An unconventional News Portal.

‘ಚೈಲ್ಡ್ ವಿತ್‌ಔಟ್ ನ್ಯಾ‍ಷನಾಲಿಟಿ’: ವಾರದ ಹಿಂದೆ ಜೈಲಲ್ಲಿ ಹುಟ್ಟಿದ ಕಂದಮ್ಮಗೆ ರಾಷ್ಟ್ರೀಯತೆಯೇ ಇಲ್ಲ!

‘ಚೈಲ್ಡ್ ವಿತ್‌ಔಟ್ ನ್ಯಾ‍ಷನಾಲಿಟಿ’: ವಾರದ ಹಿಂದೆ ಜೈಲಲ್ಲಿ ಹುಟ್ಟಿದ ಕಂದಮ್ಮಗೆ ರಾಷ್ಟ್ರೀಯತೆಯೇ ಇಲ್ಲ!

ಮಗುವೊಂದು ತಾಯಿ ಗರ್ಭದಿಂದ ಹೊರಬೀಳುತ್ತಿದ್ದಂತೆ ಸಾಮಾಜಿಕ ಚೌಕಟ್ಟುಗಳ ಬಂಧನಕ್ಕೆ ಒಳಗಾಗುತ್ತದೆ. ಮೊದಲು ಲಿಂಗ, ನಂತರ ಹೆಸರು, ಆ ಮೂಲಕ ಜಾತಿ, ಧರ್ಮ ಹಾಗೂ ಮಗುವಿನ ರಾಷ್ಟ್ರೀಯತೆಗಳು ನಿರ್ಧರಿಸಲ್ಪಡುತ್ತವೆ. ಆದರೆ ಬೆಂಗಳೂರಿನಲ್ಲಿ ವಾರದ ಹಿಂದೆ ಹುಟ್ಟಿದ ಮಗುವೊಂದು ‘ರಾಷ್ಟ್ರೀಯತೆ’ಯ ಚೌಕಟ್ಟುಗಳಿಂದ ಹೊರಗೆ ಉಳಿದಿದೆ. ಎ ಬೇಬಿ ವಿತ್‌ಔಟ್‌ ನ್ಯಾ‍ಷನಾಲಿಟಿ!

ಮೇ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿಯರು ಹಾಗೂ ಅವರಿಗೆ ಸಹಾಯ ಮಾಡಿದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಸಿಸಿಬಿಯ ‘ವಿಶೇಷ ತನಿಖಾ ವಿಭಾಗ’ದ ಪೊಲೀಸರು ಬಂಧಿಸಿದ್ದರು. ಆ ಮೂಲಕ ಕೇರಳ ಮೂಲದ ಯುವಕ, ಪಾಕಿಸ್ತಾನದ ಕರಾಚಿ ಮೂಲದ ಯುವತಿ ಮತ್ತು ಇಬ್ಬರ ನಡುವೆ ಕತಾರ್‌ನಲ್ಲಿ ಅರಳಿದ ಅಪರೂಪದ ಪ್ರೇಮ ಪ್ರಕರಣವೊಂದು ಹೊರಬಿದ್ದಿತ್ತು.

ಸಿಸಿಬಿ ಪೊಲೀಸರಿಂದ ಬಂದನಕ್ಕೆ ಒಳಗಾದ ಪಾಕಿಸ್ತಾನಿ ಪ್ರಜೆ ಸಮೀರಾ ಹಾಗೂ ಸಂಬಂಧಿಕರು.

ಸಿಸಿಬಿ ಪೊಲೀಸರಿಂದ ಬಂದನಕ್ಕೆ ಒಳಗಾದ ಪಾಕಿಸ್ತಾನಿ ಪ್ರಜೆ ಸಮೀರಾ ಹಾಗೂ ಸಂಬಂಧಿಕರು.

ಆ ಸಮಯದಲ್ಲಿ ಬಂಧನಕ್ಕೆ ಒಳಗಾದ ಪಾಕಿಸ್ತಾನಿ ಪ್ರಜೆ ಸಮೀರಾ 4 ತಿಂಗಳ ಗರ್ಭವತಿಯಾಗಿದ್ದರು. ಇದೀಗ, ಆಕೆ ಮಗುವೊಂದಕ್ಕೆ ಜನ್ಮ ನೀಡಿದ್ದು, ಅದು ಅತ್ತ ಪಾಕಿಸ್ತಾನಿಯೂ ಆಗದೆ, ಇತ್ತ ಭಾರತೀಯ ಎಂದೂ ಕರೆಸಿಕೊಳ್ಳದೆ, ಕಾನೂನಿನ ಚೌಕಟ್ಟಿನಲ್ಲಿ ಮಗುವಿನ ರಾಷ್ಟ್ರೀಯತೆ ಕಾಲಂನ್ನು ಖಾಲಿ ಬಿಡುವ ಸನ್ನಿವೇಶ ಎದುರಾಗಿದೆ.

ಏನಿದು ಪ್ರಕರಣ?: 

ಕೇರಳದ ಸಿಬಾಬ್ 2008ರಲ್ಲಿ ಬೆಂಗಳೂರಿಗೆ ಬಂದು ಇಲ್ಲಿನ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಆತನ ತಂದೆ ಕತಾರ್‌ನ ಸರಕಾರಿ ಕಚೇರಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ ಸಿಹಾಬ್ ಕೂಡ 2012ರಲ್ಲಿ ಕತಾರ್‌ಗೆ ತೆರಳಿದ್ದ. ಅಲ್ಲಿ ಸ್ಟೆನೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಸಮೀರಾ ಜತೆ ಸಿಹಾಬ್‌ಗೆ ಪ್ರೇಮಾಂಕುರವಾಗಿತ್ತು. ಅವರಿಬ್ಬರು ಮದುವೆಯನ್ನೂಆಗಿದ್ದರು.

“ಅವರ ಮದುವೆ ವಿಚಾರ ಗೊತ್ತಾದ ನಂತರ ಸಮೀರಾ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಒತ್ತಾಯಪೂರ್ವಕವಾಗಿ ಆಕೆಯನ್ನು ಕರಾಚಿಗೆ ವಾಪಾಸ್ ಕರೆದುಕೊಂಡು ಹೋಗಿದ್ದರು. ಒತ್ತಡದಲ್ಲಿ ಆಕೆಗೆ ಗರ್ಭಪಾತವೂ ಆಗಿತ್ತು,” ಎಂದು ಮೂಲಗಳು ಹೇಳಿದ್ದವು.

ನಂತರದ ದಿನಗಳಲ್ಲಿ ಸಮೀರಾ ಮತ್ತೆ ಸಿಹಾಬ್‌ನನ್ನು ಸಂಪರ್ಕಿಸಿದ್ದಳು. ಅವರಿಬ್ಬರು ತಮ್ಮ ದಾಂಪತ್ಯವನ್ಜು ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಬರಲು ತೀರ್ಮಾನಿಸಿದರು. ಕಳೆದ ವರ್ಷ ಅವರು ಮಸ್ಕಟ್‌ನಿಂದ ನೇಪಾಳಕ್ಕೆ, ಅಲ್ಲಿಂದ ಬಿಹಾರಕ್ಕೆ ಬಂದರು. ಸಮೀರಾಳ ಅಕ್ರಮ ವಲಸೆಗೆ ಸಹಾಯ ಮಾಡಿದ ಇಬ್ಬರು ಸಂಬಂಧಿಗಳನ್ನು ಕರೆದುಕೊಂಡು ಕೊನೆಗೆ ಬೆಂಗಳೂರಿಗೆ ಬಂದಿದ್ದಳು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು.

2016ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬಂದ ಸಿಹಾಬ್‌ ಹಾಗೂ ಸಮೀರಾ ಕುಮಾರಸ್ವಾಮಿ ಲೇಔಟ್‌ನ ಮೊದಲ ಹಂತದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆ ಕಂಡುಕೊಂಡರು. ಈ ಸಮಯದಲ್ಲಿ ಅವರು ಆಧಾರ್‌ ಕಾರ್ಡ್‌ ಸೇರಿದಂತೆ ಸ್ಥಳೀಯ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದರು. ಇದಕ್ಕೆ ನೆರವು ನೀಡಿದ ಆರೋಪದ ಮೇಲೆ ಸರಕಾರಿ ವೈದ್ಯ ಹಾಗೂ ಆರೋಗ್ಯ ಇಲಾಖೆಯ ಡಿ ದರ್ಜೆಯ ನೌಕರರೊಬ್ಬರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.

ಇದೀಗ, ಸಮೀರ ಮುದ್ದಾದ ಹೆಣ್ಣು ಮಗುವೊಂದಕ್ಕೆ ಕಳೆದ ವಾರ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು.

ಕಾನೂನಿನ ಚೌಕಟ್ಟು: 

ಭಾರತೀಯ ಪೌರತ್ವ ಕಾಯ್ದೆ 1955 ಪ್ರಕಾರ, “ಭಾರತದಲ್ಲಿ ಡಿ. 3, 2004ರ ನಂತರ ಹುಟ್ಟಿದ ಮಗುವನ್ನು ಭಾರತೀಯ ಪ್ರಜೆ ಎಂದು ತೀರ್ಮಾನಿಸಲಾಗುತ್ತದೆ. ಆದರೆ, ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಭಾರತೀಯ ಪ್ರಜೆಗಳಾಗಿರಬೇಕು. ಒಂದು ವೇಳೆ, ಇಬ್ಬರಲ್ಲಿ ಒಬ್ಬರು ಭಾರತೀಯರಾಗಿದ್ದು, ಇನ್ನೊಬ್ಬರ ಪೌರತ್ವ ಕಾನೂನಿನ ಅಡಿಯಲ್ಲಿ ಅಸಿಂಧುವಾಗಿದ್ದರೆ ಮಗುವಿಗೆ ಭಾರತೀಯ ಪೌರತ್ವ ಸಿಗುವುದಿಲ್ಲ” ಎಂದು ಹೇಳಲಾಗಿದೆ.

ಕೇರಳದ ಸಿಹಾಬ್ ಹಾಗೂ ಕರಾಚಿವ ಸಮೀರಾ ಮಗುವಿನ ಪ್ರಕರಣದಲ್ಲಿ ತಂದೆಗೆ ಭಾರತೀಯ ಪೌರತ್ವ ಇದೆ. ಆದರೆ ತಾಯಿ ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಆರೋಪ ಹೊಂದಿದ್ದಾಳೆ. ಅಷ್ಟೇ ಅಲ್ಲ, ಇಲ್ಲಿಗೆ ಬಂದ ನಂತರ ಆಧಾರ್ ಮತ್ತಿತರ ಗುರುತಿನ ಪತ್ರಗಳನ್ನು ಕಾನೂನುಬಾಹಿರವಾಗಿ ಮಾಡಿಸಿಕೊಂಡಿ ಬಂದ ಆರೋಪಕ್ಕೆ ಗುರಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಆ ಪುಟ್ಟ ಹೆಣ್ಣು ಮಗುವಿಗೆ ಭಾರತದ ಪೌರತ್ವವನ್ನು ಕಾನೂನು ತಿರಸ್ಕರಿಸುತ್ತಿದೆ.

ಸದ್ಯ, ಸಮೀರಾ ವಿರುದ್ಧ ಹಲವು ಅಕ್ರಮ ವಲಸೆ, ಕಾನೂನು ಬಾಹಿರವಾಗಿ ಗುರುತಿನ ಪತ್ರಗಳನ್ನು ಮಾಡಿಸಿಕೊಂಡಿದ್ದೂ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಅವುಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದ ಹೊರತು ಆಕೆಯನ್ನು ದೇಶದಿಂದ ಹೊರಗೆ ಕಳುಹಿಸಲು ಸಾಧ್ಯವಿಲ್ಲ. ಸದ್ಯ ಸಮೀರಾ, ಸಿಹಾಬ್‌ ಹಾಗೂ ಅವರ ಜತೆಗೆ ಬಂದ ಇನ್ನಿಬ್ಬರು ಪಾಕಿಸ್ತಾನಿಯರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜನಿಸಿದ ಅವರ ಹೆಣ್ಣು ಮಗು ಕೂಡ ಮತ್ತೆ ಜೈಲಿಗೆ ವರ್ಗಾವಣೆಗೊಂಡಿದೆ.

ಮಾಹಿತಿ ಮೂಲ: ದಿ ಕ್ವಿಂಟ್.

Leave a comment

Top