಕ್ಷದ ಶಿಸ್ತು ಎಂಬುದು ಹಳ್ಳ ಹಿಡಿದಿದೆ. ನಾಯಕರ ಸ್ವಂತ ಹಿತಾಸಕ್ತಿಗಳು ಮೂಲ ಆಶಯವನ್ನು ಮುಂದೆಂದೂ ಈಡೇರಿಸಲು ಸಾಧ್ಯವೆ ಇಲ್ಲ ಅನ್ನುವಷ್ಟರ ಮಟ್ಟಿಗೆ ಹಾಳು ಮಾಡಿವೆ.

ಇತಿಹಾಸದ ಮೆಲುಕು:

70ರ ದಶಕದಲ್ಲಿ ಜನಸಂಘವಾಗಿದ್ದ ರಾಜಕೀಯ ಪಕ್ಷ 1980ರ ಹೊತ್ತಿಗೆ ಜನತಾ ಪರಿವಾರದ ಜತೆಗೆ ಅಲ್ಪಾವಧಿಯ ಸರಸದ ನಂತರ ಭಾರತೀಯ ಜನತಾ ಪಕ್ಷ ಎಂಬ ಹೆಸರು ಬದಲಿಸಿಕೊಂಡಿತ್ತು. ಈ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮುನ್ನಡೆಸಿದವರು ಕೊಡಗು ಮೂಲದ ಎ. ಕೆ. ಸುಬ್ಬಯ್ಯ. 1983ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಸರಕಾರ ರಚನೆಯಲ್ಲಿ ಬಿಜೆಪಿ ಮಹತ್ವದ ಪಾತ್ರವನ್ನು ವಹಿಸಿತ್ತು. ಆದರೆ 1985ರ ಚುನಾವಣೆಯಲ್ಲಿ 18 ಸೀಟುಗಳಿಂದ 2 ಸೀಟಿಗೆ ಇಳಿದ ಬಿಜೆಪಿ ಭಾರಿ ಕುಸಿತ ಕಂಡಿತು. ಅಷ್ಟೊತ್ತಿಗೆ ಎ. ಕೆ. ಸುಬ್ಬಯ್ಯ ಕೂಡ ಬಿಜೆಪಿಯಿಂದ ದೂರವಾಗಿದ್ದರು.

ಇದಾದ ನಂತರ ಬಿಜೆಪಿ ಸವೆಸಿದ ಹಾದಿ ಕಠಿಣವಾಗಿತ್ತು. ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸವನ್ನು ಅದರ ನಾಯಕರು ಮಾಡಿದರಾದರೂ ನಗರ ಕೇಂದ್ರಿತ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿತು. 90ರ ದಶಕದಲ್ಲಿ ದೇಶಾದ್ಯಂತ ಅದ್ವಾನಿ ರಥಯಾತ್ರೆ ಮೂಲಕ ನಡೆಸಿದ ‘ಹಿಂದುತ್ವ’ದ ಪ್ರಯೋಗ ಶಾಲೆ ರಾಜ್ಯದಲ್ಲಿಯೂ ರಾಜಕೀಯ ಫಲ ನೀಡಲು ಶುರುಮಾಡಿತು. ಮುಂದೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮೊದಲ ಭಾರಿ ಗಮನಾರ್ಹ ಸಾಧನೆ ಮಾಡಿತು. 79 ಸ್ಥಾನಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಸೀಟು ಗಳಿಸಿದ ಪಕ್ಷವಾಗಿ ಹೊರಹೊಮ್ಮಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಹೊಂದಾಣಿಕೆಯಿಂದಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು.

ಮೊದಲ ಚುಂಬನ:

ಇದೇ ಅವಧಿಯಲ್ಲಿ ರಾತ್ರೊರಾತ್ರಿ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್‌ ಮತ್ತು ಬಿಜೆಪಿ 20-20 ಸರಕಾರವನ್ನು ರಚಿಸಿದರು. ಈ ಮೂಲಕ ಅಧಿಕಾರವನ್ನು ಅನುಭವಿಸುವ ಮೊದಲ ಸಾಧ್ಯತೆಯೊಂದನ್ನು ಶಿಸ್ತಿನ ಪಕ್ಷ ಕಂಡುಕೊಂಡಿತು. ಇದಾದ 2 ವರ್ಷಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರ ಹಿಡಿಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಈ ಸಮಯದಲ್ಲಿ ಬಹುಶಃ ಹಿಂದೆಂದೂ ಇಲ್ಲದಷ್ಟು ಸಂಘಪರಿವಾರ ಮತ್ತು ಅದರ ಸಂಘಟನೆಗಳ ಬಲ ವೃದ್ಧಿಯಾಯಿತು. “ಈ ಅವಧಿಯಲ್ಲಿ ಸಂಘಪರಿವಾರದ ಹಲವರು ಗುತ್ತಿಗೆದಾರರಾದರು. ಯಥೇಚ್ಚ ಹಣ ಹರಿದು ಬಂತು. ಹಣವಿದ್ದವರು ಪಕ್ಷವನ್ನು ಹತೋಟಿಗೆ ತೆಗೆದುಕೊಂಡರು. ಯಾವ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಸ್ಥಾನಮಾನ ಪಡೆದುಕೊಂಡರು. ಆ ಮೂಲಕ ಪಕ್ಷದ ಮೂಲ ಚಿಂತನೆಯನ್ನೇ ಹಾಳು ಮಾಡಲಾಯಿತು,” ಎನ್ನುತ್ತಾರೆ ಹಿರಿಯ ಆರ್‌ಎಸ್‌ಎಸ್‌ ನಾಯಕರೊಬ್ಬರು.

ಈ ಅವಧಿಯಲ್ಲಿ ಸಾವಯವ ಕೃಷಿಯ ಹೆಸರಿನಲ್ಲಿ ಸಂಘಪರಿವಾರದ ಜತೆಗಿದ್ದ ರೈತರಿಗೆ ನೆರವು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೆಸರಿನಲ್ಲಿ ಸಂಘಪರಿವಾರದ ಯುವಕರಿಗೆ ನೇಮಕಾತಿ, ‘ಮಾದವ ನೆಲೆ’ಯಂತಹ ಸಂಘಪರಿವಾರದ ಅಂಗ ಸಂಸ್ಥೆಗಳಿಗೆ ಸ್ವಂತ ಭೂಮಿ, ‘ಹೊಸ ದಿಗಂತ’ದಂತಹ ಸಂಘಪರಿವಾರದ ಮುಖವಾಣಿ ಪತ್ರಿಕೆಗಳಿಗೆ ಆರ್ಥಿಕ ನೆರವು…ಹೀಗೆ ಯಡಿಯೂರಪ್ಪ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಸಂಘಪರಿವಾರ ಮತ್ತು ಅದನ್ನು ನೆಚ್ಚಿಕೊಂಡವರು ಅಭಿವೃದ್ಧಿ ಹೊಂದಿದರು. ರಾಜಕೀಯ ಅಧಿಕಾರದಿಂದ ಬರುವ ಫಲಾಫಲಗಳನ್ನು ಅನುಭವಿಸಿದರು. ಇನ್ನೊಂದು ಅರ್ಥದಲ್ಲಿ ಇದು ಯಡಿಯೂರಪ್ಪ ಅವರ ಅವಧಿಯ ‘ಗಂಜೀ ಕೇಂದ್ರ’. ಫಲಾನುಭವಿಗಳ ಪಟ್ಟಿ ಮಾತ್ರ ಬೇರೆ ಅಷ್ಟೆ.

ಬಿಕ್ಕಟ್ಟಿನ ಮೂಲ: 

ಇವತ್ತು ಬಿಜೆಪಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ದೇಶದ ಅತಿ ದೊಡ್ಡ ರಾಜ್ಯದಲ್ಲಿ ಆದಿತ್ಯನಾಥ ಯೋಗಿ ಅಂತಹ ಅನನುಭವಿಗಳನ್ನೂ ತಂದು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ಇಂತಹ ಸ್ಥಿತಿಯಲ್ಲಿ ಪಕ್ಷದೊಳಗೆ ಮುಖ್ಯಮಂತ್ರಿ ಹುದ್ದೆ ಎಂಬುದು ‘ಗಗನ ಕುಸುಮ’ ಅಂತ ಹಲವರಿಗೆ ಅನ್ನಿಸದೇ ಹೋಗಿದೆ. “ಕರ್ನಾಟಕದಲ್ಲಿಯೂ ಅಂತದೊಂದು ಆಲೋಚನೆ ಬೆಳೆದಿದೆ. ಯಡಿಯೂರಪ್ಪ ಅವರೇ ಸಿಎಂ ಆದ ಮೇಲೆ ನಾವೂ ಒಮ್ಮೆ ಯಾಕಾಗಬಾರದು ಅಂತ ಅನ್ನಿಸಿರಲಿಕ್ಕೂ ಸಾಕು. ಇದಕ್ಕೆ ದೇಶದಲ್ಲಿ ಬಿಜೆಪಿ ಆಳ್ವಿಕೆಯ ಕೊಡುಗೆಯೂ ಇದೆ,” ಎನ್ನುತ್ತಾರೆ ಹಿರಿಯ ರಾಜಕೀಯ ವರದಿಗಾರರೊಬ್ಬರು.

ಹಾಗೆ ನೋಡಿದರೆ, ಇವತ್ತು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಬಿಕ್ಕಟ್ಟುಗಳ ಹಿಂದೆ ಸೈದ್ಧಾಂತಿಕ ಕಾರಣಗಳು ಇರುವ ಹಾಗೆ ಕಾಣಿಸುತ್ತಿಲ್ಲ. ಹೇಗೇ ನೋಡಿದರೂ, ಯಡಿಯೂರಪ್ಪ ಅವರಿಗೆ ಇದು ಕೊನೆಯ ಚುನಾವಣೆ. ಅವರಿಗೆ ಮಾತ್ರವಲ್ಲ, ರಾಜ್ಯ  ಬಿಜೆಪಿಯ ಹಲವರ ಪಾಲಿಗೆ ಇದು ಕೊನೆಯ ಚುನಾವಣೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅಧಿಕಾರವನ್ನು ಪಡೆಯಬೇಕು, ಜತೆಗೆ ಇರುವ ಏಕೈಕ ಮುಖ್ಯಮಂತ್ರಿ ಸ್ಥಾನದಲ್ಲಿಯೂ ಕೂರಬೇಕು. ಇಂತಹದೊಂದು ದುರಾಲೋಚನೆಯೇ ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ‘ಬೊಂಬೆ ಆಡಿಸುವ’ ಕೆಲಸ ನಡೆಸುತ್ತಿದೆ.

ಈ ಬಾರಿಯ ಆಂತರಿಕ ಕಲಹದ ಒಟ್ಟಾರೆ ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದ್ದರೆ ‘ಗೊಂಬೆ ಆಡಿಸುವವರು’ ದಿಲ್ಲಿಯಲ್ಲಿ ಮತ್ತು ಸಂಘಪರಿವಾರದ ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆ. ಮುಂದಿನ ಚುನಾವಣೆ ಒಳಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕರ್ನಾಟಕಕ್ಕೆ ಕಾಲಿಡುವ ಮುಂಚೆ ಯಡಿಯೂರಪ್ಪ ಅವರ ಸ್ಥಾನ ಪಲ್ಲಟಕ್ಕೆ ಈ ಕಲಹ ಪೀಠಿಕೆ ಬರೆಯಬೇಕು ಎಂಬುದು ಅವರ ಬಯಕೆಯಾಗಿದೆ. ಇದಕ್ಕೆ ದಾಳವಾಗಿ ಬಳಕೆಯಾಗುತ್ತಿರುವ ಈಶ್ವರಪ್ಪ ಮುಂದೊಂದು ದಿನ ‘ಹಿರೋ’ ಆಗಿ ಹೊರಹೊಮ್ಮಿದರೂ ಅಚ್ಚರಿ ಇಲ್ಲ. ಅವರ ರಾಜಕೀಯ ಜೀವನದ ಅಂತ್ಯವಾದರೂ ವಿಸ್ಮಯವೇನಿಲ್ಲ. ‘ಅಯ್ಯೊ ಬಿಡಿ, ನಾನು ಯಡಿಯೂರಪ್ಪ ರಾಮ- ಲಕ್ಷ್ಮಣ ಇದ್ದಂಗೆ’ ಎಂಬ ಮಾತು ಅವರ ಬಾಯಲ್ಲೇ ಬಂದರೂ ಆಶ್ಚರ್ಯ ಪಡಬೇಕಿಲ್ಲ.

“ಬಿಜೆಪಿ ಇರುವ ಲಾಭ ಏನೆಂದರೆ, ನಾಯಕರು ಏನೇ ಮಾಡಿಕೊಂಡಿರಲಿ, ಹೇಗೇ ನಡೆದುಕೊಳ್ಳಲಿ. ಚುನಾವಣೆ ಬಂದಾಗ ಬೋಲೋ ಭಾರತ್ ಮಾತಾ ಕೀ…ಎಂದರೆ ಜೈ ಅಂದೇ ಅನ್ನುತ್ತಾರೆ. ಅವರು ಅಷ್ಟರ ಮಟ್ಟಿಗೆ ನಿಷ್ಟಾವಂತರು,” ಎನ್ನುತ್ತಾರೆ ಕಳೆದ 20 ವರ್ಷಗಳಿಂದ ಚುನಾವಣೆಗಳಲ್ಲಿ ಬಿಜೆಪಿಯ ಬೆಳವಣಿಗೆಗಳನ್ನು ಕಂಡ ಪತ್ರಕರ್ತರು. ಇದಕ್ಕೆ ಪೂರಕ ಎಂಬಂತೆ, ‘ಸಮಾಚಾರ’ ಜತೆ ಮಾತನಾಡಿದ ತಾಲೂಕು ಕೇಂದ್ರವೊಂದರಲ್ಲಿ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿರುವ ಯುವಕರೊಬ್ಬರು, “ಕೊನೆಯ ಕ್ಷಣದಲ್ಲಿ ಸಂಘ ಅಖಾಡಕ್ಕೆ ಇಳಿದರೆ ಬಿಜೆಪಿ ಬಹುಮತ ಗ್ಯಾರೆಂಟಿ. ಇಲ್ಲದಿದ್ದರೆ ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರಕಾರ,” ಎಂದರು. ನಾಯಕರ ಬೊಂಬೆ ಆಟಗಳಿಂದ ಸೂತಕದ ಮನೆಯಾಗಿರುವ ಪಕ್ಷದ ಕೆಳಸ್ಥರದಲ್ಲಿರುವ ಆಶಯಗಳಿಗೆ ಇವು ಉದಾಹರಣೆಗಳು.

Leave a comment

Top