An unconventional News Portal.

ದಲಿತರ ಭೂಮಿ ಮೇಲೆ ಮಂತ್ರವಾದಿಯ ಕಣ್ಣು: ‘#ಚಲೋಉಡುಪಿ’ ಹೋರಾಟಗಾರರಿಗೆ ಮೊದಲ ಸವಾಲು!

ದಲಿತರ ಭೂಮಿ ಮೇಲೆ ಮಂತ್ರವಾದಿಯ ಕಣ್ಣು: ‘#ಚಲೋಉಡುಪಿ’ ಹೋರಾಟಗಾರರಿಗೆ ಮೊದಲ ಸವಾಲು!

ಕರ್ನಾಟಕದಲ್ಲಿ ಅಹಿಂದ ಸರಕಾರ ಆಡಳಿತದಲ್ಲಿದೆ; ಹಾಗಂಥ ಸಿದ್ದರಾಮಯ್ಯ ಸುತ್ತಮುತ್ತ ಇರುವವರು ಹೇಳುತ್ತಾ ಬಂದಿದ್ದಾರೆ. ಆದರೆ ಈ ಸರಕಾರದ ಅವಧಿಯಲ್ಲೂ ದಲಿತರ ಮೇಲಿನ ದೌರ್ಜನ್ಯ ನಡದುಕೊಂಡು ಬರುತ್ತಿದೆ. ಇನ್ನೊಂದೆಡೆ ದಲಿತ ಭೂ ರಹಿತರಿಗೆ ಭೂಮಿ ನೀಡಿ ಅಂತ ‘ಊನಾ ಮಾದರಿ’ಯಲ್ಲಿ ‘ಉಡುಪಿ ಚಲೋ’ ಹೋರಾಟ ಕಾವು ಪಡೆದುಕೊಳ್ಳುತ್ತಿದೆ. ಅದಕ್ಕಾಗಿಯೇ ಹುಟ್ಟಿಕೊಂಡ ‘ಚಲೋ ಉಡುಪಿ’ ವಾಟ್ಸಾಪ್ ಗುಂಪುಗಳ ಪೈಕಿ ಒಂದಕ್ಕೆ ದೂರೊಂದರ ಮಾಹಿತಿ ಬಂದಿದೆ. ದಲಿತರಿಗೆ ಭೂಮಿ ನೀಡುವ ಜತೆಗೆ, ಈಗ ಇರುವ ಭೂಮಿಯನ್ನೂ ಉಳಿಸಿಕೊಡಿ ಅಂತ ಇಲ್ಲಿನ ಜನ ಕೇಳುತ್ತಿದ್ದಾರೆ; ಹಾಗೊಂದು ಬೇಡಿಕೆ ಬಂದಿರುವುದು ತುಮಕೂರು ಜಿಲ್ಲೆಯ ಕೆಂಚನಹಳ್ಳಿ ಎಂಬ ಗ್ರಾಮದಿಂದ.

ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು, ಹುಲಿಯೂರು ದುರ್ಗಾ ಹೋಬಳಿಗೆ ಸೇರಿದ ಕೆಂಚನಹಳ್ಳಿ ಗ್ರಾಮದಲ್ಲಿ ಸುಮಾರು 20 ದಲಿತ (ಎಕೆ, ಮಾದಿಗ ಸಮುದಾಯಕ್ಕೆ ಸೇರಿದ) ಕುಟುಂಬಗಳು ವಾಸವಿದ್ದಾರೆ. ತೋಟಿ, ತಳವಾರಿಕೆ (ಸಾಮಾಜಿಕ ಸ್ಥರದಲ್ಲಿ ತಳಮಟ್ಟದ) ಕೆಲಸದಿಂದ ಬರುವ ಕೂಲಿಯೇ ಈ ಕುಟುಂಬಗಳ ಜೀವನ ನಿರ್ವಹಣೆಯ ಆರ್ಥಿಕ ಮೂಲವಾಗಿದೆ. ಜತೆಗೆ ಸರಕಾರ ಈ ಹಿಂದೆ ನೀಡಿದ 12 ಎಕರೆ 16 ಗುಂಟೆ ತೋಟಿ ಇನಾಮತಿ ಜಮೀನೂ ಆಧಾರಕ್ಕಿದೆ. ಆದರೆ, ಅದೇ ಜಮೀನನ ಮೇಲೆ ಸ್ಥಳೀಯ ಮಂತ್ರವಾದಿಯೊಬ್ಬನ ಕಣ್ಣ ಬಿದ್ದಿದೆ.

ಸ್ವಯಂಘೋಷಿತ ದೇವಮಾನವ: 

ಈತನ ಹೆಸರು ಶಂಕ್ರಯ್ಯ. ಸವರ್ಣೀಯ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಈತನದೊಂದು ಕುತೂಹಲಕಾರಿ ಕತೆ ಇದೆ. ಕೆಂಚನಹಳ್ಳಿಯವನೇ ಆದ ಈತ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋಗಿ ಬೆಂಗಳೂರಿನಲ್ಲಿ ಬಾಳೆಹಣ್ಣು ವ್ಯಾಪಾರ ಮಾಡುತ್ತಾ, ಆಟೋ ಓಡಿಸುತ್ತಿದ್ದವನು. “ಸಿಕ್ಕ ಸಿಕ್ಕವರ ಬಳಿ ಸಾಲ ಎತ್ತಿ ಕೊನೆಗೆ ಸಾಲ ತೀರಿಸಲಿಲ್ಲ. ಸಾಲ ನೀಡಿದವರು ಹೊಡೆಯಲು ಬಂದರು. ಈತ ತಪ್ಪಿಸಿಕೊಂಡು ಅದ್ಯಾರೋ ಮನೆಗೆ ನುಗ್ಗಿ ಅಲ್ಲಿ ಒಂದು ತಿಂಗಳಿದ್ದ,” ಎನ್ನುತ್ತಾರೆ ನಾಗೇಶ್. ನಾಗೇಶ್ ಶಂಕ್ರಯ್ಯ ಅವರನ್ನು ಹತ್ತಿರದಿಂದ ಬಲ್ಲ ಸ್ಥಳೀಯರು. “ಆ ನಂತರ ತನ್ನ ಅಸಲಿ ಆಟ ಶುರುವಿಟ್ಟುಕೊಂಡ. ತನಗೆ ದೇವರು ಬರ್ತಾರೆ, ತನಗೆ ದೇವಿಯ ಮಹಿಮೆ, ದೈವ ಶಕ್ತಿ ಎಂದೆಲ್ಲಾ ಸ್ವಯಂ ಘೋಷಿಸಿಕೊಂಡ,” ಎನ್ನುತ್ತಾರೆ ಅವರು.

ಅಲ್ಲಿಂದ ಆತ ತನ್ನ ಸ್ವಂತ ಊರು ಕೆಂಚನಹಳ್ಳಿಗೆ ಬಂದವ ಒಂದು ಕಡೆ ಪೂಜೆಗೆ ಸೇರಿಕೊಂಡ. ಅಲ್ಲಿ ಅದಾಗಲೇ ಹುತ್ತವೊಂದಕ್ಕೆ ಪೂಜೆ ಮಾಡುತ್ತಿದ್ದ ಕರಿಯಪ್ಪ ಎಂಬ ಅರ್ಚಕರೊಬ್ಬರಿದ್ದರು. “ಈ ಅರ್ಚಕರ ಮೇಲೆ ಹುಂಡಿ ಹಣ ಕದ್ದಿದ್ದಾರೆ ಎಂಬ ಆರೋಪ ಬರುವಂತೆ ಮಾಡಿ, ಕೊನೆಗೆ ಅವರು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆಲ್ಲಾ ಶಂಕ್ರಯ್ಯನೇ ಕಾರಣ,” ಎಂದು ಆಪಾದನೆ ಮಾಡುತ್ತಾರೆ ನಾಗೇಶ್.

ದಲಿತರ ಜಮೀನಿಗೆ ‘ಟ್ರಸ್ಟ್’ ಮೂಲಕ ಕನ್ನ:

ನಂತರ ಕರಿಯಪ್ಪ ಅವರ ಜಾಗವನ್ನು ಅಲಂಕರಿಸಿದ ಶಂಕ್ರಪ್ಪ, ತನ್ನ ‘ಸೋ ಕಾಲ್ಡ್’ ದೇವಸ್ಥಾನದ ಆಡಳಿತಕ್ಕಾಗಿ ಒಂದು ಟ್ರಸ್ಟ್ ಮಾಡಿಕೊಳ್ಳುತ್ತಾರೆ. ಈತನ ದೇವಸ್ಥಾನ ಬರುವುದು ಇದೇ ದಲಿತರ ಜಮೀನಿನಲ್ಲಿ. ದೇವಸ್ಥಾನದಲ್ಲಿ ನೆಲೆ ನಿಂತ ‘ಫಕೀರ’ ನಿಧಾನಕ್ಕೆ ಸುತ್ತ ಮುತ್ತಲಿನ ಗೌಡರ ಜಮೀನಿಗಳನ್ನು ಒಕ್ಕಲೆಬ್ಬಿಲು ಆರಂಭಿಸಿದ. ಹೀಗೆ ಒಂದಷ್ಟು ಜನರ ಜಮೀನು ಕಿತ್ತುಕೊಂಡು, ಇದೀಗ ದಲಿತರ ಬುಡಕ್ಕೆ ಬಂದಿದ್ದಾರೆ. “ಈತ ವಾಮಾಚಾರದ ತಂತ್ರ ಬಳಸಿ ಒಕ್ಕಲೆಬ್ಬಿಸುತಿದ್ದಾನೆ. ಜಮೀನು ಕೊಡಲೊಪ್ಪದ ದಲಿತರ ಕುಟುಂಬದವರಲ್ಲೇ ಪಾಲು ಕೇಳುವಂತೆ ಮಾಡಿ ಕಚ್ಚಾಡಿಸುತ್ತಿದ್ದಾನೆ. ಪುಡಿ ರೌಡಿಗಳನ್ನು ಮುಂದೆ ಬಿಟ್ಟು ಒತ್ತಡ ಹೇರುತ್ತಿದ್ದಾನೆ,” ಎನ್ನುತ್ತಾರೆ ನಾಗೇಶ್. ಈತನ ಒತ್ತಡಕ್ಕೆ ಈಗಾಗಲೇ ಎರಡು ದಲಿತ ಕುಟುಂಬಗಳು ತಾವೇ ಖಾತಾ, ಪಹಣಿ ಪತ್ರ ಮಾಡಿಕೊಟ್ಟಿದ್ದಾರೆ. ಇದೇ ರೀತಿ ರೆಕಾರ್ಡ್ಸ್ ಬರೆದು ಕೊಡಲೊಪ್ಪದ ಇನ್ನೂ ಮೂರು ಕುಟುಂಬಗಳ ಮೇಲೂ ಒತ್ತಡ ಹೇರುತ್ತಿದ್ದಾನೆ, ಎಂಬ ಮಾಹಿತಿಯನ್ನು ಅವರು ಮುಂದಿಡುತ್ತಾರೆ.

ದೂರು ದಾಖಲಿಸಲು ಮೀನಾಮೇಷ:

ಈ ಕುರಿತು ಈಗಾಗಲೇ ಹುಲಿಯೂರುದುರ್ಗ ಠಾಣೆ ಮತ್ತು ಕುಣಿಗಲ್ ಠಾಣೆಗಳಲ್ಲಿ ದೂರು ನೀಡಲಾಗಿದೆ. ಆದರೆ ‘ಎಫ್ಐಆರ್’ ದಾಖಲಿಸಿಲ್ಲ. ಇದಕ್ಕೆ ಕಾರಣ “ಇಲ್ಲಿನ ಸಬ್ ಇನ್ಸ್’ಪೆಕ್ಟರ್ ಅನಿಲ್ ಕುಮಾರ್ ಅವರನ್ನು ಕರೆಸಿಕೊಂಡು ಶಂಕ್ರಯ್ಯ ಶಾಲು-ಹಾರ ಹಾಕಿ ಹಿಂದೊಮ್ಮೆ ಸನ್ಮಾನ ಮಾಡಿದ್ದಾನೆ. ಇದೀಗ ಪಂಚಾಯಿತಿ ಮಾಡಿ ಮುಗಿಸೋಣ ಎಂದು ಎಸ್ಐ ಹೇಳುತ್ತಿದ್ದಾರೆ,” ಎನ್ನುತ್ತಾರೆ ನಾಗೇಶ್. ತಮ್ಮ ದೂರಿನ ಪ್ರತಿಯನ್ನು ಇಲ್ಲಿನ ಜನರು ಡಿವೈಎಸ್ಪಿ ಮತ್ತು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೂ ರಿಜಿಸ್ಟಾರ್ ಪೋಸ್ಟ್ ಮೂಲಕ ರವಾನಿಸಿದ್ದಾರೆ. ಆದರೆ ಈವರೆಗೆ ಯಾವ ಕ್ರಮವೂ ಕೈಗೊಂಡಿಲ್ಲ.

‘ಬರಿಗೈ ಫಕೀರ’ನಾಗಿ ಕೆಂಚನಹಳ್ಳಿಗೆ ಅಡಿ ಇಟ್ಟ ಶಂಕ್ರಯ್ಯರ ಟ್ರಸ್ಟ್ ಇವತ್ತು 100 ರಿಂದ 150 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಹೊಂದಿದೆ ಎನ್ನುತ್ತಾರೆ ಸ್ಥಳೀಯರು. ಒಂದು ಕಡೆ ಈತನ ದೌರ್ಜನ್ಯ; ಇನ್ನೊಂದು ಕಡೆ ತೋಟಿ-ತಳವಾರಿಕೆ ಮಾಡುವುದು ಬಿಟ್ಟು ಅಭಿವೃದ್ಧಿಯಾಗಲಿ ಎಂದು ಸರಕಾರ ಜಮೀನು ನೀಡಿದ ದಲಿತರ ಜಮೀನಿಗೆ ಕನ್ನ ಹಾಕುವ ಸಂಚು ಮುಂದಿವರಿದಿದೆ. ಹೀಗಾಗಿ ಕನಸಿನ ದಲಿತರ ಉದ್ದಾರ ಎಂಬುದು ಇಲ್ಲಿ ಅತಂತ್ರ ಸ್ಥಿತಿಗೆ ತಲುಪಿದೆ.

ಇದೇ ವಿಚಾರವಾಗಿ ‘ಸಮಾಚಾರ’ ಹುಲಿಯೂರು ದುರ್ಗ ವೃತ್ತ ನಿರೀಕ್ಷಕ ಬಾಳೇಗೌಡರ ಬಳಿ ಕೇಳಿದಾಗ, “ಇದು ತುಂಬಾ ಹಿಂದಿನ ಸಮಸ್ಯೆ. ನಾನು ಇಲ್ಲಿಗೆ ಬರುವುದಕ್ಕೂ ಮೊದಲಿನಿಂದಲೂ ಇದೆ. ನಾನೂ ಸಮಸ್ಯೆ ಬಗ್ಗೆ ಕೇಳಿದ್ದೇನೆ ಅಷ್ಟೇ. ನನಗೆ ಯಾವುದೇ ದೂರು ಬಂದಿಲ್ಲ. ಬಂದರೆ ಗಮನ ಹರಿಸುತ್ತೇನೆ,” ಎನ್ನುತ್ತಿದ್ದಾರೆ.

ಭೂರಹಿತರಿಗೆ ಭೂಮಿ ಕೊಡಿ ಎಂದು ‘ಊನಾ ಮಾದರಿ’ಯಲ್ಲಿ ‘ಉಡುಪಿ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದರ ಜತೆಗೆ ಹೋರಾಗಾರರು ನಮ್ಮ ದಲಿತರ ಜಮೀನನ್ನು ಮಂತ್ರವಾದಿಯ ಕೈಯಿಂದ ಉಳಿಸಿಕೊಡಬೇಕು ಎಂಬುದಷ್ಟೇ ಸ್ಥಳೀಯರಾದ ನಾಗೇಶ್ ಆಗ್ರಹ.

#ಚಲೋಉಡುಪಿ: ಸ್ವಾಭಿಮಾನಿ ಸಂಘರ್ಷ ಜಾಥಾ ಕಾರ್ಯಕ್ರಮದ ವಿವರಗಳು


4 ಅಕ್ಟೋಬರ್ 2016, ಮಂಗಳವಾರ :

ಬೆಳಗ್ಗೆ 11 : ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಾಥಾ ಉದ್ಘಾಟನೆ.
ಸಂಜೆ 5    :    ನೆಲಮಂಗಲದಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ
ರಾತ್ರಿ ವಾಸ್ತವ್ಯ ನೆಲಮಂಗಲ


5 ಅಕ್ಟೋಬರ್ 2016, ಬುಧವಾರ :

ಬೆಳಗ್ಗೆ 10: ಕುಣಿಗಲ್ ನಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ.
ಸಂಜೆ 4    : ಚನ್ನರಾಯ ಪಟ್ಟಣದಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ
ರಾತ್ರಿ ವಾಸ್ತವ್ಯ ಹೊಳೆನರಸೀಪುರ


6 ಅಕ್ಟೋಬರ್ 2016, ಗುರುವಾರ :

ಬೆಳಗ್ಗೆ 1೦: ಹೊಳೆನರಸೀಪುರದಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ.
ಸಂಜೆ 4    : ಹಾಸನದಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ
ರಾತ್ರಿ ವಾಸ್ತವ್ಯ ಬೇಲೂರು


7 ಅಕ್ಟೋಬರ್ 2016, ಶುಕ್ರವಾರ :

ಬೆಳಗ್ಗೆ 11 : ಬೇಲೂರಿನಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ.
ಸಂಜೆ 4    : ಚಿಕ್ಕಮಗಳೂರಿನಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ
ರಾತ್ರಿ ವಾಸ್ತವ್ಯ ಕೊಪ್ಪ


8 ಅಕ್ಟೋಬರ್ 2016, ಶನಿವಾರ

ಬೆಳಗ್ಗೆ 11: ಕೊಪ್ಪದಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ.
ರಾತ್ರಿ ವಾಸ್ತವ್ಯ ಉಡುಪಿಯಲ್ಲಿ


9 ಅಕ್ಟೋಬರ್ 2016, ಭಾನುವಾರ

ಬೆಳಗ್ಗೆ 11: ಉಡುಪಿಯಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ

Leave a comment

Top