An unconventional News Portal.

‘ಹೊಡೀರಿ, ಆದ್ರೆ ಮೂಳೆ ಮುರಿಯಬೇಡಿ’: ಗೋ ರಕ್ಷಣೆಗೆ VHP ಮುಂದಿಟ್ಟ ಹೊಸ ಸೂತ್ರ!

‘ಹೊಡೀರಿ, ಆದ್ರೆ ಮೂಳೆ ಮುರಿಯಬೇಡಿ’: ಗೋ ರಕ್ಷಣೆಗೆ VHP ಮುಂದಿಟ್ಟ ಹೊಸ ಸೂತ್ರ!

ಹೊಡೀರಿ; ಆದರೆ ಮೂಳೆ ಮುರಿಯಬೇಡಿ…

ಇದು ವಿಶ್ವಹಿಂದೂ ಪರಿಷತ್ ಗೋ ರಕ್ಷಣೆಗಾಗಿ ತನ್ನ ಕಾರ್ಯಕರ್ತರ ಮುಂದಿಟ್ಟಿರುವ ಹೊಸ ಸೂತ್ರ.

ಉತ್ತರ ಪ್ರದೇಶ, ಉತ್ತರಖಾಂಡ್ ಮತ್ತು ಬೃಜ್ ಪ್ರದೇಶದ ಹಿರಿಯ ಗೋ ರಕ್ಷಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ‘ಕೇಂದ್ರ ಗೋ ರಕ್ಷಾ ಸಮಿತಿ’ಯ ಖೇಮ್ಚಂದ್ ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ‘ಟಿಓಐ’ ವರದಿ ಮಾಡಿದೆ.

ಸಭೆಯಲ್ಲಿ ಮಾತನಾಡಿದ ಖೇಮ್ಚಂದ್, “ಗೋ ಸಾಗಣೆ ಮಾಡುವವರಿಗೆ ಪಾಠ ಕಲಿಸಬೇಕಿದೆ. ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಬೇಕಿದೆ. ಆದರೆ, ಗೋ ಸಾಗಣೆ ಮಾಡುವವರನ್ನು ಹೊಡೆದರೂ ಮೂಳೆ ಮುರಿಯಬಾರದು. ಹಾಗೇನಾದರೂ ಆದರೆ, ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ಹೊರಗಿನವರು ವಿಡಿಯೋ ತೆಗೆದು ವೈರಲ್ ಮಾಡುತ್ತಾರೆ. ಗೋ ರಕ್ಷಣೆ ವಿಚಾರದಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮಾತ್ರವಲ್ಲ ಹೊರಗಿನವರನ್ನೂ ಸೇರಿಸಿಕೊಳ್ಳಿ,” ಎಂದು ಖೇಮ್ಚಂದ್ ಕರೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಗೋ ರಕ್ಷಕರಿಗೆ ಕೈಮುಗಿದು ”ನನ್ನನ್ನು ಬೇಕಾದರೂ ಶೂಟ್ ಮಾಡಿ, ದಲಿತರ ಮೇಲೆ ಕೈ ಮಾಡಬೇಡಿ,” ಎಂದು ಬೇಡಿಕೊಂಡಿದ್ದರು.

ಈ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವ ಖೇಮ್ಚಂದ್, “ಪ್ರಧಾನಿ ಮೋದಿ ಗೋರಕ್ಷಣೆ ವಿಚಾರದಲ್ಲಿ ಮಾತನಾಡಿದ್ದಾರೆ. ಅವರ ಎಲ್ಲಾ ಮಾತುಗಳನ್ನು ನಾನು ಒಪ್ಪುವುದಿಲ್ಲ. ಆದರೆ, ಒಂದು ಮಾತು ಸತ್ಯ, ನಾವು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹೀಗಾಗಿ, ಅವರಿಗೆ (ಗೋ ಸಾಗಣೆ ಮಾಡುವವರು) ಹೊಡೀರಿ; ಆದರೆ ಮೂಳೆ ಮುರಿಯುಂತೆ ಅಲ್ಲ,” ಎಂದರು.

ಸಭೆಯ ನಂತರ, ‘ಟಿಓಐ’ ಜತೆ ಮಾತನಾಡಿದ ಖೇಮ್ಚಂದ್, “ಗೋ ರಕ್ಷಣೆ ಸಮಯದಲ್ಲಿ ನಮ್ ಕಾರ್ಯಕರ್ತರು ಆತ್ಮರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಗೋವಿಗಾಗಿಯೇ ಸಾಕಷ್ಟು ನಮ್ಮವರು ಸಾವನ್ನಪ್ಪಿದ್ದಾರೆ. ಗೋ ಸಾಗಣೆ ಮಾಫಿಯಾದ ಬಳಿ ಬಂಧೂಕು ಇದೆ. ನಮ್ಮವರ ಬಳಿ ಲಾಠಿ ಇದೆ. ಹೀಗಾಗಿ ಆತ್ಮರಕ್ಷಣೆಗಾಗಿ ನಾವು ಲಾಠಿ ಕೈಗೆತ್ತಿಕೊಳ್ಳುವುದು ಅನಿವಾರ್ಯ. ಆದರೆ ಪೊಲೀಸರು ವಿಶ್ವಹಿಂದೂ ಪರಿಷತ್ ಅವರನ್ನು ಮಾತ್ರವೇ ಗುರಿ ಮಾಡುತ್ತಾರೆ,” ಎಂದಿದ್ದಾರೆ. ‘

ಪ್ರಧಾನಿ ಮೋದಿ ಅವರನ್ನು ‘ನಮ್ಮವರೇ ಪ್ರಚಾರಕರು’ ಎಂದಿರುವ ಖೇಮ್ಚಂದ್, “ಅವರು (ಮೋದಿ) ಮೇಕ್ ಇನ್ ಇಂಡಿಯಾ ಎಂದು ಮಾತನಾಡುತ್ತಿದ್ದಾರೆ. ಹಿಂದೆ ಮೇಕ್ ಇನ್ ಇಂಡಿಯಾ ಎಲ್ಲಿತ್ತು? ಭಾರತವನ್ನು ಚಿನ್ನದ ಹಕ್ಕಿ ಎಂದು ಕರೆಯುತ್ತಿದ್ದರು. ಅವತ್ತಿಗೆ ಕೈಗಾರಿಕೆಗಳೇನು ಇರಲಿಲ್ಲ. ದೇಶ ಉಳಿಯಬೇಕಾದರೆ ಮೇಕ್ ಇನ್ ಇಂಡಿಯಾ ಅಲ್ಲ ಗೋವಿನಿಂದ ಮಾತ್ರ ಸಾಧ್ಯ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Leave a comment

Top