An unconventional News Portal.

‘ಸೃಷ್ಠಿಯ ಕೌತುಕ’: ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊದಲ ಮಗು!

‘ಸೃಷ್ಠಿಯ ಕೌತುಕ’: ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊದಲ ಮಗು!

ಒಂದು ಮಗುವಿಗೆ ಒಬ್ಬ ತಂದೆ, ಒಬ್ಬರು ತಾಯಿ ಇರ್ತಾರೆ. ಆದರೆ ಈ ಮಗುವಿಗೆ ಮೂವರು ತಂದೆ- ತಾಯಿ ಇರಲು ಸಾಧ್ಯನಾ? ಹೀಗೊಂದು ಸಾಧ್ಯತೆಯನ್ನು ವಿಜ್ಞಾನ ನಿಜವಾಗಿಸಿದೆ. ತಂದೆ- ತಾಯಿ ಹಾಗೂ ಮತ್ತೊಬ್ಬರ ಜೆನೆಟಿಕ್ ಕೋಡ್ (ಅನುವಂಶೀಯ) ಬಳಸಿಕೊಂಡು ಜಗತ್ತಿನ ಮೊದಲ ಮಗು ಜನ್ಮ ತಾಳಿದೆ. ಅದಕ್ಕೀಗ ಐದು ತಿಂಗಳು.

ಜೋರ್ಡಾನ್ ಮೂಲದ ಈ ಮಗುವಿನ ತಾಯಿಯ ಜೀನ್ಸ್’ನಲ್ಲಿ ರೋಗದ ಲಕ್ಷಣಗಳಿದ್ದವು. ಇದರಿಂದಾಗಿ ವಿಶೇಷ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿಕೊಂಡು ಮಗುವಿನ ಭ್ರೂಣವನ್ನು ಸೃಷ್ಟಿಸಲಾಗಿತ್ತು. ಇದಕ್ಕಾಗಿ ತಂದೆ, ತಾಯಿ ಅಲ್ಲದೆ ಮತ್ತೊಬ್ಬರ ಡಿಎನ್ಎಯನ್ನು ವೈದ್ಯರು ಬಳಸಿಕೊಳ್ಳುವ ಮೂಲಕ ವಿಜ್ಞಾನದ ಕೌತುಕವನ್ನು ಸೃಷ್ಟಿಸಿದ್ದಾರೆ. ಜತೆಗೆ, ಜನಿಸಿರುವ ಮಗು ತಾಯಿಯ ರೋಗ ಲಕ್ಷಣಗಳಿಂದ ಮುಕ್ತವಾಗಿದೆ ಎಂದು ಅಮೆರಿಕಾದ ವೈದ್ಯರು ಹೇಳಿದ್ದಾರೆ.

ಅಪರೂಪದ ಸಮಸ್ಯೆಗಳನ್ನು ತಮ್ಮ ಅನುವಂಶೀಯತೆಯಲ್ಲಿ ಉಳಿಸಿಕೊಂಡ ತಂದೆ-ತಾಯಿ ಈ ವಿಧಾನವನ್ನು ಬಳಸಿಕೊಳ್ಳಬಹುದು. ವೈದ್ಯಕೀಯ ಲೋಕದಲ್ಲಿ ಇದು ಹೊಸ ಶಕೆಯನ್ನು ತೆರೆಯಲಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ವಿವಾದಿತ ‘ಮೈಟೋಕಾಂಡ್ರಿಯಲ್’ ದಾನಕ್ಕೆ ಸೂಕ್ಷ್ಮ ತಪಾಸಣೆಗಳನ್ನೂ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಮೂರು ಜನರ ಡಿಎನ್ಎಯಿಂದ ವೈದ್ಯರು ಮಗು ಸೃಷ್ಟಿಸುತ್ತಿರುವುದು ಇದೇ ಮೊದಲೇನೂ ಅಲ್ಲ. 1990ರ ಕೊನೆಯ ಭಾಗದಲ್ಲಿ ಹೀಗೊಂದು ಪ್ರಯತ್ನಗಳು ಆರಂಭವಾಗಿದ್ದವು. ಆದರೆ ಮೊದಲ ಯಶಸ್ಸು ಮಾತ್ರ ಈಗ ಸಿಕ್ಕಿದೆ.

ಮೂವರ ಮುದ್ದಿನ ಮಗ

ದೇಹದ ಹೆಚ್ಚಿನ ಎಲ್ಲಾ ಜೀವಕೋಶಗಳ ಒಳಗೂ ಈ ಮೈಟೋಕಾಂಡ್ರಿಯಾ ಇರುತ್ತದೆ. ಆಹಾರವನ್ನು ಬಳಕೆಗೆ ಬೇಕಾದ ಶಕ್ತಿಯಾಗಿ ಪರಿವರ್ತಿಸುವುದು ಇವುಗಳ ಕೆಲಸ.

ಕೆಲವು ಮಹಿಳೆಯರಿಗೆ ಅನುವಂಶೀಯವಾಗಿ ಮೈಟೋಕಾಂಡ್ರಿಯಾದಲ್ಲಿ ತೊಂದರೆಗಳು ಉಳಿದು ಬಿಡುತ್ತವೆ. ಇವು ಮಕ್ಕಳಿಗೂ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಈ ಜೋರ್ಡಾನ್ ಕುಟುಂಬದಲ್ಲಿ ‘ಲೇಘ್ ಸಿಂಡ್ರೋಮ್’ ಎಂಬ ರೋಗ ಲಕ್ಷಣ ಇತ್ತು. ಇದು ಹುಟ್ಟುವ ಮಗುವಿಗೆ ಮಾರಕ ಎಂಬುದು ತಪಾಸಣೆಯಿಂದ ಖಚಿತವಾಗಿತ್ತು. ಇದೇ ಕುಟುಂಬ ಈ ಹಿಂದೆಯೇ ಈ ರೋಗ ಲಕ್ಷಣದಿಂದ ಇಬ್ಬರು ಮಕ್ಕಳನ್ನು ಕಳೆದುಕೊಂಡಿತ್ತು. ತೀವ್ರ ಎದೆನೋವಿನಿಂದ 8 ತಿಂಗಳು ಮತ್ತು 6 ವರ್ಷದ ಮಕ್ಕಳು ಸಾವನ್ನಪ್ಪಿದ್ದರು.

ಏನಿದು ಲೇಘ್ ಸಿಂಡ್ರೋಮ್

ಇದೊಂದು ನರಗಳ ಅವ್ಯವಸ್ಥೆಯ ಸ್ಥಿತಿ. ಹುಟ್ಟುವ 40,000 ಸಾವಿರ ಮಕ್ಕಳಲ್ಲಿ ಒಂದು ಮಗು ಈ ತೊಂದರೆಗೆ ಒಳಗಾಗುತ್ತದೆ.

ಹುಟ್ಟಿದ ಒಂದು ವರ್ಷದಲ್ಲೇ ಇದರ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ. ಮೊದಲಿಗೆ ವಾಂತಿ, ಡಯೇರಿಯಾ ಕಾಣಿಸಿಕೊಳ್ಳುವುದರ ಜೊತೆಗೆ ನಿಧಾನಕ್ಕೆ ಆಹಾರ ಸೇವಿಸುವುದೇ ಕಷ್ಟವಾಗುತ್ತದೆ. ಮೆದುಳಿನ ಬೆಳವಣಿಗೆಗೆ ತೊಂದರೆ ಉಂಟು ಮಾಡುತ್ತದೆ. ಇಂಥ ಮಕ್ಕಳು ಹುಟ್ಟಿದ ಎರಡರಿಂದ ಮೂರು ವರ್ಷದ ಒಳಗೆ ಉಸಿರಾಟದ ತೊಂದರೆಯಿಂದ ಸಾವನ್ನಪ್ಪುತ್ತವೆ.

ಸದ್ಯ ಈ ರೀತಿಯ ಸಮಸ್ಯೆ ಪರಿಹಾರಕ್ಕಾಗಿ ವಿಜ್ಞಾನಿಗಳು ‘ಮೂವರು ಪೋಷಕರ’ ವಿಧಾನಗಳನ್ನು ಅನ್ವೇಷಣೆ ಮಾಡಿದ್ದಾರೆ.

ಅಮೆರಿಕಾದಲ್ಲಿ ಈ ರೀತಿಯ ಚಿಕಿತ್ಸೆ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಹೀಗಾಗಿ ಈ ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನ್ಯೂಯಾರ್ಕ್ ನಗರದ ಫರ್ಟಿಲೈಸರ್ ಕೇಂದ್ರದವರಿಗೆ ಸಮಸ್ಯೆ ಎದುರಾಯಿತು. ಕೊನೆಗೆ ವೈದ್ಯರ ತಂಡ ಮೆಕ್ಸಿಕೋಗೆ ಪ್ರಯಾಣ ಬೆಳೆಸುವ ಯೋಚನೆ ಮಾಡಿತು. ಅಲ್ಲಿ ಈ ರೀತಿಯ ಯಾವುದೇ ಕಾನೂನುಗಳೂ ಇರಲಿಲ್ಲ. ಅಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಯಿತು.

ಜೋರ್ಡಾನ ಮೂಲದ ತಾಯಿಯ ಬೀಜ (ಎಗ್) ನಿಂದ ಡಿಎನ್ಎ ಪಡೆದುಕೊಂಡು, ದಾನಿಯ ಬೀಜದಿಂದ ಮೈಟೋಕಾಂಡ್ರಿಯಾ ಪಡೆದುಕೊಂಡು ಹೊಸ ಬೀಜವನ್ನು ರಚಿಸಲಾಯಿತು. ಇದನ್ನು ತಂದೆಯ ವೀರ್ಯದ ಜೊತೆ ಸೇರಿಸಿ ಫಲವಂತಿಕೆ ಸೃಷ್ಟಿಲಾಯಿತು.

ಡಿಎನ್ಎ ಜೋಡಣೆ ಮಾಡಿದ್ದನ್ನು ವಿವರಿಸುವ ಚಿತ್ರ

ಡಿಎನ್ಎ ಜೋಡಣೆ ಮಾಡಿದ್ದನ್ನು ವಿವರಿಸುವ ಚಿತ್ರ

ಫಲಿತಾಂಶ ಬಂದಾಗ ಹುಟ್ಟಿದ ಮಗುವಿನಲ್ಲಿ ಶೇಕಡಾ 0.1 ದಾನಿಯ ಡಿಎನ್ಎ ಇದ್ದರೆ, ಕಣ್ಣು, ಬಣ್ಣ, ಕೂದಲು ಮೊದಲಾದ ಗುರುತುಗಳೆಲ್ಲಾ ತಾಯಿ ಮತ್ತು ತಂದೆಯನ್ನೇ ಹೋಲುತ್ತಿದ್ದವು. ಇವುಗಳಿಗೆ ನಿಜವಾದ ತಂದೆತಾಯಿಯ ಜೆನೆಟಿಕ್ ಕೋಡನ್ನೇ ಬಳಸಿಕೊಂಡು ಈ ಮಗು ಹುಟ್ಟಿತ್ತು.

ವಿವಾದ ಮತ್ತು ವಿರೋಧ

ಮಗು ಹುಟ್ಟಲು ಈ ರೀತಿಯ ಕ್ರಮ ಬಳಸುವುದರ ಬಗ್ಗೆ ಮೊದಲಿನಿಂದಲೂ ಆಕ್ಷೇಪಗಳಿವೆ. ಅಮೆರಿಕಾವೂ ಸೇರಿದಂತೆ ಹೆಚ್ಚಿನ ರಾಷ್ಟ್ರಗಳಲ್ಲಿ ಈ ರೀತಿಯ ಮಗುವಿನ ಜನನಕ್ಕೆ ಅವಕಾಶವಿಲ್ಲ. ಆದರೆ ಬ್ರಿಟನ್ ಈಗಾಗಲೇ ಇದಕ್ಕೆ ಅವಕಾಶ ನೀಡಿದೆ.

ಆದರೆ ಕೆಲವು ವಿಜ್ಞಾನಿಗಳು ನೈತಿಕತೆಯ ಪ್ರಶ್ನೆಯನ್ನು ಮೊದಲಿನಿಂದಲೂ ಎತ್ತುತ್ತಾ ಬಂದಿದ್ದಾರೆ. ಅವುಗಳಲ್ಲಿ ಮೂರು ಜನರ ಡಿಎನ್ಎ ಪಡೆದ ಮಗುವಿನ ಭಾವನೆಗಳು ಹೇಗಿರಬಹುದು ಎಂಬ ಪ್ರಶ್ನೆಯನ್ನು ಅವರು ನಿರಂತರವಾಗಿ ಕೇಳುತ್ತಿದ್ದಾರೆ.

ಆದರೆ ಫಲವತ್ತತೆಯ ತಜ್ಞರು ಮಾತ್ರ ಇದೆಲ್ಲಾ ಮನುಷ್ಯ ಜೀವನದಲ್ಲಿ ಮುಂದೆ ರಲು ಅತ್ಯಗತ್ಯ, ಆದರೆ ಎಚ್ಚರಿಕೆಯಿಂದ ಚಿಕಿತ್ಸೆಯನ್ನು ಪಾಲಿಸಬೇಕಷ್ಟೇ ಎನ್ನುತ್ತಿದ್ದಾರೆ..

ಮೂರು ಜನ ಪೋಷಕರ ಮಗುವಿನ ಬಗ್ಗೆ ದೃಢ ನಿಲುವು ತಾಳಿರುವ ಬ್ರಿಟನ್ನಿನ ಫ್ರೊ. ಅಲಿಸೊನ್ ಮುರ್ಡೋಕ್, “ವೈಜ್ಞಾನಿಕ ವಿಧಾನದಲ್ಲಿ ಮೈಟೋಕಾಂಡ್ರಿಯಲ್ ದಾನ ನೀಡುವುದು ನಮ್ಮ ಪಾಲಿನ ಓಟದ ಪಂದ್ಯವಲ್ಲ; ಸುರಕ್ಷೆ ಮತ್ತು ಪುನರುತ್ಪಾದನೆಯ ಗುರಿ ಇಟ್ಟುಕೊಂಡು ಇದು ಸಾಧಿಸಲೇಬೇಕಾದ ಗುರಿ,” ಎನ್ನುತ್ತಾರೆ.

ಆದರೆ ಟೀಕಾಕಾರರು ಈ ಕೆಲಸ ಬೇಜಾವಾಬ್ದಾರಿಯದ್ದು; ಭವಿಷ್ಯದ ಬಗೆಗಿನ ಚಿಂತನೆಯಿಲ್ಲದ್ದು ಎಂದು ಕಿಡಿಕಾರುತ್ತಾರೆ.

“ಈ ರೀತಿಯ ಹೊಸ ಚಿಕಿತ್ಸಾ ವಿಧಾನಗಳು ಬಂದಾಗ ನೈತಿಕತೆಯ ಪ್ರಶ್ನೆ ಏಳುವುದು ಸಹಜ. ಆದರೆ ಯಾವುದೋ ಕುಟುಂಬಕ್ಕೆ ಈ ರೀತಿಯ ಚಿಕಿತ್ಸೆ ಅಗತ್ಯವಿದ್ದು, ಅದನ್ನು ಬಯಸುತ್ತಿದ್ದಾಗ ಅವರ ಬೇಡಿಯನ್ನು ಸಮತೋಲನ ಮಾಡಲೇಬೇಕು,” ಎನ್ನುತ್ತಾರೆ ಕೆಂಟ್ ವಿಶ್ವವಿದ್ಯಾಲಯದ ಜೆನೆಟಿಕ್ಸ್ ತಜ್ಞ ಪ್ರೊ. ಡ್ಯಾರೆನ್ ಗ್ರಿಫಿನ್.

ಯಾರೇನೇ ಹೇಳಲಿ, ಮುಂದೊಂದು  ದಿನ ಈ ಮಗು ನಾನು ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊತ್ತ ಮೊದಲ ಮಗು ಅಂತ ಹೇಳಿಕೊಳ್ಳಬಹುದು.

ಕೃಪೆ: ಬಿಬಿಸಿ

Leave a comment

Top