An unconventional News Portal.

ಸಿಂಪಲ್ಲಾಗೊಂದು ‘ಬ್ಯೂಟಿಫುಲ್’ ಸಿನೆಮಾ: ಕತೆ ಒಂದು ವಿದ್ಯಾರ್ಥಿಗಳು ಹಲವರು!

ಸಿಂಪಲ್ಲಾಗೊಂದು ‘ಬ್ಯೂಟಿಫುಲ್’ ಸಿನೆಮಾ: ಕತೆ ಒಂದು ವಿದ್ಯಾರ್ಥಿಗಳು ಹಲವರು!

ಸ್ಟುಡೆಂಟ್ ಲೈಫ್ ಇಸ್ ‘ಬ್ಯೂಟಿಫುಲ್’ ಎನ್ನುತ್ತಿದ್ದಾರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು.

ಪತ್ರಿಕೋದ್ಯಮಕ್ಕೂ, ಸಿನೆಮಾ ರಂಗಕ್ಕೂ ಇರುವ ನಂಟನ್ನು ಬೆಸೆಯುವ ಪ್ರಯತ್ನದ ಭಾಗದಂತೆ ಕಾಣಿಸುತ್ತಿರುವ ಈ ಕಾಲೇಜಿನ ವಿದ್ಯಾರ್ಥಿಗಳು 1 ಗಂಟೆ 40 ನಿಮಿಷಗಳ ಸಿನೆಮಾ ಒಂದನ್ನು ತೆರೆಗೆ ತರುತ್ತಿದ್ದಾರೆ. ಆ. 27ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಿನೆಮಾ ಪ್ರೀಮಿಯರ್ ಇಟ್ಟುಕೊಳ್ಳಲಾಗಿದೆ. ‘ಕತೆ ಒಂದು ಕತೆ ಹಲವು’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಬ್ಯೂಟಿಫುಲ್’ ಸಿನೆಮಾ ಹುಟ್ಟಿದ ಕತೆ ಕುತೂಹಲಕಾರಿಯಾಗಿದೆ.

ವಿದ್ಯಾರ್ಥಿಗಳೇ ಸೇರಿ ನಿರ್ಮಿಸಿದ ಸಿನಿಮಾ ಇದು. “ವೃತ್ತಿಪರ ಸಿನಿಮಾದಂತೆಯೇ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗಿದೆ. ಹತ್ತಿರ ಹತ್ತಿರ ಲಕ್ಷದಷ್ಟು ಖರ್ಚಾಗಿದೆ. ನಾಲ್ಕು ಕಥೆಗಳನ್ನು ಒಟ್ಟು ಸೇರಿಸಿ 1 ಗಂಟೆ 40 ನಿಮಿಷದ ಸಿನಿಮಾ ಮಾಡಿದ್ದೇವೆ. 5 ಹಾಡುಗಳು ಸಿನಿಮಾದಲ್ಲಿದ್ದು, ಮೂವರು ನಿರ್ದೇಶಕರು ಈ ಸಿನಿಮಾಕ್ಕಿದ್ದಾರೆ,” ಎಂದು ಮಾಹಿತಿ ನೀಡುತ್ತಾರೆ, ನಿರ್ದೇಶಕರಲ್ಲಿ ಒಬ್ಬರಾದ ಮಹಮ್ಮದ್ ದಾನಿಶ್.

ಶೂಟಿಂಗ್ ವೇಳೆಯಲ್ಲಿ 'ಬ್ಯೂಟಿಫುಲ್'

ಶೂಟಿಂಗ್ ವೇಳೆಯಲ್ಲಿ ‘ಬ್ಯೂಟಿಫುಲ್’

ವೃತ್ತಿಪರ 5ಡಿ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸಿನಿಮಾದಲ್ಲಿ 100 ಕ್ಕೂ ಹೆಚ್ಚು ಜನರನ್ನು ಬಳಸಿಕೊಳ್ಳಲಾಗಿದೆ. ನೀನಾಸಂನ ಇಬ್ಬರು ವೃತ್ತಿಪರ ನಟರು ಮತ್ತು ಸಿನಿಮಾ ನಟ ಶಿಳ್ಳೆ ಮಂಜು ಇದರಲ್ಲಿ ನಟಿಸಿದ್ದಾರೆ. ಸಕೇಶ್ ವಿಶ್ವಕರ್ಮ ಸಿನಿಮಾಗೆ ಸಂಗೀತ ನೀಡಿದ್ದಾರೆ. ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿಯೇ ವೃತ್ತಿಪರ ಹಾಡುಗಾರರಿಂದ ಹಾಡುಗಳನ್ನು ಹಾಡಿಸಲಾಗಿದೆ ಎನ್ನುವುದು ವಿಶೇಷ.

“ನಮಗೆ ಆರ್ಥಿಕ ಸಮಸ್ಯೆಗಳೂ ಸೇರಿ ಹಲವಾರು ಸವಾಲುಗಳಿದ್ದವು. ಕಲ್ಪನೆ ದೊಡ್ಡದಿದ್ದರೂ ಇರುವ ಸಮಯ, ಸೌಕರ್ಯಗಳನ್ನು ಬಳಸಿಕೊಂಡು ಅತ್ಯುತ್ತಮ ಅಲ್ಲದಿದ್ದರೂ ಉತ್ತಮ ಪ್ರಯತ್ನವನ್ನಂತೂ ಮಾಡಿದ್ದೇವೆ. ಕಥೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಜೀವನದಲ್ಲಿ ಋಣಾತ್ಮಕ ಅಂಶಗಳು ಹಲವು ಇರಬಹುದು, ಹೀಗಿದ್ದೇ ಜೀವನ ಎನ್ನುವುದು ‘ಬ್ಯೂಟಿಫುಲ್’ ಎನ್ನುವುದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ,” ಎನ್ನುತ್ತಾರೆ ನಿರ್ದೇಶಕ ದಾನಿಶ್.

ಅಂದ ಹಾಗೆ ಟ್ರೇಲರ್, ಆಡಿಯೋ ರಿಲೀಸ್ ಮಾಡುವ ವೃತ್ತಿಪರ ಸಿನಿಮಾಗಳ ಪ್ರಚಾರ ಕಲೆಯನ್ನು ಈ ವಿದ್ಯಾರ್ಥಿಗಳು ಬಳಸಿಕೊಂಡಿದ್ದಾರೆ.

ಬ್ಯೂಟಿಫುಲ್ ಆಡಿಯೋ ಲಾಂಚ್ ಕಾರ್ಯಕ್ರಮ

ಬ್ಯೂಟಿಫುಲ್ ಆಡಿಯೋ ಲಾಂಚ್ ಕಾರ್ಯಕ್ರಮ

ಈ ಸಿನಿಮಾದ ಕಲ್ಪನೆ ಹುಟ್ಟಿಕೊಂಡಿದ್ದೇ ಆಕಸ್ಮಿಕ. “ಮೊದಲ ವರ್ಷದಲ್ಲೇ ಒಂದಷ್ಟು ವಿದ್ಯಾರ್ಥಿಗಳು ಸಿನಿಮಾ ಮಾಡುತ್ತಿದ್ದರು; ಅವರಿಗೆಲ್ಲಾ ಆಸಕ್ತಿ ಇತ್ತು. ಒಮ್ಮೆ ನನ್ನ ಬಳಿ ನಾಲ್ಕು ಜನ ಕತೆ ಹಿಡಿದುಕೊಂಡು ಬಂದರು. ನಾನು ಅದಕ್ಕೆ ನನ್ನ ಕಥೆಯೂ ಸೇರಿಸಿ ನಾಲ್ಕು ಕಥೆಗಳ ಸಿನಿಮಾ ಮಾಡಿದೆವು. ಸ್ವಲ್ಪ ಗುಣಮಟ್ಟದ ಸಿನಿಮಾ ಮಾಡಬೇಕು ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆವು,” ಎನ್ನುತ್ತಾರೆ ಸಂಕಲನದ ಜೊತೆ ನಿರ್ದೇಶನವನ್ನೂ ಮಾಡಿರುವ ಮಾಧವ್ ಹೊಳ್ಳ. ಸದ್ಯ ಇವರು ಕಾಲೇಜಿನಲ್ಲಿ ಪ್ರೊಡಕ್ಷನ್ ಇನ್ಚಾರ್ಚ್ ಆಗಿದ್ದಾರೆ.

ಹಾಗೆ ನೋಡಿದರೆ ಪತ್ರಿಕೋದ್ಯಮಲ್ಲೇ ಪಠ್ಯದಲ್ಲೇ ಫಿಲ್ಮ್ಸ್ ಸ್ಟಡಿ ಮತ್ತು ಟೆಲಿವಿಷನ್ ಪ್ರೊಡಕ್ಷನ್ ಅಧ್ಯಾಯಗಳಿವೆ. ಆದರೆ “ನಾವು ಇಲ್ಲಿ ಅದರ ಪ್ರಾಕ್ಟಿಕಲ್ ಕ್ಲಾಸಿಗೂ ಒತ್ತು ನೀಡಿದ್ದೇವೆ. ಸದ್ಯ ಪ್ರತಿಯೊಬ್ಬರಿಗೂ ಸಾಕ್ಷ್ಯ ಚಿತ್ರ ಮತ್ತು ಕಿರುಚಿತ್ರ ನಿರ್ಮಾಣ ಕಡ್ಡಾಯ ಮಾಡಿದ್ದೇವೆ. ಅದರಲ್ಲಿ ಆಸಕ್ತಿ ಇದ್ದವರ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತೇವೆ. ಕ್ಯಾಮೆರಾ, ಸ್ಕ್ರಿಪ್ಟ್, ಸೇರಿದಂತೆ ಪ್ರೋಗ್ರಾಮ್ ನಿರ್ಮಾಣಕ್ಕೆ ಸಂಬಂಧಿಸಿದ ಬೇಸಿಕ್ ಮಾಹಿತಿಗಳನ್ನು ನೀಡುತ್ತೇವೆ,” ಎನ್ನುವುದು ಉಪನ್ಯಾಸ ಸುನಿಲ್ ಹೆಗ್ಡೆ ಅಭಿಮತ.

ಸದ್ಯ ಇದೇ ರೀತಿ ಕಾಲೇಜು ಮಟ್ಟದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡವರು ಮುಂದೆ ಅದನ್ನೇ ವೃತ್ತಿಯಾಗಿ ತೆಗೆದುಕೊಂಡ ಉದಾಹರಣೆಗಳನ್ನು ಅವರು ನಮ್ಮ ಮುಂದಿಡುತ್ತಾರೆ. ಇದೇ ‘ಬ್ಯೂಟಿಫುಲ್’ನ ಇನ್ನೊಬ್ಬ ನಿರ್ದೇಶಕ ಚೇತನ್ ಕೆ.ಸಿ ಈಗ ‘ಸ್ಟೈಲ್ ರಾಜ’ ಎನ್ನುವ ವೃತ್ತಿಪರ ಸಿನಿಮಾ ಒಂದರಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೋಟಿ ಬಜೆಟಿನ ತುಳು ಸಿನಿಮಾ ‘ಐಸ್ ಕ್ರೀಮ್’ ನಿರ್ದೇಶಕ ವೇಣುಗೋಪಾಲ್, ಸ್ಟಾರ್ ಸುವರ್ಣ ವಾಹಿನಿಯ ಫಿಕ್ಷನ್ ಹೆಡ್ ಕಾರ್ತಿಕ್ ಪಾರಾಡ್ಕರ್ ಮತ್ತಿತರರು ಸಿನೆಮಾ ತಯಾರಿಕೆಯಲ್ಲಿ ತೊಡಗಿಸಿಕೊಂಡ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. “ನಾನು ಕಾಲೇಜಿನಲ್ಲಿ ಇರುವಾಗ ಕಿರು ಚಿತ್ರ ನಿರ್ಮಾಣ ಮಾಡಿದೆ. ಸಂಪನ್ಮೂಲಗಳ ಕೊರತೆ ಇದ್ದಾಗ ಕಥೆಗೆ ಒತ್ತು ನೀಡಿದ್ದೆ. ನಂತರ ನಾನು ಮುಂದಿನ ಹಂತದಲ್ಲಿ ಕಲಿಯುತ್ತಾ ಹೋದೆ,” ಎನ್ನುತ್ತಾರೆ ಪಾರಾಡ್ಕರ್. ಕಾಲೇಜು ದಿನಗಳ ಸಿನಿಮಾಗಳು ವೃತ್ತಿಗೆ ಚಿಮ್ಮು ಹಲಗೆಯಾಗಿದ್ದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಈ ಸಿನಿಮಾ ಒಂದು ಉದಾಹರಣೆ ಅಷ್ಟೆ; ಇದೇ ರೀತಿ ಎಲ್ಲಾ ಪತ್ರಿಕೋದ್ಯಮ ಕಾಲೇಜುಗಳಲ್ಲಿಯೂ ಸಿನಿಮಾ, ಸಾಕ್ಷ್ಯ ಚಿತ್ರ, ಕಿರು ಚಿತ್ರಗಳ ನಿರ್ಮಾಣ ಸಮರೋಪಾದಿಯಲ್ಲಿ ಆರಂಭವಾಗಿದೆ. “ನಮ್ಮಲ್ಲಿ 2007ರಲ್ಲಿ ಕಾರ್ತಿಕ್ ಪಾರಾಡ್ಕರ್ ಮೊದಲಾದವರು ಮೊದಲ ಚಿತ್ರ ನಿರ್ಮಿಸಿದರು. ಇಲ್ಲಿವರೆಗೆ 15 ಕಿರು ಚಿತ್ರಗಳಾಗಿವೆ,” ಎನ್ನುವುದು ಎಸ್ಡಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಫ್ರೊ. ಭಾಸ್ಕರ್ ಹೆಗಡೆಯವರ ಮಾತು.

ಇದೇ ಅಭಿಪ್ರಾಯವನ್ನು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ರಾಂ ಕೂಡಾ ನೀಡುತ್ತಾರೆ. “ಸದ್ಯ ಮೂರು ವರ್ಷಗಳಲ್ಲಿ ನಮ್ಮ ಕಾಲೇಜಿನಲ್ಲೇ 7 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ಕಲಿಕೆಯ ಭಾಗವಾಗಿಯೂ ಅವರಿಗೆ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾಗಳು, ಕೊರಿಯನ್, ಇರಾನಿ, ಕಲಾತ್ಮಕ ಸಿನಿಮಾಗಳನ್ನು ತೋರಿಸುತೇವೆ. ವಾರಕ್ಕೆ ಮೂರು ಸಿನಿಮಾ ತೋರಿಸಿ ಅದರ ಬಗ್ಗೆ ವಿಮರ್ಶೆ ಮಾಡುವ ಪರಿಪಾಠವನ್ನೇ ಇಟ್ಟುಕೊಂಡಿದ್ದೇವೆ,” ಎನ್ನುತ್ತಾರೆ ಅವರು.

ಇವತ್ತು ಪತ್ರಿಕೋದ್ಯಮಕ್ಕೆ ಸಂಬಂಧ ಪಟ್ಟ ಯಾವುದೇ ‘ಫೆಸ್ಟ್’ಗಳು ನಡೆದರೂ ಅಲ್ಲಿ ಸಾಕ್ಷ್ಯ ಚಿತ್ರ ಮತ್ತು ಕಿರುಚಿತ್ರ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ “ಇನ್ನೂ ಉತ್ತಮ ಗುಣಮಟ್ಟದ ಸಿನಿಮಾಗಳು ತಯಾರಾಗಬೇಕಾಗಿವೆ. ಕೇರಳದಲ್ಲಿ ಇದಕ್ಕೆಂದೇ ಕಾಲೇಜುಗಳಿವೆ. ನಮ್ಮಲ್ಲೂ ಅಂಥ ಪರಿಪಾಠ ಆರಂಭವಾಗಬೇಕಾಗಿದೆ,” ಎನ್ನುತ್ತಾರೆ ಕೇರಳ ಮೂಲದ ಮಾಧವ್ ಹೊಳ್ಳ. ಬಹುಶಃ ಅದು ಸತ್ಯ ಕೂಡಾ. ಈಗ ಆರಂಭವಾಗಿರುವ ಈ ಸಿನಿಮಾ ನಿರ್ಮಾಣದ ‘ಟ್ರೆಂಡ್’ ಮತ್ತಷ್ಟು ಎತ್ತರಕ್ಕೆ ಏರಲಿ ಎಂದಷ್ಟೇ ಈ ಹೊತ್ತಲ್ಲಿ ಆಶಿಸಬಹುದು.

ಬ್ಯೂಟಿಫುಲ್ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇಲ್ಲಿವೆ..

 

Leave a comment

Top