An unconventional News Portal.

‘ಶನಿವಾರದ ಬಂದ್’ನ ನಿರೀಕ್ಷಿತ ದೃಶ್ಯಗಳು; ಏಕತಾನತೆ ಕಾಪಾಡಿಕೊಂಡ ಹೋರಾಟಗಾರರು!

‘ಶನಿವಾರದ ಬಂದ್’ನ ನಿರೀಕ್ಷಿತ ದೃಶ್ಯಗಳು; ಏಕತಾನತೆ ಕಾಪಾಡಿಕೊಂಡ ಹೋರಾಟಗಾರರು!

‘ಶನಿವಾರದ ಬಂದ್‘ಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಸ್ತೆಗೆ ಇಳಿದ ಕನ್ನಡ ಪರ ಸಂಘಟನೆಗಳು, ವಾಹನಗಳಿಗೆ ತಡೆಯೊಡ್ಡಿದ ಕಾರ್ಯಕರ್ತರು, ಚಕ್ರದ ಗಾಳಿ ತೆಗೆದ ಹೋರಾಟಗಾರರು, ವೃತ್ತಗಳಲ್ಲಿ; ರೈಲ್ವೆ ಟ್ಯ್ರಾಕ್ಗಳ ಮೇಲೆ; ಕೇಂದ್ರ ಸರಕಾರದ ಕಚೇರಿಗಳ ಮುಂದೆ ನಡೆದ ಪ್ರತಿಭಟನೆಗಳು, ಕ್ಯಾಮೆರಾಗಳ ಮುಂದೆ ಮೊಳಗಿದ ಘೋಷಣೆಗಳು, ಬೆರಳೆಣಿಕೆಯಲ್ಲಿ ಓಡಾಡಿದ ವಾಹನಗಳು, ಪರದಾಡಿದ ರೋಗಿಗಳು, ಮನೆಗಳಲ್ಲಿಯೇ ಉಳಿದ ನಾಗರೀಕರು…

ಇದು ಹೆಚ್ಚು ಕಡಿಮೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡಿನ ಜಿಲ್ಲೆಗಳನ್ನು ಹೊರತು ಪಡಿಸಿದರೆ, ರಾಜ್ಯ ಉಳಿದ ಭಾಗಗಳಲ್ಲಿ ಈವರೆಗೆ ಕಂಡು ಬಂದ ಚಿತ್ರಣ.

ಕಳೆದ ಕೆಲವು ವರ್ಷಗಳಲ್ಲಿ ಬಂದ್ ಎಂಬುದು ಸಾಮಾನ್ಯವಾಗಿ ಇದರ ಹೊರತಾದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ವಿಫಲವಾಗುತ್ತಲೇ ಬಂದಿವೆ. ಅದದೇ ದೃಶ್ಯಗಳ ಪುನಾರವರ್ತನೆಯಂತೆ ಕಾಣಿಸುವ ‘ರಾಜ್ಯವ್ಯಾಪಿ ಬಂದ್’, ಮಹದಾಯಿ ವಿಚಾರದಲ್ಲಿಯೂ ಏಕತಾನತೆಯನ್ನು ಕಾಯ್ದುಕೊಂಡಿತು. ಬಂದ್ಗೆ ಕರೆ ನೀಡಿದ ಕನ್ನಡ ಪರ ಹೋರಾಟಗಾರರಲ್ಲಿ ಬಹುತೇಕರು ಬೆಳಗ್ಗೆ 10 ಗಂಟೆಯಾದರೂ ಎಲ್ಲಿಯೂ ಟವಿ ಕ್ಯಾಮೆರಾಗಳಿಗೆ ದರ್ಶನ ನೀಡಲಿಲ್ಲ. ಉಳಿದಂತೆ ಕೆಲವು ಕನ್ನಡ ಪರ ಸಂಘಟನೆಗಳು ಬೆಳಗ್ಗೆ 7ಕ್ಕೆಲ್ಲಾ ಮೆರವಣಿಗೆ ಶುರುಮಾಡಿದವು. ಅಲ್ಲಲ್ಲಿ ರಸ್ತೆಗಳನ್ನು ತಡೆದವು. ವಾಹನಗಳ ಗಾಜು ಒಡೆದವು. ರಸ್ತೆ ಮಧ್ಯೆ ಟೈರ್ ಸುಟ್ಟು ಘೋಷಣೆ ಕೂಗಿದವು.

ಬೆಂಗಳೂರು ಬಂದ್?: 

ಬೆಂಗಳೂರಿನಲ್ಲಿ ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡುವ ಪ್ರಯತ್ನ ಬೆಳಗ್ಗೆಯೇ ನಡೆಯಿತು. ಮೆಜೆಸ್ಟಿಕ್, ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮಾರುಕಟ್ಟೆ ಮತ್ತಿತರ ಪ್ರಮುಖ ಸ್ಥಳಗಳನ್ನು ಹೊರತು ಪಡಿಸಿದರೆ ಖಾಸಗಿ ವಾಹನಗಳು ಮತ್ತುಆಟೋಗಳು ಎಂದಿನಂತೆಯೇ ಸಂಚಾರ ನಡೆಸುತ್ತಿವೆ. ಅಲ್ಲಲ್ಲಿ ಕನ್ನಡ ಪರ ಸಂಘಟನೆಗಳು ರಸ್ತೆಯಲ್ಲಿ ಬಂದ ಖಾಸಗಿ ವಾಹನ, ಆಟೋಗಳನ್ನು ತಡೆದಿದ್ದಾರೆ. ಇನ್ನು ಮೆಜೆಸ್ಟಿಕ್ ಭಾಗದಲ್ಲಿ ಕೆಲವು ಕಿಡಿಗೇಡಿಗಳು ದೊಣ್ಣೆಯಿಂದ ಕಾರು, ಆಟೋ ರಿಕ್ಷಾಗಳ ಗಾಜುಗಳನ್ನು ಒಡೆದಿದ್ದಾರೆ. ಘಟನೆ ನಂತರ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಕಿಡಿಗೇಡಿಗಳನ್ನು ಚದುರಿಸಿದ್ದಾರೆ. ಮುಂಜಾನೆ ಕರ್ನಾಟಕ ರಕ್ಷಣಾ ಪಡೆ ಕಾರ್ಯಕರ್ತರು ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ನಾಯಂಡಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ನಡೆಸಿದರು. ಬೆರಳೆಣಿಕೆಯಲ್ಲಿರುವ ಕನ್ನಡ ಸಂಘಟನೆ  ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಬಸವನಗುಡಿಯಲ್ಲಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಮನೆ ಮುಂದೆಯೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲಾಯಿತು. ಹೋಟೆಲ್ಗಳನ್ನು ಮುಚ್ಚಿರುವುದರಿಂದ ಬಂದ್ ಬಿಸಿ ಜನರಿಗೆ ನೇರವಾಗಿ ತಟ್ಟಿದೆ.

ಇದನ್ನು ಹೊರತು ಪಡಿಸಿದರೆ, ಮತ್ತೆಲ್ಲವೂ ಎಂದಿನಂತೆಯೇ ಶಾಂತವಾಗಿದೆ. ಮಧ್ಯಾಹ್ನದ ವೇಳೆಗೆ ಬಂದ್ ಪ್ರಕ್ರಿಯೆಗಳಿಗೆ ತೆರೆ ಬೀಳಲಿದ್ದು, ಸಂಜೆ ನಂತರ ‘ವೀಕೆಂಡ್’ ದಿನಚರಿಗಳು ಆರಂಭವಾಗಲಿವೆ.

ಬಂದ್ ಕವರೇಜ್: 

ಹಾಗೆ ನೋಡಿದರೆ, ಮಹದಾಯಿ ಹೋರಾಟ ಕದನ ಕಣವಾಗಿ ಬದಲಾಗಿರುವುದು ನರಗುಂದ ಮತ್ತು ನವಲುಗುಂದ ಅವಳಿ ತಾಲೂಕುಗಳು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳು. ಅವುಗಳಿಗೆ ಇರುವ ಇತಿಹಾಸದ ಮುಂದುವರಿದ ಭಾಗದಂತೆ ಶುಕ್ರವಾರ ಅಲ್ಲಿ ಜನ ಮತ್ತು ಪೊಲೀಸರ ನಡುವಿನ ಘರ್ಷಣೆ ನಡೆದಿತ್ತು. ಧಾರವಾಡದ ಯಮನೂರಿನಲ್ಲಿ 35ಕ್ಕೂ ಹೆಚ್ಚು ಜನರ ಗುಂಪೊಂದು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿತ್ತು. ಘಟನೆಯಲ್ಲಿ ಜೀಪಿನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಸಣ್ಣ ಪುಟ್ಟ ಗಾಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಿಕೊಂಡು ಇಲ್ಲಿನ ವೃದ್ಧರು, ಗರ್ಭಿಣಿಯರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಲ್ಲು ತೂರಲು ಸಾಧ್ಯವೇ ಇಲ್ಲದ, ವಯಸ್ಸಾದ ವೃದ್ಧ ವೃದ್ಧೆಯರು, ಗರ್ಭಿಣಿಯೊಬ್ಬರ ಮೇಲೆ ಮನೆಯೊಳಗೆ ನುಗ್ಗಿ ಪೊಲೀಸರು ಮನ ಬಂದಂತೆ ಲಾಠಿ ಬೀಸಿದ್ದಾರೆ. ಜೊತೆಗೆ ಮನೆಗಳಲ್ಲಿದ್ದ 100ಕ್ಕೂ ಹೆಚ್ಚು ಯುವಕರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಪೊಲೀಸರು ಮನೆಗಳಿಗೆ ನುಗ್ಗಿ ಬಂಧನ ನಡೆಸುತ್ತಿದ್ದು, ಅಮಾಯಕರನ್ನೂ ಬಂಧಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಶನಿವಾರ ಬಂದ್ ವೇಳೆಯಲ್ಲಿಯೂ ಅಲ್ಲಿ ನಡೆದ ಪೊಲೀಸರ ಪೈಶಾಚಿಕ ದಾಳಿಯ ಕುರುಹುಗಳು, ಮಹದಾಯಿ ಹೋರಾಟ ಸಂಕೇತದಂತೆ ಕಾಣಿಸುತ್ತಿದ್ದವು.

ಚಿತ್ರ: ಇಂಡಿಯಾ ಟುಡೆ (ಸೆ. 2015ರಲ್ಲಿ ನಡೆದ ಮಹದಾಯಿ ಹೋರಾಟ)

Leave a comment

Top