An unconventional News Portal.

ನಮ್ಮ ‘ಬ್ಯಾಂಕಿಂಗ್ ವ್ಯವಸ್ಥೆ’ ನಿಜಕ್ಕೂ ಯಾರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ?

ನಮ್ಮ ‘ಬ್ಯಾಂಕಿಂಗ್ ವ್ಯವಸ್ಥೆ’ ನಿಜಕ್ಕೂ ಯಾರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ?

  • ದೇವೆಂದರ್ ಶರ್ಮಾ

ಅಹ್ಮದಾಬಾದ್‌ನಲ್ಲಿ ನ್ಯಾನೋ ಕಾರ್‌ ತಯಾರಿಕಾ ಘಟಕ ಸ್ಥಾಪನೆಗೆ ಗುಜರಾತ್ ಸರಕಾರ 456. 79 ಕೋಟಿ ಮೊತ್ತದ ಸಾಲವನ್ನು ಟಾಟಾ ಕಂಪನಿಗೆ ನೀಡಿತು. ಅದೂ 0.1% ಬಡ್ಡಿ ದರದಲ್ಲಿ; 20 ವರ್ಷಗಳ ಕಾಲವಧಿಗೆ. ಇನ್ನೊಂದು ಅರ್ಥದಲ್ಲಿ ಬಡ್ಡಿರಹಿತ, ದೀರ್ಘಕಾಲಿಕ ಸಾಲವನ್ನು ನೀಡಲಾಯಿತು. ಪಂಜಾಬ್ ಸರಕಾರ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಒಡೆತನದ ಬಟಿಂಡಾ ರಿಪೈನರಿಯಲ್ಲಿ 1, 200 ಕೋಟಿ ರೂಪಾಯಿ ಹೂಡಿಕೆ ಮಾಡಿತು.

ಅದೇ ವೇಳೆಯಲ್ಲಿ ಹಳ್ಳಿಯ ಬಡ ಮಹಿಳೆಯೊಬ್ಬರು ಕುರಿಗಳನ್ನು ಕೊಳ್ಳಬೇಕು ಎಂದು 5 ಸಾವಿರ ಸಾಲಕ್ಕಾಗಿ ಸಣ್ಣ ಹಣಕಾಸು ಲೇವಾದೇವಿ ಸಂಘಗಳಿಗೆ ಮೊರೆ ಹೋಗುತ್ತಾಳೆ. ಆಕೆಗೆ ನೀಡುವ ಸಾಲಕ್ಕೆ ಶೇ. 24- 36ರಷ್ಟು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಅದೂ ಪ್ರತಿ ವಾರದ ಕೊನೆಯಲ್ಲಿ ಸಾಲದ ಕಂತನ್ನು ಕಟ್ಟಬೇಕು ಎಂಬ ಷರತ್ತಿನೊಂದಿಗೆ.

ಹೆಚ್ಚು ಕಡಿಮೆ ಎರಡೂ ಪ್ರಕರಣಗಳಲ್ಲಿ; ಕಾರ್ಪೊರೇಟ್ ಕುಳಗಳು ಹಾಗೂ ಹಳ್ಳಿಯ ಬಡ ಮಹಿಳೆಯರು ಉದ್ಯಮವನ್ನೇ ಅವಲಂಭಿಸಿದ್ದಾರೆ. ಟಾಟಾಗೆ ಅಥವಾ ಮಿತ್ತಲ್‌ಗೆ ನೀಡುವ ಸಾಲವನ್ನು ಬಡ ಮಹಿಳೆಯರಿಗೆ ವಿತರಿಸಿದರೆ ಅದೆಷ್ಟು ಕುಟುಂಬಗಳು ಆರ್ಥಿಕವಾಗಿ ಬಲಗೊಳ್ಳಬಹುದು ಎಂಬುದನ್ನು ಯೋಚಿಸಿ ನೋಡಿ.

ರೈತರನ್ನೇ ತೆಗೆದುಕೊಳ್ಳಿ. ಅವರು ಶೇ. 12ರ ಬಡ್ಡಿ ದರದಲ್ಲಿ ಟ್ರಾಕ್ಟರ್ ಕೊಳ್ಳುತ್ತಾರೆ. ಅದೇ ಶ್ರೀಮಂತರು ಐಶಾರಾಮಿ ಕಾರಗೆ ನೀಡುವ ಸಾಲಕ್ಕೆ ಶೇ. 7 ಬಡ್ಡಿದರವನ್ನು ವಿಧಿಸಲಾಗುತ್ತದೆ. ಇಲ್ಲಿ ರೈತ ತೆಗೆದುಕೊಳ್ಳುವ ಟ್ರಾಕ್ಟರ್ ಸಾಲಕ್ಕೂ, ಬದುಕಿನ ಐಶಾರಾಮಿಗೆ ತೆಗೆದುಕೊಳ್ಳುವ ಕಾರಿನ ಸಾಲಕ್ಕೂ ನಡುವೆ ಅಂತರ ಇರುವುದು ಸಂಕೇತಗಳಲ್ಲಿ ಮಾತ್ರ.

farmers-crisis-1

ಬಡವರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವ, ಶ್ರೀಮಂತರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುವ ಈ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಾಕೆ ನಿರ್ಮಿಸಲಾಗಿದೆ?

ಈ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಬಡವರ ಮೇಲೆ ನಡೆಯುತ್ತಿರುವ ಈ ದಾಳಿ ಇಷ್ಟಕ್ಕೆ ಕೊನೆಯಾಗುವುದಿಲ್ಲ. ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿಯ ಪ್ರಕಾರ ಸದ್ಯ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಿರುವ ‘ತೀರಿಸಲಾಗದ ಸಾಲ’ದ ಮೊತ್ತವೇ ಸುಮಾರು 6. 8 ಲಕ್ಷ ಕೋಟಿಯಷ್ಟಿದೆ. ಇದರಲ್ಲಿ ಶೇ. 70ರಷ್ಟು ಸಾಲವನ್ನು ಪಡೆದುಕೊಂಡಿರುವುದು ಕಾರ್ಪೊರೇಟ್ ಕ್ಷೇತ್ರದ ಕಂಪನಿಗಳು ಹಾಗೂ ಕುಟುಂಬಗಳು. ಹೀಗೆ, ಸಾಲ ತೀರಿಸಲಾದವರ ಪಟ್ಟಿಯಲ್ಲಿರುವ ರೈತರ ಸಂಖ್ಯೆ ಕೇವಲ ಶೇ. 1ರಷ್ಟು ಮಾತ್ರ. ಮುಖ್ಯ ಹಣಕಾಸು ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಈಗಾಗಲೇ ಕಾರ್ಪೊರೇಟ್ ಕ್ಷೇತ್ರಕ್ಕೆ ನೀಡಿರುವ ಈ ‘ತೀರಿಸಲಾಗದ ಸಾಲ’ವನ್ನು ಮನ್ನಾ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ನಾವು ಅನುಸರಿಸುತ್ತಿರುವ ‘ಬಂಡವಾಳಶಾಯಿ ಆರ್ಥಿಕ ವ್ಯವಸ್ಥೆ’ಯಲ್ಲಿ ‘ಕೆಟ್ಟ ಸಾಲ’ಗಳನ್ನು ಮನ್ನಾ ಮಾಡುವುದಷ್ಟೆ ಉಳಿದಿರುವ ದಾರಿ ಅಂತೆ. ಇನ್ನೊಂದು ಕಡೆ, ರೈತರು ತೀರಿಸಲಾಗದ ಶೇ. 1ರಷ್ಟು ಸಾಲ ಮನ್ನಾ ಮಾಡುವುದು ‘ಕೆಟ್ಟ ಆರ್ಥಿಕತೆ’ ಎನ್ನುತ್ತಾರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ ಅರುಂದತಿ ಭಟ್ಟಾಚಾರ್ಯ.

ಈ ಶೇ. 1ರಷ್ಟು ರೈತರಿಗೆ ನೀಡಿರುವ ಸಾಲದ ಫಲಾನುಭವಿಗಳೂ ಕೂಡ ಕೃಷಿ ಆಧಾರಿತ ಉದ್ಯಮ ನಡೆಸುತ್ತಿರುವ ಕಂಪನಿಗಳೇ ಎಂಬುದು ಗಮನಾರ್ಹ. ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರೈತರಿಗೆ ಸುಮಾರು 10 ಲಕ್ಷ ಕೋಟಿ ಸಾಲವನ್ನು ಘೋಷಿಸಿದ್ದಾರೆ. ಆಳಕ್ಕಿಳಿದು ನೋಡಿದರೆ ಇದರಲ್ಲಿ ಶೇ. 8ರಷ್ಟು ಮಾತ್ರವೇ ಸಣ್ಣ ರೈತರಿಗೆ ಸಿಗಲಿದೆ. ಭಾರತದಲ್ಲಿ ಕೃಷಿ ವ್ಯವಸ್ಥೆಯನ್ನು ತೆಗೆದುಕೊಂಡರೆ ಸಣ್ಣ ರೈತರ ಸಂಖ್ಯೆ ಇರುವುದು ಶೇ. 83ರಷ್ಟು. ಹೀಗಿದ್ದೂ, ಹಣಕಾಸು ಸಚಿವರ ಈ ಸಾಲ ಯೋಜನೆಯಲ್ಲಿ ಶೇ. 75ರಷ್ಟು ಪಾಲ ಹೊಂದಿರುವವರು ದೊಡ್ಡ ರೈತರು ಮತ್ತು ಕೃಷಿ ಆಧಾರಿತ ಕಂಪನಿಗಳು. ಇವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ‘ಕೃಷಿ ಸಾಲ’ ಎಂದರೆ ದೊಡ್ಡ ಮಟ್ಟದಲ್ಲಿ ಬೆಳೆಗಳನ್ನು ದಾಸ್ತಾನು ಮಾಡುವ ಕಂಪನಿಗಳಿಗೆ, ಕೃಷಿ ಸಲಕರಣೆಗಳ ಉತ್ಪಾದಕರಿಗೆ ಹಾಗೂ ಕೃಷಿ ಉದ್ಯಮ ನಡೆಸುವ ಕಂಪನಿಗಳಿಗೆ ನೀಡುವ ಸಾಲ ಎಂಬ ವ್ಯಾಖ್ಯಾನವನ್ನು ಮಾಡಲಾಗಿದೆ.

farmer-karnataka-1

ಉತ್ತರ ಪ್ರದೇಶದ ಚುನಾವಣೆ ವೇಳೆ ಪ್ರಧಾನಿ ಮೋದಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತರ ಸಾಲದ ಹೊರೆಯನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹೊತ್ತುಕೊಳ್ಳುವುದಾಗಿ ತಿಳಿಸಿದೆ. ಇನ್ನೊಂದಡೆ ಪಂಜಾಬ್‌ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯನ್ನು ಕಾಂಗ್ರೆಸ್ ಸರಕಾರ ಮಾಡಿತ್ತು. ಅಲ್ಲಿನ ಹಣಕಾಸು ಸಚಿವರು ರೈತರ ಸಾಲವನ್ನು ಸರಕಾರವೇ ವಹಿಸಿಕೊಂಡು ಬ್ಯಾಂಕುಗಳ ಜತೆ ಮಾತುಕತೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗೆ ರೈತರ ಸಾಲ ಎಂಬುದು ರಾಜಕೀಯಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಕೂಡ ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ.

ಪಂಜಾಬ್‌ನಲ್ಲಿ ಸುಮಾರು 35 ಸಾವಿರ ಕೋಟಿ ರೈತರ ಸಾಲ ಬಾಕಿ ಇದೆ. ಉತ್ತರ ಪ್ರದೇಶದಲ್ಲಿ 2 ಹೆಕ್ಟೇರ್ ಪ್ರದೇಶಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರ ಸಾಲದ ಪ್ರಮಾಣ 36 ಸಾವಿರ ಕೋಟಿಯಷ್ಟಿದೆ. ಅದನ್ನೀಗ ಕೇಂದ್ರ ಸರಕಾರವೇ ತುಂಬಲಿದೆ ಎಂಬ ಆಶ್ವಾಸನೆ ಸಿಕ್ಕಿದೆ. ಹಾಗಾದರೆ ಉಳಿದ ರಾಜ್ಯಗಳ ರೈತರ ಸಾಲದ ಕತೆ ಏನು? ಉದಾಹರಣೆಗೆ ಮಹಾರಾಷ್ಟ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ಕೇಂದ್ರದಿಂದ 30, 500 ಕೋಟಿ ರೂಪಾಯಿಗಳ ಬೇಡಿಕೆ ಮುಂದಿಟ್ಟಿದೆ. 2009ರಿಂದ ಈಚೆಗೆ ಅಲ್ಲಿ ಸುಮಾರು 23 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ಧಾರೆ. ತಮಿಳುನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲ ನಿರಂತರವಾಗಿ ರೈತರನ್ನು ಕಾಡುತ್ತಿದೆ. ಅಲ್ಲಿನ ರೈತರು ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಹಾಗೂ ಒರಿಸ್ಸಾದಿಂದಲೂ ರೈತರ ಆತ್ಮಹತ್ಯೆ ಸುದ್ದಿಗಳು ಬರುತ್ತಿವೆ.

ರೈತರನ್ನು ಯಥಾಸ್ಥಿತಿಯಲ್ಲಿ ಇಡಲು ನಡೆಯುತ್ತಿರುವ ನಿರಂತರ ಪ್ರಯತ್ನ ಫಲವಾಗಿ ದೇಶದಲ್ಲಿ ಕೃಷಿ ಬಿಕ್ಕಟ್ಟೊಂದು ನಿರ್ಮಾಣವಾಗಿದೆ. ರೈತರ ಬೆಳೆದ ಬೆಳೆಗಳಿಗೆ ಬೆಲೆಯನ್ನು ನಿರಾಕರಿಸುತ್ತಿರುವುದು, ಬಡ ರೈತರಿಗೆ ಸಾಲ ಸಿಗದಂತೆ ತಡೆಯುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯ ಫಲ ಇದು. ಸದ್ಯದ ಸ್ಥಿತಿಯಲ್ಲಿ ಶ್ರೀಮಂತ ಕಾರ್ಪೊರೇಟ್ ಕಂಪನಿಗಳು ತಮಗೆ ಸಿಗುತ್ತಿರುವ ಸಾಲ, ತೆರಿಗೆ ಮನ್ನಾಗಳಿಂದಾಗಿ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿವೆ. ಇದೇ ವೇಳೆ ಈ ದೇಶದ ರೈತರು ಜುಜುಬಿ ಸಾಲಕ್ಕಾಗಿ ಮೊರೆ ಇಡುವ ಪರಿಸ್ಥಿತಿ ಬಂದಿದೆ.

ಈಗಲಾದರೂ ಬ್ಯಾಂಕುಗಳು ತಮ್ಮ ತಪ್ಪನ್ನು ಅರ್ಥಮಾಡಿಕೊಂಡು, ಸಾಲ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತವಾ? ಅದರ ಬದಲಿಗೆ ಇದೀಗ ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಕೈ ಹಾಕಿವೆ. ಇಂತಹದೊಂದು ಆರ್ಥಿಕ ವ್ಯವಸ್ಥೆಯನ್ನು ಈ ದೇಶದ ಸಾಮಾನ್ಯ ಪ್ರಜೆ ಇನ್ನೆಷ್ಟು ದಿನ ಅಂತ ತಾನೆ ಸಹಿಸಿಕೊಳ್ಳಲು ಸಾಧ್ಯ?

ಕೃಪೆ: ದಿ ವೈರ್.

 

Top