An unconventional News Portal.

ಮೆಟ್ರೊ ತುಂಡು ಮಾರ್ಗ ಉದ್ಘಾಟನೆ: ಸಂಭ್ರಮ ಪಡಬೇಕೋ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕೋ?

ಮೆಟ್ರೊ ತುಂಡು ಮಾರ್ಗ ಉದ್ಘಾಟನೆ: ಸಂಭ್ರಮ ಪಡಬೇಕೋ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕೋ?

ಕೊನೆಗೂ, ಇತ್ತೀಚಿನ ಆಂತರಿಕ ಬಿಕ್ಕಟ್ಟುಗಳನ್ನು ದಾಟಿ ಬೆಂಗಳೂರು ಮೆಟ್ರೊ ನಿಗಮ ತನ್ನ ಮಾರ್ಗವೊಂದನ್ನು ಸಾರ್ವಜನಿಕ ಸಂಚಾರಕ್ಕೆ ಶುಕ್ರವಾರ ಅಣಿಗೊಳಿಸಿದೆ.

ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ ಸಂಪರ್ಕಿಸುವ 18. 1 ಕಿ. ಮೀ ಮಾರ್ಗದಲ್ಲಿ ವಾಣಿಜ್ಯ ಸೇವೆ ಶನಿವಾರದಿಂದ ಆರಂಭವಾಗಲಿದೆ. ಈವರೆಗೆ ಬೈಯಪ್ಪನಗಳ್ಳಿಯಿಂದ ಎಂ. ಜಿ. ರಸ್ತೆವರೆಗೆ ಓಡಾಡುತ್ತಿದ್ದ ಮಾರ್ಗದ ವಿಸ್ತರಣೆ ಇದು ಅಷ್ಟೆ. ಇದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮೆಜೆಸ್ಟಿಕ್ ನಿಲ್ದಾಣದವರೆಗಿನ ಸುರಂಗ ಮಾರ್ಗವೂ ಸೇರಿಕೊಂಡಿರುವುದು ಸಿಲಿಕಾನ್ ಸಿಟಿ ಪಾಲಿಗೆ ಹೊಸ ಅನುಭವವನ್ನು ನೀಡಲಿದೆ.

ಆದರೆ, ಈ ಸಮಯದಲ್ಲಿ ಕೊನೆಗೂ ಮೆಟ್ರೊದ ಒಂದು ಮಾರ್ಗವಾದರೂ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಯಿತಲ್ಲ ಎಂದು ಖುಷಿ ಪಡಬೇಕೋ? ಬೆಳೆದು ನಿಂತ ಬೆಂಗಳೂರಿನ ಸಂಚಾರಕ್ಕೆ ಮೆಟ್ರೊದಿಂದ ಲಾಭವೇನು ಎಂಬುದನ್ನು ನೋಡಬೇಕೋ? ಅಥವಾ ಇಷ್ಟು ವರ್ಷಗಳಲ್ಲಿ ಜನರ ತೆರಿಗೆ ಹಣ ಕೋಟ್ಯಾಂತರ ರೂಪಾಯಿ ನಿರರ್ಥಕವಾಗಿ ಖರ್ಚಾಯಿತಲ್ಲ ಎಂದು ವ್ಯಥೆ ಪಡಬೇಕೋ? ಇವು ಮೆಟ್ರೊ ಲೈನ್ ಉದ್ಘಾಟನೆ ಸಮಯದಲ್ಲಿ ಇವತ್ತು ಕೇಳಿಕೊಳ್ಳಬೇಕಿರುವ ಪ್ರಶ್ನೆಗಳು.

ಕನಸಿನ ಯೋಜನೆ:

bangalore-metro-1ಬೆಂಗಳೂರಿನ ಸಂಚಾರ ದಟ್ಟಣೆಯ ನಿರ್ವಹಣೆ ಕಷ್ಟವಾದಾಗ, ಮೆಟ್ರೊ ರೈಲು ಒಂದೇ ಪರಿಹಾರ ಎಂದು ದಶಕಗಳ ಹಿಂದೆ ಸಂಚಾರ ತಜ್ಞರು ಬಿಂಬಿಸಿದ್ದರು. ಹೀಗಾಗಿ 2003ರಲ್ಲಿ ಬೆಂಗಳೂರಿನಲ್ಲಿ ಮೆಟ್ರೊ ಯೋಜನೆಗಾಗಿ ‘ಸಮಗ್ರ ಅಧ್ಯಯನ ವರದಿ’ಯೊಂದನ್ನು ದಿಲ್ಲಿ ಮೆಟ್ರೊ ಸಿದ್ಧಪಡಿಸಿತ್ತು. 2006ರಲ್ಲಿ ಇದಕ್ಕೆ ಅನುಮತಿಯೂ ಸಿಕ್ಕಿ, ಕಾಮಗಾರಿಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಚಾಲನೆ ನೀಡಿದರು. ಮುಂದಿನ ನಾಲ್ಕು ವರ್ಷಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಸುಮಾರು 44 ಕಿ. ಮೀ ಮೆಟ್ರೊ ರೈಲು ಸಂಚಾರ ಆರಂಭಿಸುವ ಭರವಸೆ ನೀಡಲಾಗಿತ್ತು. ಇದಕ್ಕಾಗಿ 11, 609 ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜನ್ನು ನೀಡಲಾಗಿತ್ತು. ಒಂದು ರೀತಿಯಲ್ಲಿ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ನೀಡುವ ಕನಸಿನ ಯೋಜನೆ ಇದು ಎಂಬ ಆಶಯ ವ್ಯಕ್ತವಾಯಿತು.

ನಿಧಾನಗತಿ ಸಮಸ್ಯೆ:

ಆದರೆ, ಕಾಮಗಾರಿ ಆರಂಭಿಸಿದ ಮೆಟ್ರೊ ನಿಗಮ ತನ್ನದೇ ಸಮಸ್ಯೆಗಳ ಜಾಲದಲ್ಲಿ ನರಳತೊಡಗಿತು. ನಿಗಮದ ಹಿಂದಿನ ಎಂಡಿ ಎನ್. ಶಿವಶೈಲಂ ಬೈಯಪ್ಪನಹಳ್ಳಿಯಿಂದ ಎಂ. ಜಿ. ರಸ್ತೆ ನಡುವಿನ 8.9 ಕಿ.ಮೀ ಮೆಟ್ರೊ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಅಣಿಗೊಳಿಸಲು ತೆಗೆದುಕೊಂಡಿದ್ದ ಸಮಯ 5 ವರ್ಷಗಳು. ಅಲ್ಲಿಂದ ಮುಂದೆ ಮಲ್ಲೇಶ್ವರದಿಂದ ಯಶವಂತಪುರ ಮಾರ್ಗದಲ್ಲಿ ರೈಲು ಓಡಾಟ ನೋಡಲು ಮತ್ತೆ ಮೂರು ವರ್ಷಗಳು ಹಿಡಿದವು. ಇದೀಗ ಮತ್ತೆರಡು  ವರ್ಷಗಳ ನಂತರ ತುಂಡು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಿದೆ. ಇನ್ನೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಮೆಟ್ರೊ ಸಂಚಾರ ಆರಂಭಿಸಬೇಕಿದೆ. ಹಾಗೆಯೇ ಎರಡನೇ ಹಂತದ ಯೋಜನೆಯ ಕಾಮಗಾರಿ ಇನ್ನೂ ಶುರುವಾಗಬೇಕಿದೆ. ಹೀಗೆ, ಸಮಯದ ಗಡುವು ಮೀರಿದ್ದರಿಂದ ಯೋಜನಾ ವೆಚ್ಚದಲ್ಲಿಯೂ ಏರಿಕೆಯಾಗಿದೆ. ಇದು ಪರೋಕ್ಷವಾಗಿ ತೆರಿಗೆದಾರರ ಹಣಕ್ಕೆ ಬಿದ್ದ ಕತ್ತರಿ.

ಆತ್ಮ ವಿಮರ್ಶೆಯ ಕಾಲ:

bangalore-metro-2ಮೆಟ್ರೊ ಯೋಜನೆಯ ಪ್ರಗತಿಗೆ ಹೋಲಿಸಿದರೆ ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿದೆ. “ಯೋಜನೆಯೊಂದನ್ನು ಪರಿಹಾರ ಎಂದು ಬಿಂಬಿಸಿ ಅನುಷ್ಠಾನಕ್ಕೆ ತರುವ ಮುನ್ನವೇ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇಂತಹ ಸಮಯದಲ್ಲಿ ಮೆಟ್ರೊ ತುಂಡು ಮಾರ್ಗವೊಂದು ಸಂಚಾರ ಆರಂಭಿಸುತ್ತಿದ್ದಂತೆ, ಬೆಂಗಳೂರಿನ ಸಂಚಾರ ಸಮಸ್ಯೆಗಳು ಪರಿಹಾರವಾಗಿ ಬಿಡುತ್ತವೆ ಎಂದು ಬಿಂಬಿಸುವುದು ಆತ್ಮವಂಚನೆ,” ಎನ್ನುತ್ತಾರೆ ಐಐಎಸ್ಸಿಯ ಸಂಚಾರಿ ತಜ್ಞರೊಬ್ಬರು.

ಈಗಾಗಲೇ ಮೆಟ್ರೊ ಮೊದಲ ಹಂತಕ್ಕೆ 11, 609 ಕೋಟಿ ರೂಪಾಯಿ ಮೀರಿ ಖರ್ಚಾಗಿದೆ ಎಂಬ ಮಾಹಿತಿ ಇದೆ. ಈ ಹೆಚ್ಚುವರಿ ಖರ್ಚಿನ ಹೊಣೆಯನ್ನು ಯಾರು ಹೊತ್ತುಕೊಳ್ಳಬೇಕು ಎಂಬ ವಿಚಾರದಲ್ಲಿ ಮೆಟ್ರೊ ನಿಗಮ ಹಾಗೂ ಗುತ್ತಿಗೆದಾರರ ನಡುವೆ ತಿಕ್ಕಾಟಗಳು ಶುರುವಾಗಿವೆ. ಈ ಸಮಯದಲ್ಲಿ ಸರಕಾರ ಬೆಂಗಳೂರು ಮೆಟ್ರೊ ಯೋಜನೆಯ ಕುರಿತು ವಸ್ತುನಿಷ್ಠವಾಗಿ ತನಿಖೆಯೊಂದನ್ನು ನಡೆಸಬೇಕಿದೆ. ಈ ಮೂಲಕ ಯೋಜನೆಯನ್ನು ಆತ್ಮ ವಿಮರ್ಶೆಗೆ ಒಳಪಡಿಸಬೇಕಿದೆ ಎಂಬುದು ಈ ಕ್ಷೇತ್ರದಲ್ಲಿ ಪರಿಣಿತರ ಅಭಿಪ್ರಾಯ.

Top