An unconventional News Portal.

ಹಚ್ಚೆ ಬಿಡಿಸಲು ಕೃತಕ ಕೈ: ವಿಜ್ಞಾನ ಮತ್ತು ಕಲೆಯ ಸಂಕರದ ಫಲ ಇದು!

ಹಚ್ಚೆ ಬಿಡಿಸಲು ಕೃತಕ ಕೈ: ವಿಜ್ಞಾನ ಮತ್ತು ಕಲೆಯ ಸಂಕರದ ಫಲ ಇದು!

‘ಹಚ್ಚೆ’ ಎಂದರೆ ನಿಮಗೆ ಹಳೆಯದೆಲ್ಲಾ ನೆನಪಾಗಬಹುದು. ಆಗ ಹಳ್ಳಿ ಹಳ್ಳಿಗೆ, ಮನೆ ಮನೆಗೆ ಬಗಲಿಗೊಂದು ಬಟ್ಟೆಯ ಚೀಲವನ್ನು ನೇತು ಹಾಕಿಕೊಂಡು ಬರುತ್ತಿದ್ದ ಕಲಾಕಾರರು ನಮ್ಮ ಹಿರಿಯರ ಚರ್ಮದ ಮೇಲೆ ಚಿತ್ರವನ್ನು ಬಿಡಿಸಿದ್ದನ್ನು ನೀವು ನೋಡಿರಲೂ ಸಾಕು. ಇದೇ ಈಗ ಆಧುನಿಕ ಮಾರುಕಟ್ಟೆಯಲ್ಲಿ ಟ್ಯಾಟೂ ಎಂದು ಕರೆಸಿಕೊಳ್ಳುತ್ತಿದೆ. ಇವತ್ತಿಗೆ ಹಚ್ಚೆ ಹಾಕುವ ಪ್ರಕ್ರಿಯೆ ಹಿಂದಿಗಿಂತಲೂ ಅಪ್ ಡೇಟ್ ಆಗಿದೆ. ಹಚ್ಚೆ ಹಾಕಿಸಿಕೊಳ್ಳುವುದು ಫ್ಯಾಷನ್ ಅನ್ನಿಸಿಕೊಂಡಿದೆ. ಮಾನಸಿಕ ಹಿಂಸೆಯಿಂದ ದೂರ ಆಗಲು ಟ್ಯಾಟೂ ನೆರವಾಗುತ್ತದೆ ಎಂಬ ನಂಬಿಕೆಗಳಿವೆ.

ಅದೇನೆ ಇರಲಿ, ಇಲ್ಲಿ ನಾವು ಇವತ್ತು ನಿಮಗೆ ಹೇಳಲು ಹೊರಟಿದ್ದು, ಜಗತ್ತಿನ ವಿಭಿನ್ನ ಟ್ಯಾಟೂ ಕಲಾಕಾರನೊಬ್ಬನ ಬಗ್ಗೆ. ಈತ ದುರಂತವೊಂದರಲ್ಲಿ ತನ್ನ ಬಲಗೈ ಕಳೆದುಕೊಂಡಿದ್ದ. ಆದರೆ, ಇವತ್ತು ಆತನ ದೈಹಿಕ ನ್ಯೂನತೆ ಆತನ ಕೆಲಸಕ್ಕೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಇದಕ್ಕೆ ನೆರವಾಗಿದ್ದು ಮತ್ತದೇ ವಿಜ್ಞಾನದ ಶೋಧನೆಗಳು.

tatto-artist-3

ಫ್ರಾನ್ಸ್ ದೇಶದ ಲೈಯೊನ್ ಎಂಬಾತನ ಬಲಗೈ ಕಳೆದುಹೋದ ಸಮಯದಲ್ಲಿ ಆತನಿಗೆ ಕೃತಕ ಕೈಯೊಂದು ಅಳವಡಿಸಲಾಗಿತ್ತು. ಅದನ್ನು ಕೆಲವು ವರ್ಷಗಳ ಹಿಂದೆ, ಅದೇ ದೇಶದ ಮತ್ತೊಬ್ಬ ಕಲಾಕಾರ ಜೆಎಲ್ ಗೋನ್ಜಲ್ ಎಂಬಾತ ಸೃಷ್ಟಿಸಿದ ಕೃತಕ ಕೈಗೆ ಬದಲಿಸಲಾಯಿತು. ಗೋಜ್ಜಲ್ ಸೃಷ್ಟಿಸಿದ ಕೃತಕ ಕೈನಲ್ಲಿ ಟ್ಯಾಟೂ ಹಾಕುವ ವಿಶೇಷ ಅವಕಾಶವೊಂದನ್ನು ನೀಡಲಾಯಿತು. ಇದರಿಂದಾಗಿ ಲೈಯೋನ್ ತನ್ನ ದೈಹಿಕ ನ್ಯೂನತೆ ಮೀರಿ, ಸ್ವಂತಕ್ಕೊಂದು ಉದ್ಯಮ ನಡೆಸುವಂತಾಗಿದ್ದಾನೆ. ಈತ ಹಾಕುತ್ತಿರುವ ಟ್ಯಾಟೂಗಳು ದಿನದಿಂದ ದಿನಕ್ಕೆ ಜನರ ಗಮನ ಸೆಳೆಯುತ್ತಿವೆ.

ಅವು ಸಾಮಾನ್ಯ ಟ್ಯಾಟೂ ಆರ್ಟಿಸ್ಟ್ಗಳು ಬಿಡಿಸುವ ಚಿತ್ರಗಳಿಗಿಂತ ಗುಣಮಟ್ಟದ ರಚನೆಗಳಾಗಿ ಮೂಡಿಬರುತ್ತಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣ. ವಿಜ್ಞಾನ ಮತ್ತು ಕಲಾತ್ಮಕತೆ ಒಂದಾದರೆ, ಏನೆಲ್ಲಾ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು, ಮತ್ತದು ಜನರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಈ ಕೃತಕ ಟ್ಯಾಟೂ ಕೈ ಸಾಕ್ಷಿ.

 

Top