An unconventional News Portal.

ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ.

ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ ತೀರ್ಮಾನ ತೆಗೆದುಕೊಳ್ಳಲಾಗಿದೆ,” ಎಂದು ಪ್ರಕಟಿಸಿದ್ದಾರೆ.

ಕೆಲವು ದಿನಗಳಿಂದ ಬಿಹಾರದಲ್ಲಿ ಮದ್ಯಪಾನ ಹಾಗೂ ನೀರಾ ಮಾರಾಟ ವಿಚಾರದಲ್ಲಿ ಚರ್ಚೆ ನಡೆಯುತ್ತಿತ್ತು. ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೀರಾ ಉತ್ಪಾದಕರ ಬೆನ್ನಿಗೆ ನಿಂತಿದ್ದರು. “ನೀರಾ ಮಾರಾಟಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. 1991ರ ಮಾರ್ಗಸೂಚಿ ಅನ್ವಯ ಶಾಲೆ, ಆಸ್ಪತ್ರೆ ಹಾಗೂ ಧಾರ್ಮಿಕ ಸ್ಥಳಗಳ 50 ಮೀಟರ್ ವ್ಯಾಪ್ತಿಯಲ್ಲಿ ನೀರಾ ಮಾರಾಟವನ್ನು ನಿಷೇಧಿಸಲಾಗಿದೆ,” ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದರು.

ಸೈನಿಕರಿಗೆ ಇಲ್ಲ ನಿರ್ಬಂಧ:

ಇದೇ ವೇಳೆ, ನಗರ ಪ್ರದೇಶದ ಹೋಟೆಲ್ಗಳು, ಪಬ್ ಹಾಗೂ ಬಾರ್ಗಳಲ್ಲಿ ಮದ್ಯ ಮಾರಾಟವನ್ನು ಸದ್ಯಕ್ಕೆ ನಿಷೇಧಿಸದಿರಲು ಬಿಹಾರ ಸರಕಾರ ತೀರ್ಮಾನಿಸಿದೆ. ಜತೆಗೆ, ಸೇನೆಯ ಕಂಟೋನ್ಮೆಂಟ್ ಪ್ರದೇಶಗಳಲ್ಲಿಯೂ ಮದ್ಯ ಮಾರಾಟ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

“ರಾಜ್ಯದಲ್ಲಿರುವ ಮದ್ಯ ಉತ್ಪಾದನಾ ಘಟಕಗಳು ಎಂದಿನಂತೆಯೇ ಉತ್ಪಾದನೆ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ರಾಜ್ಯದೊಳಗೆ ಮಾರಾಟಕ್ಕೆ ಮಾತ್ರವೇ ನಿಷೇಧ ವಿಧಿಸಲಾಗಿದೆ,” ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಿಂದ ಮದ್ಯ ಸಾಗಣೆ ಮಾಡುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇವುಗಳ ಚಲನವಲನಗಳ ಮೇಲೆ ಮೇಲ್ವಿಚಾರಣೆ ನಡೆಸಲು ಸರಕಾರ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದೆ.

ಸದ್ಯ, ಬಿಹಾರದ ಮದ್ಯ ಉತ್ಪಾದನಾ ಘಟಕಗಳಲ್ಲಿ ಸುಮಾರು 36 ಸಾವಿರ ಲೀಟರ್ ಮದ್ಯದ ದಾಸ್ತಾನಿದೆ. “ಇದನ್ನು ವಿತರಿಸಲು ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಿಲಿದೆ,” ಎಂದು ನಿತೀಶ್ ಹೇಳಿದ್ದಾರೆ.

ತಮಿಳುನಾಡು ಮಾದರಿ:

ಮದ್ಯಕ್ಕೆ ಪರ್ಯಾಯವಾಗಿ ತೆಂಗಿನ ಮರದಿಂದ ಇಳಿಸುವ ನೀರಾವನ್ನು ಮಾರುಕಟ್ಟೆಗೆ ಬಿಡಲು ಬಿಹಾರ ಸರಕಾರ ತೀರ್ಮಾನಿಸಿದೆ. ಇದಕ್ಕಾಗಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡವೊಂದನ್ನು ರಚಿಸಲಾಗಿದೆ. ತಮಿಳುನಾಡಿನ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಕೃಷಿ ಅಧ್ಯಯನ ಮಂಡಳಿ ಜತೆ ಮಾತುಕತೆ ನಡೆಸಿರುವ ತಂಡವು, ನೀರಾ ಮಾರಾಟಕ್ಕಾಗಿ ಪ್ರತ್ಯೇಕ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದೆ. “ಬಿಹಾರದಲ್ಲಿ ನೀರಾ ಮಾರಾಟವನ್ನು ವ್ಯವಸ್ಥಿತ ರೀತಿಯಲ್ಲಿ ಜಾರಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ತೆಂಗು ಬೆಳಗಾರರಿಗೆ ಹಾಗೂ ಮದ್ಯದ ಗ್ರಾಹಕರಿಗೆ ಅನುಕೂಲರವಾದ ವಾತಾವರಣವನ್ನು ಸೃಷ್ಟಿಸಲು ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ,” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ನನೆಗುದಿಗೆ:

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನೀರಾ ಮಾರಾಟಕ್ಕೆ ಕಾನೂನಾತ್ಮಕ ಸಡಿಲಿಕೆ ಮಾಡುವಂತೆ ಸರಕಾರದ ಮುಂದಿರುವ ಕೋರಿಕೆ ನನೆಗುದಿಗೆ ಬಿದ್ದಿರುವುದನ್ನು ಈ ಸಮಯದಲ್ಲಿ ಸ್ಮರಿಸಬಹುದು.

Leave a comment

Top