An unconventional News Portal.

ಬಳ್ಳಾರಿ ಬಯಲಲ್ಲಿ ನಿಂತಿದ್ದ ‘ಕಾಕದೃಷ್ಟಿ’ ಹೆಲಿಕಾಪ್ಟರ್ ಮತ್ತು ರೆಡ್ಡಿ ‘ಪುರಪ್ರವೇಶ’ ಪ್ರಸಂಗ!

ಬಳ್ಳಾರಿ ಬಯಲಲ್ಲಿ ನಿಂತಿದ್ದ ‘ಕಾಕದೃಷ್ಟಿ’ ಹೆಲಿಕಾಪ್ಟರ್ ಮತ್ತು ರೆಡ್ಡಿ ‘ಪುರಪ್ರವೇಶ’ ಪ್ರಸಂಗ!

2011-12; ರಾಜ್ಯದಲ್ಲಿ ಗಣಿ ಹಗರಣ ಭಾರಿ ಸದ್ದು ಮಾಡುತ್ತಿದ್ದ ಕಾಲ.

ಮಾಜಿ ಸಚಿವ, ವಿಜಯನಗರ ಸಾಮ್ರಾಜ್ಯದ ಪುನರುತ್ಥಾನಕ್ಕೆ ಹುಟ್ಟಿ ಬಂದಿರುವುದಾಗಿ ನಂಬಿಕೊಂಡಿದ್ದ ಗಾಲಿ ಜನಾರ್ಧನ ರೆಡ್ಡಿ ಆಂಧ್ರದ ಚಂಚಲಗುಡ ಜೈಲಿನಲ್ಲಿದ್ದರು. ಅವರ ಮೇಲೆ ಭೂಮಿಯಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ತೆಗೆದ, ಸಾಗಣೆ ಮಾಡಿದ ಗುರುತರವಾದ ಆರೋಪಗಳನ್ನು ತನಿಖಾ ಸಂಸ್ಥೆ- ಸಿಬಿಐ ಹೊರಿಸಿತ್ತು. ರೆಡ್ಡಿ ವಿರುದ್ಧ ದಾಖಲಾದ ಪ್ರಕರಣಗಳ ಆರೋಪಿಗಳ ಪಟ್ಟಿಯಲ್ಲಿ ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಹೆಸರಿತ್ತು. ಪತಿಯ ವ್ಯವಹಾರಗಳು ಪತ್ನಿಯ ಹೆಸರಿನಲ್ಲಿ ನಡೆದಿದ್ದು ಇದಕ್ಕೆ ಕಾರಣವಾಗಿತ್ತು. ಆದರೂ, ಸಿಬಿಐ ಅರುಣಾ ಅವರನ್ನು ಬಂಧಿಸದಿರಲು ನಿರ್ಧರಿಸಿತ್ತು.

“ಗಂಡ ಮಾಡಿದ ತಪ್ಪಿಗೆ ಹೆಂಡತಿಗೆ ಯಾಕೆ ಶಿಕ್ಷೆ ಕೊಡಬೇಕು. ಮಕ್ಕಳ ಮುಖ ನೋಡಿಕೊಂಡು ಅರುಣಾ ಅವರನ್ನು ಬಂಧಿಸದಿರಲು ತೀರ್ಮಾನಿಸಿದ್ದೆವು,” ಎನ್ನುತ್ತಾರೆ ಅಂದು ಸಿಬಿಐನ ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು.

ಅರುಣಾ ಲಕ್ಷ್ಮಿ ಅವರನ್ನು ಹೈದ್ರಾಬಾದಿಗೆ ಕರೆಸಿ, ವಿಚಾರಣೆ ನಡೆಸಿ ಸಿಬಿಐ ಕಳಿಸಿಕೊಟ್ಟಿತ್ತು. ಇತ್ತ ಬಿಜೆಪಿಯಿಂದ ಸಿಡಿದು ಹೊರಹೋದ ರೆಡ್ಡಿ ಆಪ್ತ ಶ್ರೀರಾಮುಲು ಹೊಸ ಪಕ್ಷವನ್ನು ಹುಟ್ಟು ಹಾಕಿದ್ದರು. ಅದರ ಬಳ್ಳಾರಿಯ ಸಭೆಯೊಂದರಲ್ಲಿ ಅರುಣಾ ಲಕ್ಷ್ಮಿ ಭಾಗವಹಿಸಿದ್ದರು. ಅಲ್ಲಿ ತನಿಖೆಯ ವಿರುದ್ಧ ಮಾತನಾಡಿದ್ದರು. ಅದರ ರೆಕಾರ್ಡಿಂಗ್ ಸಿಬಿಐಗೆ ತಲುಪಿತ್ತು. ಕೊನೆಗೆ ಅರುಣಾ ಅವರನ್ನು ಹೈದ್ರಾಬಾದಿಗೆ ಕರೆಸಿ, ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಅದೇ ಕೊನೆ, ಅದಾದ ಮೇಲೆ ರೆಡ್ಡಿ ಮತ್ತು ಅವರ ಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮೂರು ವರ್ಷಗಳೇ ಬೇಕಾಯಿತು; ಮಗಳ ಮದುವೆ ನೆಪ ಸಿಗಬೇಕಾಯಿತು.

ಇದೀಗ ಮಗಳ ಮದುವೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರಿಗೆ ನ್ಯಾಯಾಲಯ ಬಳ್ಳಾರಿಯಲ್ಲಿ ಕೆಲವು ದಿನಗಳ ಮಟ್ಟಿಗೆ ತಂಗಲು ಅವಕಾಶ ಮಾಡಿಕೊಟ್ಟಿದೆ. ಇದನ್ನೇ ನೆಪವಾಗಿಟ್ಟುಕೊಂಡ ಅವರ ಕುಟುಂಬ, ರೆಡ್ಡಿ ಆಗಮನವನ್ನೇ ಜಾತ್ರೆಯಾಗಿಸಿದೆ. ಅಭಿಮಾನಿಗಳಿಗೆ, ಸಾಮಾನ್ಯ ಜನರಿಗೆ ಕುಣಿದು ಕುಪ್ಪಳಿಸಲು ಸಕಲ ಅವಕಾಶ ಮಾಡಿಕೊಟ್ಟಿದೆ. ಇದು ರೆಡ್ಡಿ ಕುಟುಂಬ ರಾಜಕೀಯವಾಗಿ ಮತ್ತೆ ತಲೆ ಎತ್ತಲು ನಡೆಸುತ್ತಿರುವ ಪ್ರಯತ್ನದ ಭಾಗವಾಗಿದೆ.

ಕಾಕದೃಷ್ಟಿ:

ಬಳ್ಳಾರಿ ಕಂಪ್ಲಿ ರಸ್ತೆಯಲ್ಲಿರುವ ಜನಾರ್ಧನ ರೆಡ್ಡಿ ಬಂಗಲೆ. (ಚಿತ್ರ: ದಿ ಹಿಂದೂ)

ಬಳ್ಳಾರಿ ಕಂಪ್ಲಿ ರಸ್ತೆಯಲ್ಲಿರುವ ಜನಾರ್ಧನ ರೆಡ್ಡಿ ಬಂಗಲೆ. (ಚಿತ್ರ: ದಿ ಹಿಂದೂ)

ಒಂದು ಕಾಲದಲ್ಲಿ ‘ಬಳ್ಳಾರಿ ರಿಪಬ್ಲಿಕ್’ ಎಂದೇ ದೇಶಾದ್ಯಂತ ಕುಖ್ಯಾತಿಗೆ ಒಳಗಾಗಿದ್ದ ಕುಟುಂಬದ ಮನೆಗಳು ಇರುವುದು ಬಳ್ಳಾರಿಯ ಕಂಪ್ಲಿ ರಸ್ತೆಯಲ್ಲಿ. ಕಲ್ಲು ಗುಡ್ಡದ ಬುಡದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಮನೆಯೊಂದು ಮೊದಲು ಸಿಗುತ್ತದೆ. ಅದು ಗಾಲಿ ಜನಾರ್ಧನ ರೆಡ್ಡಿ ಅವರದ್ದು. ಅದರ ಅಂಚಿಗೆ ಶ್ರೀರಾಮುಲು ಈಗ ಅದಕ್ಕಿಂತ ಭವ್ಯವಾದ ಮನೆಯೊಂದನ್ನು ಕಟ್ಟಿ ನಿಲ್ಲಿಸಿದ್ದಾರೆ. ಅಲ್ಲಿಂದ ಮುಂದೆ ಹೋದರೆ, ಜನಾರ್ಧನ ರೆಡ್ಡಿ ತಮ್ಮ ಸೋಮಶೇಖರ್ ರೆಡ್ಡಿ ಅವರ ಮನೆ ಸಿಗುತ್ತದೆ. ಅದು ಅವರ ತಂದೆ ಬಾಳಿ ಬದುಕಿದ್ದ ಮನೆ. ಅದನಿನ್ನೂ ಉಳಿಸಿಕೊಂಡಿದ್ದಾರೆ.

“ನಾವು ಬದುಕಿದ್ದು ಎಲ್ಲಾ ರೈಲ್ವೆ ಟ್ಯ್ರಾಕ್ ಪಕ್ಕದಲ್ಲಿಯೇ. ನನ್ನ ತಾಯಿ ಹೇಗೆ ಎಂದರೆ ಯಾರ ಮನೆಯಲ್ಲಿ ಅಕ್ಕಿ ಇಲ್ಲ ಎಂದರೆ, ಮನೆಗೆ ತಂದಿಟ್ಟಿದ್ದ ದಿನಸಿಯಲ್ಲಿಯೇ ಕೊಟ್ಟು ಬಿಡುತ್ತಿದ್ದರು. ಅಷ್ಟು ಕಷ್ಟದಿಂದ ಬಂದ ನಾವು ಸ್ಥಿತಿವಂತಿಕೆಯನ್ನು ನೋಡಿದ್ದು ಅಣ್ಣ (ಜನಾರ್ಧನ ರೆಡ್ಡಿ)ನ ಕಾರಣಕ್ಕೆ. ಇವತ್ತು ಅವನನ್ನು ಎಲ್ಲರೂ ಸೇರಿ ಜೈಲಿಗೆ ಹಾಕಿದ್ದಾರೆ. ನಾವು ರಾಜಕೀಯವಾಗಿ ಮಾಡಿದ್ದು ಎರಡು ಪ್ರಮುಖ ತಪ್ಪುಗಳು. ಒಂದು ಆಂಧ್ರದಲ್ಲಿ ಚಂದ್ರಬಾಬು ನಾಯ್ಡುವನ್ನು ಎದುರು ಹಾಕಿಕೊಂಡಿದ್ದು. ಇಲ್ಲಿ ದೇವೇಗೌಡರ ಕುಟುಂಬವನ್ನು ಟೀಕಿಸಿದ್ದು. ಅದೇ ಇಷ್ಟಕ್ಕೆಲ್ಲಾ ಕಾರಣವಾಯಿತು ನೋಡಿ,” ಎಂದು ಹಿಂದೊಮ್ಮೆ ಸೋಮಶೇಖರ್ ರೆಡ್ಡಿ ತಮ್ಮ ತಂದೆ ಕಟ್ಟಿದ ಮನೆಯ ಅಂಗಳದಲ್ಲಿ ಕುಳಿತು ಈ ವರದಿಗಾರನಿಗೆ ವಿವರಿಸಿದ್ದರು.

ಇವತ್ತು ಮದುವೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ದೇವೇಗೌಡರ ಮನೆಗೂ ಹೋಗಿ ಅಹ್ವಾನ ಪತ್ರಿಕೆ ಕೊಟ್ಟು ಬಂದಿದ್ದಾರೆ. ಈ ಮೂಲಕ ರಾಜಕೀಯವಾಗಿ ಹಿಂದೆ ಮಾಡಿದ ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಪ್ರಯತ್ನವೂ ಕಾಣಿಸುತ್ತಿದೆ.

ಮೊದಲ ಹೆಲಿಕಾಪ್ಟರ್:

ರೆಡ್ಡಿ ಕುಟುಂಬ ಇವತ್ತಿಗೂ ಹೆಚ್ಚು ನಂಬುವುದು ದೇವರನ್ನು. “ರೆಡ್ಡಿಗಾರು ಹೆಲಿಕಾಪ್ಟರ್ ತಂದಾಗ ಅದನ್ನು ನಿಲ್ಲಿಸಲು ಜಾಗಕ್ಕಾಗಿ ಹುಡುಕಾಡುತ್ತಿದ್ದರು. ಅವರ ಮನೆಯ ಮುಂದೆ ಒಂದಷ್ಟು ಜನ ಗುಡಿಸಲು ಹಾಕಿಕೊಂಡಿದ್ದರು. ಅವರನ್ನು ಒಕ್ಕಲೆಬ್ಬಿಸಿ ಅಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಿದರು. ಅಲ್ಲಿ ಹೆಲಿಕಾಪ್ಟರ್ ತಂದು ನಿಲ್ಲಿಸಿದ್ದರು. ಅದನ್ನು ನೋಡಲು ಜನ ಹಿಂಡು ಹಿಂಡಾಗಿ ಬರುತ್ತಿದ್ದರು. ಮುಂದೆ ಅವರ ಅಧಃಪತನಕ್ಕೆ ಹೆಲಿಕಾಪ್ಟರ್ ಕಾರಣ ಎಂದು ಕುಟುಂಬ ಅಂದುಕೊಂಡಿತು,” ಎಂದು ಸ್ಥಳೀಯ ಪತ್ರಕರ್ತರೊಬ್ಬರು ಅಂತರಂಗದ ಮಾಹಿತಿಯನ್ನು ತೆರೆದಿಡುತ್ತಾರೆ.

ಇವತ್ತಿಗೂ ರೆಡ್ಡಿ ಕುಟುಂಬ ಬಳ್ಳಾರಿ ಭಾಗಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿದೆ. ಶ್ರೀರಾಮುಲು ನೇತೃತ್ವದಲ್ಲಿ ಜನರನ್ನು ಸಂಘಟಿಸುವ ಮತ್ತು ಅದಕ್ಕೆ ಬೇಕಾದ ಆರ್ಥಿಕ ಬಲ ಎರಡೂ ಕುಟುಂಬದ ಬಳಿ ಇದೆ. ಮುಂದಿನ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೂ ತಯಾರಾಗಿದೆ. ಇತ್ತೀಚೆಗೆ ಬಿಜೆಪಿ ಬ್ಯಾನರ್ ಅಡಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮುನ್ಸೂಚನೆಯನ್ನೂ ನೀಡಿಯಾಗಿದೆ.

ನ್ಯಾಯಾಂಗ ಹೋರಾಟ: 

ಸದ್ಯ ಜನಾರ್ಧನ ರೆಡ್ಡಿ ವಿರುದ್ಧ ಹೈದ್ರಾಬಾದ್ ಹಾಗೂ ಬೆಂಗಳೂರಿನ ಸಿಬಿಐ ನ್ಯಾಯಾಲಯಗಳಲ್ಲಿ ಗಣಿ ಅಕ್ರಮ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಗಣಿ ಹಗರಣ ಪ್ರಕರಣಗಳ ಭವಿಷ್ಯ ಏನಾಗಲಿದೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಬೆಳವಣಿಗೆಗಳು ಬೆಳಕು ಚೆಲ್ಲುತ್ತಿವೆ. ಹೈದ್ರಾಬಾದಿನಲ್ಲಿ ರೆಡ್ಡಿ ಬಂಧಿಸಿದ್ದ ಅಧಿಕಾರಿಗಳ ವರ್ಗವಾಗಿಯಾಗಿದೆ. ಪ್ರಕರಣವೊಂದರಲ್ಲಿ ಸ್ವಯಂ ಸಾಕ್ಷಿಯಾಗಿದ್ದವರನ್ನು ಆರೋಪಿಯಾಗಿ ಬದಲಿಸಲಾಗಿದೆ. ಬೆಂಗಳೂರಿನಲ್ಲಿ ಯಡಿಯೂರಪ್ಪ ಪ್ರಕರಣದಲ್ಲಿ ಖುಲಾಸೆ ಸಿಕ್ಕಿದೆ. ಹೀಗೆ, ರೆಡ್ಡಿ ಪ್ರಕರಣಗಳೂ ಕೂಡ ಅಂತ್ಯ ಕಾಣಲಿದೆ ಎಂಬ ವಿಶ್ವಾಸ ಅವರ ಕುಟುಂಬ ವರ್ಗದಲ್ಲಿದೆ.

ಇದರ ನಡುವೆ, ಮಗಳ ಮದುವೆ, ಬಳ್ಳಾರಿ ಪುರ ಪ್ರವೇಶದ ಘಟನೆಗಳು ನಡೆದಿವೆ. ಒಟ್ಟಾರೆ, ಎಲ್ಲವೂ ಮುಗಿಯಿತು ಎಂದುಕೊಂಡಾಗಲೇ ರೆಡ್ಡಿ ಕುಟುಂಬ ಎದ್ದು ನಿಲ್ಲುವ ಪ್ರಯತ್ನದಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಅಖಾಡ ತಯಾರಾಗಲಿದೆ. ಒಟ್ಟು 64 ಸಾವಿರ ಕೋಟಿ ಗಣಿ ಅಕ್ರಮದ ಬಯಲಾದ ನಾಲ್ಕು ವರ್ಷಗಳ ನಂತರದ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top