An unconventional News Portal.

‘ಬಾಳಿಗ ಫೈಲ್ಸ್’: ಆರೋಪಿ ನರೇಶ್ ಶೆಣೈಗೆ ಸಂಯಮೀಂದ್ರ ತೀರ್ಥರ ಕೃಪಾರ್ಶಿವಾದ ಇತ್ತಾ?

‘ಬಾಳಿಗ ಫೈಲ್ಸ್’: ಆರೋಪಿ ನರೇಶ್ ಶೆಣೈಗೆ ಸಂಯಮೀಂದ್ರ ತೀರ್ಥರ ಕೃಪಾರ್ಶಿವಾದ ಇತ್ತಾ?

ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ, ‘ನಮೋ ಬ್ರಿಗೇಡ್’ ಸಂಸ್ಥಾಪಕ ನರೇಶ್ ಶೆಣೈಗೆ ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮಿಯ ಕೃಪಾರ್ಶೀವಾದ ಇತ್ತಾ?

ಹೀಗೊಂದು ಬಲವಾದ ಅನುಮಾನಗಳಿಗೆ ‘ಬಾಳಿಗ ಫೈಲ್ಸ್’ ಎಡೆ ಮಾಡಿಕೊಡುತ್ತಿದೆ. ಮಂಗಳೂರಿನ ರಥಬೀದಿಯಲ್ಲಿರುವ, ಕಾಶಿ ಮಠದ ಸುಪರ್ದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊರಗಿದ್ದ ನರೇಶ್ ಶೆಣೈ, ಪ್ರಮುಖ ಪ್ರಕರಣವೊಂದರಲ್ಲಿ ಮಠಕ್ಕೆ ಸಹಾಯ ಮಾಡಿರುವ ಕುರಿತು ಸಾಕ್ಷಿಯೊಂದು ಈಗ ಮೇಲೆದ್ದು ಬಂದಿದೆ. ದೇವಸ್ಥಾನ ಒಳಗೆ 2012ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗೆ ನರೇಶ್ ಶೆಣೈ 50 ಸಾವಿರ ಮೌಲ್ಯದ ಶೂರಿಟಿ ಬಾಂಡ್ ನೀಡಿದ್ದ ಬಯಲಾಗಿದೆ. ಈ ದಾಖಲೆಗಳನ್ನು ಕಲೆ ಹಾಕಿದ್ದ ವಿನಾಯಕ್ ಬಾಳಿಗ, ದೇವಸ್ಥಾನದ ಆಡಳಿತ ಮಂಡಳಿಯಿಂದ ಆತನನ್ನು ದೂರ ಇಡುವ ಪ್ರಯತ್ನ ಮಾಡುತ್ತಿದ್ದರು. ಅದೇ ವೇಳೆಯಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ದಾಖಲೆ ಸಮೇತ ಖುದ್ದು ಸುಂಯಮೀಂದ್ರರ ಗಮನಕ್ಕೆ ತಂದಿದ್ದರು. ಆದರೆ, ಆಳದಲ್ಲಿ ನರೇಶ್ ಶೆಣೈ ಹಾಗೂ ಸಂಯಮೀಂದ್ರ ತೀರ್ಥ ಸ್ವಾಮಿ ಆಪ್ತವಾಗಿಯೇ ಇದ್ದರು ಎಂಬುದಕ್ಕೆ ನ್ಯಾಯಾಲಯದ ದಾಖಲೆ ಪುರಾವೆಗಳನ್ನು ನೀಡುತ್ತಿದೆ.

ಇದರ ಹಿನ್ನೆಲೆಯನ್ನು ಕೆದಕಿಕೊಂಡು ಹೊರಟರೆ ಕಾಶಿ ಮಠ, ಅದರ ಪದವಿಗಾಗಿ ನಡೆಯುತ್ತಿರುವ ಕಿತ್ತಾಟ, ಸಮಾಜದ ಉದ್ಧಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದ ಬಾಳಿಗ ಹಾಗೂ ಅವರ ಕೊಲೆಯ ಆರೋಪಗಳನ್ನು ಹೊತ್ತಿರುವವರ ಕುರಿತು ಹೊಸ ಆಯಾಮವೇ ತೆರೆದುಕೊಳ್ಳುತ್ತದೆ.

ಅದು ಸಾಬೀತಾಗದ ಕೊಲೆ:

ಮಹೇಶ್ ಪ್ರಭು ಕೊಲೆ ಪ್ರಕರಣ ಕುರಿತು ಕೇರಳದ ದಿನಪತ್ರಿಕೆ ವರದಿ. (ಯೂ ಟ್ಯೂಬ್ ಗ್ರಾಬ್)

ಮಹೇಶ್ ಪ್ರಭು ಕೊಲೆ ಪ್ರಕರಣ ಕುರಿತು ಕೇರಳದ ದಿನಪತ್ರಿಕೆ ವರದಿ. (ಯೂ ಟ್ಯೂಬ್ ಗ್ರಾಬ್)

ಅದು ಡಿಸೆಂಬರ್ 2012ರ ಒಂದು ದಿನ. ವೆಂಕಟೇಶ್ವರ ದೇವಾಲಯದಲ್ಲಿ ಚೂರಿಯಿಂದ ಇರಿದು ಮಹೇಶ್ ಪ್ರಭು ಎಂಬ ಕೇರಳ ಮೂಲಕ ಮಧ್ಯವಯಸ್ಕನನ್ನು ಕೊಲೆಗೈಯಲಾಗಿತ್ತು. ಆರೋಪಿ ನಂದಕುಮಾರ್ ಅಲಿಯಾಸ್ ನಂದುವನ್ನು ಪೊಲೀಸರು ಬಂಧಿಸಿದ್ದರು. ಕೊಲೆಯಾದ ಮಹೇಶ್ ಪ್ರಭು ಕಾಶಿ ಮಠದ ಪೀಠಾಧಿಪತಿ ಸಂಯಮೀಂದ್ರ ತೀರ್ಥ ಸ್ವಾಮಿಗಳ ಚಾಕರಿ ಮಾಡಿಕೊಂಡಿದ್ದವನು. ಆತನ ಕೊಲೆಯ ಆರೋಪವನ್ನು ಹೊತ್ತಕೊಂಡ ನಂದಕುಮಾರ್ ಕೂಡ ಸ್ವಾಮಿಯ ಆಪ್ತವಲಯದಲ್ಲಿದ್ದ ವ್ಯಕ್ತಿ. ಮುಂದೆ, 2014ರಲ್ಲಿ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಯಿತು. ಆರೋಪಿ ನಂದಕುಮಾರ್ಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿತು. ಈ ಸಮಯದಲ್ಲಿ ನ್ಯಾಯಾಲಯಕ್ಕೆ 50 ಸಾವಿರ ಮೌಲ್ಯದ ಬಾಂಡ್ ನೀಡಿದ್ದು ನರೇಶ್ ಶೆಣೈ.

”ವೆಂಕಟರಮಣ ದೇವಸ್ಥಾನಕ್ಕೂ ನರೇಶ್ ಶೆಣೈಗೂ ಸಂಬಂಧ ಇಲ್ಲ. ಬಾಳಿಗ ಕೊಲೆಯಾಗಿರುವುದು ವೈಯುಕ್ತಿಕ ಕಾರಣಕ್ಕೆ ಎನ್ನುತ್ತಾರೆ,” ಮಂಗಳೂರಿನ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕರೊಬ್ಬರು. ಆದರೆ, ದೇವಾಲಯದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯ ಬಿಡುಗಡೆಗೆ ನರೇಶ್ ಶೆಣೈ ಬಾಂಡ್ ನೀಡಿದ್ದೇಕೆ ಎಂಬ ಪ್ರಶ್ನೆಗೆ, “ಶೆಣೈ ಮತ್ತು ಸಂಯಮೀಂದ್ರರ ನಡುವಿನ ಗೆಳೆತನ ಇಷ್ಟಕ್ಕೆಲ್ಲಾ ಕಾರಣ,” ಎನ್ನುತ್ತಾರೆ. ಯಾವುದೇ ಕಾರಣಕ್ಕೂ ತಮ್ಮ ಹೆಸರನ್ನು ಪ್ರಕಟಿಸಬೇಡಿ ಎಂಬ ಷರತ್ತಿನೊಂದಿಗೆ ಮಾತು ಆರಂಭಿಸಿದ ಅವರು, “ಕಾಶಿ ಮಠದ ಒಳಗಿನ ಜಗಳದ ಕಾರಣಕ್ಕೆ ಮಹೇಶ್ ಪ್ರಭು ಕೊಲೆ ಪ್ರರಕಣ ದೊಡ್ಡ ಸದ್ದು ಮಾಡಿತ್ತು,” ಎನ್ನುತ್ತಾರೆ.

ಮಹೇಶ್ ಪ್ರಭು ಕೊಲೆಯಾದ ನಂತರ ಕಾಶಿ ಮಠದ ಕೆಲವು ಭಕ್ತರು ಕೇರಳದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲಿನ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಇದೀಗ 2016ರ ಮಾ. 21ರಂದು ವಿನಾಯಕ್ ಬಾಳಿಗ ಕೊಲೆ ನಡೆದಾಗಲೂ, ಮಠದ ಪೀಠಾಧಿಪತಿ ಸಂಯಮೀಂದ್ರ ತೀರ್ಥ ಸ್ವಾಮಿ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ಮಠದ ಉತ್ತರಾಧಿಕಾರಿ ಯಾರಾಗಬೇಕು ಎಂಬ ಆಂತರಿಕ ಸಂಘರ್ಷವೇ ಕಾರಣ ಎಂಬ ಮಾಹಿತಿಯನ್ನು ಸಮುದಾಯದ ಮುಖಂಡರು ನೀಡುತ್ತಾರೆ.

ಮಠದ ಹಿನ್ನೆಲೆ:

ಕಾಶಿ ಮಠಕ್ಕೆ 20ನೇ ಪೀಠಾಧಿಪತಿಯಾದವರು ಸುದೀಂದ್ರ ತೀರ್ಥ ಸ್ವಾಮಿ. ಅವರು 1989ರಲ್ಲಿ ಶಿವಾನಂದ ಪೈ ಎಂಬುವವರನ್ನು ಶಿಷ್ಯರಾಗಿ ಸ್ವೀಕರಿಸಿದರು. ಇದೇ ಉಮೇಶ್ ಪೈ ಮುಂದೆ ರಾಘವೇಂದ್ರ ತೀರ್ಥ ಸ್ವಾಮಿ ಎನ್ನಿಸಿಕೊಂಡು ಮಠದ ಧಾರ್ಮಿಕ ಕಾರ್ಯಕ್ರಮಗಳ ಮೇಲ್ವಿಚಾರಣೆ ನೋಡಿಕೊಳ್ಳತೊಡಗಿದರು. 1994ರಲ್ಲಿ ರಾಘವೇಂದ್ರ ತೀರ್ಥರ ಕುರಿತು ಹಿರಿಯ ಸ್ವಾಮಿ ಸುದೀಂದ್ರ ತೀರ್ಥ ಸ್ವಾಮಿ ಅಸಮಾಧಾನಗೊಂಡರು. ಕೊನೆಗೆ ಕೇರಳ ಮೂಲಕ ಉಮೇಶ್ ಮಲ್ಲನ್ ಎಂಬಾತ ಯುವಕನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿದರು. ಆತ ಮುಂದೆ ಸಂಯಮೀಂದ್ರ ತೀರ್ಥ ಸ್ವಾಮಿಯಾಗಿ ಸುದೀಂದ್ರ ತೀರ್ಥರ ಉತ್ತರಾಧಿಕಾರಿಯಾದರು. ಅಲ್ಲಿಂದ ಮುಂದೆ ರಾಘವೇಂದ್ರ ತೀರ್ಥ ಹಾಗೂ ಸಂಯಮೀಂದ್ರ ನಡುವೆ ಕಾನೂನು ಹೋರಾಟ, ತೆರೆಮರೆಯಲ್ಲಿ ಶೀತನ ಸಮರ ಇವತ್ತಿಗೂ ಮುಂದುವರಿದಿದೆ.

'ಬಾಳಿಗ ಫೈಲ್ಸ್'ನಲ್ಲಿದ್ದ ನರೇಶ್ ಶೆಣೈ ಹೆಸರಿರುವ ಕೋರ್ಟ್ ದಾಖಲೆ.

‘ಬಾಳಿಗ ಫೈಲ್ಸ್’ನಲ್ಲಿದ್ದ ನರೇಶ್ ಶೆಣೈ ಹೆಸರಿರುವ ಕೋರ್ಟ್ ದಾಖಲೆ.

ಇದೇ ಸಮಯದಲ್ಲಿ ದೇವಸ್ಥಾನದ ಅವ್ಯವಹಾರಗಳು, ಭ್ರಷ್ಟಾಚಾರಗಳ ಕುರಿತು ಮಾಹಿತಿ ಕಲೆ ಹಾಕಿದ್ದ ವಿನಾಯಕ್ ಬಾಳಿಗ ಸಂಯಮೀಂದ್ರರಿಗೆ ಎರಡು ಪತ್ರಗಳನ್ನು ಬರೆಯುತ್ತಾರೆ. ಅದರಲ್ಲಿ ಒಂದು ಪತ್ರದಲ್ಲಿ ನೇರವಾಗಿ ಅವರ ಪೂರ್ವಾಶ್ರಮದ ಹೆಸರನ್ನು ಉಲ್ಲೇಖಿಸುತ್ತಾರೆ. “ಸಂಯಮೀಂದ್ರರಿಗೆ ತಾಳ್ಮೆ ಕಡಿಮೆ. ಬಾಳಿಗ ಪತ್ರ ನೋಡಿ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು,” ಎನ್ನುತ್ತಾರೆ ಮಠದ ಕಾನೂನು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದ ಮಂಗಳೂರು ಮೂಲದ ವಕೀಲರೊಬ್ಬರು.

ಕೋರ್ಟ್ ದಾಖಲೆ:

ಇದಕ್ಕೆ ಪೂರಕ ಎಂಬಂತೆ ದೇವಸ್ಥಾನದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ದಾಖಲೆಗಳನ್ನು ವಿನಾಯಕ್ ಬಾಳಿಗ ಕಲೆ ಹಾಕಿದ್ದರು. ಅದರಲ್ಲಿ ಒಂದು ನರೇಶ್ ಶೆಣೈ ಕೊಲೆ ಆರೋಪಿಗೆ ಬಾಂಡ್ ನೀಡಿದ ಮಾಹಿತಿ ಸಿಕ್ಕಿತ್ತು. ದೇವಸ್ಥಾನದ ಟ್ರಸ್ಟಿಗಳ ಸ್ಥಾನದಲ್ಲಿ ಇರದ ನರೇಶ್ ಶೆಣೈ ಸಂಯಮೀಂದ್ರ ತೀರ್ಥರ ಜತೆಗೆ ಇದ್ದ ಆಪ್ತತೆಯ ಹಿನ್ನೆಲೆಯಲ್ಲಿ ಅವರ ಖಾಸನಾಗಿದ್ದ ಆರೋಪಿಯ ಜತೆಗೆ ನಿಂತಿರುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.

ರಾಜಕೀಯವಾಗಿ ಬೆಳೆಯಬೇಕು, ಮಂಗಳೂರು ಕ್ಷೇತ್ರದಿಂದ ಶಾಸಕನಾಗಬೇಕು ಎಂಬ ಕನಸುಗಳನ್ನು ಇಟ್ಟುಕೊಂಡಾತ ನರೇಶ್ ಶೆಣೈ. ಕನಸುಗಳಿಗೆ ಪೂರಕವಾಗಿ ‘ನಮೋ ಬ್ರಿಗೇಡ್’ ಸ್ಥಾಪಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರ ಪ್ರಚಾರಗಳನ್ನು ನಡೆಸಿದ್ದ. ನಂತರ ಮೋದಿ ಗೆದ್ದು ದೇಶದ ಪ್ರಧಾನಿಯಾದರೂ, ಶೆಣೈ ನಸೀಬು ಮಾತ್ರ ಬದಲಾಗಲಿಲ್ಲ. ರಾಜ್ಯ ಬಿಜೆಪಿ, ಮಂಗಳೂರು ಜಿಲ್ಲಾ ಬಿಜೆಪಿಯಲ್ಲಿ ಈತನ ವಿರೋಧಿಗಳು ಹುಟ್ಟುಕೊಂಡಿದ್ದರು. ಒಂದು ಚಿಕ್ಕ ತಪ್ಪು ಸಿಗಲಿ ಎಂದು ಕಾಯುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಬಾಳಿಗ ನರೇಶ್ ಶೆಣೈ ಹಾಗೂ ಸಂಯಮೀಂದ್ರ ತೀರ್ಥ ಸ್ವಾಮಿಯನ್ನು ಏಕಕಾಲಕ್ಕೆ ಎದುರು ಹಾಕಿಕೊಂಡರು ಎನ್ನುತ್ತವೆ ‘ಬಾಳಿಗ ಫೈಲ್ಸ್’.

ಅದೇ ಜೀವಕ್ಕೆ ಮುಳುವಾಯಿತಾ? ಗೊತ್ತಿಲ್ಲ. ಆದರೆ, ಅವರು ಕಲೆ ಹಾಕಿರುವ ದಾಖಲೆಗಳಲ್ಲಿ ಇದನ್ನು ಮೀರಿ ಕತೆಗಳು ಏನಿವೆಯೋ ನೋಡಬೇಕು.

(ಮುಂದುವರಿಯುತ್ತದೆ)

 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top