An unconventional News Portal.

ದುಪ್ಪಟ್ಟಾದ ಗಗನಯಾತ್ರಿಗಳ ಸಂಖ್ಯೆ: ಭಾರತದಲ್ಲಿ ವಿಮಾನಯಾನದ ನಡೆದು ಬಂದ ಹಾದಿಯ ಸುತ್ತ…

ದುಪ್ಪಟ್ಟಾದ ಗಗನಯಾತ್ರಿಗಳ ಸಂಖ್ಯೆ: ಭಾರತದಲ್ಲಿ ವಿಮಾನಯಾನದ ನಡೆದು ಬಂದ ಹಾದಿಯ ಸುತ್ತ…

ದೇಶದಲ್ಲಿ ಆರ್ಥಿಕ ಸಮಾನತೆಯ ಅಂತರ ಹೆಚ್ಚುತ್ತಿರುವ ಸಮಯದಲ್ಲಿಯೇ, ಅಂತರ್‌ ದೇಶೀಯ ವಿಮಾನಯಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

2017ರ ಹೊತ್ತಿಗೆ ದೇಶದೊಳಗೆ ಸಂಚರಿಸಲು ವಿಮಾನವನ್ನು ಬಳಸುವವರ ಸಂಖ್ಯೆ 11.7 ಕೋಟಿ ತಲುಪಿದೆ. ಇವತ್ತಿಗೆ, ಪ್ರತಿ ಗಂಟೆಗೆ ಪ್ರಯಾಣಿಕರನ್ನು ಹೊತ್ತ 100 ವಿಮಾನಗಳು ಆಗಸಕ್ಕೆ  ಚಿಮ್ಮುತ್ತಿವೆ. 2011ರಲ್ಲಿ ಗಂಟೆಗೆ 67 ವಿಮಾನಗಳು ಮಾತ್ರವೇ ಸಂಚಾರ ನಡೆಸುತ್ತಿದ್ದವು. ಅಂದರೆ, ಕಳೆದ 6 ವರ್ಷಗಳ ಅಂತರದಲ್ಲಿ, ದೇಶದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಇತ್ತೀಚಿಗೆ ಬಿಡುಗಡೆಗೊಳಿಸಿದ ತನ್ನ ವರದಿ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.

2011ರಲ್ಲಿ 5.98 ಕೋಟಿ ಜನ ವಿಮಾನ ಪ್ರಯಾಣ ಮಾಡಿದ್ದರು. 2016ರ ವೇಳೆಗೆ ಈ ಸಂಖ್ಯೆ 9.98 ಕೋಟಿಗೆ ಏರಿಕೆಯಾಗಿತ್ತು. ಏರ್ ಇಂಡಿಯಾ, ಜೆಟ್ ಏರ್‌ವೇಸ್ ಇತ್ಯಾದಿ ವಿಮಾನಯಾನ ಸಂಸ್ಥೆಗಳು ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ 2011ರಲ್ಲಿ ವಿಮಾನದ ಸೀಟುಗಳಲ್ಲಿ ಶೇ. 75.5%ರಷ್ಟು ತುಂಬಿರುತ್ತಿದ್ದವು. 2017ಕ್ಕೆ ಈ ಸಂಖ್ಯೆ ಶೇ.86.1%ರಷ್ಟು ಸೀಟುಗಳಿಗೆ ಗ್ರಾಹಕರ ಲಭ್ಯತೆ ಇತ್ತು.

ಅಂತರರಾಷ್ಟ್ರೀಯ ವಾಯುಸಾರಿಗೆ ಸಂಘ(IATA) ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿದ ವರದಿ ಹೇಳುವಂತೆ, ಈಗಾಗಲೇ ಭಾರತದಲ್ಲಿ 500 ವಿಮಾನಗಳು ನಿತ್ಯ ಹಾರಾಟ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 800 ತಲುಪಲಿದ್ದು, ಇನ್ನೂ 300 ವಿಮಾನಗಳು ಭಾರತೀಯರ ಒಡೆತನಕ್ಕೆ ಸೇರುವ ಅಂದಾಜಿದೆ. ಭಾರತವು 2025ರ ವೇಳೆಗೆ ಇಂಗ್ಲೆಂಡ್‌ಅನ್ನು ಹಿಂದಿಟ್ಟು ವಿಶ್ವ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವಿಮಾನ ಪ್ರಯಾಣಿಕರನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಕ್ರಮವಾಗಿ ಅಮೆರಿಕಾ ಮತ್ತು ಚೀನಾ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಭಾರತದ ವಾಯುಯಾನದ ಬೆಳವಣಿಗೆ ಚೀನಾದ ಬೆಳವಣಿಗೆಗಿಂತಲೂ ಮೂರು ಪಟ್ಟು ಹೆಚ್ಚಾಗಿದ್ದು, ದಕ್ಷಿಣ ಏಷ್ಯಾದಲ್ಲಿ ನಿತ್ಯ ಹಾರಾಟ ನಡೆಸುವ ವಿಮಾನಗಳ ಪೈಕಿ ಭಾರತದ ಪಾಲು ಶೇ.69ರಷ್ಟಿದೆ.

ಭಾರತದಲ್ಲಿ ವಿಮಾನಯಾನ- ಹಿನ್ನೋಟ:

ಭಾರತದಲ್ಲಿ ಮೊದಲು ವಿಮಾನ ಹಾರಾಟ ನಡೆಸಿದ್ದು 1911ರ ಫೆಬ್ರವರಿ 18ರಂದು. ಅವತ್ತು ವಿಮಾನವು ಅಲಹಾಬಾದ್‌ನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಪ್ರದರ್ಶನದ ಸ್ಥಳದಿಂದ ನೈನಿ ಎಂಬ ಸ್ಥಳಕ್ಕೆ ಸುಮಾರು 9.7 ಕಿ.ಮೀಗಳಷ್ಟು ದೂರಕ್ಕೆ ಹಾರಿತ್ತು. ಫ್ರೆಂಚ್ ವಿಮಾನ ಚಾಲಕ ಹೆನ್ರಿ ಪೆಕ್ವೆಟ್‌ನ ಸಾರಥ್ಯದಲ್ಲಿ ಗಗನಕ್ಕೆ ಜಿಗಿದಿದ್ದ ಭಾರತದ ಮೊದಲ ವಿಮಾನ ಸುಮಾರು 6,500 ಅಂಚೆ ಚೀಟಿಗಳನ್ನು ತನ್ನೊಟ್ಟಿಗೆ ಕೊಂಡೊಯ್ದಿತ್ತು. ಇದು ವಿಶ್ವ ಕಂಡ ಮೊದಲ ವಿಮಾನ ಅಂಚೆ ಸೇವೆಯೂ ಹೌದು.

ಭಾರತದಿಂದ ವಿದೇಶವನ್ನು ಸಂಪರ್ಕಿಸುವ ನಿಟ್ಟಿನಲ್ಲಿ 1912ರಲ್ಲಿ ಲಂಡನ್-ಕರಾಚಿ-ದೆಹಲಿ ಮಾರ್ಗವಾಗಿ ವಿಮಾನ ಹಾರಾಟ ಪ್ರಾರಂಭವಾಯಿತು. 1920ರ 24ರಂದು ಟಾಟಾ ಸನ್ಸ್ ಲಿಮಿಟಿಡ್ ಮದ್ರಾಸ್ ಮತ್ತು ಕರಾಚಿ ನಡುವೆ ಗಾಲಿಯಂಚೆ ಸೇವೆಯನ್ನು ಪ್ರಾರಂಭಿಸಿತು. 1924 ವೇಳೆಗೆ ಭಾರತದಲ್ಲಿ ಮೊದಲು ವಿಮಾನ ನಿಲ್ದಾಣಗಳ ನಿರ್ಮಾಣ ಆರಂಭವಾಗಿದ್ದು ಕಲ್ಕತ್ತಾ, ಅಲಹಾಬಾದ್‌ ಮತ್ತು ಬಾಂಬೆಯಲ್ಲಿ. 1929ರಲ್ಲಿ ಜೆಆರ್‌ಡಿ ಟಾಟಾ ಮೊದಲ ಬಾರಿಗೆ ವಿಮಾನಯಾನ ಸೇವೆ ನೀಡುವ ಪರವಾನಗಿ ಪಡೆದರು. 1940ರ ಕಾಲಘಟ್ಟದಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು.

1953ರಲ್ಲಿ ಸ್ವತಂತ್ರ ಭಾರತದ ಸರಕಾರ ‘ಏರ್ ಕಾರ್ಪೊರೇಷನ್ ಆಕ್ಟ್’ ಜಾರಿಗೆ ತರುವ ಮೂಲಕ, ಇಂಡಿಯಾ ಏರ್ಲೈನ್ಸ್‌ನ್ನು ರಾಷ್ಟ್ರೀಕರಣ ಮಾಡಿತು. ಆ ಸಮಯಕ್ಕೆ ಏರ್‌ವೇಸ್ ಇಂಡಿಯಾ, ಭಾರತ್ ಏರ್‌ವೇಸ್ ಸೇರಿದಂತೆ ಇನ್ನೂ ಎಂಟು ಖಾಸಗಿ ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. 1972ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ 1986ರಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಗಳು ಅಸ್ಥಿತ್ವಕ್ಕೆ ಬಂದವು. 1987ರಲ್ಲಿ ಏರ್ ಇಂಡಿಯಾ ಫ್ಲೈಟ್ 182ಗೆ ಜೆಟ್ ವಿಮಾನವೊಂದು ಅಪ್ಪಳಿಸಿ, 329 ಮೃತಪಟ್ಟ ಕಾರಣದಿಂದ ‘ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ’ ಜನ್ಮ ತಳೆಯಿತು.

ಭಾರತ ಸರಕಾರವು 1991ರಲ್ಲಿ ನಾಗರಿಕ ವಿಮಾನಯಾನ ವಲಯವನ್ನು ಕ್ರಮಬದ್ಧಗೊಳಿಸಿದ ನಂತರ, ಈಸ್ಟ್-ವೆಸ್ಟ್ ಏರ್ಲೈನ್ಸ್ ದೇಶದಲ್ಲಿ ಕಾರ್ಯನಿರ್ವಹಿಸುವ ಮೊದಲ ರಾಷ್ಟ್ರೀಯ ಮಟ್ಟದ ಖಾಸಗಿ ವಿಮಾನಯಾನ ಸಂಸ್ಥೆಯಾಯಿತು. 1994ರ ನಂತರ ಏರ್ ಟ್ಯಾಕ್ಸಿ ಯೋಜನೆ ಅಡಿಯಲ್ಲಿ ಚಾರ್ಟರ್ ಮತ್ತು ನಿಗದಿತ ಸೇವೆಗಳನ್ನು ನಿರ್ವಹಿಸಲು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿತು. ಜೆಟ್ ಏರ್ವೇಸ್, ಏರ್ ಸಹಾರಾ, ಮೊಡಿಲ್ಯುಫ್ಟ್, ಡಮಾನನಿಯಾ ಏರ್ವೇಸ್ ಮತ್ತು ಎನ್ಇಪಿಸಿ ಏರ್ಲೈನ್ಸ್ ಮುಂತಾದ ಖಾಸಗಿ ವಿಮಾನಯಾನ ಸಂಸ್ಥೆಗಳು ಈ ಅವಧಿಯಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಆರಂಭಿಸಿದವು. ಕಡಿಮೆ ವಚ್ಚದ ವಾಯುವಾಹಕಗಳು 2004-05ರ ವೇಳೆಗೆ ಭಾರತವನ್ನು ಪ್ರವೇಶಿಸಿದವು. ಏರ್ ಡೆಕ್ಕನ್, ಏರ್ ಸಹಾರಾ, ಕಿಂಗ್ ಫಿಶರ್ ಏರ್‌ಲೈನ್ಸ್,  ಸ್ಪೈಸ್ ಜೆಟ್, ಗೋಏರ್, ಪ್ಯಾರಾಮೌಂಟ್ ಏರ್ವೇಸ್ ಮತ್ತು ಇಂಡಿಗೋ ಮೊದಲ ಬಾರಿಗೆ ಈ ವಾಯು ವಾಹಕಗಳ ಮೂಲಕ ಮಾರುಕಟ್ಟೆಗೆ ಪ್ರವೇಶ ಪಡೆದವು.

ಹೈದರಾಬಾದ್, ಬೆಂಗಳೂರು ಮತ್ತು ದೆಹಲಿಯ ವಿಮಾನ ನಿಲ್ದಾಣಗಳು ಸಮಾನಾಂತರ ರನ್‌ವೇಗಳನ್ನು ಹೊಂದಿದ್ದು, ಭಾರತದ ಆಧುನಿಕ ವಿಮಾನ ನಿಲ್ದಾಣಗಳೆನಿಸಿವೆ. ಭಾರತದಲ್ಲಿ ಒಟ್ಟು 346 ನಾಗರಿಕ ವಾಯುನೆಲೆಗಳಿದ್ದು, ಅದರಲ್ಲಿ 253 ವಾಯುನೆಗಳಷ್ಟೇ ಸುಸಜ್ಜಿತವಾದ ರನ್‌ವೇಗಳನ್ನು ಹೊಂದಿವೆ. ಉಳಿದವುಗಳಲ್ಲಿ 93 ವಾಯುನಲೆಗಳಲ್ಲಿ ಅಗತ್ಯವಾದ ಸೌಕರ್ಯಗಳಿಲ್ಲ. 2014ರ ನವೆಂಬರ್‌ನಲ್ಲಿ ಕೇವಲ 132 ವಾಯುನೆಲೆಗಳನ್ನಷ್ಟೇ ‘ವಿಮಾನ ನಿಲ್ದಾಣಗಳು’ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಹೆಚ್ಚಿನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುತ್ತಿವೆ. ಭಾರತದಲ್ಲಿನ ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗೀಕರಣಕ್ಕೆ ಒಳಪಡಿಸಲಾಗಿದ್ದು, ಇದರಿಂದಾಗಿ ಉತ್ತಮವಾದ ಸುಸಜ್ಜಿತ ಮತ್ತು ಸ್ವಚ್ಛ ವಿಮಾನ ನಿಲ್ದಾಣಗಳು ಸಿದ್ಧವಾಗಿವೆ. ಟರ್ಮಿನಲ್‌ಗಳು ನವೀಕರಿಸಲ್ಪಟ್ಟಿದ್ದು, ವಿಸ್ತಾರಗೊಂಡಿವೆ.

ದೂರದ ಪ್ರದೇಶಗಳನ್ನು ಸುಲಭವಾಗಿ ತಲುಪುವ ಉದ್ದೇಶದಿಂದ ಭಾರತವು ಹಲವಾರು ವಿಮಾನ ನಿಲ್ದಾಣಗಳನ್ನು ಕಟ್ಟಿದ್ದು, ಅವ್ಯಾವುವೂ ಕೂಡ ಕೆಲಸಕ್ಕೆ ಬರದಂತಾಗಿವೆ. ರಾಜಸ್ಥಾನದ ಜೈಸಲ್ಮೇರ್ ಏರ್‌ಪೋರ್ಟ್‌ನ ನಿರ್ಮಾಣ ಕಾರ್ಯವು 2013ರಲ್ಲಿ ಪೂರ್ಣಗೊಂಡು ವರ್ಷಕ್ಕೆ 3 ಲಕ್ಷ ಪ್ರಯಾಣಿಕರ ಆತಿಥ್ಯ ವಹಿಸಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಇದುವರೆವಿಗೂ ಒಂದು ವಿಮಾನ ಸಹ ಅಲ್ಲಿಂದ ಹಾರಾಟ ನಡೆಸಿಲ್ಲ. ಇಂತಹದೇ 33 ವಿಮಾನ ನಿಲ್ದಾಣಗಳು ಭಾರತದಲ್ಲಿದ್ದು, ಅವುಗಳನ್ನು ‘ಗೋಸ್ಟ್ ಏರ್‌ಪೋರ್ಟ್‌’ಗಳೆಂದು ಕರೆಯಲಾಗುತ್ತಿದೆ. ಈ ರೀತಿ ಕಾರ್ಯನಿರ್ವಹಿಸದ ವಿಮಾನ ನಿಲ್ದಾಣಗಳ ಸಂಖ್ಯೆ ಹೊರತಾಗಿಯೂ, ಭಾರತವು ಮುಂದಿನ ವರ್ಷಗಳಲ್ಲಿ ಮತ್ತೆ 200 ಕಡಿಮೆ ದರದ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆಯನ್ನು ಹಾಕಿಕೊಂಡಿದೆ..

ವಿಮಾನಯಾನ ಕ್ಷೇತ್ರದಿಂದ ಭಾರತದ ಜಿಡಿಪಿಗೆ ಸೇರುವ ಮೊತ್ತ ಸರಿಸುಮಾರು 3,300 ಕೋಟಿ. ಇದು ಒಟ್ಟಾರೆ ದೇಶೀಯ ಉತ್ಪನ್ನದ ಶೇ.5ರಷ್ಟು. ಸುಮಾರು 17 ಲಕ್ಷ ಮಂದಿಗೆ ಈ ಕ್ಷೇತ್ರ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಭಾರತ ಸರಕಾರವು ಗ್ರೀನ್‌ಫೀಲ್ಡ್‌ ಏರ್ಪೋರ್ಟ್‌ ಯೋಜನೆಗಳಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಶೇ.74%ರಷ್ಟು ವಿದೇಶಿ ಬಂಡವಾಳ ಹೂಡಬಹುದಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಇದು ದಾರಿಯಾಗಬಲ್ಲದು ಎಂಬ ನಂಬಿಕೆ ಇದೆ.

ಆದರೆ ಭಾರತೀಯ ವಾಯುಯಾನ ಉದ್ಯಮವು ಆರ್ಥಿಕ ಕುಸಿತ, ಹೆಚ್ಚುತ್ತಿರುವ ಇಂಧನ ಮತ್ತು ಕಾರ್ಯಾಚರಣೆಯ ವೆಚ್ಚದ ಕಾರಣದಿಂದ ಹೆಣಗಾಡುತ್ತಿದೆ. ಈ ಸನ್ನಿವೇಶವು ಭಾರತೀಯ ವಿಮಾನಯಾನ ಉದ್ಯಮದಲ್ಲಿ ಹೂಡಿಕೆಯನ್ನು ಕಡಿತಗೊಳಿಸುತ್ತಿದೆ. ಹೆಚ್ಚಾದ ವೆಚ್ಚದ ಕಾರಣದಿಂದಾಗಿ ಹಲವಾರು ವಿಮಾನಯಾನ ಸಂಸ್ಥೆಗಳು ಮಾರಾಟಕ್ಕಿವೆ. ಏರ್ ಸಹಾರಾವನ್ನು ಜೇಟ್ ಏರ್‌ವೇಸ್ ಹಾಗೂ ಏರ್‌ ಡೆಕ್ಕನ್‌ಅನ್ನು ಕಿಂಗ್‌ಫಿಷರ್ ಏರ್‌ಲೈನ್‌ಗಳು 2007ರಲ್ಲಿ ಸ್ವಾಧೀನಪಡಿಸಿಕೊಂಡವು. ಪ್ಯಾರಾಮೌಂಟ್ ಏರ್ವೇಸ್  2010ರಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರೆ, ಅತಿಯಾದ ನಷ್ಟ ಅನುಭವಿಸಿದ ಕಿಂಗ್‌ಫಿಷರ್ ಏರ್‌ಲೈನ್ಸ್‌ 2012ರಲ್ಲಿ ಸ್ಥಗಿತಗೊಂಡಿತು. ಎತಿಹಾದ್‌ ಏರ್‌ವೇಸ್ ಸಂಸ್ಥೆ ಜೆಟ್ ಏರ್‌ವೇಸ್‌ನ ಶೇ.24ರಷ್ಟು ಪಾಲನ್ನು 2013ರಲ್ಲಿ ತನ್ನದಾಗಿಸಿಕೊಂಡಿದೆ. ಏರ್ ಏಷಿಯಾ ಇಂಡಿಯಾ, ಏರ್ ಏಷಿಯಾ ಮತ್ತು ಟಾಟಾ ಸನ್ಸ್ ಕಂಪನಿಗಳು ಜಂಟಿ ಉದ್ಯಮವನ್ನು ಸ್ಥಾಪಿಸಿದ್ದು, 2014ರಿಂದ ಕಡಿಮೆ ವೆಚ್ಚದ ಕ್ಯಾರಿಯಾರ್‌ಗಳಿಂದ ಕಾರ್ಯನಿರ್ವಹಣೆ ಮಾಡುತ್ತಿವೆ. ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್‌ವೇಸ್‌ ಒಟ್ಟಾಗಿ ಹೂಡಿಕೆ ಮಾಡಿ, ವಿಸ್ತಾರಾ ಎಂಬ ವಾಯುಯಾನ ಉದ್ಯಮವನ್ನು ಸ್ಥಾಪಿಸಿವೆ.

ಇದೆಲ್ಲದರ ನಡುವೆ, 2012ರಲ್ಲಿ ಭಾರತದಲ್ಲಿನ ಬಡತನವು ಶೇ.22ರಷ್ಟಿತ್ತು. ವಿಶ್ವಸಂಸ್ಥೆ ಹೇಳುವ ಪ್ರಕಾರ ಶೇ.23.6%ರಷ್ಟು ಭಾರತದ ಮಂದಿ ಬಡತನದ ಮಧ್ಯೆ ಜೀವಿಸುತ್ತಿದ್ದಾರೆ. ಕೆಲವು ಅಂದಾಜಿನ ಪ್ರಕಾರದ ಭಾರತದಲ್ಲಿನ ಬಡವರ ಸಂಖ್ಯೆ ಶೇ.77%. ಓಪಿಎಚ್‌ಐ ಸಂಸ್ಥೆಯ ವರದಿ ಪ್ರಕಾರ, ವಿಶ್ವದಲ್ಲಿ ಅತೀಹೆಚ್ಚು ಕಳಪೆ ಮಟ್ಟದ ಜೀವನ ನಡೆಸುತ್ತಿರುವ ಮಕ್ಕಳಲ್ಲಿ 100ಕ್ಕೆ 31  ಮಕ್ಕಳು ಭಾರತದಲ್ಲಿದ್ದಾರೆ. ಒಂದೆಡೆ ಕಿತ್ತು ತಿನ್ನುವ ಬಡತನವಾದರೆ, ಮತ್ತೊಂದೆಡೆ ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿದೆ ಎಂಬುದಕ್ಕೆ ವಿಮಾನಯಾನ ಕ್ಷೇತ್ರದ ಈ ಅಂಕಿ ಅಂಶಗಳು ನಿರ್ದಶನವಾಗಿವೆ. ಒಟ್ಟಾರೆ, ಭಾರತದ ಸರಕಾರಗಳು ದೇಶದಲ್ಲಿನ ಸಾಮಾಜಿಕ ಪಿಡುಗುಗಳ ನಿರ್ಣಾಮದತ್ತ ಗಮನ ಹರಿಸುವ ಬದಲು, ಉಪಯೋಗಕ್ಕೆ ಬಾರದ 33 ವಿಮಾನ ನಿಲ್ದಾಣಗಳ ಜೊತೆಗೆ ಇನ್ನೂ 200 ನಿಲ್ದಾಣಗಳನ್ನು ನಿರ್ಮಿಸುವ ಯೋಜನೆ ಹೊಂದಿರುವುದು ವಿಪರ್ಯಾಸ.

1 Comment

  • Jan 26,2018
    Shippuden

    Most of the indian airports caters for the needs of blue collor nri living in west asia. Plus upcoming airports target middle class migrant workforce and tourists. Also air fairs in india are one of the lowest in india and decresing even more. So more care should be taken when the author says poverty vs air travel in india. Ideological innuendoes shouldnt shadow the reality

    Reply Reply

Leave a comment

Top