An unconventional News Portal.

350 ಕೋಟಿ ಕುಕ್ಕುಟ ಉದ್ಯಮದಲ್ಲಿ ತಲ್ಲಣ: ಬೀದರ್ ‘ಹಕ್ಕಿ ಜ್ವರ’ವನ್ನು ರಾಜ್ಯಕ್ಕೆ ಹಬ್ಬಿಸಬೇಡಿ!

350 ಕೋಟಿ ಕುಕ್ಕುಟ ಉದ್ಯಮದಲ್ಲಿ ತಲ್ಲಣ: ಬೀದರ್ ‘ಹಕ್ಕಿ ಜ್ವರ’ವನ್ನು ರಾಜ್ಯಕ್ಕೆ ಹಬ್ಬಿಸಬೇಡಿ!

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೊಳಕೇರ ಗ್ರಾಮದ ಫಾರಂ ಒಂದರ ಕೋಳಿಗಳಲ್ಲಿ ಕಾಣಿಸಿಕೊಂಡ ‘ಹಕ್ಕಿ ಜ್ವರ’ದ ನೇರ ಪರಿಣಾಮ ರಾಜ್ಯದ ಕುಕ್ಕುಟೋದ್ಯಮದ ಮೇಲಾಗುತ್ತಿದೆ.

ಎಚ್5ಎನ್1 ವೈರಾಣುಗಳಿಂದಾಗಿ ಉಂಟಾಗುವ ಈ ಜ್ವರಕ್ಕೆ ಈವರೆಗೆ ಮೊಳೆಕೇರ ಗ್ರಾಮದ ರಮೇಶ್ ಪೌಲ್ ಎಂಬುವವರ ಕೋಳಿ ಫಾರಂನಲ್ಲಿ ಸುಮಾರು 1 ಲಕ್ಷ ಕೋಳಿಗಳನ್ನು ಸಾಯಿಸಲಾಗುತ್ತಿದೆ. “ಕೋಳಿಗಳನ್ನು ಸಾಯಿಸುವ ಕೆಲಸ ಸೋಮವಾರ ಶುರುವಾಗಿದ್ದು, ನಾಳೆಗೆ ಕೊನೆಯಾಗಲಿದೆ,” ಎಂದು ಹೆಸರುಘಟ್ಟದ ಸಿಪಿಡಿಓ ನಿರ್ದೇಶಕ ಡಾ. ಮಹೇಶ್ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

“ಇದು ಹೊರಗಿನ ಸಂಪರ್ಕಿಗಳಿಂದ ದೂರ ಇರುವ ಚಿಕ್ಕ ಫಾರಂನಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ. ಅದರ ಸುತ್ತಮುತ್ತ ಕೋಳಿ ಫಾರಂಗಳು ಇಲ್ಲದಿರುವುದರಿಂದ ಆತಂಕ ಬೇಡ. ಹಕ್ಕಿ ಜ್ವರ ಬಂದಾಕ್ಷಣ ಸೂಕ್ಷ್ಮತೆ ಬಿಟ್ಟು ವರದಿ ಮಾಡುವುದರಿಂದ ಮಾಂಸದ ಉದ್ಯಮವೇ ಕುಸಿದು ಬೀಳುತ್ತದೆ. ಕೊಂಚ ಹೊಣೆಗಾರಿಕೆಯಿಂದ ಜನರಿಗೆ ಸುದ್ದಿ ನೀಡಿ,” ಎಂಬುದು ಡಾ. ಮಹೇಶ್ ಅವರ ವಿನಂತಿ.

bird-flu-1ಹಿಂದೆ, ಸಿಪಿಡಿಓ ನಡೆಸುವ ಫಾರಂನಲ್ಲಿಯೇ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ, ಹೆಸರಘಟ್ಟದಿಂದ ಆರಂಭಗೊಂಡಿದ್ದ ಆತಂಕ ವಾರ ಕಳೆಯುವುದರೊಳಗೆ ಇಡೀ ರಾಜ್ಯವನ್ನು ಆವರಿಸಿತ್ತು. ಹೀಗಾಗಿ, ಕೋಳಿ ಮಾಂಸದ ಮಾರುಕಟ್ಟೆ ಭಾರಿ ಕುಸಿತ ಕಂಡಿತ್ತು.

“ಒಂದು ತಿಂಗಳಿಗೆ 60-70 ಲಕ್ಷ ಮಾಂಸದ ಕೋಳಿಗಳ ಉತ್ಪಾದನೆ ಆಗುತ್ತದೆ. ದಿನಕ್ಕೆ 1 ಲಕ್ಷ ಮೊಟ್ಟೆ ಉತ್ಪಾದನೆ ಆಗುತ್ತದೆ. ಇಷ್ಟು ದೊಡ್ಡ ಮಾರುಕಟ್ಟೆಯ ಉತ್ಪಾದನೆ ನಡೆಯುತ್ತಿರುವ ಸಮಯದಲ್ಲಿ ಹಕ್ಕಿ ಜ್ವರದ ಭೀತಿ ಇಡೀ ಉದ್ಯಮಕ್ಕೆ ಹೊಡೆತ ಕೊಡುತ್ತದೆ,” ಎಂದು ಡಾ. ಮಹೇಶ್ ಹೇಳುತ್ತಾರೆ.

ಕರ್ನಾಟಕದ ಕುಕ್ಕುಟ ಉದ್ಯಮದ ಉತ್ಪಾದನೆಯಲ್ಲಿ ಶೇ. 30ರಷ್ಟನ್ನು ಕೇರಳ ಆಮದು ಮಾಡಿಕೊಳ್ಳುತ್ತದೆ. 2012ರ ನವೆಂಬರ್ ತಿಂಗಳಿನಲ್ಲಿ ಸಿಪಿಡಿಓ (ಸೆಂಟ್ರಲ್ ಪೌಲ್ಟ್ರಿ ಡೆವೆಲಪ್ಮೆಂಟ್ ಆರ್ಗನೈಸೇಶನ್)ನಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದಿಂದಾಗಿ ಕೇರಳ ಆಮದು ಪ್ರಕ್ರಿಯೆ ಮೇಲೆ ನಿಷೇಧ ಹೇರಿತ್ತು. ಜತೆಗೆ, ರಾಜ್ಯದಲ್ಲಿಯೂ ಮಾರುಕಟ್ಟೆ ಬಿದ್ದು ಹೋಗಿತ್ತು. 15 ದಿನಗಳ ಅಂತರದಲ್ಲಿ ಸುಮಾರು 150 ಕೋಟಿ ರೂಪಾಯಿ ನಷ್ಟವನ್ನು ಕುಕ್ಕುಟ ಉದ್ಯಮ ಅನುಭವಿಸಿತ್ತು.

ಆತಂಕ ಬೇಡ:

bird-flu-2“ಎಚ್5ಎನ್1 ವೈರಾಣುಗಳು ಕೋಳಿಗಳಲ್ಲಿ ಕಾಣಿಸಿಕೊಂಡು 15 ವರ್ಷ ಕಳೆದಿದೆ. ಈವರೆಗೆ ಯಾರಿಗೂ ಇದರಿಂದ ಅಪಾಯ ಎದುರಾಗಿಲ್ಲ. ಕೋಳಿ ಮಾಂಸವನ್ನು 60 ಡಿಗ್ರಿಗಿಂತ ಹೆಚ್ಚಿನ ಬಿಸಿಯಲ್ಲಿ ಬೇಯಿಸಿದರೆ ಈ ವೈರಾಣುಗಳು ಸಾಯುತ್ತವೆ. ಹೀಗಾಗಿ, ಹಕ್ಕಿ ಜ್ವರ ಕಾಣಿಸಿಕೊಂಡ ತಕ್ಷಣ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ,” ಎಂದು ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಹಾಗೂ ಬ್ರೀಡರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಡಾ. ನಾಗಭೂಷಣ್ ತಿಳಿಸುತ್ತಾರೆ.

“ಕರ್ನಾಟಕದಲ್ಲಿ ಒಂದು ತಿಂಗಳಿಗೆ 350 ಕೋಟಿಯಷ್ಟು ಕುಕ್ಕುಟ ಉದ್ಯಮ ವಹಿವಾಟು ನಡೆಸುತ್ತದೆ. ಹೀಗಾಗಿ, ಇಂತಹ ಸಮಯದಲ್ಲಿ ಮುತುವರ್ಜಿಯನ್ನು ಸಹಜವಾಗಿಯೇ ನಾವು ತೆಗೆದುಕೊಳ್ಳುತ್ತೇವೆ. ಈಗಾಗಲೇ ಬೀದರ್ ಜಿಲ್ಲೆಗೆ ನಮ್ಮ ತಂಡವನ್ನು ಕಳುಹಿಸಿದ್ದೇವೆ. ಬೀದರ್ ಜಿಲ್ಲೆಯಿಂದ ಬೆಂಗಳೂರಿಗೆ ಕೋಳಿಗಳನ್ನು ಯಾವತ್ತಿಗೂ ತರಿಸಿಕೊಳ್ಳುವುದಿಲ್ಲ. ಹೀಗಾಗಿ ಇಲ್ಲಿ ಆತಂಕ ಬೇಡ,” ಎಂದು ಅವರು ಮಾಹಿತಿ ನೀಡಿದರು.

ನಿಯಂತ್ರಣದಲ್ಲಿದೆ:

ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಲೇ ಸಿಪಿಡಿಓ ಪ್ರಕಟಿಸಿದ ಕೆಲವು ಮಾರ್ಗದರ್ಶಿ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಜ್ವರ ಕಾಣಿಸಿಕೊಂಡ ಪ್ರದೇಶದ 1 ಕಿ. ಮೀ ವ್ಯಾಪ್ತಿಯ ಎಲ್ಲಾ ಕೋಳಿಗಳನ್ನು ಸಾಯಿಸಲಾಗುತ್ತದೆ. 3 ಕಿ. ಮೀ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗುತ್ತದೆ. ಜತೆಗೆ, ಅಂತಹ ಫಾರಂನಿಂದ ಯಾವುದೇ ತರಹದ ವಸ್ತುಗಳನ್ನು ಹೊರತರುವುದು ನಿಷೇಧಿಸಲಾಗುತ್ತದೆ. “ಸದ್ಯ ಈ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ಸ್ಥಳೀಯ ಶಾಸಕರ ಜತೆ ಸಭೆ ನಡೆಸಲಾಗಿದೆ. ಎಲ್ಲಾ ಮಾಹಿತಿ ನೀಡಲಾಗಿದೆ,” ಎಂದು ಹುಮ್ನಾಬಾದ್ ತಹಶೀಲ್ದಾರ್ ಡಿ.ಎಂ ಪಣಿ ತಿಳಿಸಿದ್ದಾರೆ.

ತರಕಾರಿ ಬೆಲೆ ಗಗನ ಮುಟ್ಟಿರುವ ಸಮಯದಲ್ಲಿ ಈ ಬೆಳವಣಿಗೆ ಕೋಳಿ ಮಾಂಸದ ರೇಟನ್ನು ಪಾತಾಳಕ್ಕೆ ಇಳಿಸಲಿದೆ. ಇದರಿಂದ ಮಾಂಸ ಪ್ರಿಯರಿಗೆ ಸಂತೋಷ ಉಂಟಾದರೂ, ಕುಕ್ಕುಟ ಉದ್ಯಮವನ್ನು ನೆಚ್ಚಿಕೊಂಡವರಿಗೆ ಭಾರಿ ಹೊಡೆತ ಕೊಡಲಿದೆ.

Top