An unconventional News Portal.

4 ಗುಂಟೆ ಜಾಗಕ್ಕಾಗಿ ‘ಹೈ ಡ್ರಾಮಾ’: ಇಲ್ಲಿ ಪೊಲೀಸ್, ಶಾಸಕ ಮತ್ತು ಮಾಧ್ಯಮವೇ ಪಾತ್ರಧಾರಿಗಳು!

4 ಗುಂಟೆ ಜಾಗಕ್ಕಾಗಿ ‘ಹೈ ಡ್ರಾಮಾ’: ಇಲ್ಲಿ ಪೊಲೀಸ್, ಶಾಸಕ ಮತ್ತು ಮಾಧ್ಯಮವೇ ಪಾತ್ರಧಾರಿಗಳು!

ಸಿಲಿಕಾನ್ ಸಿಟಿ ಬೆಳೆಯುತ್ತಿದ್ದಂತೆ ನಗರದ ಹೊರವಲಯದ ಕೃಷಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಒಂದು ಕಾಲದಲ್ಲಿ ಬೆಂಗಳೂರಿನಿಂದ ಹೊರಗೆ ಹೋದರೆ ಕಾಣುತ್ತಿದ್ದ ಸಾಮಾನ್ಯ ಕೃಷಿ ಚಟುವಟಿಕೆಗಳು ಇವತ್ತು ಕಣ್ಮರೆಯಾಗಿವೆ. ಆ ಜಾಗದಲ್ಲಿ ಅಧಿಕಾರ ಇರುವವರು, ಅಧಿಕಾರ ಕೇಂದ್ರಕ್ಕೆ ಹತ್ತಿರ ಇರುವವರು ಭೂಮಿಯನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಒಂದೊಂದು ಗುಂಟೆ ಜಾಗಕ್ಕೂ ಬಡಿದಾಟಗಳು ನಡೆಯುತ್ತಿವೆ. ಅದಕ್ಕಾಗಿ ಜನರ ರಕ್ಷಣೆಗಾಗಿ ಇರುವ ಯಂತ್ರಾಂಗವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆಗಳು ‘ರಿಯಲ್ ಎಸ್ಟೇಟ್’ ಮಧ್ಯಸ್ಥಿಕೆ ಕೇಂದ್ರಗಳಾಗಿ ಬದಲಾಗಿವೆ…

ಹೀಗೆ, ಕ್ಲೀಷೆಯಂತಾಗಿ ಹೋಗಿರುವ ಸ್ಟೋರಿಯೊಂದರ ‘ನ್ಯೂಸ್ ಪೆಗ್’ ಒಂದು ಶನಿವಾರ ಬೆಳಗ್ಗೆ ಸದ್ದು ಮಾಡಿತು.

ಹೊಸಕೋಟೆ ವಿಧಾನಸಭಾ ವ್ಯಾಪ್ತಿಗೆ ಬರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಹೋಬಳಿಯ ಗಿಡ್ಡನಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ನಡೆದ ಘಟನೆ ಇದು. ಶಾಸಕ ಎಂಟಿಬಿ ನಾಗರಾಜ್ ಬೆಂಬಲಿಗ ಎಂದು ಹೇಳಿಕೊಂಡ, ಇಟ್ಟಸಂದ್ರ ಸುರೇಶ್ ಎಂಬಾತನ ಕುಮ್ಮಕ್ಕಿನಿಂದ ಮಾಧ್ಯಮ ಪತ್ರಿನಿಧಿಯೊಬ್ಬರನ್ನು ಠಾಣೆಯಲ್ಲಿ ಅಕ್ರಮ ಬಂಧನದಲ್ಲಿ ಇಡಲಾಗಿತ್ತು ಎಂಬುದು ತಡವಾಗಿ ಬಳಕಿಗೆ ಬಂತು.

ಇಲ್ಲಿನ ಸರ್ವೆ ನಂಬರ್ 3ರಲ್ಲಿ ಇಟ್ಟಸಂದ್ರ ಸುರೇಶ್ ಜಮೀನು ಖರೀದಿಸಿದ್ದರು. ಇದರ ಪಕ್ಕದಲ್ಲೇ ರವಿ ಎಂಬವವರ ಜಮೀನಿತ್ತು. “ರವಿ 1973ರಲ್ಲಿ ಇಲ್ಲಿ ಜಮೀನು ಖರೀದಿಸಿದ್ದರು. ಖಾತೆ, ಮ್ಯೂಟೇಷನ್ ಎಲ್ಲವೂ ಅವರ ಹೆಸರಿನಲ್ಲೇ ಇದೆ,” ಎನ್ನುತ್ತಾರೆ ರವಿ ಗೆಳೆಯ ವೆಂಕಟೇಶ್ ಗೌಡ. “ಊರಿಗೆ ಹೋಗಲು ಹಿಂದೆ ಇದೇ ರವಿ ತಮ್ಮ ಜಮೀನಿನಲ್ಲಿ ರಸ್ತೆ ಬಿಟ್ಟುಕೊಟ್ಟಿದ್ದರು. ಇದೇ ಜಮೀನಿನ ಪಕ್ಕದಲ್ಲಿಇಟ್ಟಸಂದ್ರ ಸುರೇಶ್ ಜಾಗ ಖರೀದಿಸಿದ್ದರು. ನಂತರ ರವಿ ಬಿಟ್ಟುಕೊಟ್ಟಿದ್ದ ಜಮೀನನ ಪಕ್ಕದ ರಸ್ತೆಗೆ ಬೇಲಿ ಹಾಕಲು ಮುಂದಾದರು. ಇದಕ್ಕಾಗಿ ಹುಣಸೆ ಮತ್ತು ಹೊಂಗೆ ಮರಗಳನ್ನು ಕಡಿದಿದ್ದಾರೆ. ಈ ಕುರಿತು ಪೊಲೀಸರಿಗೆ ರವಿ ದೂರು ನೀಡಿದರೆ ಸ್ವೀಕರಿಸಿರಲಿಲ್ಲ,”ಎನ್ನುತ್ತಾರೆ ರವಿ ಸಂಬಂಧಿಕರು.

ರಸ್ತೆಯ ಜಾಗ ಇರುವುದು ಸುಮಾರು ನಾಲ್ಕು ಗುಂಟೆಯಷ್ಟು. ಇವತ್ತಿನ ಮಾರುಕಟ್ಟೆ ಬೆಲೆಯಲ್ಲಿ ಅದರ ಬೆಲೆ ಸುಮಾರು 4-5 ಲಕ್ಷಗಳಾಗಬಹುದು ಎಂಬುದು ಅಂದಾಜು.

ಹೀಗಿರಬೇಕಾದರೆ, ಕಳೆದ ಅಕ್ಟೋಬರ್ 9ರಂದು ಮಧ್ಯಾಹ್ನದ ವೇಳೆಗೆ ಪೊಲೀಸ್ ಇನ್ಸ್ ಪೆಕ್ಟರ್ ಬಾಲಾಜಿ ಹಾಗೂ ಅವರ ತಂಡದವರು ಬಂದು ರವಿ ಜತೆ ಗಲಾಟೆ ಮಾಡಲು ಆರಂಭಿಸಿದ್ದಾರೆ. ಇದನ್ನು ರವಿ ತಮ್ಮ ಸಂಬಂಧಿಕ, ‘ರಾಜ್ ನ್ಯೂಸ್ ಕನ್ನಡ’ದ ವರದಿಗಾರ ಆನಂದ್ಗೆ ತಿಳಿಸಿದ್ದಾರೆ. “2.30ರಿಂದ 3 ಗಂಟೆ ಸುಮಾರಿಗೆ ನಾನು ಸ್ಥಳಕ್ಕೆ ಹೋದೆ. ನನ್ನ ಜೊತೆ ಕ್ಯಾಮೆರಾಮನ್ ಇರಲಿಲ್ಲ. ನಾನು ‘ಸ್ಟಿಂಗ್’ (ರಹಸ್ಯ ಕಾರ್ಯಾಚರಣೆ) ಮಾಡಲೆಂದು ಒಬ್ಬನೇ ಹೋಗಿದ್ದೆ. ನಾನು ಹೋಗುವಾಗ ಸ್ಥಳದಲ್ಲಿ ಪೊಲೀಸರು ಗಲಾಟೆ ಮಾಡುತ್ತಿದ್ದರು. ನೀನು ಯಾರು ಹೇಳು ಎಂದು ಪ್ರಶ್ನಿಸಿದರು. ವರದಿಗಾರ ಎಂದು ಐಡಿ ಕಾರ್ಡ್ ತೋರಿಸಿದೆ,” ಎನ್ನುತ್ತಾರೆ ಪತ್ರಕರ್ತ ಆನಂದ್.

ಪೊಲೀಸರ ಕಳ್ಳಾಟ: 

ಚಿಂತಾಮಣಿ ಮುಖ್ಯರಸ್ತೆಯಲ್ಲಿ ಬರುವ ನಂದಗುಡಿ ಪೊಲೀಸ್ ಠಾಣೆ.

ಚಿಂತಾಮಣಿ ಮುಖ್ಯರಸ್ತೆಯಲ್ಲಿ ಬರುವ ನಂದಗುಡಿ ಪೊಲೀಸ್ ಠಾಣೆ.

“ನಂತರ ನನ್ನನ್ನು ಇನ್ಸ್ಪೆಕ್ಟರ್ ಬಾಲಾಜಿ, ಬಿಲ್ಡರ್ ಶ್ರೀಧರ್, ಆಚಾರಿ ಶಿವಣ್ಣ ಹಲ್ಲೆ ನಡೆಸಿದ್ದಲ್ಲದೇ ಪೊಲೀಸರು ನನ್ನನ್ನು ಬಂಧಿಸಿದರು. ಕೈಗಳಿಗೆ ಕೋಳಹಾಕಿ ಸುಮಾರು 4 ಗಂಟೆಗಳ ಕಾಲ ಲಾಕಪ್‍ನಲ್ಲಿ ಹಾಕಿ ಚಿತ್ರಹಿಂಸೆ ನೀಡಿದರು. ಏಕೆ ರೈತರ ಮೇಲೆ ದೌರ್ಜನ್ಯ ನಡೆಸ್ತೀರ ಅಂತ ಪ್ರಶ್ನಿಸಿದ್ದಕ್ಕೆ ಐಡಿ ಕಾರ್ಡ್ ಮತ್ತು ಮೊಬೈಲ್‍ಗಳನ್ನು ಕಸಿದು ಅವ್ಯಾಚ ಶಬ್ದಗಳಿಂದ ಬೈದು, ದೈಹಿಕ ಹಲ್ಲೆ ನಡೆಸಿದ್ದಾರೆ,” ಎನ್ನುತ್ತಾರೆ ಆನಂದ್. ನಂತರ ರಾತ್ರಿ 7 ಗಂಟೆ ವೇಳೆಗೆ ವೆಂಕಟೇಶ್ ಗೌಡ, ರವಿ ಮೊದಲಾದವರು ಠಾಣೆಗೆ ಹೋಗಿ ಆನಂದ್ ರನ್ನು ಬಿಡಿಸಿಕೊಂಡು ಬಂದಿದ್ದರು.

ಆದರೆ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇವರ ಮೇಲೆಯೇ ಪ್ರಥಮ ವರ್ತಮಾನ ವರದಿ ದಾಖಲಿಸಿದ್ದಾರೆ. “ರವಿ ಮತ್ತು ಆನಂದ್, ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿ, ಬಂದ್ ಮಾಡಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ,” ಎನ್ನುವ ಮಾಹಿತಿಗಳನ್ನು ಆನಂದ್ ಹಂಚಿಕೊಂಡರು.

‘ನಾನು ಎಂಟಿಬಿ ನಾಗರಾಜ್ ಬಲಗೈ ಬಂಟ, ಸರ್ಕಾರವೇ ನನ್ನದು ನನ್ನನ್ನು ಏನು ಮಾಡ್ಕೋತೀರ,’ ಅಂತ ಇಟ್ಟಸಂದ್ರ ಸುರೇಶ್ ಬೆದರಿಸ್ತಾನೆ ಅಂತ ಆನಂದ್ ಹೇಳುತ್ತಾರೆ. ಇನ್ನು ರಾಜ್‍ನ್ಯೂಸ್ ವರದಿಗಾರ ಆನಂದ್ ಅವರನ್ನು ಪೊಲೀಸರು ಬಲವಂತವಾಗಿ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುವ ದೃಶ್ಯಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಕುರಿತು ರಾಜ್ ನ್ಯೂಸ್ ಸಂಪಾದಕ ಹಮೀದ್ ಪಾಳ್ಯ ಹೇಳಿದ್ದು ಹೀಗೆ: “ಇದೊಂದು ಸಿವಿಲ್ ಪ್ರಕರಣ. ಇದರಲ್ಲಿ ಪೊಲೀಸರಿಗೇನು ಕೆಲಸ? ಈ ಮೂಲಕ ಪೊಲೀಸರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ? ಅವರಿಬ್ಬರ (ಆನಂದ್ ಮತ್ತು ಸುರೇಶ್) ವೈಯಕ್ತಿಕ ಪ್ರಕರಣವೇ ಇರಬಹುದು. ಆದರೆ ನೀವೇನು (ಮಾಧ್ಯಮದವರು) ಮಾಡ್ಕೋತೀರಾ ಎಂದಾಗ ಪ್ರಶ್ನಿಸದೇ ಇರಲು ಸಾಧ್ಯವಿಲ್ಲ. ನಮ್ಮ ಮೇಲೆ ಈ ರೀತಿ ಪೊಲೀಸರು ದೌರ್ಜನ್ಯ ನಡೆಸಿದರೆ ನಾವು ಏನು ಮಾಡುವುದು? ಕೆಲಸದ ಭದ್ರತೆಯಂತೂ ಮೊದಲೇ ಇಲ್ಲ, ಸಮಾಜದಲ್ಲಿಯೂ ಭದ್ರತೆ ಇಲ್ಲ. ಇದರ ಮಧ್ಯೆ ನಾವು ಜನರಿಗಾಗಿ ಕೆಲಸ ಮಾಡಬೇಕು. ಈ ಕಾರಣದಿಂದಾಗಿ ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಾಳೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ,” ಎನ್ನುತ್ತಾರೆ ಅವರು.

ಶಾಸಕ ನಾಗರಾಜ್ ಹೇಳುವುದೇನು?:

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಶಾಸಕ ಎಂ.ಟಿ.ಬಿ ನಾಗರಾಜ್ “ಇಲ್ಲಿ (ಗಿಡ್ಡನಹಳ್ಳಿ) ರಾಜ್ ನ್ಯೂಸಿನ ಆನಂದ್ ಹಾಗೂ ಸುರೇಶ್ ಎಂಬುವವರಿಗೆ 30 ಗುಂಟೆ ಜಮೀನಿದೆ. ಮಧ್ಯದಲ್ಲಿರುವ 8 ಅಡಿ ರಸ್ತೆಯನ್ನು ಆನಂದ್ ಮರ, ಬಾಟಲಿಗಳನ್ನು ಹಾಕಿ ಬ್ಲಾಕ್ ಮಾಡಿದ್ದರು. ಇದನ್ನು ಪ್ರಶ್ನಿಸಿ ರಸ್ತೆ ಬಳಸುತ್ತಿದ್ದವರು ಕಂಪ್ಲೆಂಟ್ ನೀಡಿದ್ದಾರೆ. ಇದರಲ್ಲಿ ಸುರೇಶ್ ಪಾತ್ರವೇನೂ ಇಲ್ಲ. ಆನಂದ್ ತಾನು ಮಾಡಿದ್ದು ತಪ್ಪು ಎಂದು ಪಂಜಾಯಿತಿಯಲ್ಲಿ ಒಪ್ಪಿಕೊಂಡಿದ್ದ. ಈಗ ಹೀಗೆ ಮಾಡುತ್ತಿದ್ದಾನೆ,” ಎಂದು ದೂರುತ್ತಾರೆ. ಜತೆಗೆ, ‘ಸುರೇಶ್ ತಾನು ಎಂ.ಟಿ.ಬಿ ನಾಗರಾಜ್ ಕಡೆಯವನು, ಸರಕಾರ ನಮ್ಮದು’ ಎಂದು ಧಮಕಿಯನ್ನೇ ಹಾಕಿಲ್ಲ ಎನ್ನುತ್ತಾರೆ. “ಲಭ್ಯ ಇರುವ ವೀಡಿಯೋ ದಾಖಲೆಗಳೆಲ್ಲಾ ಸುಳ್ಳು,” ಎನ್ನುತ್ತಾರೆ ಹೊಸಕೋಟೆ ಶಾಸಕ ನಾಗರಾಜ್.

ಬಚ್ಚೇಗೌಡರ ಹೆಸರು: 

ಇನ್ನು ಪ್ರಕರಣದ ಕೇಂದ್ರ ಬಿಂದು ಇಟ್ಟಸಂದ್ರ ಸುರೇಶ್ ಹೇಳುವುದೇ ಬೇರೆ. “ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಘಟನೆ ನಡೆದಿದೆ ಎನ್ನುತ್ತಿದ್ದ ದಿನ ನಾನು ಆ ಸ್ಥಳದಲ್ಲಿ ಇರಲೇ ಇಲ್ಲ. ಬೇಕಿದ್ರೆ ನನ್ನ ಪೋನಿನ ಲೊಕೇಶನ್ ಚೆಕ್ ಮಾಡಬಹುದು. ಈಗ ತೋರಿಸುತ್ತಿರುವ ವೀಡಿಯೋ 3/10/2016ರಂದು ಶೂಟ್ ಮಾಡಿದ್ದು. ಇದರ ಪೂರ್ತಿ ವೀಡಿಯೋವನ್ನು ಅವರು ತೋರಿಸುತ್ತಿಲ್ಲ,” ಎಂದು ಸುರೇಶ್ ಆರೋಪಿಸುತ್ತಾರೆ.

“ನಾನು ಉದ್ಯಮಿ. ಇಲ್ಲಿ ನನ್ನ ಹೆಂಡತಿ ಹೆಸರಿನಲ್ಲಿ 28.5 ಗುಂಟೆ ಜಮೀನು ಖರೀದಿಸಿದ್ದು ವಾಸ್ತು ಸರಿ ಬರುವುದಿಲ್ಲ ಎಂದು 1.5 ಗುಂಟೆ ಹೊರಗೆ ಬಿಟ್ಟಿದ್ದೆ. ಇಲ್ಲಿ ಹಾದು ಹೋಗುವ ರಸ್ತೆಗೆ ಮರ ಮತ್ತು ಬಾಟಲಿಗಳನ್ನು ಆನಂದ್ ಎನ್ನುವವರು ಹಾಕಿ ಬ್ಲಾಕ್ ಮಾಡಿದ್ದರು. ಅವರು ಒಳ್ಳೆಯವರೇ. ಆದರೆ ಅವರ ತಲೆ ಕೆಡಿಸಿ ಬಿಜೆಪಿಯವರು ಈ ಕೃತ್ಯ ಮಾಡುತ್ತಿದ್ದಾರೆ. ನಾನು ನಾಲ್ಕು ಜಮೀನು ಖರೀದಿಸಿದ್ದು, ಎಲ್ಲ ಕಡೆಯೂ ಬಚ್ಚೇಗೌಡ ಕಡೆಯವರು ತಗಾದೆ ತೆಗೆಯುತ್ತಿದ್ದಾರೆ. ಬೇಕಿದ್ದರೆ ದಾಖಲೆಗಳನ್ನು ಕೊಡುತ್ತೇನೆ,” ಎಂದು ಪೂರ್ತಿ ಘಟನೆಗೆ ರಾಜಕೀಯ ಆಯಾಮ ನೀಡಲು ಮುಂದಾಗುತ್ತಾನೆ ಸುರೇಶ್.

“ಘಟನೆ ನಡೆದ ದಿನ ಭಾಗ್ಯಮ್ಮ ಅವರು ಕಟ್ಟುತ್ತಿರುವ ಮನೆಗೆ ಕಲ್ಲು ಬಂದಿತ್ತು. ರಸ್ತೆ ಬ್ಲಾಕ್ ಆಗಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಶಿವಣ್ಣ ಎನ್ನುವವರು ಮೇಲೆ ಆನಂದ್ ಹಲ್ಲೆ ಮಾಡಿದ್ದಾರೆ. ಅವರು ಅವತ್ತು ಕುಡಿದಿದ್ದರು ಎಂದು ಅವರ ಗೆಳೆಯರೇ ನನ್ನ ಬಳಿ ಹೇಳಿದ್ದಾರೆ. ಕುಡಿದ ಅಮಲಿನಲ್ಲಿ ಪೊಲೀಸರಿಗೆ ಒದ್ದಿದ್ದರಿಂದ ಪೊಲೀಸರೊಬ್ಬರ ಕಾಲು ಉಳುಕು ಬಂದಿದೆ. ಇದಕ್ಕೆ ಅವರನ್ನು ಬಂಧಿಸಿದ್ರು. ಕೊನೆಗೆ ಸಂಜೆ ವೇಳೆಗೆ ಸ್ಥಳಿಯರಾದ ಭಾಗ್ಯಮ್ಮ ಶ್ರೀಧರ್ ಮತ್ತು ಇತರ 4/5 ಜನ ರೈತರು ಕಂಪ್ಲೆಂಟ್ ನೀಡಿದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. (ಇಷ್ಟೊತ್ತಿಗೆ ಆನಂದ್ ಠಾಣೆಯಲ್ಲಿದ್ದರು ಎಂಬುದು ಗಮನಾರ್ಹ). ಸುಮ್ಮ ಸುಮ್ಮನೆ ನನ್ನ ಮೇಲೆ ಆರೋಪ ಮಾಡಬಾರದು. ಇದರಿಂದ ನನಗೆ ತುಂಬಾ ನೋವಾಗಿದೆ. ನಾನು ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ಮಾಡುತ್ತಿದ್ದೇನೆ,” ಎಂದು ಮಾತು ಮುಗಿಸಿದರು.

ಮೇಲ್ನೋಟಕ್ಕೆ ಇಲ್ಲಿ ಏನೋ ನಡೆದಿರುವುದು ಕಂಡು ಬರುತ್ತಿದೆ. ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಆದರೆ ನಿಜ ವಿಷಯ ಏನು ಎಂಬುದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ. ಅದರಾಚೆಗೆ ಬೆಂಗಳೂರಿನ ಹೊರವಲಯಗಳಲ್ಲಿ ಇವತ್ತು ಭೂಮಿಯ ಸುತ್ತ ನಡೆಸುತ್ತಿರುವ ವಿದ್ಯಮಾನಗಳಿಗೆ ತಾಜಾ ಉದಾಹರಣೆಯಂತಿದೆ ಈ ಪ್ರಕರಣ.

Top