An unconventional News Portal.

ರಾಜಧಾನಿಯಲ್ಲಿ ಮತ್ತೆ ‘ಕೈ-ದಳ’ ಮೈತ್ರಿ; ಪದ್ಮಾವತಿ ಬೆಂಗಳೂರಿನ ನೂತನ ಮೇಯರ್

ರಾಜಧಾನಿಯಲ್ಲಿ ಮತ್ತೆ ‘ಕೈ-ದಳ’ ಮೈತ್ರಿ; ಪದ್ಮಾವತಿ ಬೆಂಗಳೂರಿನ ನೂತನ ಮೇಯರ್

ಕಾಂಗ್ರೆಸ್ ಪಕ್ಷದ ಪದ್ಮಾವತಿ ಬೆಂಗಳೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನ ಜೆಡಿಎಸ್ನ ಆನಂದ್ ಪಾಲಾಗಿದ್ದು, ರಾಜಧಾನಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಪ್ರಕಾಶ್ ನಗರ ವಾರ್ಡ್ ಕಾರ್ಪೊರೇಟರ್ ಪದ್ಮಾವತಿ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಡಿ.ಎಚ್ ಲಕ್ಷ್ಮೀ ಸ್ಪರ್ಧಿಸಿದ್ದರು. ಚುನಾವಣೆ ನಡೆದಾಗ 142 ಮತ ಪಡೆದ ಪದ್ಮಾವತಿ ಜಯಶಾಲಿಯಾದರು. ಅವರ ಪ್ರತಿಸ್ಪರ್ಧಿ ಕೇವಲ 120 ಮತ ಗಳಿಸಲಷ್ಟೇ ಶಕ್ತವಾದರು. ಮೇಯರ್ ಹುದ್ದೆ ಗೆಲ್ಲಲು 135 ಮತಗಳ ಅವಶ್ಯಕತೆ ಇತ್ತು. ಜೆಡಿಎಸ್’ನ 23, ಕಾಂಗ್ರೆಸಿನ 112 ಮತ್ತು ಪಕ್ಷೇತರರ 7 ಮತಗಳನ್ನು ಪಡೆದು ಪದ್ಮಾವತಿ ಜಯಶಾಲಿಯಾದರು.

ಇನ್ನು ಉಪಮೇಯರ್ ಆಗಿ ರಾಧಾಕೃಷ್ಣ ನಗರ ವಾರ್ಡಿನ ಎಂ.ಆನಂದ್ ಆಯ್ಕೆಯಾದರು. ನೂತನ ಮೇಯರ್ ಮತ್ತು ಉಪಮೇಯರ್ ಅವಧಿ 28-09-2016 ರಿಂದ 27-09-2017ರ ವರೆಗೆ ಇರಲಿದೆ.

ಕಾಂಗ್ರೆಸ್ ಪರವಾಗಿ ಜೆಡಿಎಸ್ನ ಬಂಡಾಯ ಶಾಸಕರಾದ ಜಮೀರ್ ಅಹಮ್ಮದ್, ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರೂ ಮತ ಚಲಾಯಿಸಿದರು. ಇವರಿಗೆ ಪಕ್ಷದ ಕಡೆಯಿಂದ ವಿಪ್ ಜಾರಿಗೊಳಿಸಲಾಗಿತ್ತು.

ಬಿಜೆಪಿಯಿಂದ ಪದತ್ಯಾಗದ ನಾಟಕ

ಮೇಯರ್ ಚುನಾವಣೆ ವೇಳೆ ತಡವಾಗಿ ಬಂದ ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತೆ ಎಂ.ವಿ ಜಯಂತಿ ಮತದಾನಕ್ಕೆ ಅವಕಾಶ ನೀಡಲಿಲ್ಲ. ಆದರೆ ನಮಗೆ ಮತದಾನಕ್ಕೆ ಅವಕಾಶ ನೀಡಬೇಕು, ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಭೆಗೆ ನಾವೆಲ್ಲಾ ಹೋಗಿದ್ದೆವು ಎಂದು ಬಿಜೆಪಿ ಶಾಸಕರು ಪಟ್ಟು ಹಿಡಿದರು. ಇದಕ್ಕೆ ಜಯಂತಿ ಒಪ್ಪದಾಗ ಕಾಂಗ್ರೆಸ್ ನಾಯಕರಿಗೆ ಕೈಕುಲುಕುತ್ತಾ, ನಗುಮುಖದಿಂದ ಬಿಜೆಪಿ ನಾಯಕರು ಪದತ್ಯಾಗ ಶಾಸ್ತ್ರ ಮುಗಿಸಿದ್ದೂ ನಡೆಯಿತು.

ಚಿತ್ರ ಕೃಪೆ: ದಿ ಹಿಂದೂ

Leave a comment

Top