An unconventional News Portal.

ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ: ‘ಏಕತಾ ಸಮಾವೇಶ’ದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ: ‘ಏಕತಾ ಸಮಾವೇಶ’ದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರಿನ ಅರಮನೆ ಮೈದಾನ ಭಾನುವಾರ  ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ‘ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ಧರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೂಲಕ ಚುನಾವಣೆಗಿನ್ನೂ ವರ್ಷವಿರುವಾಗಲೇ ಆಢಳಿತರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ‘ಹಿಂದುಳಿದ ವರ್ಗ’ಗಳ ಭತ್ತಳಿಕೆ ಹಿಡಿದುಕೊಂಡು ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿದೆ.

“ರಾಜ್ಯದ ಕಾಂಗ್ರೆಸ್‌ ಸರಕಾರ ದೇಶದಲ್ಲೇ ಅತಿ ಭ್ರಷ್ಟ ಸರಕಾರ. ಇದನ್ನು ಕಿತ್ತೂಗೆದು ಮುಂದೆ ಬಿಜೆಪಿಯನ್ನು ಅಧಿಕಾರಕ್ಕೆ ನ್ನಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ರಾಜ್ಯದ ಅಭಿವೃದ್ಧಿಯಲ್ಲಿ ಬಿಜೆಪಿ ಪಕ್ಷದ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನ ಬಹುಮತ ನೀಡಲಿದ್ದಾರೆ,” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದರು.

amith-sha-2

ನಗಾರಿ ಬಾರಿಸಿ ಸಮಾವೇಶ ಉದ್ಘಾಟಿಸಿದ ಅಮಿತ್ ಶಾ, “’ನಿದ್ದೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಲು ನಗಾರಿ ಹೊಡೆದಿದ್ದೇವೆ. ಇದು ಕಾಂಗ್ರೆಸ್‌ ಶವ ಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆಯಾಗಿದೆ,” ಎಂದರು. ದೇಶದಾದ್ಯಂತ ಕಾಂಗ್ರೆಸ್ ಎಲ್ಲಾ ದೊಡ್ಡ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಕರ್ನಾಟಕದ ಆಡಳಿತ ಮಾತ್ರ ಅದರ ಕೈಯಲ್ಲಿದೆ.

“ಕೇಂದ್ರ ಸರ್ಕಾರ ತನ್ನ ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಿಂದುಳಿದ ವರ್ಗದ ಜನರಿಗಾಗಿಯೇ ಕೇಂದ್ರ ಸರ್ಕಾರ 54 ಯೋಜನೆಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ಈ ಯೋಜನೆಗಳು ಜಾರಿಯಾಗಿದ್ದರೂ ಕರ್ನಾಟಕದಲ್ಲಿ ಈ ಯೋಜನೆಗಳನ್ನು ಸಿದ್ದರಾಮಯ್ಯನವರ ಸರ್ಕಾರ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ,” ಎಂದು ಶಾ ಕಿಡಿಕಾರಿದರು.

ನಿತೀಶ್‌ ಕುಮಾರ್‌ಗೆ ಅಭಿನಂದನೆ:

“ಕಪ್ಪು ಹಣದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರ ಸಾರಿದ್ದಾರೆ,” ಎಂದು ಹೇಳಿದ ಶಾ “ನೋಟು ರದ್ದು ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿರುವ ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಅವರಿಗೆ ಧನ್ಯವಾದಗಳು,” ಎಂದು ನುಡಿದರು.

ವೇದಿಕೆಯಿಂದ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ “ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಈ ಸರ್ಕಾರವನ್ನು ತೊಲಗಿಸಲು ನಿರ್ಧರಿಸಿದ್ದಾರೆ. ಯಾವುದೇ ಅಭಿವೃದ್ದಿ ಕೆಲಸಗಳನ್ನೂ ಈ ಸರ್ಕಾರ ಮಾಡಿಲ್ಲ. ಅದಕ್ಕಾಗಿಯೇ ಈ ಜನ ಬಿಜೆಪಿಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೋಟು ನಿಷೇಧ ವಿರೋಧಿಸಿ ನಾಳೆ (ಸೋಮವಾರ) ವಿಪಕ್ಷಗಳು ಕೈಗೊಂಡಿರುವ ‘ಆಕ್ರೋಶ್ ದಿವಸ್‍’ನಲ್ಲಿ ಯಾರೂ ಪಾಲ್ಗೊಳ್ಳಬಾರದು. ಎಲ್ಲರೂ ಪ್ರಧಾನಿ ಮೋದಿ ಪರವಾಗಿ ನಿಲ್ಲಬೇಕೆಂದು,” ಕರೆ ನೀಡಿದರು.

Amoth Sha Bengaluruಬೆಳಗ್ಗೆ 10.50 ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾರನ್ನು ಪ್ರಹ್ಲಾದ್ ಜೋಶಿ ಹಾಗೂ ಯಡಿಯೂರಪ್ಪ, ಅನಂತ್ ಕುಮಾರ್ ಹಾಗೂ ಡಿ.ವಿ.ಸದಾನಂದ ಗೌಡ ಬರಮಾಡಿಕೊಂಡರು. ನಂತರ ಅಲ್ಲಿಂದ 11.30ಕ್ಕೆ ಅರಮನೆ ಮೈದಾನಕ್ಕೆ ಶಾ ಆಗಮಿಸಿದರು.

ಸಮಾವೇಶದಲ್ಲಿ ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ, ಅನಂತ್ ಕುಮಾರ್, ನಿರ್ಮಲಾ ಸೀತರಾಮನ್, ಹಾಗೂ ರಾಜ್ಯದ ಎಲ್ಲಾ ಹಿರಿಯ ನಾಯಕರು ಭಾಗಿಯಾಗಿದ್ದರು.

ಹಿಂದುಳಿದ ವರ್ಗಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ಈ ಸಮಾವೇಶವನ್ನು ಆಯೋಜಿಸಿತ್ತು. ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ಹಾಗೂ ಮತ್ತೊಂದೆಡೆ ಹಿಂದ ಸಂಘಟನೆಗಾಗಿ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಸ್ಥಾಪಿಸಿ ಭಿನ್ನ ಹಾದಿ ತುಳಿದಿರುವ ಸ್ವಪಕ್ಷೀಯ ನಾಯಕ ಕೆ.ಎಸ್‌. ಈಶ್ವರಪ್ಪ ಇಬ್ಬರಿಗೂ ತಿರುಗೇಟು ನೀಡುವ ಉದ್ದೇಶದೊಂದಿಗೆ ಸಮಾವೇಶ ಮಾಡಲಾಗಿದೆ ಎಂದು ರಾಜಕೀಯ ತಜ್ಷರು ವಿಶ್ಲೇಷಿಸಿದ್ದಾರೆ. ಆದರೆ ಸಮಾವೇಶದಲ್ಲಿ ವಿಧಾನ ಪರಷತ್‌ ವಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಕೂಡಾ ಭಾಗಿಯಾಗಿದ್ದರು.

ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತಾದರೂ, ಸುಮಾರು 50 ಸಾವಿರ ಜನರಷ್ಟೇ ಬಂದಿದ್ದರು.

ಬೈಕ್ ಜಾಥಾ
ashokeಸಮಾವೇಶಕ್ಕೂ ಮುನ್ನ ಬೆಂಗಳೂರಿನ ಸ್ವತಂತ್ರ ಉದ್ಯಾನದಿಂದ ಹೊರಟ ಯುವ ಬಿಜೆಪಿ ಘಟಕದ ಬೈಕ್ ಜಾಥಾಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಚಾಲನೆ ನೀಡಿದರು. ಆರ್. ಅಶೋಕ್ ಹಾಗೂ ಶೋಭಾ ಕರಂದ್ಲಾಜೆ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ ನಿಯಮ ಪಾಲಿಸಿದರೆ, ಜಾಥಾದಲ್ಲಿ ಪಾಲ್ಗೊಂಡಿದ್ದ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಸಾರಿಗೆ ಇಲಾಖೆಯ ‘ಹೆಲ್ಮೆಟ್ ಕಡ್ಡಾಯ’ ನಿಯಮ ಗಾಳಿಗೆ ತೂರಿದ್ದರು. ಸುಮಾರು 5 ಸಾವಿರ ಬೈಕುಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.

Top