An unconventional News Portal.

ಹೇಗಿದ್ದ ಫಲುಜಾ ಹೇಗಾಯ್ತು ಗೊತ್ತಾ?: ಐಸಿಲ್ ವಶದಲ್ಲಿರುವ ನತದೃಷ್ಟ ನಗರದ ಕತೆ…

ಹೇಗಿದ್ದ ಫಲುಜಾ ಹೇಗಾಯ್ತು ಗೊತ್ತಾ?: ಐಸಿಲ್ ವಶದಲ್ಲಿರುವ ನತದೃಷ್ಟ ನಗರದ ಕತೆ…

ವಿಶ್ವವನ್ನೇ ಕೈವಶ ಮಾಡಿಕೊಳ್ಳುತ್ತೇವೆ ಎಂದು ಹೊರಟಿದ್ದ ಐಸಿಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್) ಪತನ ಕೊನೆಗೂ ಆರಂಭವಾಗಿದೆ. ದಿನದಿಂದ ದಿನಕ್ಕೆ ಒಂದೊಂದೇ ನಗರಗಳನ್ನು ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಉಗ್ರರು ಈಗ ಇರಾಕ್ ದೇಶದ ಪ್ರಮುಖ ನಗರ ಫಲುಜಾ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಐಸಿಲ್ ಕಪಿಮುಷ್ಟಿಯಿಂದ ಕೈತಪ್ಪುತ್ತಿರುವ ಐದನೇ ನಗರ ಇದು.

ಫಲುಜಾ ನಗರವನ್ನು ಮರುವಶ ಪಡಿಸಿಕೊಳ್ಳಲು ಆರು ದಿನಗಳ ಹಿಂದೆ ಇರಾಕ್ ಸರಕಾರ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಫಲುಜಾ ನಗರವನ್ನು ಇರಾಕ್ ಪಡೆಗಳು ಸುತ್ತುವರಿದಿದ್ದು ಮೊದಲ ಹಂತದ ಯೋಜನೆ ಯಶಸ್ವಿಯಾಗಿದೆ. ಈ ಮಧ್ಯೆ ಐಸಿಲ್ ಮತ್ತು ಸರಕಾರಿ ಪಡೆಗಳ ನಡುವೆ ಚಕಮಕಿ ಹೆಚ್ಚಾಗಿದ್ದು ನೂರಾರು ಜನ ನಗರ ತೊರೆದು ವಲಸೆ ಹೋಗುತ್ತಿದ್ದಾರೆ. ಈಗಾಗಲೇ ಸರಕಾರಿ ಪಡೆಗಳು  ನಗರದಲ್ಲಿದ್ದ ಜನರನ್ನು ಹೊರಗೆ ಕಳುಹಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಪ್ರಮುಖ ರಸ್ತೆಗಳನ್ನು ಐಸಿಲ್ ಉಗ್ರರು ಬಂದ್ ಮಾಡಿದ್ದು, ಇನ್ನೂ ಸುಮಾರು 50 ಸಾವಿರ ನಾಗರಿಕರು ಪಟ್ಟಣದೊಳಗೆ ಉಳಿದುಕೊಂಡಿದ್ದಾರೆ.

ಸಾವಿರಾರು ಇರಾಕ್ ಮಿಲಿಟರಿಯ ಸೈನಿಕರು, ಪೊಲೀಸರು, ಸ್ಥಳೀಯ ಬಂಡುಕೋರರು, ಅಮೆರಿಕಾ ಮತ್ತು ಮಿತ್ರಪಡೆಗಳ ವೈಮಾನಿಕ ಬೆಂಬಲದೊಂದಿಗೆ ಇಲ್ಲಿ ಕಾದಾಡುತ್ತಿವೆ. ನಗರದಲ್ಲಿದ್ದ ಐಸಿಲ್ ಉಗ್ರರ ಶಿಬಿರಗಳು, ಶಸ್ತ್ರಾಸ್ತ್ರ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆದಿದ್ದು 20 ಘಟಕಗಳು ಪುಡಿಯಾಗಿವೆ. ಈವರೆಗೆ  71 ಉಗ್ರರು ಅಸುನೀಗಿದ್ದು, ಐಸಿಲ್ ಫಲುಜಾ ಕಮಾಂಡೆರ್ ಮೆಹೆರ್ ಅಲ್ ಬಿಲಾವಿ ಕೂಡಾ ಸಾವನ್ನಪ್ಪಿದ್ದಾನೆ. ಸದ್ಯ ಅಮೆರಿಕಾ ಮಿಲಿಟರಿ ಅಂದಾಜಿನಂತೆ 500ರಿಂದ 700 ಉಗ್ರರು ನಗರದೊಳಕ್ಕೆ ಅವಿತು ಕುಳಿತಿದ್ದಾರೆ. ಅವರನ್ನೆಲ್ಲಾ ಹುಡುಕಿ ಕೊಲ್ಲಲಾಗುತ್ತಿದೆ.

ಫಲುಜಾದ ದುರಂತ ಇತಿಹಾಸ

ಫಲುಜಾ ಇರಾಕ್ ರಾಜಧಾನಿ ಬಾಗ್ದಾದ್ನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಇರಾಕ್ನ ಪ್ರಮುಖ ಪಟ್ಟಣಗಳಲ್ಲಿ ಇದೂ ಒಂದು.

2004ಕ್ಕೂ ಮೊದಲು ಈ ನಗರ ದೇಶದ ಸುಂದರ ನಗರಗಳಲ್ಲಿ ಒಂದಾಗಿತ್ತು. ಯುಫರೇಟ್ಸ್ ನದಿ ದಂಡೆಯಲ್ಲಿರುವ ನಗರ ಮಸೀದಿಗಳ ತಾಯ್ನೆಲ ಎಂದೇ ಹೆಸರಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಿಸುವ ಅಪೂರ್ವ ವಾಸ್ತುಶಿಲ್ಪದ ಮಸೀದಿಗಳು, ಮಿನಾರಗಳು ಜಗತ್ಪ್ರಸಿದ್ಧವಾಗಿದ್ದವು. ಇದೇ ನಗರ 2004ರಲ್ಲಿ ಸದ್ದಾಂ ಹುಸೇನ್ ಆಳ್ವಿಕೆಯ ಕಾಲದಲ್ಲಿ ಅಮೆರಿಕಾದ ದಾಳಿಗೆ ಗುರಿಯಾಗಿ ವಿರೂಪವಾಯ್ತು. ಕೊನೆಗೆ ಅಮೆರಿಕಾ ಸೈನಿಕರ ಕೈಯಿಂದ ರಕ್ಷಿಸಲು ಇಲ್ಲಿನ ನಾಗರಿಕರೇ ಗನ್ ಬಾಂಬ್ ಕೈಗೆತ್ತಿಕೊಳ್ಳಬೇಕಾಯ್ತು. ಮುಂದೆ ಇದೇ ಇಸ್ಲಾಮಿಕ್ ಉಗ್ರರಿಗೆ ಬಾಗಿಲು ತೆರೆದುಕೊಂಡು 2014ರಿಂದ ಐಸಿಲ್ ಉಗ್ರರ ಬೀಡಾಯ್ತು. ಈಗ ಇದೇ ಐಸಿಲ್ ಕೈಯಿಂದ ನಗರವನ್ನು ವಶಪಡಿಸಿಕೊಳ್ಳಲು ಸ್ಥಳೀಯರು ಇರಾಕ್ ಸೇನೆ ಜೊತೆ ಬಂದೂಕು ಹೆಗಲೇರಿಸಿದ್ದಾರೆ. ಒಂದು ಕಾಲದಲ್ಲಿ ಇಡೀ ನಗರವನ್ನು ಕುಲಗೆಡಿಸಿದ್ದ ಅಮೆರಿಕಾ ಮಿಲಿಟರಿ ಸಹಾಯದ ನೆಪದಲ್ಲಿ ಈಗ ಮತ್ತೆ ಬಂದಿದೆ. ಇನ್ನೇನಾಗುತ್ತೋ ಕಾದು ನೋಡಬೇಕು.

ಕುಸಿಯುತ್ತಿರುವ ಐಸಿಲ್ ಸಾಮ್ರಾಜ್ಯ

ಪಲ್ ಮೈರಾ

ಪಲ್ ಮೈರಾ

ಬೆಟ್ಟದ ತುದಿಯಾಚೆಗೆ ಪ್ರಪಾತ ಎನ್ನುವಂತೆ, ಉತ್ತುಂಗದಲ್ಲಿದ್ದ ಐಸಿಲ್ ದರ್ಬಾರ್ ನಿಧಾನವಾಗಿ ಕಡಿಮೆಯಾಗುತ್ತಿದೆ. ವಶದಲ್ಲಿದ್ದ ಒಂದೊಂದೇ ನಗರಗಳನ್ನು ಅದು ಕಳೆದುಕೊಳ್ಳುತ್ತಿದೆ. ಈ ಹಿಂದೆ ಸಿರಿಯಾದ ಐತಿಹಾಸಿಕ ನಗರ ಪಲ್ ಮೈರಾವನ್ನು ರಷ್ಯಾ ಪಡೆಗಳು ಐಸಿಲ್ ಕೈಯಿಂದ ಕಿತ್ತುಕೊಂಡಿದ್ದವು. ಇದಾದ ನಂತರ ಇರಾಕ್ ಮಿಲಿಟರಿ ದೇಶದ ಪ್ರಮುಖ ನಗರಗಳಾದ ಟಿಕ್ರಿತ್, ಅಲ್-ರುಟ್ಬಾಹ್ ವಶಪಡಿಸಿಕೊಂಡಿದ್ದರೆ. ಪ್ರಮುಖ ನಗರ ರಮಾದಿಯಲ್ಲಿ ಐಸಿಲ್ ಮತ್ತು ಇರಾಕ್ ಪಡೆಗಳ ನಡುವೆ ಕದನ ನಡೆಯುತ್ತಿದೆ. ಇನ್ನೊಂದು ಪ್ರಮುಖ ನಗರ ಮೊಸೂಲ್ನಲ್ಲಿ ಸದ್ಯದಲ್ಲೇ ಮಿಲಿಟರಿ ಕಾರ್ಯಾಚರಣೆ ಆರಂಭವಾಗಲಿದೆ. ಒಟ್ಟಾರೆ ಐಸಿಲ್ಗೆ ಕೊನೆಗಾಲ ಸಮೀಪಿಸುವಂತಿದೆ.

ಚಿತ್ರಕೃಪೆ: ಟೆಲಿಗ್ರಾಫ್, ಅಲ್ ಜಝೀರಾ

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top