An unconventional News Portal.

ಮಳೆ ನಿಂತು ಹೋದ ಮೇಲೆ; ಸಿಎಂ ಸಿದ್ದರಾಮಯ್ಯ ಬೀದಿಗೆ ಇಳಿಯಲಿ: ನಗರವಾಸಿಗಳ ಸಂಕಟ ಅರಿಯಲಿ!

ಮಳೆ ನಿಂತು ಹೋದ ಮೇಲೆ; ಸಿಎಂ ಸಿದ್ದರಾಮಯ್ಯ ಬೀದಿಗೆ ಇಳಿಯಲಿ: ನಗರವಾಸಿಗಳ ಸಂಕಟ ಅರಿಯಲಿ!

ಮಳೆಗಾಲ…

ರಾಜ್ಯದ ಯಾವ ಭಾಗದಲ್ಲೂ ಸೃಷ್ಟಿಸದ ನರಕವೊಂದು ಮಹಾನಗರ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದ ಕಂಗೆಡುವ ಇಲ್ಲಿನ ಜನ ಒಂದು ದೊಡ್ಡ ಮಳೆಗೆ ಹೈರಾಣಾಗಿ ಹೋಗುತ್ತಾರೆ. ಅದಕ್ಕೆ ಇಲ್ಲಿನ ಟ್ರಾಫಿಕ್ ಸಮಸ್ಯೆ, ಕಸದ ಸಮಸ್ಯೆ, ನೀರಿನ ಸಮಸ್ಯೆ ಜತೆಗೆ ಮಳೆ ನಿರ್ವಹಣೆಯಲ್ಲೂ ಸ್ಥಳೀಯ ಆಡಳಿತದ ಹೊಣೆಗೇಡಿತನಗಳು ಸೃಷ್ಟಿಸಿರುವ ಸಮಸ್ಯೆ ಕಾರಣ.

ಸೋಮವಾರ ಸಂಜೆ ವೇಳೆಗೆ ಬೆಂಗಳೂರು ನಗರ ಭಾರೀ ಮಳೆಗೆ ಸಾಕ್ಷಿಯಾಯ್ತು. ಇಳಿಜಾರಿನ ಪ್ರದೇಶಗಳಲ್ಲಿ ಪ್ರವಾಹದಂತೆ ನೀರು ನುಗ್ಗಿತು. ಸಂಜೆ ಶುರುವಾದ ಮಳೆ ರಾತ್ರಿ 10 ಗಂಟೆವರೆಗೆ ಕೆಲವು ಏರಿಯಾಗಳಲ್ಲಿ ಬಿಡುವಿಲ್ಲದೆ ಸುರಿಯುತ್ತಿದ್ದ ಪರಿಣಾಮ ಜನ ಬಸ್ ನಿಲ್ದಾಣಗಳಲ್ಲಿ, ಅಂಗಡಿ ಮುಗ್ಗಟ್ಟುಗಳ ಮರೆಯಲ್ಲಿ ಮಳೆಯಿಂದ ರಕ್ಷಣೆ ಪಡೆಯುವಂತಾಯಿತು. ಕೊನೆಗೆ, ಆಟೋಗಳೂ ಸಿಗದೆ, ಇತ್ತ ಬಸ್ಗಳೂ ಸರಿಯಾಗಿ ಸಿಗದೆ, ಕ್ಯಾಬ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗದೆ ಜನ ಮನೆಗಳನ್ನು ತಲುಪುವ ದಿನಚರಿಯಲ್ಲಿ ಏರುಪೇರಾಯಿತು.

ಪ್ರತೀ ಭಾರಿ ಮಳೆ ಸುರಿದಾಗಲೂ ಬೆಂಗಳೂರಿನ ರಸ್ತೆಗಳು ನದಿಗಳಾಗಿಯೂ, ತಗ್ಗು ಪ್ರದೇಶಗಳು ಕೆರೆಗಳಾಗಿಯೂ ಪರಿವರ್ತನೆಯಾಗುತ್ತವೆ. ಮಳೆಗಾಲ ಎಂದರೆ ಇದೊಂದು ಸಾಮಾನ್ಯ ಸುದ್ದಿ. ಮಳೆ ಬೀಳುತ್ತಿರುವ ವೇಳೆಗೆ, ಮಳೆಯ ಆರ್ಭಟ, ಮಾರನೇ ದಿನ ಎಲ್ಲೆಲ್ಲಿ ನೀರು ನುಗ್ಗಿತು ಎಂಬ ಸಂಕಟ.

ಮಳೆಯ ನೇರ ಪರಿಣಾಮಗಳನ್ನು ಎದುರಿಸುತ್ತಿರುವವರು ನಗರದ ಬಡ ಜನತೆ. ಕೊಳೆಗೇರಿಯಲ್ಲಿ ವಾಸಿಸುವ ಜನ, ಬೀದಿ ಬದಿಯಲ್ಲಿ ತಾತ್ಕಾಲಿಕ ಟೆಂಟ್ಗಳನ್ನು ಹಾಕಿಕೊಂಡವರು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಕೆರೆಗಳು ಮಣ್ಣು ತುಂಬಿ ಅಪಾರ್ಟ್ಮೆಂಟ್ಗಳಾಗಿ ಪರಿವರ್ತನೆಗೊಂಡಿವೆ. ಇಲ್ಲೀಗ ವಾಸಿಸುವ ಜನಕ್ಕೆ ಮಳೆ ಎಂದರೆ ರೋಮಾಂಚನ ಅಷ್ಟೆ. ಆದರೆ, ಈ ದುರಾಸೆಯ ನಗರ ಜೀವನ ಶೈಲಿಯ ಪರಿಣಾಮಗಳನ್ನು ಸಾಮಾನ್ಯ ಜನ ಎದಿರಿಸುವಂತಾಗಿದೆ.

ಪರಿಹಾರವೇನು?

ಕಳೆದ ವರ್ಷ ಬೆಂಗಳೂರು ನಗರದ ಮಳೆ ಬಗ್ಗೆ ಅಧ್ಯಯನ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮುಂದೊಂದಿನ ಬೆಂಗಳೂರು ಭಾರೀ ಮಳೆ ಬಂದರೆ ಪ್ರವಾಹವನ್ನೇ ಎದುರಿಸಲಿದೆ ಎಂದು ಎಚ್ಚರಿಸಿತ್ತು. ಅದರಲ್ಲೂ ಉತ್ತರ ಬೆಂಗಳೂರು ಮಳೆಗೆ ಪ್ರವಾಹಕ್ಕೆ ಒಳಗಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ವರದಿ ಹೇಳಿದೆ. ಇತ್ತೀಚೆಗೆ ಚೆನ್ನೈನ ಪ್ರವಾಹ ಕಂಡೇ ನಾವೆಲ್ಲಾ ನಡುಗಿದ್ದೇವೆ. ಬಹುಶಃ ನಮಗೂ ಆ ದಿನಗಳು ದೂರವಿಲ್ಲ ಅಂತ ಈ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಇದನ್ನು ನಿರ್ವಹಿಸಬೇಕಿರುವುದು ಸ್ಥಳೀಯ ಆಡಳಿತ ಬಿಬಿಎಂಪಿ. ಆದರೆ, ಅದು ಮಳೆಯ ಪರಿಣಾಮಗಳ ತಡೆಗೆ ಯಾವ ಯೋಜನೆ ಹಮ್ಮಿಕೊಂಡಿದೆ ಎಂದು ಹುಡುಕಿದರೆ ಒಂದಷ್ಟು ಪಟ್ಟಿಯಲ್ಲಿ ಸಿಗುತ್ತವೆ. ಆದರೆ ತಳಮಟ್ಟದಲ್ಲಿ ಅವು ಅನುಷ್ಠಾನಗೊಂಡ ಬಗ್ಗೆ ಮಾಹಿತಿ ಇಲ್ಲ. ಮಳೆಯ ನೀರನ್ನು ಒಂದು ಮಟ್ಟಿಗೆ ತಡೆಯಬಹುದಾದ ರಾಜ ಕಾಲುವೆ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಲು ಜಿಲ್ಲಾಡಳಿತ ಆರಂಭ ಶೂರತ್ವ ಪ್ರದರ್ಶಿಸಿತು. ಒಟ್ಟಾರೆ ಫಲಿತಾಂಶ ಮಾತ್ರ ಶೂನ್ಯ.

ಒಂದು ನಗರ ಬೆಳೆಯುತ್ತ ಹೋದಂತೆ ಶ್ರೀಮಂತರ ಐಶಾರಾಮಿತನಗಳನ್ನು ನಿರ್ವಹಿಸುವಲ್ಲಿಯೇ ತನ್ನ ಆತ್ಮವನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಅನೇಕ ನಗರಗಳು ಉದಾಹರಣೆ ರೂಪದಲ್ಲಿ ನಮ್ಮ ಮುಂದಿವೆ. ಮಳೆಗಾಲ ಹೇಗೂ ಆರಂಭವಾಗಿದೆ. ಈ ಸಮಯದಲ್ಲಿ ಮತ್ತದೇ ಕಳೆದ ವರ್ಷದ ಸುದ್ದಿಗಳು ಪುನಾರಾವರ್ತನೆಯಾಗುವ ಬದಲು, ಶಾಶ್ವತ ಪರಿಹಾರಗಳತ್ತ, ಸಮಗ್ರ ಒಳನೋಟಗಳತ್ತ ಗಮನ ಹರಿಸಬೇಕಿದೆ.

ಆಗಾಗ್ಗೆ ನಗರವನ್ನು ಸುತ್ತಹಾಕುವ ಸಿಎಂ ಸಿದ್ದರಾಮಯ್ಯ, ಮಳೆ ಬಿದ್ದ ಮಾರನೇ ದಿನ ಯಾವುದಾದರೂ ಒಂದು ಕೊಳೆಗೇರಿಗೋ, ತಗ್ಗು ಪ್ರದೇಶಕ್ಕೂ ಪೂರ್ವಯೋಜನೆ ಇಲ್ಲದೇ ಭೇಟಿ ನೀಡಲಿ. ನಂತರ ಒಬ್ಬ ಆಡಳಿತ ಕೇಂದ್ರದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯಾಗಿ ತಜ್ಞರನ್ನು, ಅಧಿಕಾರಿಗಳನ್ನು, ಸ್ಥಳೀಯ ಜನಪ್ರತಿನಿಧಿಗಳನ್ನು ಕೂರಿಸಿಕೊಂಡು ಮಾತನಾಡಲಿ. ಬೆಂಗಳೂರು ಮುಂದೊಂದು ದಿನ ಚೆನ್ನೈ ಆಗುವ ಮುನ್ನ ಇಷ್ಟಾದರೂ ಕಾಳಜಿ ಪ್ರಕಟಿಸಲಿ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top