An unconventional News Portal.

ಕ್ರಿಯೇಟಿವಿಟಿ ಕೈಕೊಟ್ರೆ ಬಚ್ಚಲು ಮನೆ ಇದ್ಯಲ್ಲಾ!

ಕ್ರಿಯೇಟಿವಿಟಿ ಕೈಕೊಟ್ರೆ ಬಚ್ಚಲು ಮನೆ ಇದ್ಯಲ್ಲಾ!

ನೀವು ಬರಹಗಾರ, ಕಲಾವಿದ, ಸಂಗಿತಗಾರ, ನಟ, ಉದ್ಯಮಿ ಅಥವಾ ಇನ್ಯಾವುದೇ ರೀತಿಯ ಕ್ರೀಯಾಶೀಲತೆಗೆ ಒತ್ತು ನೀಡುವ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಿದ್ದೀರಾ?

ಹಾಗಿದ್ರೆ, ನಿಮಗೆ ಒಂದು ಹಂತದಲ್ಲಿ ನಿಮ್ಮ ಸೃಜನಶೀಲತೆ ಕೆಲಸ ಮಾಡ್ತಿಲ್ಲ ಎಂದು ಅನ್ನಿಸಿಯೇ ಇರುತ್ತದೆ. ಜತೆಗೆ, ಕ್ರೀಯಾಶೀಲತೆ ಸತ್ತು ಹೋಗಿದೆ ಎಂಬ ಫೀಲ್ ಕೂಡ ಹುಟ್ಟಿರುತ್ತದೆ. ಹೊಸ ಆಲೋಚನೆಗಳಿಲ್ಲದೆ, ಮೆದುಳು ಬ್ಲಾಂಕ್ ಆಗಿದೆ ಅಂತಲೂ ಅನ್ನಿಸಿರಬಹುದು. ಅಂತಹ ಸಮಯದಲ್ಲಿ ನಿಮ್ಮೊಳಗಿನ ಕ್ರೀಯಾಶೀಲ ಆಲೋಚನೆಗಳಿಗೆ ಮರುಹುಟ್ಟು ನೀಡುವ ಜಾಗವೊಂದಿದೆ. ಅದುವೇ- ಬಾತ್ ರೂಮ್!

ಇದು, ‘ಹಫಿಂಗ್ಟನ್ ಪೋಸ್ಟ್’ ಪತ್ರಿಕೆಯ ಹಿರಿಯ ಬರಹಗಾರ ಕ್ಯಾರೋಲಿನ್ ಗ್ರೆಗರಿ ಮತ್ತು ಬ್ಯಾರಿ ಕೌಮ್ಯಾನ್ ಎಂಬವರು ಅದ್ಯಯನದ ಮೂಲಕ ಕಂಡುಕೊಂಡ ಸತ್ಯವಿದು. ಜಗತ್ತಿನ ಶೇ. 72 ರಷ್ಟು ಜನರಿಗೆ ತಮ್ಮ ಅತ್ಯುತ್ತಮ ಯೋಚನೆಗಳೆಲ್ಲಾ ಹೊಳೆಯೋದು ಬಚ್ಚಲಮನೆಯಲ್ಲಿ ಎಂಬ ವಿಚಿತ್ರ, ಆದರೆ ಸಾಧ್ಯತೆಗಳಿಗೆ ಹತ್ತಿರವಾದ ಅಂಶವನ್ನು ಅವರ ಸಂಶೋಧನೆ ಹೊರಹಾಕಿದೆ.

ಬಚ್ಚಲು ಮನೆಯಲ್ಲಿ ಶವರ್ ಇದ್ದರೆ, ಅದರ ಕೆಳಗೆ ಸುಮ್ಮನೆ ಕಣ್ಮುಚ್ಚಿ ನಿಂತಾಗ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೊಳಕೆ ಒಡೆಯುವ ಸಾಧ್ಯತೆ ಹೆಚ್ಚಿನವರಿಗೆ ಇದೆಯಂತೆ. ದೇಹದ ಮೇಲೆ ಬೀಳುವ ನೀರ ಹನಿಗಳು ಸಹಜವಾದ ಉಲ್ಲಾಸವನ್ನು ಮೂಡಿಸುತ್ತವೆ. ಇದರಿಂದ ಮನಸ್ಸು ಸ್ಥಿಮಿತಕ್ಕೆ ಬಂದು, ಒಂದು ನಿಟ್ಟಿನಲ್ಲಿ ಆಲೋಚನೆ ಮಾಡಲು ಪೂರಕ ಮನಸ್ಥಿತಿಯನ್ನು ರೂಪಿಸುತ್ತದೆ ಎಂಬುದು ಬರಹಗಾರರ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ವಿಚಾರ.

ಇನ್ನೊಂದು ಅರ್ಥದಲ್ಲಿ ಇದನ್ನು ಸ್ನಾನಕ್ಕೂ ಹೋಲಿಸಬಹುದು. ಸಾಮಾನ್ಯವಾಗಿ ದೇಹ ಕೊಳಕಾದ ಸಮಯದಲ್ಲಿ ಮನಸ್ಸು ಕೂಡ ಜಡ ಅನ್ನಿಸುತ್ತಿರುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಸಿಗುವ ಫೀಲ್ ಮನಸ್ಸಿನಲ್ಲಿಯೂ ಹೊಸ ಆಲೋಚನೆಗಳು ಹುಟ್ಟುವಂತೆ ಮಾಡುತ್ತವೆ. ಬಹುಶಃ ಹೀಗಾಗಿಯೇ ನಾಗರಿಕತೆಯಲ್ಲಿ ಸ್ನಾನ ಎಂಬ ಪರಿಕಲ್ಪನೆ ಹುಟ್ಟಿದ್ದು ಅನ್ನಿಸುತ್ತದೆ.

 

ಹೆಚ್ಚಿನ ಸಮಯದಲ್ಲಿ ಮನಸ್ಸನ್ನು ಕ್ರೀಯಾಶೀಲವಾಗಿಟ್ಟುಕೊಳ್ಳುವುದು ಮತ್ತು ಅದರಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಒಂದು ಸವಾಲು. ಕ್ರೀಯಾಶೀಲ ಮನಸ್ಸುಗಳಿಗೆ ಮನಸ್ಸಿನ ಏರಿಳಿತಗಳು ಕೊಂಚ ಹೆಚ್ಚಾಗಿಯೇ ಇರುತ್ತವೆ. ಇದು ಒಂದು ಹಂತ ದಾಟಿದ ನಂತರ, ಶೂನ್ಯ ಭಾವವೊಂದು ಆವರಿಸಿಕೊಂಡು ಬಿಡುತ್ತದೆ. ಇದರಿಂದ ಹೊರಬರಲು ಇರುವ ಸಾಧ್ಯತೆಗಳಲ್ಲಿ ಸ್ನಾನ ಅಥವಾ ಬಚ್ಚಲು ಮನೆ ಸಹವಾಸ ಸಹಾಯ ಮಾಡಬಹುದು ಎಂಬುದಷ್ಟೆ ಅಧ್ಯಯನ ತಿರುಳು.

ಅಂದಹಾಗೆ, ನೀವಂತೂ ದಿನಾ ಸ್ನಾನ ಮಾಡುತ್ತೀರಿ. ಆದರೆ, ಸ್ನಾನದ ನಂತರ ಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇನ್ನು ಮುಂದೆ ಗಮನಿಸಿ ನೋಡಿ.

Top