An unconventional News Portal.

ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

ಏಷಿಯಾ ಖಂಡದ ದೇಶಗಳ ಪೈಕಿ ‘ಭ್ರಷ್ಟಾಚಾರದ ದರ’ ಅತ್ಯಂತ ಹೆಚ್ಚಿರುವುದು ಭಾರತದಲ್ಲಿ ಎನ್ನುತ್ತಿದೆ ‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್’ ಮಂಗಳವಾರ ಬ್ಯಾಂಕಾಕ್‌ನಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ.

ಕೆಲವು ಆತಂಕಕಾರಿ ಮಾಹಿತಿ ಒಳಗೊಂಡಿರುವ ಸಮೀಕ್ಷಾ ವರದಿಯಲ್ಲಿ, ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಅನಿವಾರ್ಯವಾಗಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಬಯಲಾಗಿದೆ. ಭಾರತದಲ್ಲಿ ಶೇ. 69ರಷ್ಟು ಜನ ಲಂಚ ನೀಡುತ್ತಿದ್ದರೆ, ನಂತರ ಸ್ಥಾನದಲ್ಲಿ ವಿಯಟ್ನಾಂನಲ್ಲಿ ಶೇ. 65ರಷ್ಟು ಮಂದಿ ಕಳೆದ 12 ತಿಂಗಳ ಅಂತರದಲ್ಲಿ ಲಂಚ ನೀಡಿದ್ದಾರೆ.

ನೆರೆಯ ಪಾಕಿಸ್ತಾನದಲ್ಲಿ ಭಾರತಕ್ಕೆ ಹೋಲಿಸಿದರೆ ಶೇ. 40ರಷ್ಟು  ಭ್ರಷ್ಟಾಚಾರ ನಡೆಯುತ್ತಿದೆ. ಹಾಗೆಯೇ, ಏಷಿಯಾ ಖಂಡದಲ್ಲಿ ಕಮ್ಯುನಿಸ್ಟ್ ಆಡಳಿತ ಇರುವ ಚೈನಾದಲ್ಲಿ ಶೇ. 26ರಷ್ಟು, ದಕ್ಷಿಣ ಕೋರಿಯಾದಲ್ಲಿ ಶೇ. 3ರಷ್ಟು ಮತ್ತು  ಜಪಾನ್‌ನಲ್ಲಿ ಅತ್ಯಂತ ಕಡಿಮೆ ಶೇ. 0.2ರಷ್ಟು ಭ್ರಷ್ಟಾಚಾರದ ಪ್ರಮಾಣ ಇದೆ ಎಂದು ವರದಿ ಹೇಳುತ್ತಿದೆ.

ವರದಿಗಾಗಿ 16 ದೇಶಗಳಿಂದ ಸುಮಾರು 20 ಸಾವಿರ ಜನರನ್ನು ಮಾತನಾಡಿಸಲಾಗಿತ್ತು. ಸಮೀಕ್ಷೆಯ ಭಾಗವಾಗಿ ಜನರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಲಂಚ ನೀಡುವ ವಿಧಾನ, ನಿಯಮಿತವಾಗಿ ಲಂಚ ನೀಡಲಾಗುತ್ತಿದೆಯೇ, ಯಾವ ಯಾವ ಸೇವೆಗಳಿಗಾಗಿ ಲಂಚವನ್ನು ನೀಡಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಜನ ಉತ್ತರಿಸಿದ್ದರು.

ಪೊಲೀಸ್ ವ್ಯವಸ್ಥೆ ಅತಿ ಹೆಚ್ಚು ಭ್ರಷ್ಟಾಚಾರ ನಡೆಸುತ್ತಿದ್ದು ಶೇ. 38ರಷ್ಟು ಜನ ಲಂಚ ನೀಡಿದ್ದಾಗಿ ಸಮೀಕ್ಷೆ ವೇಳೆ ತಿಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಬಡ ಜನರು ಪೊಲೀಸರಿಗೆ ಲಂಚ ನೀಡಿದ್ದು ಕಂಡು ಬಂದಿದೆ. ಉಳಿದಂತೆ ಆರೋಗ್ಯ ಮತ್ತು ಶಿಕ್ಷಣದ ಸೇವೆಗಳಿಗಾಗಿ ಕಳೆದ 12 ತಿಂಗಳ ಅಂತರದಲ್ಲಿ ಜನ ಲಂಚ ನೀಡಿದ್ದಾರೆ.

“ಲಂಚ ಎಂಬುದು ಸಣ್ಣ ಅಪರಾಧ ಏನಲ್ಲ. ಭ್ರಷ್ಟಾಚಾರದಿಂದ ಹಲವರು ಊಟವನ್ನು ಕಿತ್ತುಕೊಳ್ಳಲಾಗುತ್ತಿದೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಕೈಗೆಟುಕದಂತಾಗಿವೆ. ಅದು ಜನರನ್ನು ನಿಧಾನವಾಗಿ ಕೊಲ್ಲುತ್ತಿದೆ. ಈಗಲಾದರೂ ಸರಕಾರಗಳು ಭ್ರಷ್ಟಾಚಾರದ ವಿರುದ್ಧ ಬಾಯಿ ಮಾತಿನ ಹೇಳಿಕೆಗಳನ್ನು ಪಕ್ಕಕ್ಕಿಟ್ಟು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ,” ಎಂದು ಟ್ರಾನ್ಸ್‌ಪೆರೆನ್ಸಿ ಇಂಟರ್‌ನ್ಯಾಷನಲ್ ಅಧ್ಯಕ್ಷ ಜೋಸ್ ಉಗಾಝ್ ವರದಿ ಬಿಡುಗಡೆ ವೇಳೆ ಕರೆ ನೀಡಿದ್ದಾರೆ.

 

 

Top