An unconventional News Portal.

ಮತ್ತೆ ಭಟ್ಕಳದಲ್ಲಿ ‘ಹವಾಲ ಪ್ರಕರಣ’ ಸದ್ದು: ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ!

ಮತ್ತೆ ಭಟ್ಕಳದಲ್ಲಿ ‘ಹವಾಲ ಪ್ರಕರಣ’ ಸದ್ದು: ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ!

ಎರಡು ತಿಂಗಳ ಹಿಂದೆ ಭಟ್ಕಳದಲ್ಲಿ ಸದ್ದು ಮಾಡಿದ್ದ ‘ಹವಾಲಾ ಪ್ರಕರಣ’ದ ಒಳಸುಳಿಗಳು ಒಂದೊಂದಾಗಿ ಹೊರ ಬರತೊಡಗಿವೆ. ಪ್ರಕರಣದಲ್ಲಿ ಜೈಲು ಪಾಲಾದ ಆರೋಪಿಗಳು ಹೊರಬಂದಿದ್ದು, ಇದೀಗ ಪೊಲೀಸ್ ಅಧಿಕಾರಿಗಳ ಮೇಲೆಯೇ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ದುಬೈನಿಂದ ಬಂದ ಸುಮಾರು 4. 6 ಕೋಟಿ ಹವಾಲಾ ಹಣದಲ್ಲಿ ಪಾಲುಗಳು ಹಂಚಿಕೆಯಾಗಿವೆ ಎಂದು ದೂರುತ್ತಿದ್ದಾರೆ. ಈ ನಡುವೆ ಪ್ರಕರಣದ ತನಿಖೆಯ ಕೇಂದ್ರವಾಗಿದ್ದ ಎಸಿಪಿ ಅನೂಪ್ ಶೆಟ್ಟಿ ವರ್ಗಾವಣೆಯಾಗಿದೆ. ಇದೇ ಪ್ರಕರಣದಲ್ಲಿ ಅಮಾನತ್ತುಗೊಂಡಿದ್ದ ಮಹಿಳಾ ಪಿಎಸ್ಐ ಕಣ್ಮರೆಯಾಗಿದ್ದಾರೆ. ಭಟ್ಕಳದ ಹವಾಲಾ ದಂಧೆಯ ಸುತ್ತ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು, ಪೊಲೀಸ್ ಇಲಾಖೆಯ ಬುಡಕ್ಕೆ ಬಂದು ನಿಲ್ಲುವ ಸಾಧ್ಯತೆಗಳು ಕಾಣಿಸುತ್ತಿವೆ.

ಏನಿದು ಬೆಳವಣಿಗೆ?:

ಕಳೆದ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ದುಬೈನಿಂದ ಭಾರಿ ಪ್ರಮಾಣದ ಹವಾಲಾ ದುಡ್ಡು ಬಂದಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಸೈಯದ್ ಮೋಸಿನ್ ಎಂಬಾತ ‘ತನ್ನನ್ನು ಕೆಲವರು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರು ನೀಡುವ ಮೂಲಕ ಪ್ರಕರಣ ಹೊರಬಂದಿತ್ತು. ಮೋಸಿನ್, ದುಬೈನಿಂದ ಸುಮಾರು 4. 6 ಕೋಟಿ ಹಣವನ್ನು ಹವಾಲಾ ಮೂಲಕ ಭಟ್ಕಳಕ್ಕೆ ತಂದಿದ್ದಾನೆ ಎಂಬುದು ಆತನನ್ನು ಬೆದರಿಸುವ ಆರೋಪಕ್ಕೆ ಗುರಿಯಾದವರು ನೀಡಿದ್ದ ಮಾಹಿತಿ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಆ. 23ರಂದು ನೀಡಿದ ವಿಡಿಯೋ ಹೇಳಿಕೆಯಲ್ಲಿಯೂ ಮೋಸಿನ್ ಈ ಕುರಿತು ಪ್ರಸ್ತಾಪವನ್ನು ಮಾಡಿದ್ದ. ಅವತ್ತಿನ ದಿನ ಠಾಣೆಯ ಡೈರಿಯಲ್ಲಿಯೂ ಈ ವಿಚಾರವನ್ನು ಮಹಿಳಾ ಪಿಎಸ್ಐ ರೇವತಿ ನಮೂದಿಸಿದ್ದರು.

ಇದಾದ ಎರಡು ದಿನಗಳ ಅಂತರದಲ್ಲಿ ಮೋಸಿನ್ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಒಟ್ಟು 6 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಇಬ್ಬರನ್ನು ಬಂಧಿಸಿ ಜೈಲಿಗೂ ಕಳುಹಿಸಲಾಗಿತ್ತು. ಹಾಗೆ ಜೈಲು ಪಾಲಾದವರವಲ್ಲಿ ಪ್ರಕರಣದ ಆರನೇ ಆರೋಪಿಯಾಗಿದ್ದ ಕುಮಟಾ ಅಮ್ಜದ್ ಇದೀಗ ಹೊರಬಂದಿದ್ದಾನೆ. ಬಂದವನೇ, ರಾಜ್ಯಪಾಲರಿಂದ ಆರಂಭಿಸಿ, ತೆರಿಗೆ ಆಯುಕ್ತರವರೆಗೆ ದೂರುಗಳನ್ನು ರವಾನಿಸಿದ್ದಾನೆ.

ಏನಿದೆ ದೂರಿನಲ್ಲಿ?: 

ಅಧಿಕಾರಿ ಅನೂಪ್ ಶೆಟ್ಟಿ.

ಅಧಿಕಾರಿ ಅನೂಪ್ ಶೆಟ್ಟಿ.

ಸುಮಾರು 21 ದಿನಗಳ ಕಾಲ ಜೈಲಿನಲ್ಲಿ ಕಳೆದು ಬಂದ ಅಮ್ಜದ್, ‘ಪೊಲೀಸ್ ಅಧಿಕಾರಿ ಅನೂಪ್ ಶೆಟ್ಟಿ ಹಾಗೂ ಮತ್ತಿತರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ’ ಎಂದು ದೂರು ನೀಡಿದ್ದಾನೆ. ಪ್ರಕರಣ ನಡೆಯುವ ಸಮಯದಲ್ಲಿ ಅನೂಪ್ ಶೆಟ್ಟಿ ಜಿಲ್ಲೆಯಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಕುರಿತು ಅಮ್ಜದ್ನನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ನಾನು ಅನೂಪ್ ಶೆಟ್ಟಿ ಅವರಿಗೆ ಹಲವು ವಿಚಾರಗಳ ಮಾಹಿತಿ ನೀಡಿದ್ದೆ. ಮೋಸಿನ್ ಎಂಬಾತ ದುಬೈನಿಂದ ಸುಮಾರು 4 ಕೋಟಿ ಹಣವನ್ನು ಕದ್ದು ತಂದಿದ್ದಾನೆ ಎಂಬ ಮಾಹಿತಿ ಇದ್ದ ವಾಟ್ಸಾಪ್ ವಿಡಿಯೋ ಒಂದು ಸಿಕ್ಕಿತ್ತು. ಅದನ್ನು ದುಬೈ ಪೊಲೀಸರು ದಾಳಿ ನಡೆಸಿದಾಗ ಮೋಸಿನ್ ಜತೆಗಿದ್ದವರು ನೀಡಿದ್ದ ಹೇಳಿಕೆಯಾಗಿತ್ತು. ಅದನ್ನು ಎಸಿಪಿ (ಅನೂಪ್ ಶೆಟ್ಟಿ)ಯವರಿಗೆ ತಲುಪಿಸಿ, ವಿಚಾರಣೆ ನಡೆಸಿ ಎಂದಿದ್ದೆ. ಆದರೆ, ಮೂರು ದಿನಗಳ ನಂತರ ನನ್ನನ್ನೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಾನು ಅವರನ್ನು ನಂಬಿ ಮೋಸ ಹೋದೆ. ಅವರು ಹವಾಲ ಹಣದ ಆಮಿಷಕ್ಕೆ ಬಿದ್ದರು,” ಎಂದು ಆರೋಪಿಸುತ್ತಾನೆ.

‘ಸಮಾಚಾರ’ಕ್ಕೆ ಲಭ್ಯವಾಗಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ನವೈತಿ (ಭಟ್ಕಳ ಸ್ಥಳೀಯರ ಆಡುಭಾಷೆ)ಯಲ್ಲಿ ನೈಜೀರಿಯಾ ಮೂಲದವನಿಗೆ ಭಟ್ಕಳದ ಮೋಸಿನ್ ಮೋಸ ಮಾಡಿ ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ಮಾತನಾಡುತ್ತಾನೆ. ವಿಡಿಯೋದಲ್ಲಿ ಆತನ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. “ಹಣವನ್ನು ಇಟ್ಟುಕೊಂಡ ಸುಳಿವು ಆಧರಿಸಿ ದುಬೈ ಪೊಲೀಸರು ದಾಳಿ ನಡೆಸಿದಾಗ ಮೋಸಿನ್ ಹಣದ ಜತೆ ಪರಾರಿಯಾದ. ಕೊನೆಗೆ ಸಿಕ್ಕಿ ಬಿದ್ದಾತ ಆತನ ಸ್ನೇಹಿತ. ಅವನಿಗೆ ಹೊಡೆದಿದ್ದು ದುಬೈ ಪೊಲೀಸರು,” ಎನ್ನುತ್ತಾನೆ ಅಮ್ಜದ್.

ಈ ವಿಡಿಯೋವನ್ನು ಎಸಿಪಿ ಅನೂಪ್ ಶೆಟ್ಟಿ ಅವರಿಗೆ ತಲುಪಿಸಿದ್ದಾಗಿ ಹೇಳಿಕೊಳ್ಳುತ್ತಾನೆ. ಆದರೆ, ಶೆಟ್ಟಿ ಇದನ್ನು ನಿರಾಕರಿಸುತ್ತಾರೆ.

ಮಾಹಿತಿ ನೆಪ:

“ನನಗೆ ಅಮ್ಜದ್ ಯಾರು ಎಂಬುದು ನೇರವಾಗಿ ಗೊತ್ತಿರಲ್ಲ. ಭಟ್ಕಳದಲ್ಲಿ ಇಂತಹ ದಂಧೆ ನಡೆಸುವ ಗ್ಯಾಂಗುಗಳಿವೆ. ಅವರು ಪೊಲೀಸ್ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡುವ ನಾಟಕ ಮಾಡಿ ಹತ್ತಿರ ಆಗುತ್ತಾರೆ. ಈ ವಿಚಾರದಲ್ಲಿ ಸೈಯದ್ ಮೋಸಿನ್ ಬಂದು ನನ್ನನ್ನು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದ. ಆದರೆ, ಠಾಣೆಯ ಪಿಎಸ್ಐ ಅದನ್ನು ತೆಗೆದುಕೊಳ್ಳಲು ನಿಧಾನಗತಿ ಮಾಡಿದ್ದರಿಂದ ಅವರನ್ನು ಅಮಾನತ್ತು ಮಾಡಲಾಯಿತು. ಅಮ್ಜದ್ ಯಾವುದೇ ವಿಡಿಯೋ ನೀಡಿದ್ದು ನೆನಪಿಲ್ಲ,” ಎನ್ನುತ್ತಾರೆ ಅನೂಪ್ ಶೆಟ್ಟಿ.

ಜೈಲಿನಿಂದ ಹೊರಬಂದಿರುವ ಅಮ್ಜದ್, ಅನೂಪ್ ಶೆಟ್ಟಿ ವಿರುದ್ಧವೇ ದೂರು ನೀಡಿದ್ದಾನೆ. ಜತೆಗೆ, ಆ. 23ರಂದು ಠಾಣೆಯಲ್ಲಿ ತೆಗೆದುಕೊಂಡು ವಿಡಿಯೋ ಹೇಳಿಕೆ ಹಾಗೂ ಸ್ಟೇಷನ್ ಡೈರಿಗಳನ್ನು ವಿಚಾರಣೆ ನಡೆಸಿದರೆ ಸಾಕು, ಸತ್ಯ ಹೊರಬರುತ್ತೆ ಎನ್ನುತ್ತಿದ್ದಾನೆ.

ನಾನಾ ಕಾರಣಗಳಿಗಾಗಿ ಸುದ್ದಿಯಲ್ಲಿರುವ ಭಟ್ಕಳದಲ್ಲಿ ‘ಹವಾಲ ದಂಧೆ’ ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ. ಅದಕ್ಕೆ ಧರ್ಮ ಮತ್ತು ಪಕ್ಷಗಳ ಹಂಗೂ ಕೂಡ ಇಲ್ಲ ಎಂಬುದು ಇದರ ಒಳಸುಳಿಗಳನ್ನು ಬಲ್ಲವರು ನೀಡುವ ಮಾಹಿತಿ. ಇದೀಗ, ಅದೇ ದಂಧೆಯು ಪೊಲೀಸ್ ಇಲಾಖೆಯ ಮೇಲೆಯೇ ಗಂಭೀರ ಆರೋಪವನ್ನು ಹೊರಿಸಿದೆ. ಈ ಕುರಿತು ಸೂಕ್ತ ತನಿಖೆಯೊಂದು ನಡೆಯಬೇಕಿದೆ ಹಾಗೂ ಭಾರತಕ್ಕೆ ಬಂದಿದೆ ಎನ್ನಲಾಗುತ್ತಿರುವ 4. 6 ಕೋಟಿಯ ಕಪ್ಪು ಹಣದ ಜಾಡನ್ನು ಹುಡುಕಬೇಕಿದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರ್ಯಾರು?

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top