An unconventional News Portal.

ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

ನ್ಯಾಯಮೂರ್ತಿ ಲೋಧಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಳಗ ತಾರಕಕ್ಕೇರಿದೆ. ಲೋಧಾ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳ ವ್ಯವಹಾರ ನಿಲ್ಲಿಸುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ನ್ಯೂಜಿಲ್ಯಾಂಡ್ ಜೊತೆಗಿನ ಸರಣಿ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕ ಹಣದ ಅಮಲಿನಲ್ಲಿ ತೇಲುತ್ತಿದ್ದ ಬಿಸಿಸಿಐಗೆ ಕೊನೆಗೂ ಕಾನೂನಿನ ಬಿಸಿ ಮುಟ್ಟಿದೆ.

ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇನ್ನೂ ಒಂದು ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಸರಣಿ ಅರ್ಧಕ್ಕೆ ನಿಲ್ಲಿಸಲೇಬೇಕಾಗಿ ಬಂದಿದೆ. “ಬ್ಯಾಂಕುಗಳು ಬಿಸಿಸಿಐ ಖಾತೆಗಳ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸುರುವುದರಿಂದ ಭಾರತ-ನ್ಯೂಜಿಲ್ಯಾಂಡ್ ಸರಣಿಯನ್ನು ಮೊಟಕುಗೊಳಿಸದೇ ನಮಗೆ ಬೇರೆ ಆಯ್ಕೆಗಳಿಲ್ಲ. ಜಗತ್ತಿನ ಮುಂದೆ ಭಾರತದ ಮರ್ಯಾದೆ ಹರಾಜು ಹಾಕಲು ನಮಗೆ ಇಷ್ಟವಿಲ್ಲ. ನಾವು ಕೆಲಸ ಮಾಡುವುದು ಹೇಗೆ, ಕ್ರೀಡಾಕೂಟವನ್ನು ಹೇಗೆ ಆಯೋಜಿಸುವುದು? ಯಾರು ಹಣ ಪಾವತಿ ಮಾಡುತ್ತಾರೆ? ಬ್ಯಾಂಕ್ ಅಕೌಂಟ್ ಸ್ಥಗಿತ ತಮಾಷೆಯ ವಿಷಯವಲ್ಲ. ಇಲ್ಲೊಂದು ಅಂತರಾಷ್ಟ್ರೀಯ ತಂಡವಿದೆ (ನ್ಯೂಜಿಲ್ಯಾಂಡ್), ಅಕೌಂಟಿನಲ್ಲಿ ದೊಡ್ಡ ಮೊತ್ತದ ಹಣವಿದೆ,” ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಇಂಡಿಯನ್ ಎಕ್ಸ್ ಪ್ರೆಸ್’ಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ 30ರಂದು ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ನಡೆದಿತ್ತು. ಇದಾದ ಬಳಿಕ ಸೋಮವಾರ ಲೋಧಾ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ. “ಬಿಸಿಸಿಐನ ಸೆಪ್ಟೆಂಬರ್ 30ರ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಅವುಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಬೇರೆ ಬೇರೆ ಸದಸ್ಯ ಒಕ್ಕೂಟಗಳಿಗೆ ವರ್ಗಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ,” ಎಂದು ಸಮಿತಿ ಬ್ಯಾಕುಗಳಿಗೆ ಬರೆದ ಪತ್ರದಲ್ಲಿ ವಿವರಿಸಿದೆ. ಯೆಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ ಖಾತೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿ ಸಮಿತಿ ಪತ್ರ ಬರೆದಿದೆ.

“ಸಮಿತಿಯು ಆಗಸ್ಟ್ 31ರಂದ ನೀಡಿದ ನಿರ್ದೇಶನ ನಿಮಗೆಲ್ಲಾ ಗೊತ್ತಿರಬಹುದು. ದಿನನಿತ್ಯದ ವಿಷಯಗಳನ್ನು ಹೊರತಾಗಿ ಭವಿಷ್ಯದ ಬಗ್ಗೆ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿತ್ತು. ಈ ರೀತಿಯ ಮೊತ್ತದ ವರ್ಗಾವಣೆ ದಿನನಿತ್ಯದ ಬೆಳವಣಿಗೆಗಳಲ್ಲ. ಇಲ್ಲಿ ಯಾವುದೇ ತುರ್ತು ಅಗತ್ಯಗಳೂ ಅಲ್ಲ,” ಎಂದು ಸಮಿತಿ ಹೇಳಿದೆ. “ನಿಮಗೆಲ್ಲಾ ಗೊತ್ತಿರಬಹುದು ಬಿಸಿಸಿಐ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಮತ್ತು ಈ ಸಮಿತಿ 30 ಆಗಸ್ಟ್ 2016ರಂದು ರಚನೆ ಮಾಡಿದ ಫಂಡ್ ಡಿಸ್ಬರ್ಸ್ಮೆಂಟ್ ಪಾಲಿಸಿಯನ್ನು ದಿಕ್ಕರಿಸಲು ಹೊರಟಿದೆ,” ಎಂದೂ ಪತ್ರದಲ್ಲಿ ಹೇಳಲಾಗಿದೆ.

“ಗುರುವಾರ ಸ್ಟೇಟಸ್ ರಿಪೋರ್ಟನ್ನು ಪಡೆದುಕೊಂಡು ಕೋರ್ಟಿನ ನಿರ್ದೇಶನ ಪಡೆಯಲಿದ್ದೇವೆ, ಅಲ್ಲಿವರೆಗೆ 31.08.2016ರಂದು ನೀಡಿದ ನಿರ್ದೇಶನದಂತೆ ನೀವು ಯಾವುದೇ ಕಾರಣಕ್ಕೂ ಹಣದ ವಿತರಣೆಯಲ್ಲಿ ಪಾಲ್ಗೊಳ್ಳಬಾರದು ಎಂದು ಈ ಮೂಲಕ ಮತ್ತೊಮ್ಮೆ ಆದೇಶ ನೀಡುತ್ತಿದ್ದೇವೆ. ಈ ನಿರ್ದೇಶನವನ್ನು ಉಲ್ಲಂಘಿಸಿದಲ್ಲಿ ಮಾನ್ಯ ಸುಪ್ರಿಂ ಕೊರ್ಟಿನ ಗಮನಕ್ಕೆ ತರಲಾಗುವುದು,” ಎಂದು ಸಮಿತಿ ಖಡಕ್ಕಾಗಿ ಹೇಳಿದೆ.

ಗುರುವಾರ ಸುಪ್ರಿಂ ಕೋರ್ಟಿನಲ್ಲಿ ಈ ಕುರಿತು ಮಹತ್ವದ ವಿಚಾರಣೆ ನಡೆಯಲಿದ್ದು ಇದಾದ ಬಳಿಕ ಬಿಸಿಸಿಐ ತನ್ನ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ.

ಬಿಸಿಸಿಐನಲ್ಲಿ ದೊಡ್ಡ ಮೊತ್ತದ ಅವ್ಯವಾಹರಗಳು ನಡೆದಿವೆ ಎಂಬ ದೂರಿನ ಹಿನ್ನಲೆಯಲ್ಲಿ 2015ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ ಲೋಧಾ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿತ್ತು. ಈ ಸಮಿತಿಯ ಶಿಫಾರಸ್ಸಿನ ಮೇಲೆಯೇ ಐಪಿಎಲ್ ನಿಂದ ‘ರಾಜಸ್ಥಾನ ರಾಯಲ್ಸ್’ ಮತ್ತು ‘ಚೆನ್ನೈ ಸೂಪರ್ ಕಿಂಗ್ಸ್’ ತಂಡಗಳಿಗೆ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರ ಕೃಪೆ: ದಿ ಕ್ವಿಂಟ್

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top