An unconventional News Portal.

‘ಸೂಫಿಸಂ’ ಮೇಲೆ ಐಸಿಎಲ್ ಭೀಕರ ದಾಳಿ: ಇಸ್ಲಾಂ ಒಳಗಿನ ವೈರುಧ್ಯಕ್ಕೆ ಸಾಕ್ಷಿಯಾದ ಪಾಕಿಸ್ತಾನ

‘ಸೂಫಿಸಂ’ ಮೇಲೆ ಐಸಿಎಲ್ ಭೀಕರ ದಾಳಿ: ಇಸ್ಲಾಂ ಒಳಗಿನ ವೈರುಧ್ಯಕ್ಕೆ ಸಾಕ್ಷಿಯಾದ ಪಾಕಿಸ್ತಾನ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 29 ಭಯೋತ್ಪಾದಕರನ್ನು ಪಾಕ್‌ ಸೇನೆ ಹೊಡೆದು ಹಾಕಿದೆ. ಕಾರ್ಯಾಚರಣೆ ಮುಂದುವರಿದಿದೆ.

ಗುರುವಾರ ಸೂಫಿ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇಶದ ಶೆಹ್ವಾನ್ ಪ್ರದೇಶದಲ್ಲಿದ್ದ ಲಾಲ್ ಶಹ್ಬಾಝ್ ಖಲಂದರ್ ದರ್ಗಾದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಘಟನೆಯಲ್ಲಿ ಸುಮಾರು 79 ಜನ ಸಾವನ್ನಪ್ಪಿದ್ದರೆ 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಾಗಿತ್ತು. ಇಸ್ಲಾಮಿಕ್ ಸ್ಟೇಟ್ ಆಫ್ ಲೆವೆಲೆಂಟ್ ಅಂಡ್ ಇರಾಕ್ (ಐಸಿಲ್- ಹಿಂದಿನ ಐಸಿಸ್) ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ದಾಳಿಯ ಬೆನ್ನಲ್ಲೇ ಖೈಬರ್ ಪ್ರಾಂಥ್ಯ, ಸಿಂದ್ ಪ್ರಾಂಥ್ಯ ಸೇರಿದಂತೆ ರಾಜಧಾನಿ ಕರಾಚಿಯಲ್ಲಿ ಪಾಕ್‌ ಪೊಲೀಸರು ಹಾಗೂ ಸೇನಾ ಪಡೆಗಳು ಭಯೋತ್ಪಾದಕರ ಮೇಲೆ ಮುಗಿಬಿದ್ದಿವೆ. ಈವರೆಗೆ ಸುಮಾರು 29 ಜನರನ್ನು ಹೊಡೆದು ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ನಡೆದ ಭೀಕರ ದಾಳಿಗೆ ಸೇನಾ ಪಡೆಗಳು ಪ್ರತ್ಯುತ್ತರ ನೀಡುತ್ತಿವೆ ಎಂಬ ಸಂದೇಶವನ್ನು ಕಳುಹಿಸಲಾಗುತ್ತಿದೆ.

ಕಳೆದ ನಾಲ್ಕು ದಿನಗಳ ಅಂತರದಲ್ಲಿ ಪಾಕ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಿಗೆ ಒಟ್ಟು 99 ಜನ ಬಲಿಯಾಗಿದ್ದಾರೆ. ಸೋಮವಾರವಷ್ಟೆ ಲಾಹೋರಿನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಘಟನೆಯಲ್ಲಿ 13 ಜನ ಸಾವನ್ನಪ್ಪಿದ್ದರು. ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತುಕೊಂಡಿತ್ತು. ಬುಧವಾರ ಮೊಹಮಂಡ್ ಬುಡಕಟ್ಟು ಪ್ರದೇಶದ ಸರಕಾರಿ ಕಚೇರಿಯ ಮೇಲೆ ಮತ್ತು ಪೇಶಾವರದಲ್ಲಿ ನಡೆದ ದಾಳಿಯಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದರು. ಬಲೂಚಿಸ್ತಾನದಲ್ಲಿ ಬಾಂಬ್ ನಿಷ್ಕ್ರಿಯಗೊಳಸುತ್ತಿದ್ದ ವೇಳೆ ಇಬ್ಬರು ಪೊಲೀಸರು ಸಾವನ್ನಪ್ಪಿದ್ದರು. ಹೀಗೆ ಸಾಲು ಸಾಲು ದಾಳಿಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನದಲ್ಲಿ ಗುರುವಾರ ಸೂಫಿ ದರ್ಗಾದ ಮೇಲೆ ನಡೆದ ಭೀಕರ ದಾಳಿಯಿಂದಾಗಿ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಜನರಿಗೆ ಸಮಾಧಾನ ಪಡಿಸುವ ನಿಟ್ಟಿನಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆಗೆ ಇಳಿದಿದೆ.

ಕೃಪೆ: ಆಲ್ ಜಝೀರಾ.

ಕೃಪೆ: ಆಲ್ ಜಝೀರಾ.

ಇಸ್ಲಾಂ ಒಳಗಿನ ವೈರುಧ್ಯಗಳು:

ಐಸಿಲ್ ಆಗಲಿ, ಪಾಕಿಸ್ತಾನಿ ತಾಲಿಬಾನ್ ಸಂಘಟನೆಗಾಗಲಿ ಸೂಫಿ ಸಂಸ್ಕೃತಿ ಬೆಳೆಯುವುದು ಇಷ್ಟವಿಲ್ಲ. ಸೂಫಿ ಸಂಪ್ರದಾಯ ಇಸ್ಲಾಂಗೆ ವಿರುದ್ಧವಾದುದು ಎಂದು ಅವರು ನಂಬಿಕೊಂಡಿದ್ದಾರೆ. ಹೀಗಾಗಿಯೇ ಗುರುವಾರ ಶೆಹ್ವಾನ್ ಪ್ರದೇಶದಲ್ಲಿದ್ದ ಲಾಲ್ ಶಹ್ಬಾಝ್ ಖಲಂದರ್ ದರ್ಗಾದ ಮೇಲೆ ಭೀಕರ ದಾಳಿ ನಡೆದಿದೆ.

ಲಾಲ್ ಶಹ್ಬಾಝ್ ಖಲಂದರ್ ದರ್ಗಾ ದಕ್ಷಿಣ ಏಷಿಯಾದ ಸೂಫಿ ಸಂಸ್ಕೃತಿಯ ತವರು ನೆಲ ಎಂದೇ ಪ್ರಖ್ಯಾತವಾಗಿದ್ದ ಯಾತ್ರಾಸ್ಥಳ. ಸಂತ ಸೈಯದ್ ಮಹಮದ್ ಉಸ್ಮಾನ್ ಮಾರ್ವಂಡಿ ಸಾವನ್ನಪ್ಪಿದ ನಂತರ ಇಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. ಆತ ಸೂಫಿ ಸಂಗೀತದ ಪಿತಾಮಹ. ಹೀಗಾಗಿ ದೊಡ್ಡ ಮಟ್ಟದಲ್ಲಿ ಅನುಯಾಯಿಗಳು ಹುಟ್ಟಿಕೊಂಡಿದ್ದರು. ಪ್ರದೇಶ ಯಾತ್ರಾಸ್ಥಳವಾಗಿ ಬದಲಾಗಿತ್ತು. ‘ದಮಾ ದಮ್ ಮಸ್ತ್‌ ಖಲಂದರ್’ ಎಂಬ ಸೂಫಿ ಸಂಗೀತದ ಮಾಧುರ್ಯವನ್ನು ಜಗತ್ತಿಗೆ ಇಲ್ಲಿಂದಲೇ ಸಾರಲಾಗಿತ್ತು.

ಖಲಂದರ್ ದರ್ಗಾಕ್ಕೆ ಪಾಕಿಸ್ತಾನಲ್ಲಿ ಅಲ್ಪಸಂಖ್ಯಾತರಾದ ಶಿಯಾ ಮುಸ್ಲಿಂರು ಮತ್ತು ಸುನ್ನಿ ಮುಸ್ಲಿಂರು ನಡೆದುಕೊಂಡು ಬರುತ್ತಿದ್ದರು. ಗುರುವಾರ ಅಲ್ಲಿ ಜಾತ್ರೆ ನಡೆಯುತ್ತಿತ್ತು. ಸಾವಿರಾರು ಜನ ಸೇರಿದ್ದರು. ಆದರೆ ವಹಾಬಿಸಂ ಅಥವಾ ಸಲಾಫಿಸಂ ಎಂದು ಗುರುತಿಸುವ ಕಟ್ಟರ್ ಮುಸ್ಲಿಂ ಪಂಗಡಗಳು ದರ್ಗಾ ಸಂಸ್ಕೃತಿಯನ್ನು ವಿರೋದಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಮುಸ್ಲಿಂ ರಾಷ್ಟ್ರ’ದ ಪರಿಕಲ್ಪನೆ ಇಟ್ಟುಕೊಂಡು, ಭಯೋತ್ಪಾದಕ ಸಂಘಟನೆಗಳಾಗಿ ಬದಲಾಗಿರುವ ಐಸಿಲ್ ದರ್ಗಾದದಲ್ಲಿ ರಕ್ತಪಾತವನ್ನು ಸೃಷ್ಟಿಸಿದೆ.

ಮಿಲಿಟರಿ ಕಾರ್ಯಾಚರಣೆ:

ಪಾಕಿಸ್ತಾನ ಸೇನೆ ಕಳೆದ ಕೆಲವು ವರ್ಷಗಳಿಂದ ತನ್ನ ನೆಲದಲ್ಲಿ ನಡೆಯುತ್ತಿರುವ ದಾಳಿಗಳಿಗೆ ಪಕ್ಕದ ಅಫ್ಘಾನಿಸ್ತಾನವನ್ನು ಹೊಣೆಯಾಗಿಸುತ್ತಲೇ ಬಂದಿದೆ. ಅಫ್ಘಾನ್ ನೆಲದಲ್ಲಿ ಭಯೋತ್ಪಾದಕರಿಗೆ ನೆರವು ನೀಡಲಾಗುತ್ತಿದೆ ಎಂಬುದು ಪಾಕ್ ಆರೋಪ. ಈ ಹಿನ್ನೆಲೆಯಲ್ಲಿ ಖಲಂದರ್ ದರ್ಗಾ ಮೇಲೆ ದಾಳಿ ನಡೆಯುತ್ತಿದ್ದಂತೆ ಪಾಕ್- ಅಫ್ಘಾನ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜತೆಗೆ, ತನ್ನ ನೆಲದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಯನ್ನು ಶುರುಮಾಡಲಾಗಿದೆ.

Leave a comment

Top