An unconventional News Portal.

Update: ಜೈನ್ ಮಾಲೀಕರ ‘ಚಿನ್ನದ ಮೊಟ್ಟೆ ಕೋಳಿ’; ಅರ್ನಾಬ್ ‘IS BACK’!

Update: ಜೈನ್ ಮಾಲೀಕರ ‘ಚಿನ್ನದ ಮೊಟ್ಟೆ ಕೋಳಿ’; ಅರ್ನಾಬ್ ‘IS BACK’!

ಭಾರತದ ವಿದ್ಯುನ್ಮಾನ ಮಾಧ್ಯಮದ ಚಹರೆಯನ್ನು ಕಳೆದ ಒಂದು ದಶಕಗಳ ಕಾಲ ತನಗೆ ಬೇಕಾದಂತೆ ಬದಲಿಸಿಕೊಂಡಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ‘ನ್ಯೂಸ್ ಅವರ್’ ಸ್ಟುಡಿಯೋದಿಂದ ಹೊರ ಬಂದಿದ್ದಾರೆ. ಕ್ಷಮಿಸಿ, ‘ಟೈಮ್ಸ್ ನೌ’ ವಾಹಿನಿಯ ಸಂಪಾದಕ ಸ್ಥಾನದಿಂದ ಮಾತ್ರ. ಬದಲಿಗೆ ಅವರು ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಇದಕ್ಕೆ ಪೂರಕ ಎಂಬಂತೆ, ಅರ್ನಾಬ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂದರ್ಶನದ ಮೊದಲ ಅತಿಥಿ ಮರಳಿ ಸ್ವಾಗತ ಕೋರಿಯೇ ಮಾತನ್ನು ಶುರು ಮಾಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ‘ಜೈಲ್ ಬ್ರೇಕ್’ಗಳ ಬಗ್ಗೆ ದೇಶದ ಸಾಕ್ಷಿಯಂತೆ ಭಾಷಣ ಶುರುವಾಗಿದೆ.

ಅರ್ನಾಬ್ ನಾಪತ್ತೆ ಸುತ್ತ ಕಳೆದ ಕೆಲವು ದಿನಗಳಿಂದ ಎದ್ದಿದ್ದ ಗಾಳಿ ಸುದ್ದಿಗಳಿಗೆ ಮಂಗಳವಾರ ಸಂಜೆ ಸಿಕ್ಕಿತ್ತು. ಅರ್ನಾಬ್ ‘ಟೈಮ್ಸ್ ನೌ’ ಸುದ್ದಿವಾಹಿನಿಯ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಒಂದು ದಶಕದ ಅಂತರದಲ್ಲಿ ದೇಶ ಕಂಡಿದ್ದ ವಿಭಿನ್ನ ಪತ್ರಕರ್ತನೊಬ್ಬ ಕೆಲವು ದಿನಗಳ ಮಟ್ಟಿಗಾದರೂ ತೆರೆಮರೆಗೆ ಸರಿಯುವುದು ಖಚಿತವಾಗಿದೆ.

ಅರ್ನಾಬ್ ಗೋಸ್ವಾಮಿ, ವಾಹಿನಿಯ ಸಂಪಾದಕೀಯ ಸಭೆಯಲ್ಲಿಯೇ ತಮ್ಮ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಜತೆಗೆ, ತಾವೇ ಹೊಸ ಸಾಹಸ ಮಾಡುವುದಾಗಿಯೂ ತಿಳಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಜತೆಗೆ, ಈಗಾಗಲೇ ಮಾಧ್ಯಮ ಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜಕಾರಣಿ, ಉದ್ಯಮಿಯೊಬ್ಬರ ಜತೆ ಸೇರುವ ಯೋಜನೆಯೂ ಇದೆ ಎಂದು ಮಾಧ್ಯಮಗಳ ವಲಯದಿಂದಲೇ ವರ್ತಮಾನ ಇದೆ. ಕಾರಣಗಳೇನೇ ಇರಲಿ, ಇವತ್ತು ಅರ್ನಾಬ್ ಗೋಸ್ವಾಮಿ ಎಂಬ ನಡು ವಯಸ್ಸಿನ ಪತ್ರಕರ್ತನೊಬ್ಬನ ರಾಜೀನಾಮೆ ಸುತ್ತ ಇಷ್ಟೆಲ್ಲಾ ಸುದ್ದಿಗಳು ಹರಡುತ್ತಿವೆ. ಅದು ಸಹಜ ಕೂಡ.

2006ರಿಂದ ‘ಟೈಮ್ಸ್ ನೌ’ ವಾಹಿನಿಯ ಮುಖ್ಯಸ್ಥನ ಸ್ಥಾನದಲ್ಲಿ ಪ್ರಶ್ನಾತೀತವಾಗಿ ಉಳಿದುಕೊಂಡಿದ್ದ ಅರ್ನಾಬ್ ಈ ಸಮಯದಲ್ಲಿ ರಾಜೀನಾಮೆ ನೀಡಿದ್ದರ ಹಿಂದೆ ಇರುವ ಕಾರಣಗಳು ಬಗ್ಗೆ ಸಾಕಷ್ಟು ಆಯಾಮಗಳಲ್ಲಿ ಚರ್ಚೆಗಳು ಈಗಾಗಲೇ ಹುಟ್ಟಿಕೊಂಡಿವೆ. ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಖಚಿತತೆ ಸಿಗಲಿದೆ.

ಚಿನ್ನದ ಮೊಟ್ಟೆ ಕೋಳಿ:

2004ರಲ್ಲಿ ಅವತ್ತಿಗೆ ಸಂಪ್ರದಾಯದ ಚೌಕಟ್ಟನ್ನು ಮೀರಿ, ಬಿಬಿಸಿಎಲ್ ಕಂಪನಿ ವಾಣಿಜ್ಯ ನಗರಿಯನ್ನೇ ಕೇಂದ್ರವಾಗಿಟ್ಟುಕೊಂಡು ಇಂಗ್ಲಿಷ್ ಸುದ್ದಿ ವಾಹಿನಿಯೊಂದನ್ನು ಶುರು ಮಾಡಲು ಯೋಜನೆ ಹಾಕಿಕೊಂಡಿತ್ತು. ಅದಕ್ಕಾಗಿ 10ಕ್ಕೂ ದೇಶಗಳ ಪತ್ರಕರ್ತರನ್ನು ಒಳಗೊಂಡ ತಂಡವೊಂದನ್ನು ಹುಟ್ಟು ಹಾಕಲಾಗಿತ್ತು. ಈ ತಂಡದಲ್ಲಿ ಇದ್ದವರು ಅರ್ನಾಬ್ ಗೋಸ್ವಾಮಿ. 2006ರಲ್ಲಿ ‘ಟೈಮ್ಸ್ ನೌ’ ವಾಹಿನಿ ಕಾರ್ಯಾರಂಭ ಮಾಡುವ ಹೊತ್ತಿಗೆ ಅವರ ಸಂಪಾದಕ ಸ್ಥಾನದಲ್ಲಿ ಬಂದು ಕುಳಿತಿದ್ದರು. ಮೂಲದ ತಂಡದಲ್ಲಿದ್ದ ಹಲವು ಬಿಟ್ಟು ಹೋಗಿದ್ದರು. “ಆಗ ಯಾವುದೇ ಕಾರಣಕ್ಕೂ ವಾಹಿನಿ ಏನೂ ಆಗುವುದಿಲ್ಲ ಎಂದೇ ದಿಲ್ಲಿ ಪತ್ರಕರ್ತರು ಮಾತನಾಡಿಕೊಳ್ಳುತ್ತಿದ್ದರು. ಅರ್ನಾಬ್ ಬಗ್ಗೆ ಯಾರಿಗೂ ನಂಬಿಕೆ ಇರಲಿಲ್ಲ,” ಎನ್ನುತ್ತಾರೆ ದಿಲ್ಲಿ ಮೂಲದ ಇಂಗ್ಲಿಷ್ ಪತ್ರಕರ್ತರೊಬ್ಬರು. ಸದ್ಯ ಅವರು ‘ಟೈಮ್ಸ್ ಗ್ರೂಪ್’ನಲ್ಲಿಯೇ ಉನ್ನತ ಸ್ಥಾನದಲ್ಲಿದ್ದಾರೆ.

ಆದರೆ, ವಾಹಿನಿಗೆ ಹಣ ಹಾಕಿದ ಬಿಸಿಸಿಎಲ್ ಕಂಪನಿಗೆ ಅರ್ನಾಬ್ ಬಗ್ಗೆ ನಂಬಿಕೆ ಇತ್ತು. ‘ಪತ್ರಿಕೋದ್ಯಮ ಎಂಬುದು ಶುದ್ಧ ವ್ಯಾಪಾರ’ ಎಂದು ತನ್ನ ಪ್ರತಿ ನಡೆಯಲ್ಲಿಯೂ ನಂಬಿಕೊಂಡಿರುವ, ಪಾಲಿಸಿಕೊಂಡು ಬರುತ್ತಿರುವ ಟೈಮ್ಸ್ ಗ್ರೂಪ್ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆಗಿನ್ನೂ ಚಿಕ್ಕ ವಯಸ್ಸಿನ ಅರ್ನಾಬ್ ಕೈಗಿಟ್ಟಿತ್ತು. ಅರ್ನಾಬ್ ಮಾಲೀಕರ ನಂಬಿಕೆಯನ್ನು ಸುಳ್ಳು ಮಾಡಲಿಲ್ಲ. ವಾಹಿನಿ ಶುರುವಾದ ವರ್ಷದ ಹೊತ್ತಿಗೆ ಎಲ್ಲಾ ಇಂಗ್ಲಿಷ್ ವಾಹಿನಿಗಳ ವಾರದ ರೇಟಿಂಗ್ ಹೊಡೆದು ಹಾಕಿತ್ತು ‘ಟೈಮ್ಸ್ ನೌ’.

ಅಲ್ಲಿಂದ ಶುರುವಾದ ಅರ್ನಾಬ್ ರೇಟಿಂಗ್ ಯಾತ್ರೆ ಇವತ್ತಿನವರೆಗೆ ನಡೆದುಕೊಂಡು ಬಂದಿತ್ತು. ಜೆಎನ್ಯು ವಿಶ್ವವಿದ್ಯಾನಿಲಯದಲ್ಲಿ ‘ಆಝಾದಿ’ ವಿವಾದ ಸಮಯದ ಒಂದು ವಾರವನ್ನು ಹೊರತು ಪಡಿಸಿದರೆ, ‘ಟೈಮ್ಸ್ ನೌ’ ಯಾವತ್ತಿಗೂ ರೇಟಿಂಗ್ ವಿಚಾರದಲ್ಲಿ ಮುಂದಿತ್ತು. ಜತೆಗೆ, ಆರ್ಥಿಕವಾಗಿಯೂ ವಾಹಿನಿ ಪ್ರಬಲವಾಗಿ ಬೆಳೆದು ನಿಂತಿತು. ಅರ್ನಾಬ್ ನಡೆಸಿಕೊಡುತ್ತಿದ್ದ ‘ನ್ಯೂಸ್ ಅವರ್’ ಮತ್ತು ‘ಫ್ರಾಂಕ್ಲಿ ಸ್ಲೀಕಿಂಗ್’ ಶೋಗಳಿಗೆ ಜಾಹೀರಾತುಗಳು ಹುಡುಕಿಕೊಂಡು ಬರುತ್ತಿದ್ದವು. ಹೀಗಾಗಿ, ಒಂದು ದಶಕಗಳ ಕಾಲ ಅರ್ನಾಬ್ ತಮ್ಮ ಸ್ಥಾನದಲ್ಲಿ ಅಬಾಧಿತವಾಗಿ ಉಳಿದುಕೊಂಡರು. ವಾಹಿನಿಯನ್ನು ಜತೆಗೆ ತಮ್ಮನ್ನೂ ದೇಶದ ಸುದ್ದಿ ಉದ್ಯಮದಲ್ಲಿ  ಹೊಸ ‘ಬ್ರಾಂಡ್’ ಆಗಿ ರೂಪಿಸಿದರು. ಇದಕ್ಕಾಗಿಯೇ ‘ಟೈಮ್ಸ್ ಸಮೂಹ’ಗಳ ಪಾಲಿಗೆ ಅರ್ನಾಬ್ ಗೋಸ್ವಾಮಿ ‘ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ’ ಎಂದು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದರು.

ರಾಜೀನಾಮೆ ಹಿನ್ನೆಲೆ:

ಮೊನ್ನೆ ಮೊನ್ನೆವರೆಗೂ ಎಲ್ಲವೂ ಸರಿಯಾಗಿಯೇ ನಡೆದುಕೊಂಡು ಬಂತು. ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಸಮಯದಲ್ಲಿ ಅರ್ನಾಬ್ ನಿರಂತರವಾಗಿ 100 ಗಂಟೆ ಆಂಕರಿಂಗ್ ಮಾಡಿದ್ದರು. ಕಲ್ಲಿದ್ದಲ ಹಗರಣ, ಕಾಮನ್ವೆಲ್ತ್ ಹಗರಣಗಳು ಬಯಲಾದ ಸಮಯದಲ್ಲಿ ಅವರು ಪತ್ರಕರ್ತನಾಗಿ ವಹಿಸಿದ ಪಾತ್ರವನ್ನು ದೇಶ ನೋಡಿತ್ತು. ಅಣ್ಣಾ ಹಜಾರೆ ಹೋರಾಟದ ಕಣಕ್ಕಿಳಿದಾಗ ‘ಟೈಮ್ಸ್ ನೌ’ ವಹಿಸಿದ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗೆ ಎಲ್ಲವೂ ಸರಿಯಾಗಿಯೇ ಇದೆ ಎಂಬ ವಾತಾವರಣದಲ್ಲಿ ಮೊದಲ ಬಾರಿಗೆ ಸಮಸ್ಯೆ ಶುರುವಾಗಿತ್ತು, ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ.

ಅರ್ನಾಬ್ ಯಾವತ್ತೂ ಒಳಗಾಗದಷ್ಟು ಟೀಕೆಗೆ ಈಡಾಗಿದ್ದು ಈ ಸಮಯದಲ್ಲಿಯೇ. ಮೊದಲು ಪ್ರಧಾನಿ ಮೋದಿ ಜತೆಗೆ ಅತ್ಯಂತ ಮೆಲುದನಿಯಲ್ಲಿ ನಡೆಸಿದ ಸಂದರ್ಶನ, ನಂತರ ದೇಶ ಪ್ರೇಮವನ್ನು ಗುತ್ತಿಗೆ ಪಡೆದವರಂತೆ ನಡೆದುಕೊಳ್ಳಲು ಆರಂಭಿಸಿದ ರೀತಿ ಹಾಗೂ ತನ್ನ ವಿಚಾರಗಳಿಗೆ ಭಿನ್ನ ನಿಲುವನ್ನು ಹೊಂದಿದವರನ್ನು ಒಬ್ಬ ನಿರೂಪಕನಾಗಿ ಅರ್ನಾಬ್ ನಡೆಸಿಕೊಡುತ್ತಿದ್ದ ಶೈಲಿಗಳು ಸುದ್ದಿ ಉದ್ಯಮದಲ್ಲಿ ಹೊಸ ಆತಂಕವನ್ನೇ ಸೃಷ್ಟಿಸಿದ್ದವು. ಪ್ರಾದೇಶಿಕ ಭಾಷೆಗಳಲ್ಲಿ ಅರ್ನಾಬ್ ಅವರನ್ನೇ ಅನುಕರಿಸುವ ನಕಲಿಗಳು ಹುಟ್ಟಿಕೊಂಡಿದ್ದವರೂ ಅವುಗಳನ್ನೇ ಹಿಂಬಾಲಿಸಲು ಶುರುಮಾಡಿದ್ದರು.

ಕೆಲವು ದಿನಗಳ ಹಿಂದಷ್ಟೆ ಅರ್ನಾಬ್ ಪಾಕಿಸ್ತಾನದ ಕಲಾವಿದರ ಬಗ್ಗೆ ವಾಹಿನಿಯ ಮೂಲಕ ವ್ಯಕ್ತಪಡಿಸಿದ್ದ ನಿಲುವಿಗೆ ವಿರುದ್ಧವಾಗಿ ‘ಟೈಮ್ಸ್’ ಮಾಲೀಕರಾದ ವಿನೀತ್ ಜೈನ್ ಮಾಡಿದ್ದ ಟ್ವೀಟ್ ದೊಡ್ಡ ಸದ್ದು ಮಾಡಿತ್ತು. ಎಲ್ಲೋ ಏನೋ ಯಡವಟ್ಟಾಗಿರುವುದರ ಮುನ್ಸೂಚನೆ ಆ ಮೂಲಕ ಸಿಕ್ಕಿತ್ತು.

vineet-tweet

vineet-tweet-2

ಅದು ಅರ್ನಾಬ್ ‘ಟೈಮ್ಸ್ ನೌ’ನಿಂದ ಹೊರಬರಲು ಕಾರಣವಾಯಿತಾ?

ಅಥವಾ, ಇತ್ತೀಚೆಗೆ ಸುಪ್ರಿಂ ಕೋರ್ಟ್ ನೂರು ಕೋಟಿ ಮಾನನಷ್ಟ ಮೊಕದ್ದಮೆ ವಿಚಾರದಲ್ಲಿ ನೀಡಿದ ತೀರ್ಪಿನ ಪರಿಣಾಮಗಳು ಇವಾ? ಖಚಿತವಾಗಿ ಹೇಳಲು ಇನ್ನೂ ಸಮಯ ಬೇಕಿದೆ.

ಅಲ್ಲೀವರೆಗೂ ಅರ್ನಾಬ್ ಪ್ರತಿ ದಿನ ರಾತ್ರಿ ಟಿವಿಯಲ್ಲಂತೂ ಕಾಣಿಸಿಕೊಳ್ಳುತ್ತಿರುತ್ತಾರೆ.

Don’t Miss:

ದಿ ರೈಸ್ ಅಂಡ್ ಫಾಲ್ ಆಫ್ ಅರ್ನಾಬ್ ಗೋಸ್ವಾಮಿ!

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top