An unconventional News Portal.

ಯುಪಿಯಲ್ಲಿ ಆರಂಭಗೊಂಡ ಮತದಾನ; ನಿರೀಕ್ಷಿಸಬಹುದಾ ‘ಬೆಹೆನ್‌ಜೀ’ ಆಗಮನ?

ಯುಪಿಯಲ್ಲಿ ಆರಂಭಗೊಂಡ ಮತದಾನ; ನಿರೀಕ್ಷಿಸಬಹುದಾ ‘ಬೆಹೆನ್‌ಜೀ’ ಆಗಮನ?

ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮತದಾನ ಆರಂಭವಾಗಿದೆ. ಮುಂದಿನ ಒಂದು ತಿಂಗಳ ಕಾಲ ಒಟ್ಟು 7 ಹಂತಗಳಲ್ಲಿ ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಜನ ಮತ ಚಲಾಯಿಸಲಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಕೇಂದ್ರದ ಗದ್ದುಗೆ ಏರಿದ ಬಿಜೆಪಿ ಪಕ್ಷದ ಈವರೆಗಿನ ಆಡಳಿತ ಮತ್ತು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ಜನರ ನೀಡುವ ‘ಮಧ್ಯಾಂತರ ತೀರ್ಪು’ ಇದು ಎಂದು ರಾಯ್‌ಟರ್ ಸುದ್ದಿ ಸಂಸ್ಥೆ ವಿಶ್ಲೇಷಿಸಿದೆ.

election

ಸದ್ಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಕುರಿತು ಸಾಕಷ್ಟು ಸಮೀಕ್ಷೆಗಳು ಹೊರಬಿದ್ದಿವೆ. ಇಂಡಿಯಾ ಟುಡೆ, ದಿ ವೀಕ್ ಮತ್ತು ಟೈಮ್ಸ್ ನೌ ಸಮೀಕ್ಷೆಗಳಲ್ಲಿ ಬಿಜೆಪಿಗೆ ಮುನ್ನಡೆ ಕಂಡು ಬಂದಿದ್ದರೆ, ಎಬಿಪಿ ನ್ಯೂಸ್ ಸಮೀಕ್ಷೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿಕೊಳ್ಳಲಿದೆ ಎಂದು ಹೇಳಿವೆ. ಇದರ ನಡುವೆ ಇತರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಮುನ್ನವೇ ಚುನಾವಣೆ ತಯಾರಿ ನಡೆಸಿದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೂಡ ಸ್ವತಂತ್ರವಾಗಿ ಬಹುಮತವನ್ನು ಪಡೆಯಲಿದೆ ಎಂದು ಪಕ್ಷದ ಅಭಿಮಾನಿಗಳು ವಿಶ್ವಾಸ ಹೊಂದಿದ್ದಾರೆ. ಇದಕ್ಕೆ ಅವರು ಪಕ್ಷದ ನಾಯಕಿ ಮಾಯಾವತಿ ಈ ಬಾರಿಯ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಹೆಣೆದಿರುವ ತಂತ್ರಗಾರಿಕೆ, ನಡೆಸಿರುವ ಪ್ರಚಾರ, ಸಭೆಗೆ ಸೇರಿರುವ ಅಪಾರ ಜನಸಾಗರ ಹಾಗೂ ತಳಮಟ್ಟದಲ್ಲಿ ಪಕ್ಷ ಹೊಂದಿರುವ ಹಿಡಿತಗಳನ್ನು ಮಾನದಂಡವಾಗಿ ಮುಂದಿಡುತ್ತಿದ್ದಾರೆ.

ರಾಜ್ಯದಲ್ಲಿ ಯಾದವ, ಲೋಧಿ, ಗುರ್ಜರ್, ಕಿರ್ಮಿಯಂತಹ ಹಿಂದುಳಿದ ವರ್ಗಗಳ ಮತದಾರರ ಸಂಖ್ಯೆ ಶೇ. 40ರಷ್ಟಿದೆ. ದಲಿತ ಮತದಾರರ ಸಂಖ್ಯೆ ಶೇ. 21. 1ರಷ್ಟಿದೆ. ಮೂರನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯವಿದ್ದು ಶೇ. 19. 3 ರಷ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳು ಒಟ್ಟಾಗಿ ಯಾವ ಪಕ್ಷದ ಬೆನ್ನಿಗೆ ನಿಲ್ಲುತ್ತಾರೋ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಚುನಾವಣೆಯಲ್ಲಿ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಎಸ್‌ಪಿ ಪಾಳಯದಲ್ಲಿ ಸಹಜವಾಗಿಯೇ ಆತ್ಮವಿಶ್ವಾಸ ಮನೆ ಮಾಡಿದೆ. ಅದೇ ವೇಳೆ, ದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಮೊದಲ ದಲಿತ ಮಹಿಳೆ ಕುಮಾರಿ ಮಾಯಾವತಿಯವರನ್ನು ಮುಖ್ಯವಾಹಿನಿಯ ಮಾಧ್ಯಮಗಳು ಉಪೇಕ್ಷಿಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಯಾರೂ ಈ ಮಾಯಾವತಿ?: 

ದೇಶದ ರಾಜಕೀಯ ಇತಿಹಾಸದಲ್ಲಿ ಪ್ರತ್ಯೇಕ ಅಧ್ಯಾಯದ ರೀತಿಯಲ್ಲಿ ಬೆಳೆದು ನಿಂತವರು ಮಾಯಾವತಿ ಪ್ರಭುದಾಸ್; ಪಕ್ಷದ ಕಾರ್ಯಕರ್ತರ ಪಾಲಿಗೆ ಬೆಹೆನ್‌ಜೀ (ಅಕ್ಕ). ಜನವರಿ 15, 1956ರಲ್ಲಿ ದಿಲ್ಲಿಯಲ್ಲಿ ಹುಟ್ಟಿದ ಮಾಯಾವತಿಯನ್ನು ‘ಪ್ರಜಾಪ್ರಭುತ್ವದ ವಿಸ್ಮಯ’ ಎಂದು ಬಣ್ಣಿಸಿದವರು ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾವ್. ಜಗತ್ತಿನ ಪ್ರತಿಷ್ಠಿತರು ಮತ್ತು ಶ್ರೀಮಂತರ ಪಟ್ಟಿಯನ್ನು ತಯಾರಿಸುವ ‘ಫೋರ್ಬ್ಸ್’ 2008ರಲ್ಲಿ ಜಗತ್ತಿನ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಮಾಯಾವತಿಯವರನ್ನು ಗುರುತಿಸಿತ್ತು. ‘ನ್ಯೂಸ್‌ವೀಕ್’ ಮ್ಯಾಗ್ಸೀನ್ ಇವರನ್ನು ‘ಭಾರತದ ಬರಾಕ್ ಒಬಾಮ’ ಎಂದೂ ಕರೆದಿತ್ತು. 2012ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುವ ಮೂಲಕ ತೆರೆಮರೆಗೆ ಸರಿದಿದ್ದ ಮಾಯಾವತಿ ಈಗ ಮತ್ತೆ ಅಖಾಡದ ಕೇಂದ್ರ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ಅದಕ್ಕೆ ಅವರ ಹಿಂದಿನ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಮಗಳೂ ಕಾರಣವಾಗಿವೆ.

ಅಧಿಕಾರಿಗಳಿಗೆ ಸಿಂಹಸ್ವಪ್ನ:

ಮಾಯಾವತಿ ಈವರೆಗೆ ಒಟ್ಟು ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ಹೊಣೆಯನ್ನು ನಿಭಾಯಿಸಿದ್ದಾರೆ. 1995, 1997, 2002- 03ರಲ್ಲಿ ಕಡಿಮೆ ಅವಧಿಗೆ ಅವರು ಉನ್ನತ ಸ್ಥಾನದಲ್ಲಿ ಇದ್ದರು. 2007ರಿಂದ 2012ರ ಅವಧಿಯಲ್ಲಿ ಮಾತ್ರ ಸಂಪೂರ್ಣ ಐದು ವರ್ಷ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಪ್ರತಿ ಬಾರಿ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಒಂದಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ. 2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 127 ಅಧಿಕಾರಿಗಳನ್ನು ಅಮಾನತ್ತು ಮಾಡುವ ಮೂಲಕ ದೊಡ್ಡಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದರು.

2002–03ರ ವೇಳೆಯಲ್ಲಿ ಮೂರನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಐಎಎಸ್, ಐಪಿಎಸ್ ಶ್ರೇಣಿಗಳನ್ನೂ ಸೇರಿದಂತೆ ನಾನಾ ಹಂತದ 900 ಅಧಿಕಾರಿಗಳ ಸ್ಥಾನ ಪಲ್ಲಟವಾಗಿತ್ತು. ಅಭಿವೃದ್ಧಿ ಕೆಲಸಕ್ಕೆ ಸಂಬಂಧಪಟ್ಟಂತೆ ಒಬ್ಬ ಡಿಸಿ ಸೇರಿದಂತೆ ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದರು. ಗೌತಮ ಬುದ್ಧ ವಿಶ್ವವಿದ್ಯಾನಿಲಯ ಸ್ಥಾಪನೆ ವಿಚಾರದಲ್ಲಿ ಮೂವರು ಅಧಿಕಾರಿಗಳ ತಲೆದಂಡವಾಗಿತ್ತು. ಇದರ ಜತೆಗೆ ಪೊಲೀಸ್ ಇಲಾಖೆಯ 6 ಹಿರಿಯ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗಿತ್ತು.

ಅಭಿವೃದ್ಧಿಗೆ ಮಣೆ:

ದೊಡ್ಡ ರಾಜ್ಯಗಳ ಅಭಿವೃದ್ಧಿ ಕಷ್ಟ ಎನ್ನುತ್ತಾರೆ ರಾಜಕೀಯ ಶಾಸ್ತ್ರಜ್ಞರು. ಇದಕ್ಕಾಗಿಯೇ ಬಿಹಾರದಂತಹ ರಾಜ್ಯಗಳನ್ನು ವಿಭಾಗಿಸಲಾಯಿತು. ಇತ್ತೀಚೆಗೆ ಆಂಧ್ರ ಪ್ರದೇಶ ಕೂಡ ಎರಡು ಹೋಳಾಯಿತು. ಸದ್ಯ ಉಳಿದುಕೊಂಡಿರುವ ದೊಡ್ಡ ರಾಜ್ಯ ಉತ್ತರ ಪ್ರವೇಶ. ಮಾಯಾವತಿ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ರಾಜ್ಯಕ್ಕಾಗಿ ಮಾಡಿದ್ದಾರೆ. ವಿಶೇಷವಾಗಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಇವರು ಒತ್ತು  ನೀಡಿದ್ದು ಈ ಸಮಯದಲ್ಲಿ ಕೈಗೊಂಡ ಯೋಜನೆಗಳಿಂದ ಸ್ಪಷ್ಟವಾಗುತ್ತದೆ.

ಹೊಸ ಜಿಲ್ಲೆಗಳನ್ನು ನಿರ್ಮಿಸುವುದರ ಜತೆಗೆ, ಯಮುನಾ ಎಕ್ಸ್‌ಪ್ರೆಸ್ ವೇ, ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇ ಯೋಜನೆಗಳು ಇವರ ಸಮಯದಲ್ಲಿ ಕಾರ್ಯರೂಪಕ್ಕೆ ಬಂದವು. ಗಂಗಾ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಪೂರ್ವ ದಿಕ್ಕಿನ ಅಂಚಿನ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿದರು.

ದೇಶದ ಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರವಾದ ಮಾಯಾವತಿ ತಮ್ಮ ಅವಧಿಯಲ್ಲಿ ದಲಿತ ಪ್ರಜ್ಞೆಗಳನ್ನು ಉಳಿಸುವುದಕ್ಕಾಗಿಯೇ ಒಂದಷ್ಟು ಯೋಜನೆಗಳನ್ನು ತಂದಿದ್ದರು. ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಿದ ಕಾನ್ಶಿರಾಮ್ ಗ್ರೀನ್ ಇಕೋ ಗಾರ್ಡನ್, ರಾಷ್ಟ್ರೀಯ ದಲಿತ ಪ್ರೇರಣಾ ಸ್ಥಳ ಮತ್ತು ಹಸಿರು ಉದ್ಯಾನವನ, ಅಂಬೇಡ್ಕರ್ ಸಾಮಾಜಿಕ ಪರಿವರ್ತನ ಪ್ರತೀಕ ಸ್ಥಳಗಳು ಇವತ್ತಿಗೆ ಉತ್ತರ ಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಾಗಿ ಬದಲಾಗಿವೆ.

ಭ್ರಷ್ಟಾಚಾರದ ಆರೋಪಗಳು: 

ವಿಶೇಷ ಅಂದರೆ ಮಾಯಾವತಿ ನಾಲ್ಕನೇ ಬಾರಿ ಅಧಿಕಾರ ಸ್ವೀಕರಿಸುತ್ತಲೇ ಹಿಂದಿನ ಸರಕಾರದಲ್ಲಿ ನಡೆದ ಪೊಲೀಸ್ ಇಲಾಖೆಯ ನೇಮಕಾತಿ ಹಗರಣದ ವಿರುದ್ಧ ತನಿಖೆಗೆ ಆದೇಶಿಸಿದ್ದರು. ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆಯನ್ನು ಬಿತ್ತಿದ್ದರು. ಆದರೆ, ಅವರ ಆಡಳಿತ ಕೊನೆಗೊಳ್ಳುವ ವೇಳೆ ಅವರ ಮೇಲೆಯೇ ಸಾಕಷ್ಟು ಆರೋಪಗಳು ಕೇಳಿಬಂದವು. ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಲಕ್ಷಾಂತರ ರೂಪಾಗಿ ದೇಣಿಗೆ ಪಡೆದದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಪಕ್ಷದ ಚಿನ್ಹೆಗಳ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದು ಕೂಡ ಚರ್ಚೆಗೆ ಗ್ರಾಸವಾಯಿತು. ಇವತ್ತಿಗೂ ಬಿಎಸ್‌ಪಿ ಪಕ್ಷ ತನ್ನ ನಿಧಿಯಲ್ಲಿ ಶೇ. 100 ರಷ್ಟು ಹಣ ಬಂದಿರುವುದು ಅನಾಮಧೇಯ ಮೂಲಗಳಿಂದ ಎಂದು ಲೆಕ್ಕ ನೀಡುತ್ತಿದೆ. ಇಂತಹ ಆರೋಪಗಳೇ ಕಳೆದ ಬಾರಿಯ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಹೊಡೆತ ಕೊಟ್ಟಿದ್ದವು.

ಈ ಬಾರಿ ಸದ್ದಿಲ್ಲದೆ ಮಾಯಾವತಿ ಅಖಾಡಕ್ಕೆ ಇಳಿದಿದ್ದಾರೆ. ದೊಡ್ಡ ಮಟ್ಟದಲ್ಲಿ ರ್ಯಾಲಿಗಳನ್ನು ಮಾಡಿದ್ದಾರೆ. ಜನರಿಗೆ ಹಳೆಯ ದಿನಗಳನ್ನು ಮರೆಯುವಂತಹ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಆದರೆ ಇದ್ಯಾವುದೂ ಮುಖ್ಯವಾಹಿನಿಯ ಮಾಧ್ಯಮಗಳು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಅವರ ಪಕ್ಷದ, ಅಭಿಮಾನಿಗಳ ಆರೋಪ. ಇವರ ಆರೋಪದಲ್ಲಿ ನಿಜವಿದ್ದರೆ ಮಾಯಾವತಿ ಮಾ. 11ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಸಮೀಕ್ಷೆಗಳನ್ನು ಸುಳ್ಳಾಗಿಸಬೇಕು. ಅದಕ್ಕಾಗಿ ಇನ್ನೊಂದು ತಿಂಗಳು ಕಾಯಬೇಕಿದೆ.

Top