An unconventional News Portal.

ಚಿಕ್ಕವರೆಲ್ಲಾ ಕೋಣರಲ್ಲ; ಮನಸ್ಸು ಮಾಡಿದರೆ ಪತ್ರಕರ್ತರೂ ಆಗುತ್ತಾರಲ್ಲಾ…!

ಚಿಕ್ಕವರೆಲ್ಲಾ ಕೋಣರಲ್ಲ; ಮನಸ್ಸು ಮಾಡಿದರೆ ಪತ್ರಕರ್ತರೂ ಆಗುತ್ತಾರಲ್ಲಾ…!

ಪತ್ರಕರ್ತರಾಗಲು ವಯಸ್ಸಿನ ಮಿತಿಗಳಿಲ್ಲ. ಹೀಗಿದ್ದೂ, ಬಾಲ ಪತ್ರಕರ್ತರ ಉದಾಹರಣೆಗಳು ಈ ಜಗತ್ತಿನಲ್ಲಿ ಅಪರೂಪ. ಆದರೆ ಇದಕ್ಕೆ ಅಪವಾದ ಬಾಂಗ್ಲಾದೇಶದ ‘ಪ್ರಿಸಂ’ ಮಾಧ್ಯಮ ಸಂಸ್ಥೆ. ಇಲ್ಲಿ ಎಳೆ ವಯಸ್ಸಿನ ಮಕ್ಕಳೇ ಪತ್ರಕರ್ತರು.

ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮತ್ತು BDnews24.com ಎಂಬ ನ್ಯೂಸ್ ವೆಬ್ಸೈಟ್ ಸಹಯೋಗದಲ್ಲಿ ಪ್ರಿಸಂ (prism) ವೀಡಿಯೋ ಸುದ್ದಿ ಸೇವಾ ಸಂಸ್ಥೆಯನ್ನು ಢಾಕಾದಲ್ಲಿ ಆರಂಭಿಸಲಾಗಿದೆ.

ಅದನ್ನು ವೇದಿಕೆಯಾಗಿ ಬಳಸಿಕೊಂಡಿರುವ ಅರ್ಜು ಮೋನಿ ಎಂಬ ಈ 17ರ ಹರೆಯದ ಪೋರ, ಬೀದಿ ಬದಿಯ ಮಕ್ಕಳ ಸಮಸ್ಯೆಗಳನ್ನು ಜನರ ಮುಂದಿಡುತ್ತಿದ್ದಾನೆ. ಈ ಮೂಲಕ ಬಾಂಗ್ಲದೇಶದ ಸ್ಥಳೀಯತೆಗೆ ಹೆಚ್ಚು ಹತ್ತಿರ ಇರುವ ಸುದ್ದಿಗಳನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದಾನೆ.

ಬಾಂಗ್ಲದ ಶೇಕಡಾ 40ಕ್ಕೂ ಜನಸಂಖ್ಯೆ 18 ವರ್ಷಕ್ಕಿಂತ ಒಳಗಿದೆ. ”ಇದೂ ಕೂಡ ನಾವು ಮಕ್ಕಳನ್ನೇ ಪತ್ರಕರ್ತರನ್ನಾಗಿ ಮಾಡುವ ಸಾಹಸಕ್ಕೆ ಮುಂದಾಗಲು ಪ್ರೇರಣೆ ನೀಡಿತು,” ಎನ್ನುತ್ತಾರೆ ಯೂನಿಸೆಫ್ ಬಾಂಗ್ಲಾ ಪ್ರತಿನಿಧಿ ಎಡ್ವರ್ಡ್ ಬ್ಯಾಗ್ಬೆಡರ್.

ಪರಿಸರ, ಸಂಸ್ಕೃತಿ, ಪ್ರವಾಸೋದ್ಯಮ, ಅಭಿವೃದ್ದಿ ಹೀಗೆ ಎಲ್ಲಾ ಕ್ಷೇತ್ರಗಳ ಸುದ್ದಿಗಳನ್ನು ಇಲ್ಲಿನ ಯುವ ಪತ್ರಕರ್ತರು ಹೊರ ಜಗತ್ತಿಗೆ ತಮ್ಮದೇ ತಿಳಿವಳಿಕೆಗಳ ಮಿತಿಯಲ್ಲಿ ನೀಡುತ್ತಿದ್ದಾರೆ. ಪ್ರಿಸಂ ಆರಂಭವಾಗಿ ಕೆಲವೇ ದಿನಗಳಾಗಿವೆ. ಈಗಾಗಲೇ ಬಾಂಗ್ಲಾದೇಶದ ಪ್ರಮುಖ 5 ಸುದ್ದಿ ವಾಹಿನಿಗಳು ‘ಪ್ರಿಸಂ’ ಮೂಲಕ ಮಕ್ಕಳು ವರದಿ ಮಾಡುವ ಸುದ್ದಿಗಳನ್ನು ಭಿತ್ತರಿಸುವ ಒಪ್ಪಂದಕ್ಕೆ ಸಹಿ ಮಾಡಿವೆ. “ಈ ಒಪ್ಪಂದದಿಂದ ತಮ್ಮ ವಿಡಿಯೋಗಳನ್ನು ವಾಹಿನಿಗಳು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದು,” ಎನ್ನುತ್ತಾರೆ ಪ್ರಿಸಂನ ಪ್ರಾಜೆಕ್ಟ್ ಮ್ಯಾನೇಜರ್ ಶಕೀಲ್ ಫೈಜುಲ್ಲಾಹ್.

ಢಾಕಾದ ದಕ್ಷಿಣ ನಗರಗಳಲ್ಲಿ ನಾರಾಯಣ್ ಗಂಜ್ ಕೂಡ ಒಂದು. ಇಲ್ಲೊಂದು ಹುತಾತ್ಮರ ಸ್ಮಾರಕವಿದೆ. ಈ ಭಾಗದಲ್ಲಿ ಜನ ಸೇರಲು ಸರಿಯಾದ ಸ್ಥಳಗಳೇ ಇಲ್ಲದ ಕಾರಣ ತಮ್ಮ ಮೀಟಿಂಗ್ ಮತ್ತು ಇತರ ಕಾರ್ಯಕ್ರಮಗಳ ಸಂದರ್ಭ ಬಂದರೆ ಇಡೀ ಊರಿಗೆ ನೆನಪಾಗುವುದು ಇದೇ ಸ್ಥಳ. ಈ ಸುದ್ದಿಯನ್ನು ಅರ್ಜು ಮೋನಿ ವರದಿ ಮಾಡಿದ್ದು ಇಲ್ಲಿದೆ.

“ಇಲ್ಲಿವರೆಗಿನ ನನ್ನ ಎಲ್ಲಾ ವರದಿ ನಾರಾಯಣ್ ಗಂಜ್ ಸ್ಥಳದ ಸಮಸ್ಯೆಗಳನ್ನು ತೋರಿಸಿವೆ. ಸುಂದರವಾಗಿರುವುದು ಸುಂದರವೇ, ಆದರೆ ನನ್ನ ಪ್ರಯತ್ನ, ಸುಂದರವಾಗಿಲ್ಲದೇ ಇರುವುದನ್ನು ಸುಂದರವಾಗಿಸುವುದು,” ಎನ್ನುತ್ತಾನೆ ಎಳೆಯ ಪತ್ರಕರ್ತ ಅರ್ಜು ಮೋನಿ.

ಮೊಹಮ್ಮದ್ ಜಾಹೀದ್ ಹಸನ್ ಎನ್ನುವ ಇನ್ನೊಬ್ಬ 17 ವರ್ಷದ ಬಾಲಕನದ್ದೂ ಇದೇ ಕಥೆ. ಇಲ್ಲಿನ ಗಾಜಿಪುರ ಜಿಲ್ಲೆಯಲ್ಲಿ ಕೊಳಚೆ ನೀರು ಹೋಗಿ ‘ತುರಾಗ್’ ನದಿ ಸೇರುವುದನ್ನು ವರದಿ ಮಾಡಿದ್ದ. ನದಿ ಮಲಿನವಾಗುವುದರಿಂದ ಮೀನುಗಾರರು ತಮ್ಮ ನಿತ್ಯದ ದುಡಿಮೆ ಕಳೆದುಕೊಳ್ಳುತ್ತಾರೆ. ಹೇಗೆ ಇದು ಆರ್ಥಿಕವಾಗಿ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದನ್ನು ಎಳೆಯ ಮನಸ್ಸು ಸೆರೆ ಹಿಡಿದಿತ್ತು.

ಮೇಲೆ ಹೇಳಿದ ಘಟನೆಗಳೆಲ್ಲವೂ ಉದಾಹರಣೆಗಳಷ್ಟೇ. “ಇಂಥ ಪ್ರಯತ್ನಳಿಂದ ಯುವ ಮನಸ್ಸುಗಳು ಪ್ರಶ್ನೆಗಳನ್ನು ಎತ್ತುವ ಕಲೆಯನ್ನು ಕಲಿಯುತ್ತಿದ್ದಾರೆ,” ಎನ್ನುತ್ತಾರೆ BDnews24.com ಸಂಪಾದಕರಾದ ತಾಫಿಕ್ ಇಮ್ರೋಸ್ ಕಾಲಿದಿ. “ಈ ಮಕ್ಕಳಿಗೆ ಜವಾಬ್ದಾರಿಯುತ ಜನರಿಂದ ಮತ್ತು ವೃತ್ತಿಪರರಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ,” ಎಂದವರು ವಿವರಿಸುತ್ತಾರೆ.

ಇವತ್ತು ಬಾಂಗ್ಲಾದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾರಣಕ್ಕೆ ಸುದ್ದಿಯಲ್ಲಿರುವ ದೇಶ. ಇಲ್ಲಿನ ಪತ್ರಕರ್ತರು ಮತ್ತು ಚಿಂತಕರು ಪದೇ ಪದೇ ದಾಳಿಗೆ ಒಳಗಾಗುತ್ತಿದ್ದಾರೆ. ಅಧಿಕಾರ ಶಾಹಿ ಮತ್ತು ಧರ್ಮದ ಮೂಲಭೂತವಾದಿಗಳು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಹಾಗಾಗಿ ಈಗ ಪತ್ರಿಕೋದ್ಯಮದ ಫೀಲ್ಡ್ಗೆ ಇಳಿದಿರುವ ಈ ಮಕ್ಕಳ ಸುರಕ್ಷತೆಯೂ ಪ್ರಮುಖ ಸವಾಲಾಗಿದೆ. “ಈ ಸವಾಲನ್ನು ನಾವು ಎದುರಿಸಬೇಕು. ಪತ್ರಕರ್ತರನ್ನು ಈ ದೇಶದಲ್ಲಿ ತುಂಬಾ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ, ಈ ಮಕ್ಕಳು ನಾವು ನಿಮಗಿಂತ ಉತ್ತಮ ಎಂಬುದನ್ನು ಅವರಿಗೆ ತೋರಿಸುತ್ತಿದ್ದಾರೆ,” ಎನ್ನುವುದು ಕಾಲಿದಿ ಅಭಿಮತ.

ಸದ್ಯ ಮಕ್ಕಳನ್ನು ಧರ್ಮ ಮತ್ತು ರಾಜಕೀಯ ಸುದ್ದಿಗಳಿಂದ ದೂರ ಇಡಲಾಗಿದ ಎಂದವರು ಹೇಳುತ್ತಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಯೋಜನೆ ದೇಶದ 7 ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ಬಂದಿದೆ. ಒಟ್ಟು 15 ಜನ ಕಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಯೂನಿಸೆಫ್ ವರ್ಷಕ್ಕೆ 50 ಸಾವಿರ ಡಾಲರ್ ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲಿ ‘ಪ್ರಿಸಂ’ ಸಂಸ್ಥೆಯನ್ನು ಸ್ವಾವಲಂಬಿ ಉದ್ಯಮವಾಗಿಸುವ ಗುರಿ ಹೊಂದಲಾಗಿದೆ.

ಯುವಕರನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಧ್ಯಮಗಳು ಸೋಲುತ್ತಿವೆ. ಇವತ್ತಿನ ಯುವ ಜನಾಂಗದ ಭಾವನೆಗಳು, ಮಾಧ್ಯಮಗಳಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಅನಾದಿ ಕಾಲದಿಂದಲೂ ಜಗತ್ತಿನಾದ್ಯಂತ ಮಾಧ್ಯಮದ ಮೇಲೆ ಕೇಳಿ ಬರುತ್ತಿರುವ ಆಪಾದನೆಗಳಲ್ಲೊಂದು. ಇದು ಮಾಧ್ಯಮದ ಮೇಲಿನ ಆಪಾದನೆಗೆ ಪರಿಹಾರದಂತೆ ತೋರುತ್ತಿದೆ.

ಕೃಪೆ: ದಿ ಗಾರ್ಡಿಯನ್

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top