An unconventional News Portal.

ಸ್ಟೇಟಸ್ ಅಪ್ ಡೇಟ್ ಮಾಡ್ತೀರೋರು ಅವರೇ ಆದರೂ; ಕಾಮೆಂಟ್ ಮಾಡುವುದು, ಬಿಡುವುದು ನಮ್ಮ ಕೈಯಲ್ಲೇ ಇದೆಯಲ್ಲಾ?

ಸ್ಟೇಟಸ್ ಅಪ್ ಡೇಟ್ ಮಾಡ್ತೀರೋರು ಅವರೇ ಆದರೂ; ಕಾಮೆಂಟ್ ಮಾಡುವುದು, ಬಿಡುವುದು ನಮ್ಮ ಕೈಯಲ್ಲೇ ಇದೆಯಲ್ಲಾ?

ನಮ್ಮೆಲ್ಲರೊಳಗೊಂದು ಮನಸ್ಥಿತಿ ಇದೆ. ಅದು ಈ ಕಾಲಘಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಬಗೆಗೆ ಸಂಬಂಧಿಸಿದ್ದು. ಯಾವುದಾದರೂ ಸಮಸ್ಯೆಯೊಂದು ಮುಖ್ಯವಾಹಿನಿಗೆ ಅಪ್ಪಳಿಸುತ್ತಿದ್ದಂತೆ, ನಮ್ಮೆಲ್ಲರೊಳಗೂ ಅಭಿಪ್ರಾಯವೊಂದು ರೂಪುಗೊಳ್ಳುತ್ತದೆ ಮತ್ತದು ಎಲ್ಲರಿಗೂ ತಿಳಿಯಬೇಕು ಎಂದು ಬಯಸುತ್ತದೆ.

ಪೊಲೀಸರ ಪ್ರತಿಭಟನೆ ಇರಲಿ, ಗಾರ್ಮೆಂಟ್ಸ್ ಫ್ಯಾಕ್ಟರಿ ಮಹಿಳೆಯಯ ಹೋರಾಟ ಇರಲಿ, ನಟನೊಬ್ಬನ ವಿಚ್ಚೇದನ ಪ್ರಕರಣ ಇರಲಿ ಅಥವಾ ಈಗಿನ ಅನುಪಮ ಶೆಣೈ ರಾಜೀನಾಮೆ ಇರಲಿ. ಪ್ರತಿಯೊಂದಕ್ಕೂ ನಮ್ಮದೊಂದು ಅಭಿಪ್ರಾಯವನ್ನು ಹರಿಯಬಿಡುತ್ತೇವೆ. ಈ ಅಭಿಪ್ರಾಯಗಳಲ್ಲಿ ಸಮಾಜ ವಿಜ್ಞಾನಿಗಳ ಒಳನೋಟಗಳಿರುತ್ತವೆ, ಕಾನೂನು ತಜ್ಞರಂತೆ ಸಲಹೆಗಳಿರುತ್ತವೆ. ಎಲ್ಲೋ ಕೆಲವು ಕಡೆ ಮನಃಶಾಸ್ತ್ರಜ್ಞರಂತೆ ಮನಸ್ಸುಗಳನ್ನು ಅರಿಯುವ ಕೆಲಸ ಆಗುತ್ತದೆ. ಹೀಗೆ, ರೂಪುಗೊಳ್ಳುವ ಪ್ರತಿಯೊಬ್ಬರ ವೈಯುಕ್ತಿಕ ಅಭಿಪ್ರಾಯಗಳಿಗೂ ಇವತ್ತಿನ ಸಾಮಾಜಿಕ ಜಾಲತಾಣಗಳು ವೇದಿಕೆ ಕಲ್ಪಿಸುತ್ತವೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು ಒಮ್ಮೆ ಅನುಪಮ ಶೆಣೈ ರಾಜೀನಾಮೆ ಪ್ರಕರಣದ ಈವರೆಗಿನ ಬೆಳವಣಿಗೆಯನ್ನು ಗಮನಿಸಬೇಕಿದೆ.

ಸಮಸ್ಯೆಯೊಂದನ್ನು ಬಗೆಹರಿಸಲು ಹೋಗಿ ಮೈಮೇಲೆ ಎಳೆದುಕೊಂಡ ಅಧಿಕಾರಿಣಿ ಕೊನೆಗೆ ರಾಜೀನಾಮೆ ನೀಡುತ್ತಾರೆ. ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಹೋಗುತ್ತಾರೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡುತ್ತಾರೆ. ಅವರು ಯಾರು? ಅವರ ಹಿನ್ನೆಲೆ ಏನು? ಯಾಕೆ ಹೀಗೆ ನಡೆದು ಕೊಳ್ಳುತ್ತಿರಬಹುದು? ಇದರಿಂದ ಅವರು ಬಯಸುತ್ತಿರುವ ಫಲಿತಾಂಶಗಳು ಏನಿವೆ? ಹೀಗೆ ಯಾವುದೇ ಪ್ರಶ್ನೆಗಳನ್ನು ಎದುರಿಗೆ ಇಟ್ಟುಕೊಂಡರೂ ಅಧಿಕೃತ ಉತ್ತರವನ್ನು ನೀಡಬಹುದಾದವರು ಅನುಪಮ ಶೆಣೈ ಮಾತ್ರವೇ ಹೊರತು ಇನ್ಯಾರಿಗೂ ಸಾಧ್ಯವಿಲ್ಲ.

ಆದರೂ, ನಾವು ನಮ್ಮದೇ ಮೂಗಿನ ನೇರದಲ್ಲಿ ಚರ್ಚೆಗೆ ಇಳಿಯುತ್ತೇವೆ. ಅವರು ಹಾಕುವ ಪ್ರತಿ ಫೇಸ್ ಬುಕ್ ಸ್ಟೇಟಸ್ ಅನ್ನೂ ಸೂಕ್ಷ್ಮವಾಗಿ ಗಮನಿಸುತ್ತೇವೆ. ಅವರು ಬರೆದ ಪದಗಳ, ವಾಕ್ಯಗಳ ಹಿಂದಿನ ಗೂಢಾರ್ಥ ಇದು ನೋಡಿ ಎಂದು ಮತ್ತೊಂದು ಹೊಸ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸುತ್ತೇವೆ. ಯಾಕೆ ಹೀಗಾಗುತ್ತದೆ?

ಯಾವುದಾದರೂ ಸಮಸ್ಯೆ, ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದಂತೆ ನಾವು ಮುಖ್ಯವಾಹಿನಿಯ ಚೌಕಟ್ಟುಗಳ ಒಳಗೇ ಪರಿಹಾರವನ್ನು ಬಯಸುತ್ತೇವೆ. ‘ಬಿಗ್ ಬಾಸ್’ ಮನೆಯಲ್ಲಿ ಸಮಸ್ಯೆ ಮಾಡಿಕೊಂಡು ಹೊರಬಂದ ಹುಚ್ಚ ವೆಂಕಟ್ ತನ್ನ ಪಾಡಿಗೆ ತಾನಿರಲು ಬಿಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಆತ ಪ್ಯಾನಲ್ ಚರ್ಚೆಗೆ ಬಂದು ಕುಳಿತಾಗ ಮಾತ್ರ ನಮಗೆ ಸಮಾಧಾನ ಆಗುತ್ತದೆ. ಇನ್ಯಾರದ್ದೋ ಸಂಸಾರ ವಿಚಾರ, ಕೌಟುಂಬಿಕ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳುವ ಮುನ್ನ ನಮ್ಮ ಸ್ಟುಡಿಯೋ ಒಳಗಿನ ಬೆಳಕಿನಲ್ಲಿ ಒಮ್ಮೆ ಶವಪರೀಕ್ಷೆಗೆ ಒಳಗಾಗಬೇಕು ಎಂದು ಬಯಸುವ ಮನಸ್ಥಿತಿ ನಮ್ಮಲ್ಲಿದೆ. ಹೀಗಾಗಿ, ರಾಜೀನಾಮೆ ನೀಡಿದ ಅನುಪಮ ಕೂಡ ಪ್ಯಾನಲ್ ಚರ್ಚೆಗೆ ಬರಲಿಲ್ಲ, ಸಂದರ್ಶನಗಳನ್ನು ನೀಡಲಿಲ್ಲ ಎಂಬ ಕೊರಗು ಅವ್ಯಕ್ತವಾಗಿ ನಮ್ಮೆಲ್ಲರಲ್ಲೂ ಇದೆ. ಹೀಗಾಗಿ, ಅವರು ವಿಚಾರವನ್ನು ಹರಡಲು ಆಯ್ಕೆ ಮಾಡಿಕೊಂಡ ವೇದಿಕೆಯ ಬಗ್ಗೆ ನಮಗೆ ತಕರಾರು ಹುಟ್ಟುತ್ತದೆ. ಅವರು ಏನು ಎಂಬುದನ್ನು ಅವರ ಮುಂದಿನ ನಡೆ ನಿರ್ಧರಿಸುವ ಮುನ್ನ, ನಾವೇ ಒಂದು ಹೆಜ್ಜೆ ಮುಂದೆ ಹೋಗಿ ಅವರು ಹೀಗೀಗೆ ಎಂದು ಷರಾ ಬರೆದು ಬಿಡುತ್ತೇವೆ.

ಅದರ ಜತೆಗೆ, ಅವರು ಅಧಿಕಾರಿಯಾಗಿರುವುದರಿಂದ ಇಂತಹದೇ ಭಾಷೆಯ ಮೂಲಕ ತಮ್ಮ ಒಳಗಿನ ಮಾತುಗಳನ್ನು ಅಭಿವ್ಯಕ್ತಿಗೊಳಿಸಬೇಕು ಎಂದು ಬಯಸುತ್ತೇವೆ. ಸಿದ್ಧಮಾದರಿ ಚೌಕಟ್ಟಿನೊಳಗೇ ಪ್ರತಿಯೊಂದನ್ನೂ ತರುವ ಮನಸ್ಥಿತಿಯ ಪರಿಣಾಮಗಳಿವು. ನಾವು ಕಟ್ಟಿಕೊಂಡಿರುವ ಮನಸ್ಥಿತಿಗೆ ಕೊಂಚ ವಿರುದ್ಧವಾಗಿ, ಚೌಕಟ್ಟುಗಳನ್ನು ಮೀರುವ ಪ್ರಯತ್ನಗಳು ನಡೆದರೆ ಅದನ್ನು ನಾವು ಸಹಿಸಲು ತಯಾರಿಲ್ಲ.

ಅನುಪಮ ಶೆಣೈ ರಾಜೀನಾಮೆ ನೀಡಿರುವುದು, ನಂತರ ಅವರು ಅಭಿವ್ಯಕ್ತಿಗೊಳಿಸುತ್ತಿರುವ ವಿಚಾರಗಳು ಹಾಗೂ ಅದರ ಪರಿಣಾಮಗಳನ್ನು ನಾವು ನಿಂತ ಜಾಗದಲ್ಲಿಯೇ ತೀರ್ಮಾನ ಮಾಡಿಬಿಡಬೇಕು ಎಂಬ ಧಾವಂತ ಯಾಕೆ? ಎಲ್ಲವನ್ನು ಮೀರಿದ್ದು ಸಮಯ ಅಥವಾ ಕಾಲ. ಕಾಲದ ನಡೆಯಲ್ಲಿ ಪ್ರತಿಯೊಂದು ನಿಚ್ಚಳವಾಗುತ್ತ ಹೋಗುತ್ತದೆ. ಅದಕ್ಕೆ ತಾಳ್ಮೆ ಅಗತ್ಯವಿದೆ. ಅದನ್ನು ಅದರ ಪಾಡಿಗೆ ಬಿಟ್ಟು, ನಾವು ಅದೇ ಕಾಲವನ್ನು ಇನ್ನಷ್ಟು ರಚನಾತ್ಮಕ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ಗಮನಿಸುವುದು ಎಲ್ಲರಿಗೂ ಕ್ಷೇಮ.

ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಾಮಾಣಿಕ ಅಧಿಕಾರಿಗಳಿಗೆ ಅನ್ಯಾಯವಾಗಿದೆ. ಮುಂದೆಯೂ ಆಗುತ್ತದೆ. ಅವರಿಗೆ ಅನ್ನಿಸಿದ ರೀತಿಯಲ್ಲಿ ಅವರು ಅದನ್ನು ಪ್ರತಿಭಟಿಸಿದ್ದಾರೆ. ಅದಕ್ಕೆ ಅವರು ಅವರದ್ದೇ ದಾರಿಗಳನ್ನು ಕಂಡುಕೊಂಡಿದ್ದಾರೆ. ಕೆಲವರು ಇನ್ನೂ ಆ ಭರವಸೆ ಉಳಿಸಿಕೊಂಡಿದ್ದಾರೆ. ಇನ್ನು ಕೆಲವರು ರಾಜಕೀಯಕ ಕೂಪಕ್ಕೆ ಬಿದ್ದು ಇದ್ದೂ ಇಲ್ಲದಂತಾಗಿದ್ದಾರೆ. ಕೊನೆಗೆ, ಏನೇ ಇದ್ದರೂ ಅದು ವೈಯುಕ್ತಿಕ ನಿರ್ಧಾರಗಳ ಒಟ್ಟು ಮೊತ್ತ ಅಷ್ಟೆ. ಹೀಗಾಗಿ, ನಾವೆಷ್ಟೆ ಸಮಾಜ, ವ್ಯವಸ್ಥೆ ಎಂದು ಮಾತನಾಡಿದರೂ, ಕೊನೆಗೊಮ್ಮೆ ನಾವೇನು ಎಂಬುದು ನಿರ್ಧಾರವಾಗುವುದು ನಮ್ಮ ನಡೆಗಳಷ್ಟೆ.

ಇದಕ್ಕೆ ಅನುಪಮ ಕೂಡ ಹೊರತಾಗಿಲ್ಲ. ಅವರು ಯಾರು? ಅವರ ಉದ್ದೇಶಗಳೇನು? ಅವರ ಭವಿಷ್ಯ ಏನಾಗಬಹುದು? ಎಂಬುದು ಅವರ ನಡೆಗಳೇ ತೀರ್ಮಾನಿಸಲಿವೆ. ಅದನ್ನು ಬದಲಾಯಿಸುವ ಉಮೇದು ನಮಗ್ಯಾಕೆ? ಅಲ್ವಾ…

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top