An unconventional News Portal.

ಕಪ್ಪು ಜನರ ಕಣ್ಮಣಿ, ಮಂಡೇಲಾ ಒಡನಾಡಿ, ಭಾರತ ಮೂಲದ ‘ಅಂಕಲ್ ಕ್ಯಾತಿ’ ಇನ್ನಿಲ್ಲ

ಕಪ್ಪು ಜನರ ಕಣ್ಮಣಿ, ಮಂಡೇಲಾ ಒಡನಾಡಿ, ಭಾರತ ಮೂಲದ ‘ಅಂಕಲ್ ಕ್ಯಾತಿ’ ಇನ್ನಿಲ್ಲ

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದ, ನೆಲ್ಸನ್‌ ಮಂಡೇಲಾ ಜತೆ ಸುಮಾರು 26 ವರ್ಷಗಳ ಕಾಲ ಜೈಲಿನಲ್ಲಿದ್ದ, ಅಲ್ಪಸಂಖ್ಯಾತ ಬಿಳಿಯರ ಸರಕಾರದ ವಿರುದ್ಧ ಹೋರಾಡಿದ್ದ ‘ಕಪ್ಪು ಜನರ ಕಣ್ಮಣಿ’ ಅಹಮದ್ ಕತ್ರಾಡ ಇನ್ನಿಲ್ಲ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕತ್ರಾಡ ಅವರನ್ನು ಜೋಹಾನ್ಸ್‌ಬರ್ಗ್ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಜೀವನ್ಮರಣದ ಹೋರಾಟ ನಡೆಸಿದ ಅವರು ಸ್ಥಳೀಯ ಕಾಲಮಾನ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

1929ರ ಆಗಸ್ಟ್ 21ರಂದು ಭಾರತೀಯ ಮೂಲದ ದಂಪತಿಗಳ ಪುತ್ರನಾಗಿ ದಕ್ಷಿಣ ಆಫ್ರಿಕಾದಲ್ಲಿ ಕತ್ರಾಡ ಜನಿಸಿದ್ದರು. 17ನೇ ವಯಸ್ಸಿಗೆ ರಾಜಕೀಯ ಚಳವಳಿಗೆ ಧುಮುಕಿದ ಅವರು ಸರಕಾರ ವಿರುದ್ಧ ಚಳವಳಿ ಸಂಘಟಿಸುವ ಪ್ರಮುಖ ನಾಯಕರಾಗಿ ಬೆಳೆದಿದ್ದರು. 1964ರಲ್ಲಿ ಅಲ್ಲಿನ ಸ್ಥಳೀಯ ಸರಕಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲಿನಲ್ಲಿದ್ದುಕೊಂಡೇ ನಾಲ್ಕು ಪದವಿಗಳನ್ನು ಪೂರೈಸಿದ್ದರು. ಜೈಲಿನಿಂದ ಬಿಡುಗಡೆ ಆಗುವ ಹೊತ್ತಿಗೆ ಕತ್ರಾಡಾ 60ರ ಸಮೀಪದಲ್ಲಿದ್ದರು. ನೆಲ್ಸನ್‌ ಮಂಡೇಲಾ ಜತೆಯಲ್ಲಿ ಅವರು ಸುಮಾರು 26 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಕೆಲವೇ ಜನರಲ್ಲಿ ಇವರೊಬ್ಬರಾಗಿದ್ದರು.

 

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಅಂತ್ಯಗೊಂಡ ನಂತರ ರಚನೆಗೊಂಡ ಮೊದಲ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸರಕಾರದಲ್ಲಿ ಅವರು- 1994- 96ರ ನಡುವೆ- ಅಧ್ಯಕ್ಷ ನೆಲ್ಸನ್‌ ಮಂಡೇಲಾ ಅವರಿಗೆ ಸಂಸದೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು.

‘ಅಂಕಲ್ ಕ್ಯಾತಿ’ ಎಂದೇ ಜನಾನುರಾಗಿಯಾಗಿದ್ದ ಅಹಮದ್ ಕತ್ರಾಡ ಅವರ ಸಾವಿಗೆ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದಾದ್ಯಂತ ಶೋಕ ವ್ಯಕ್ತವಾಗುತ್ತಿದೆ. ಇಲ್ಲಿ ನಡೆದ ವರ್ಣಭೇಧ ನೀತಿ ವಿರೋಧಿ ಚಳವಳಿಯ ಜತೆ ನಿಟಕ ಸಂಬಂಧವನ್ನು ಹೊಂದಿದ್ದ ಅವರ ನೆನಪುಗಳನ್ನು ಜನ ಮೆಲಕು ಹಾಕುತ್ತಿದ್ದಾರೆ.

ನೆಲ್ಸನ್‌ ಮಂಡೇಲಾರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದ ಕತ್ರಾಡ.

ನೆಲ್ಸನ್‌ ಮಂಡೇಲಾರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದ ಕತ್ರಾಡ.

ನೆಲ್ಸನ್ ಮಂಡೇಲಾ ಅವರ ಅಂತ್ಯಕ್ರಿಯೆ ವೇಳೆ ‘ಅಂಕಲ್ ಕ್ಯಾತಿ’ ಅವರ ಭಾವಪೂರ್ಣ ಭಾಷಣ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಈ ಸಮಯದಲ್ಲಿ ಮಂಡೇಲಾ ಅವರನ್ನು ನೆನಪಿಸಿಕೊಂಡಿದ್ದ ಕತ್ರಾಡ “ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ,” ಎಂದು ಕಂಬನಿ ಮಿಡಿದಿದ್ದರು.

ಇತ್ತೀಚಿನವರೆಗೆ ದಕ್ಷಿಣ ಆಫ್ರಿಕಾದ ಸಾರ್ವಜನಿಕ ಬದುಕಿನಲ್ಲಿ ಕ್ರೀಯಾಶೀಲವಾಗಿ ಪಾಲ್ಗೊಂಡಿದ್ದ ಕತ್ರಾಡ, ಮಾನವ ಹಕ್ಕುಗಳಿಗಾಗಿ, ಯುವಜನರ ಅಭಿವೃದ್ಧಿಗಾಗಿ, ಜನಾಂಗೀಯ ಭೇದವನ್ನು ತೊಡೆಯುವ ನಿಟ್ಟಿನಲ್ಲಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ವಿಚಾರದಲ್ಲಿ ಮುಂದಾಳುವಾಗಿ ಭಾಗವಹಿಸುತ್ತಿದ್ದರು.

ಕಳೆದ ವರ್ಷ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸರಕಾರದ ವಿರುದ್ಧ, ಅದರಲ್ಲೂ ವಿಶೇಷವಾಗಿ ಅಧ್ಯಕ್ಷ ಜಾಕೋಬ್ ಝೂಮಾ ಅವರ ವಿರುದ್ಧ ನಡೆದ ಸಂಘಟಿತ ಹೋರಾಟದಲ್ಲಿ ಅವರು ಪಾಲ್ಗೊಂಡಿದ್ದರು. ಝೂಮ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಗಟ್ಟಿ ದನಿಯಲ್ಲಿ ಖಂಡಿಸಿದ್ದರು. ಈ ಸಮಯದಲ್ಲಿ ಅವರು ಅಧ್ಯಕ್ಷರಿಗೆ ಬರೆದ ಬಹಿರಂಗ ಪತ್ರ ಭಾರಿ ಸದ್ದು ಮಾಡಿತ್ತು.

ತಮ್ಮ ಇಳೀ ವಯಸ್ಸಿನಲ್ಲೂ ದಕ್ಷಿಣ ಆಫ್ರಿಕಾದ ಆಗುಹೋಗುಗಳ ಜತೆಗೆ ಹೆಜ್ಜೆ ಹಾಕಿಕೊಂಡು ಬಂದ ಕತ್ರಾಡ ಅವರನ್ನು ‘ನ್ಯೂಸ್ ಮೇಕರ್’ ಎಂದು ಗುರುತಿಸಲಾಗುತ್ತಿತ್ತು. ನೆಲ್ಸನ್ ಮಂಡೇಲಾ ನಂತರ ದಕ್ಷಿಣ ಆಫ್ರಿಕಾದ ಗತಕಾಲದ ಹೋರಾಟಗಳ ಸಾಕ್ಷಿ ಪ್ರಜ್ಞೆಯಂತೆ ‘ಅಂಕಲ್ ಕ್ಯಾತಿ’ ನಡೆದುಕೊಂಡಿದ್ದರು.

2014ರಲ್ಲಿ ದಕ್ಷಿಣ ಆಫ್ರಿಕಾದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕತ್ರಾಡ 44ನೇ ಸ್ಥಾನ ಪಡೆದುಕೊಂಡಿದ್ದರು. ಇದಕ್ಕೆ ಒಂದು ವರ್ಷ ಮುಂಚೆಯಷ್ಟೆ ಕೈದಿಗಳ ಬಿಡುಗಡೆ ಸಂಬಂಧಪಟ್ಟ ಹಾಗೆ ಅಂತರಾಷ್ಟ್ರೀಯ ಅಭಿಯಾನವೊಂದನ್ನು ಕತ್ರಾಡ ಹುಟ್ಟುಹಾಕಿದ್ದರು. ಸದ್ಯ ಅವರ ಕನಸುಗಳನ್ನು, ಹೋರಾಟಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ‘ಕತ್ರಡ ಫೌಂಡೇಶನ್’ ಕೆಲಸ ಮಾಡುತ್ತಿದೆ.

“ನಿಮ್ಮ ಇತಿಹಾಸವನ್ನು ನೆನಪಿನಲ್ಲಿಡಿ; ನಿಮ್ಮನ್ನು ಮತ್ತು ದೇಶವನ್ನು ಯಶಸ್ಸಿನ ದಡ ಮುಟ್ಟಿಸಲು ಮೊದಲು ನಿಮ್ಮ ತಂದೆ ತಾಯಿಗೆ, ನಿಮಗೆ ಮತ್ತು ದೇಶಕ್ಕೆ ನೀವು ಹೊಣೆಗಾರರಾಗಿರಿ,” ಎಂಬುದು ದಕ್ಷಿಣ ಆಫ್ರಿಕಾದ ಯುವ ಸಮೂಹಕ್ಕೆ ಕತ್ರಾಡ ಅವರ ನೀಡಿದ ಕೊನೆಯ ಸಂದೇಶವಾಗಿದೆ.

Leave a comment

Top