An unconventional News Portal.

‘ಪಕ್ಷ’ಪಾತಿ ಮಾಧ್ಯಮಗಳ ಸುಳ್ಳು ವರದಿಗಳು ಹಾಗೂ ಅಸ್ಸಾಂ ಚುನಾವಣೆ ಫಲಿತಾಂಶ ಕಲಿಸಿದ ಪಾಠಗಳು!

‘ಪಕ್ಷ’ಪಾತಿ ಮಾಧ್ಯಮಗಳ ಸುಳ್ಳು ವರದಿಗಳು ಹಾಗೂ ಅಸ್ಸಾಂ ಚುನಾವಣೆ ಫಲಿತಾಂಶ ಕಲಿಸಿದ ಪಾಠಗಳು!

ಚುನಾವಣೆಗಳನ್ನು ಎದುರಿಸಲು, ಗೆದ್ದು ಜನಪ್ರತಿನಿಧಿಯಾಗಲು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕಾದ ಅರ್ಹತೆಗಳ ಜತೆಗೆ ಕನಿಷ್ಟ ಮೂರು ‘ಎಂ’ಗಳ ಅಗತ್ಯವಿದೆ ಎಂಬ ಮಾತಿದೆ.

‘ಮನಿ’ (ಹಣ), ‘ಮಝಲ್’ (ತೋಳ್ಭಲ) ಮತ್ತು ‘ಮೀಡಿಯಾ’ (ಮಾಧ್ಯಮ)…!

Assamಪ್ರತಿ ಚುನಾವಣೆಗಳು ನಡೆದಾಗಲೂ ಪದೇ ಪದೇ ಈ ಮೂರು ‘ಎಂ’ಗಳ ಸೂತ್ರ ಮುನ್ನಲೆಯಲ್ಲಿ ಇರುವುದು ಕಂಡುಬರುತ್ತದೆ. ಸದ್ಯ ಮುಗಿದು ಹೋದ ವಿಧಾನಸಭಾ ಚುನಾವಣೆಗಳ ಪೈಕಿ ಅಸ್ಸಾಂ ಇದಕ್ಕೊಂದು ಹೊಸ ಉದಾಹರಣೆ. ಇಲ್ಲಿ ಹೇಗೆ, ಮಾಧ್ಯಮಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮಿಷ್ಟಕ್ಕೆ ಬಳಸಿಕೊಂಡವು ಮತ್ತು ಹೇಗೆ, ಮಾಧ್ಯಮಗಳೂ ಒಂದೊಂದು ರಾಜಕೀಯ ಪಕ್ಷದ ಜತೆ ನಿಂತುಕೊಂಡು, ತಾವೂ ಪ್ರಚಾರಕ್ಕೆ ಇಳಿದವು, ಇವುಗಳ ನಡುವೆ ವಸ್ತುನಿಷ್ಠವಾಗಿ ವರದಿ ಮಾಡುತ್ತಿದ್ದ ಮಾಧ್ಯಮಗಳನ್ನು ಜನ ನಂಬದೆ ಹೋದರು ಮತ್ತು ಅಖಾಡಕ್ಕಿಳಿದ ರಾಷ್ಟ್ರೀಯ ವಾಹಿನಿಗಳು ಅಸ್ಸಾಂ ಚುನಾವಣೆಯನ್ನು ಅರಿಯುವಲ್ಲಿ ವಿಫಲವಾದವು ಎಂದು ‘ದಿ ಹೂಟ್ ಡಾಟ್ ಆರ್ಗ್’ ವಿಸ್ತೃತವಾದ ವರದಿಯೊಂದನ್ನು ಪ್ರಕಟಿಸಿದೆ. ಇಲ್ಲಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮಾಧ್ಯಮಗಳ ಸಂಭವನೀಯ ಚುನಾವಣಾ ವರದಿಗಾರಿಕೆಯ ಮುನ್ಸೂಚನೆಯೂ ಇದೆ.

ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಬಿಜೆಪಿ ಪಾಲಿಗೆ ಹೊಸ ಇತಿಹಾಸ ದಾಖಲಿಸಲು ನೆರವಾಯಿತು. ಈಶಾನ್ಯ ಭಾರತದ ಹೆಬ್ಬಾಗಿಲು ಎಂದು ಕರೆಯುವ ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದದ್ದು ಪ್ರಮುಖ ಬೆಳವಣಿಗೆ. ಇಲ್ಲಿನ ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳು ತಳೆದ ಕೆಲವು ನಿಲುವುಗಳು, ಅವುಗಳ ಹಿಂದಿದ್ದ ರಾಜಕೀಯ ಅಜೆಂಡಾಗಳು ಈಗ ಚರ್ಚೆಯ ವಸ್ತುವಾಗಿವೆ.

assam-media-talkಅಸ್ಸಾಂನಲ್ಲಿ ಹೆಚ್ಚಿನ ಮಾಧ್ಯಮಗಳು ರಾಜಕಾರಣಿಗಳ ಒಡೆತನಕ್ಕೆ ಸೇರಿವೆ. ಇಲ್ಲವೇ ಪಕ್ಷಗಳ ಜತೆ ನೇರಾ ಸಂಬಂಧವನ್ನು ಇಟ್ಟುಕೊಂಡಿರುವ ಉದ್ಯಮಿಗಳ ಸ್ವತ್ತಾಗಿವೆ. ಉದಾಹರಣೆಗೆ ರಾಜ್ಯದ ಮಾಜಿ ಕೃಷಿ ಸಚಿವ ರಖಿಬುಲ್ ಹಸನ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ. ಇವರು ‘ಅಸ್ಸಾಂ ಟಾಕ್ಸ್’ ಎಂಬ ಸ್ಥಳೀಯ ಸುದ್ದಿ ವಾಹಿನಿ ಮತ್ತು ‘ಜನ್ ಸಾಧಾರಣ್’ ಎನ್ನುವ ಪತ್ರಿಕೆಯ ಮಾಲೀಕರು ಕೂಡ. ಇವುಗಳು ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸೋಲಲಿವೆ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಇದಕ್ಕೆ ಯಾವುದೇ ಗಟ್ಟಿ ಕಾರಣಗಳಾಗಲೀ, ಅಂಕಿ ಅಂಶಗಳಾಗಲೀ ಇರಲಿಲ್ಲ. ಈ ಮಾಧ್ಯಮಗಳ ಅತಿರೇಕಗಳು ಯಾವ ಪರಿ ಇದ್ದವು ಅಂದರೆ, ಮತದಾನೋತ್ತರ ಸಮೀಕ್ಷೆಗಳಿಗೆ ಎದುರುತ್ತರ ನೀಡಲು ತಮ್ಮದೇ ಪತ್ರಕರ್ತರ ಮೂಲಕ ‘ಗ್ರೌಂಡ್ ರಿಪೋರ್ಟ್’ ಎಂದು ಹೇಳಿ ಸುಳ್ಳು ವರದಿ ಬರೆದು ಅಸ್ಸಾಂ ಜನರ ಮನಸ್ಥಿತಿ ಕಾಂಗ್ರೆಸ್ ಪರವಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡಿದವು.

ಬಿಜೆಪಿ ನಾಯಕ ಹೇಮಂತ ಬಿಸ್ವಾಸ್ ಪತ್ನಿ ಒಡೆತನದ ‘ನಿಯಮಿಯ ಬಾರ್ತಾ’ ಕಾಂಗ್ರೆಸ್ ವಿರೋಧಿ ವರದಿಗಳತ್ತ ‘ಫೋಕಸ್’ ಮಾಡಿತ್ತು. ಚುನಾವಣೆಗೆ ಎರಡು ತಿಂಗಳಿದೆ ಎಂದಾಗ ಬಿಜೆಪಿ ಪರವಾದ ವಾತಾವರಣ ನಿರ್ಮಿಸುವ ಸರಣಿ ವರದಿಗಳು ಈ ವಾಹಿನಿಯ ಬಹುತೇಕ ಸಮಯವನ್ನು ತಿಂದು ಹಾಕಿದ್ದವು.

ಆದರೆ, ಇವುಗಳನ್ನು ಹೊರತುಪಡಿಸಿ ವಸ್ತು ನಿಷ್ಠವಾಗಿ ವರದಿ ಮಾಡಿದ ಮಾಧ್ಯಮ ಸಂಸ್ಥೆಗಳೂ ಅಲ್ಲಿದ್ದವು. ಅವುಗಳು ನೀಡಿದ ಅಂಕಿ ಅಂಶಗಳು ಮತ್ತು ವಿಶ್ಲೇಷಣೆಗಳಲ್ಲಿ ನೈಜತೆಗಳಿತ್ತು. ಪ್ರಾಗ್ ನ್ಯೂಸ್, ಡಿವೈ 365 ವಿಶ್ವಾಸಾರ್ಹ ಸುದ್ದಿಗಳನ್ನು ವರದಿ ಮಾಡುತ್ತಿದ್ದರೂ, ಒಂದು ಪಕ್ಷದ ಪರವಾಗಿ ಸುದ್ದಿ ಭಿತ್ತರಿಸುತ್ತಿದ್ದವರ ನಡುವೆ ಜನ ಅವುಗಳನ್ನು ನಂಬುವ ಸ್ಥಿತಿ ಇರಲಿಲ್ಲ. ಪಕ್ಷಗಳ ಮುಖವಾಣಿಗಳಂತೆ ಕೆಲಸ ಮಾಡುತ್ತಿದ್ದ ಮಾಧ್ಯಮಗಳ ಅಬ್ಬರದ ಮುಂದೆ ಅವು ಮಂಕಾಗಿದ್ದವು.

assam-media-2ಇನ್ನೊಂದು ಕಡೆ ಅಸ್ಸಾಂನ ಹಲವಾರು ದೈನಿಕಗಳು ಎಐಯುಡಿಎಫ್’ನ ಮೌಲಾನಾ ಬದ್ರುದ್ದೀನ್ ಅಜ್ಮಲ್ ಸ್ವ ಕ್ಷೇತ್ರದಲ್ಲೇ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ ಎಂದು ಬರೆದಿದ್ದವು. ಆದರೆ ಹೊರಗಿನಿಂದ ಬಂದ ರಾಷ್ಟ್ರೀಯ ಮಾಧ್ಯಮಗಳು ಸ್ಥಳೀಯರ ಮನಸ್ಥಿತಿ ಅರಿಯುವಲ್ಲಿ ಸೋತು ಹೋದವು. ತಮ್ಮ ಎಂದಿನ ಅದೇ ಹಳೇ ಜಾತಿ ಸಮೀಕರಣ, ಬಾಂಗ್ಲಾದೇಶಿ ವಲಸಿಗರು ಅಂತೆಲ್ಲಾ ತಮ್ಮದೇ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಅಜ್ಮಲ್, ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಜನರಿಗೆ ನಂಬಿಸಲು ಪ್ರಯತ್ನಿಸಿದವು. ಆದರೆ ವಾಸ್ತವ ಭಿನ್ನವಾಗಿತ್ತು. ಕೆಲವು ನ್ಯೂಸ್ ಪೋರ್ಟಲ್ಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಸರ್ಕಾರ ರಚಿಸಿದಂತೆ ಇಲ್ಲೂ ಕೇಸರಿ ಪಕ್ಷ, ಎಐಯುಡಿಎಫ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂದು ಬರೆದವು. ಚುನಾವಣೆ ಫಲಿತಾಂಶ ಬಂದಾಗ ಅಸ್ಸಾಂ ಚುನಾವಣಾ ವರದಿ ಮಾಡಿದ ಹೆಚ್ಚಿನ ಮಾಧ್ಯಮಗಳ ಮಾಹಿತಿಗೂ, ಜನರ ಮೂಲ ತೀರ್ಮಾನಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿತ್ತು.

ಈ ಚುನಾವಣೆ ಹಲವರಿಗೆ ಹಲವು ಪಾಠಗಳನ್ನು ಹೇಳಿಕೊಟ್ಟಿದೆ. ಒಂದು, ಎಲ್ಲಾ ರಾಜ್ಯಗಳಲ್ಲಿ ಒಂದೇ ರೀತಿಯ ಸಮೀಕರಣಗಳು ಕೆಲಸ ಮಾಡುವುದಿಲ್ಲ ಎಂಬುದು ರಾಷ್ಟ್ರೀಯ ಮಾಧ್ಯಮಗಳ ಪಾಲಿನ ನೀತಿ ಪಾಠ. ಪಕ್ಷಗಳ ಪರವಾಗಿರುವ ಮಾಧ್ಯಮಗಳನ್ನು ಕನಿಷ್ಠ ಚುನಾವಣಾ ಸಮಯದಲ್ಲಾದರೂ ನಂಬಬಾರದು ಎಂಬುದು ಜನರ ಪಾಲಿಗೆ ಎರಡನೇ ಪಾಠ.

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ಕಾರಣಗಳಿಗಾಗಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಪ್ರಮುಖವಾದದ್ದು. ಜತೆಗೆ ಸ್ಥಳೀಯ ಪಕ್ಷ ಜೆಡಿಎಸ್ ಪಾಲಿಗೂ ಇದು ಅಳಿವು ಮತ್ತು ಉಳಿವಿನ ಪ್ರಶ್ನೆ. ಈಗಾಗಲೇ ಕರ್ನಾಟಕದ ಬಹುತೇಕ ಮಾಧ್ಯಮಗಳಲ್ಲಿ ಎಲ್ಲಾ ಪಕ್ಷಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಹೂಡಿಕೆ ಆಗಿದೆ, ಆಗುತ್ತಿದೆ. ಇಂತಹ ಸಮಯದಲ್ಲಿ ಸಂಭವನೀಯ ಚುನಾವಣಾ ವರದಿಗಳನ್ನು ನಾವು ಅಸ್ಸಾಂ ಜತೆ ಹೋಲಿಸಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ!

ಕೃಪೆ: ದಿ ಹೂಟ್

Leave a comment

Top