An unconventional News Portal.

‘ಭಿಲ್‌ ಗ್ಯಾಂಗ್‌ ಅಪರಾಧಗಳ ಅಕ್ಷಯಪಾತ್ರೆ’: ಪೊಲೀಸರ ತನಿಖೆಯಲ್ಲಿ ಅಗೆದಷ್ಟೂ ಸಿಗುತ್ತಿದೆ ‘ಚಿನ್ನ’!

‘ಭಿಲ್‌ ಗ್ಯಾಂಗ್‌ ಅಪರಾಧಗಳ ಅಕ್ಷಯಪಾತ್ರೆ’: ಪೊಲೀಸರ ತನಿಖೆಯಲ್ಲಿ ಅಗೆದಷ್ಟೂ ಸಿಗುತ್ತಿದೆ ‘ಚಿನ್ನ’!

ಬೆಂಗಳೂರು ಪೊಲೀಸರು ಭಿಲ್‌ ಗ್ಯಾಂಗ್‌ನ ಐವರನ್ನು ಬಂಧಿಸಿದ ಬಗ್ಗೆ ಪೊಲೀಸ್‌ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅಷ್ಟಕ್ಕೇ ಪ್ರಕರಣದ ತನಿಖೆ ಮುಗಿದಿಲ್ಲ. ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಬೆಂಗಳೂರು ಪೊಲೀಸರಿಗೆ ಭಿಲ್‌ ಗ್ಯಾಂಗ್‌ನ ಅಪರಾಧದ ಅಕ್ಷಯಪಾತ್ರೆ ಸಿಕ್ಕಿದೆ. ಕೈ ಹಾಕಿದಷ್ಟು ಮನೆಗಳ್ಳತನ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಪಾತ್ರ ಸಿಗುತ್ತಿದೆ. ಉನ್ನತ ಪೊಲೀಸ್‌ ಮೂಲಗಳ ಮಾಹಿತಿಯ ಪ್ರಕಾರ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಸದಸ್ಯರ ಕೈವಾಡ ಇಲ್ಲಿಯವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ. 

ರಾಜ್ಯದಲ್ಲಿ ನಡೆದ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗಿನ ಸದಸ್ಯರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕಿಸಿದ್ದರು. ಇದೀಗ ಪೊಲೀಸರ ಶಂಕೆ ನಿಜವಾಗಿದ್ದು ಸುಮಾರು 750 ಗ್ರಾಂ ಚಿನ್ನಾಭರಣಗಳನ್ನು ಮಧ್ಯಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಮುಖ್ಯ ಆರೋಪಿ ರಾಯ್‌ ಸಿಂಗ್‌ನನ್ನು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿರುವ ಪೊಲೀಸ್‌ ತಂಡಕ್ಕೆ ಆಳಕ್ಕೆ ಇಳಿದಷ್ಟೂ ಪ್ರಕರಣ ಹಿಗ್ಗುತ್ತಾ ಹೋಗುತ್ತಿದೆ.

ಭಿಲ್‌ ಗ್ಯಾಂಗ್‌ನ ಪ್ರಮುಖ ಆರೋಪಿ ರಾಯ್‌ ಸಿಂಗ್‌ ಕರೆದುಕೊಂಡು ಪೊಲೀಸ್‌ ಅಧಿಕಾರಿಗಳು ಕಳೆದ 5 ದಿನಗಳಿಂದ ಮಧ್ಯಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ. ರಾಯ್‌ ಸಿಂಗ್‌ನನ್ನು ಕರೆದುಕೊಂಡು ಹೋಗುವಾಗ, ಇನ್ನೂ ಕೆಲ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗಿನ ಸದಸ್ಯರು ಭಾಗಿಯಾದ ಅನುಮಾನಗಳಿತ್ತು. ಆದರೆ ಇದೀಗ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಕೈವಾಡವಿರುವುದು ಪತ್ತೆಯಾಗಿದೆ. ಪೊಲೀಸ್‌ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಈಗಾಗಲೇ ಸುಮಾರು ಮುಕ್ಕಾಲು ಕೆಜಿ ಬಂಗಾರದ ಆಭರಣಗಳನ್ನು ಮಧ್ಯಪ್ರದೇಶದ ಚಿನ್ನದ ಅಂಗಡಿಗಳಿಂದ ವಶಕ್ಕೆ ಪಡೆದಿದ್ದು, ಇನ್ನೂ ಹೆಚ್ಚಿನ ಚಿನ್ನಾಭರಣಗಳು ಸಿಗುವ ಸಾಧ್ಯತೆಯಿದೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಮಧ್ಯಪ್ರದೇಶದಲ್ಲೇ ಬೀಡುಬಿಟ್ಟಿರುವ ಅಧಿಕಾರಿಯೊಬ್ಬರ ಹೇಳುವ ಪ್ರಕಾರ, ಈಗಾಗಲೇ ಸುಮಾರು 70 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿ ರಾಯ್‌ ಸಿಂಗ್‌ ಬಾಯಿ ಬಿಟ್ಟಿದ್ದಾನೆ. “ರಾಯ್‌ ಸಿಂಗ್‌ ಒಂದೊಂದೇ ವಿಷಯವನ್ನು ಬಾಯಿ ಬಿಡುತ್ತಿದ್ದಾನೆ. ಮಧ್ಯಪ್ರದೇಶದಲ್ಲಿ ಸ್ಥಳೀಯರು ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಸಹಕರಿಸುತ್ತಿಲ್ಲ. ಆರೋಪಿಗಳ ಮನೆಯಲ್ಲಿ ಯಾರೂ ಇಲ್ಲ. ರಾಯ್‌ ಸಿಂಗ್‌ ಮತ್ತವನ ಸಹಚರರನ್ನು ಬಂಧಿಸಿದ ನಂತರ ಎಲ್ಲರೂ ಪರಾರಿಯಾಗಿದ್ದಾರೆ. ಆದರೆ ಕಳ್ಳತನ ಮಾಡಿದ ಮಾಲುಗಳನ್ನು ವಶಕ್ಕೆ ಪಡೆಯುತ್ತಿದ್ದೇವೆ. ಹಲವು ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಕದ್ದು ತಂದು ಮಧ್ಯಪ್ರದೇಶದಲ್ಲಿ ಮಾರಲಾಗಿದೆ. ಕಳ್ಳತನ ಮಾಡುತ್ತಿರುವುದು ಒಂದು ಗ್ಯಾಂಗ್‌ ಆಗಿದ್ದರೆ, ಕದ್ದ ಮಾಲನ್ನು ಮಾರುವುದು ಮತ್ತೊಂದು ತಂಡ ಮಾಡುತ್ತಿತ್ತು. ಕದ್ದ ಮಾಲನ್ನು ಪಡೆದ ಜಿವೆಲ್ಲರಿ ಶಾಪ್‌ ಮಾಲೀಕರನ್ನು ವಿಚಾರಣೆ ಮಾಡುತ್ತಿದ್ದೇವೆ. ಪ್ರಕರಣದ ಇನ್ನಷ್ಟು ಮಾಹಿತಿಗಳು ಒಂದೊಂದಾಗಿ ಆಚೆ ಬರುತ್ತಿವೆ. ಭಾನುವಾರ ಮಧ್ಯಪ್ರದೇಶದಿಂದ ಬೆಂಗಳೂರಿಗೆ ವಾಪಸಾಗಲಿದ್ದೇವೆ,” ಎಂ ಮಾಹಿತಿ ನೀಡಿದರು.

ಪ್ರಕರಣ ಏನು?:

ಇದೇ ವರ್ಷದ ಜನವರಿ 18ರಂದು 4 ಜನ ಅಪರಿಚಿತರು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಅವರ ಬಳಿಯಿದ್ದ .303 ರೈಫಲ್‌ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಗೌರವಕ್ಕೆ ಈ ಘಟನೆಯಿಂದ ಧಕ್ಕೆಯಾಗಿತ್ತು. ಸಹಜವಾಗಿಯೇ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಇದಕ್ಕೂ ಮೊದಲೇ ಒಂದು ಮನೆಗಳ್ಳತನ ಇದೇ ಭಾಗದಲ್ಲಿ ನಡೆದಿತ್ತು. ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಒಬ್ಬರೇ ಆಗಿದ್ದರು. ಈ ಪ್ರಕರಣಗಳ ತನಿಖೆಗಾಗಿ 4 ವಿಶೇಷ ತಂಡಗಳನ್ನು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ರಚಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ರಾಜ್ಯದ ತುಂಬೆಲ್ಲಾ ಈ ತೆರನಾದ ‘ಅಪರಾಧ ಕ್ರಮ’ವನ್ನು ಪಾಲಿಸಿದ ಕೃತ್ಯಗಳು ಎಲ್ಲಿ ನಡೆದಿವೆ ಎಂದು ಹುಡುಕುಕಾಟ ಆರಂಭಿಸಿದ್ದರು. ಮೈಸೂರಿನಲ್ಲೂ ಇದೇ ಮಾದರಿಯ ಘಟನೆ ಕೆಲ ದಿನಗಳ ಹಿಂದೆ ನಡೆದಿರುವುದು ಪತ್ತೆಯಾಗಿತ್ತು. ಅಲ್ಲಿ ನಡೆದ ಮನೆಗಳ್ಳತನದ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಿಕ್ಕಿತ್ತು.

ಈ ಮಾಹಿತಿ ಆಧರಿಸಿ ಹೊರಟ ಪೊಲೀಸರನ್ನು ಸುಳಿವೊಂದು ನೆರೆಯ ಆಂಧ್ರ ಪ್ರದೇಶದ ಕಡಪಾ ಪೊಲೀಸ್‌ ಠಾಣೆಗೆ ಕರೆದೊಯ್ದಿತ್ತು. ಅಲ್ಲಿ ಸಿಕ್ಕ ಮಾಹಿತಿ ಹಿಂದೆಹೋದ ಪೊಲೀಸರು ಮಧ್ಯ ಪ್ರದೇಶ ರಾಜ್ಯದ ಧಾರ್‌ ಜಿಲ್ಲೆಯ ಭಗೋಲಿ ಗ್ರಾಮ ತಲುಪಿದ್ದರು. ಆರೋಪಿಗಳನ್ನು ಬಂಧಿಸಲು ಹೊರಟ ಪೊಲೀಸರಿಗೆ ಸ್ಥಳೀಯ ಸಾರ್ವಜನಿಕರಿಂದ ತೀವ್ರ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಲಾಗಿತ್ತು. ನಂತರ ಮಧ್ಯ ಪ್ರದೇಶ ಪೊಲೀಸರ ಸಹಾಯದಿಂದ ರಾಯ್‌ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರಿಗೆ ಆರೋಪಿಯನ್ನು ಕರೆತಂದ ನಂತರ ಸಹಚರರ ಮಾಹಿತಿ ನೀಡಿದ್ದ. ಅದರ ಬೆನ್ನಲ್ಲೇ ಬಂಧನಕ್ಕೆಂದು ಯಲಹಂಕ ನ್ಯೂ ಟೌನ್‌ ಪೊಲೀಸ್‌ ಠಾಣಾ ವ್ಯಪ್ತಿಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಪೊಲೀಸರು, ಮೂವರು ಆರೋಪಿಗಳ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಆಯುಕ್ತರಿಂದ ಪತ್ರಿಕಾಗೋಷ್ಠಿ:

ಇದೇ ಪ್ರಕರಣದ ಸಂಬಂಧ ಸೋಮವಾರ ನಗರದ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಪತ್ರಿಕಾಗೋಷ್ಠಿ ಕರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅದರ ಜತೆಗೆ ದಶಕದಿಂದ ಪರಿಹಾರವಾಗದ ಹಲವು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಆಯುಕ್ತರು ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಇನ್ನುಳಿದ ಆರೋಪಿಗಳಾದ ಆಜಂಭಾಯ್‌ ಸಿಂಗ್‌, ಜಿತೇನ್‌ ರೇಮ್‌ಸಿಂಗ್‌, ಸುರೇಶ್‌ ಕೋದ್ರಿಯಾ ಮತ್ತು ಅಬುಬಾಯ್‌ ಸಿಂಗ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

Leave a comment

Top