An unconventional News Portal.

ಆಶ್ವಾಸನೆ ಮೀರಿದ ಬದುಕಿಗಾಗಿ ಕೇಳುತ್ತಿರುವುದು ತಿಂಗಳಿಗೆ 10 ಸಾವಿರ ರೂ.ಗಳು ಮಾತ್ರ!

ಆಶ್ವಾಸನೆ ಮೀರಿದ ಬದುಕಿಗಾಗಿ ಕೇಳುತ್ತಿರುವುದು ತಿಂಗಳಿಗೆ 10 ಸಾವಿರ ರೂ.ಗಳು ಮಾತ್ರ!

“ಹೋರಾಟ ಹೀಗೆಯೇ ಮುಂದುವರಿದರೆ ನಾವು ಬೆಂಗಳೂರಿಗೆ ಮತ್ತೆ ಬರಬೇಕಾಗುತ್ತದೆ. ನಮಗಾಗಿ ಅವರು ಅಲ್ಲಿ ಹೋರಾಟ ಮಾಡಿಕೊಂಡು ಕುಳಿತಿರುವಾಗ ನಾವು ಹೇಗೆ ಮನೆಯಲ್ಲಿ ಅರಾಮಾಗಿ ಇರಲು ಸಾಧ್ಯ. ನೋಡುವ ರಾತ್ರಿ ಹೊತ್ತಿಗೆ ಏನಾಗುತ್ತೆ ಅಂತ…?”

ಹೀಗಂದವರು ಮಡಿಕೇರಿ ಮೂಲ ಅಂಗನವಾಡಿ ಕಾರ್ಯಕರ್ತೆಯೊಬ್ಬರು.  ಮಾ18ಕ್ಕೆ ವೈಯಕ್ತಿಕ ಕಾರಣಕ್ಕೆ ಬೆಂಗಳೂರಿಗೆ ಬಂದವರು, ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಹೋರಾಟದಲ್ಲಿ ಪಾಲ್ಗೊಂಡು ಇವತ್ತು ಮುಂಜಾನೆ ಮನೆಗೆ ಮರಳಿದ್ದಾರೆ. ಇದೀಗ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ವಿಚಾರ ಮಾಧ್ಯುಮಗಳ ಮೂಲಕ ಪ್ರಸಾರವಾಗುತ್ತಿರುವುದನ್ನು ನೋಡುತ್ತಿರುವ ಅವರಿಗೆ ಮತ್ತೆ ಹೋರಾಟಕ್ಕೆ ಜತೆಯಾಗಬೇಕು ಅನ್ನಿಸುತ್ತಿದೆ.

ಇದೇ ವೇಳೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಕುಳಿತ ಮಹಿಳೆಯರು ಕೂಡ ತಮ್ಮ ಹೋರಾಟವನ್ನು ಮುಂದುವರಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಕಳೆದ ಸುಮಾರು 30 ಗಂಟೆಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಧರಣಿ ನಡೆಸುತ್ತಿದ್ದಾರೆ. ಅವರಿಗೆ ಊಟ ಹಾಗೂ ನೀರಿನ ಸೌಕರ್ಯ ಇಲ್ಲ. ಸಾವಿರಾರು ಜನ ಸೇರಿರುವ ಕಡೆ ಶೌಚಾಲಯಕ್ಕೂ ಸಮಸ್ಯೆಯಾಗುತ್ತಿದೆ. “ಇಷ್ಟೊಂದು ಮಹಿಳೆಯರು ಹೀಗೆ ಬಂದು ಪಟ್ಟು ಹಿಡಿದು ಕೂತಿರುವುದು ನೋಡಿದರೆ ಅಚ್ಚರಿಯಾಗುತ್ತದೆ,” ಎನ್ನುತ್ತಾರೆ ಗಾಯತ್ರಿ ಎಚ್‌. ಎನ್. ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದನ್ನು ನಡೆಸಿಕೊಂಡು ಬರುತ್ತಿರುವ ಅವರು ‘ನಮಗೆ ನಾವೇ ಮಾಧ್ಯಮ’ ಎಂದು ನಂಬಿದ್ದಾರೆ. ಹೀಗಾಗಿಯೇ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರೀಡಂ ಪಾರ್ಕಿನಿಂದ ನೇರ ಪ್ರಸಾರವನ್ನೂ ನೀಡುತ್ತಿದ್ದಾರೆ.

“ಈ ಬಾರಿ ಅವರು ಆಶ್ವಾಶನೆಗೆ ಬಗ್ಗುವಂತೆ ಕಾಣಿಸುತ್ತಿಲ್ಲ. ಕನಿಷ್ಟ 10 ಸಾವಿರ ಸಂಬಳದ ಖಾತ್ರಿ ಪಡಿಸಿಕೊಂಡೇ ಊರಿಗೆ ಮರಳಬೇಕು ಎಂಬ ನಿರ್ಧಾರಕ್ಕೆ ಬಂದೇ ಇಲ್ಲೀವರೆಗೂ ಬಂದಿದ್ದಾರೆ,” ಎಂಬುದು ಸ್ಥಳದಲ್ಲಿರುವ ಗಾಯತ್ರಿ ನೀಡಿದ ಮಾಹಿತಿ.

ರಾಜಕೀಯ ಎಂಟ್ರಿ:

ಪ್ರತಿಭಟನಾ ಸ್ಥಳದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ.

ಪ್ರತಿಭಟನಾ ಸ್ಥಳದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ.

ಪ್ರತಿಭಟನೆಯ ಬೇಡಿಕೆ ಕುರಿತು ರಾಜಕೀಯ ಚರ್ಚೆ ನಡೆಯಬೇಕಿದ್ದ ವಿಧಾನ ಸಭೆಗೂ ಮುನ್ನವೇ ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಮುಂಜಾನೆ ರಾಜಕೀಯದ ಎಂಟ್ರಿಯೂ ಆಯಿತು. ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಸ್ಥಳಕ್ಕೆ ಬಂದು ಜನರಿಗೆ ಊಟ ಒದಗಿಸುವ ಭರವಸೆ ನೀಡಿದರು. “ಈ ಸಮಯದಲ್ಲಿ ಮಹಿಳೆಯರು ಅದನ್ನು ವಿರೋಧಿಸಿದರು. ಕೊನೆಗೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ವಿಧಾನಸಭೆಯೊಳಗೂ ನಿಮ್ಮ ಪರವಾಗಿ ದನಿ ಎತ್ತುತ್ತೇವೆ. ಮಾನವೀಯ ಕಾಳಜಿಯಿಂದ ನೆರವು ನೀಡುತ್ತಿದ್ದೇವೆ ಎಂಬ ಸಮಜಾಯಿಷಿ ಸಿಕ್ಕ ನಂತರ ನೀರಿನ ವ್ಯವಸ್ಥೆಗೆ ಒಪ್ಪಿಕೊಂಡರು,” ಎಂದರು ಗಾಯತ್ರಿ.

ಸದ್ಯ ನೀರಿಗೆ ಹಾಗೂ ಊಟಕ್ಕೆ ತಕ್ಕಮಟ್ಟಿಗಿನ ವ್ಯವಸ್ಥೆಯಾಗಿದೆ. ಅಲ್ಲಿಂದ ಒಂದು ಕಿ. ಮೀ ಅಂತರದಲ್ಲಿರುವ ವಿಧಾನಸೌಧದ ಒಳಗೂ ಈ ಪ್ರತಿಭಟನೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಪ್ರತಿಭಟನೆ ಕಾರಣವಾಯಿತು. ಬಜೆಟ್ ಅಧಿವೇಶನದ ಆರಂಭದಲ್ಲಿಯೇ ‘ಡೈರಿ ಗಲಾಟೆ’ ಆರಂಭಿಸಿದ್ದ ಬಿಜೆಪಿ ‘ಮಹಿಳೆಯರ ಹಕ್ಕು’ಗಳ ಕುರಿತು ಸರಕಾರವನ್ನು ಪ್ರಶ್ನಿಸಿತು. ಇದಕ್ಕೆ ಸರಕಾರ ಕೂಡ ‘ನೀವೇನು ಮಾಡಿದ್ದೀರಿ?” ಎಂದು ಕೇಂದ್ರ ಸರಕಾರದ ಕಡೆಗೆ ಬೆರಳು ತೋರಿಸಿತು.

ಸಿಎಂ ಸಿದ್ದರಾಮಯ್ಯ, “ಮಾಹಿತಿ ಇಲ್ಲದೆ ಯಾಕೆ ಮಾತಾಡುತ್ತೀರ್ರಿ…?” ಎಂದು ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಇಂದಿರಾಗಾಂಧಿ ಕಾಲದಿಂದ ಇಲ್ಲೀವರೆಗೆ ಸಾಮಾಜಿಕ ನ್ಯಾಯದ ಕಾಂಗ್ರೆಸ್ ಪರಿಕಲ್ಪನೆಯನ್ನು ವಿವರಿಸಿದರು. ಅಂಕಿ ಅಂಶಗಳನ್ನು ಮುಂದಿಟ್ಟು ತಮ್ಮ ಸರಕಾರ ನಿಮಗಿಂತಲೂ ಉತ್ತಮ ಎಂದು ಪ್ರತಿಪಾದಿಸಿದರು.

ನಂತರ ಪ್ರತಿಭಟನೆಯ ಮುಖಂಡರ ಜತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದರು. ಏ. 19ಕ್ಕೆ ಬೇಡಿಕೆಗಳ ಈಡೇರಿಕೆ ಕುರಿತು ಚರ್ಚೆ ನಡೆಸಲು ಸಭೆ ಕಡೆಯುವುದಾಗಿ ಭರವಸೆ ನೀಡಿದರು.

“ಅಂಗನವಾಡಿ ಕಾರ್ಯಕರ್ತೆಯರು ಎಂದರೆ ಜನರಿಗೆ ಸರಿಯಾದ ಕಲ್ಪನೆ ಇದ್ದ ಹಾಗಿಲ್ಲ. ‘ಸ್ತ್ರೀ ಶಕ್ತಿ ಸಂಘ’ಗಳನ್ನು ಹುಟ್ಟುಹಾಕಿದವರು ನಾವು. ಇವತ್ತು ಸರಕಾರಕ್ಕೆ ಅದರಿಂದ ಎಷ್ಟು ಕೋಟಿ ಆದಾಯ ಬರುತ್ತಿದೆ. ‘ಭಾಗ್ಯ ಲಕ್ಷ್ಮೀ’ ಯೋಜನೆಯನ್ನು ಕೆಳಮಟ್ಟದಲ್ಲಿ ಜಾರಿ ತರುವವರು ನಾವು. ಮಹತ್ವಪೂರ್ಣ ಯೋಜನೆ ಹೆಸರಿನಲ್ಲಿ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶ ಕೊಡಲು ತೀರ್ಮಾನಿಸಿರುವ ಯೋಜನೆಯನ್ನೂ ನಾವೇ ಜಾರಿಗೆ ತರುತ್ತೇವೆ. ಇಷ್ಟೆಲ್ಲಾ ಮಾಡುವವರು 10 ಸಾವಿರ ತಿಂಗಳಿಗೆ ಕೊಡಿ ಎಂದು ಕೇಳಿದರೆ ತಪ್ಪಾಗುತ್ತಾ?” ಎನ್ನುತ್ತಾರೆ ಕೊಡಗಿನ ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಬೆಂಗಳೂರಿಗೆ ಹೋರಾಟ, ಪ್ರತಿಭಟನೆ, ಧರಣಿಗಳು ಹೊಸತಲ್ಲ. 90ರ ದಶಕದಲ್ಲಿ ಆಗಿನ್ನೂ ವಿಧಾನಸೌಧದ ಮುಂಭಾಗ ಪ್ರತಿಭಟನೆಗಳಿಗೆ ಅವಕಾಶ ಇದ್ದಾಗ ಪ್ರೊ. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಗುಂಗು ಇನ್ನೂ ಇದೆ. ಹೀಗಿರುವಾಗಲೇ ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿಗೆ ಬಂದು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ನಮ್ಮ ಗ್ರಾಮೀಣ ಭಾಗದಲ್ಲಿ ಮಕ್ಕಳು ಸುರಕ್ಷಿತವಾಗಿ ಹುಟ್ಟುವಂತೆ ಕಾಳಜಿ ತೋರಿಸುತ್ತಿರುವ ಈ ಮಹಿಳೆಯರ ದನಿಗೆ ಆಶ್ವಾಸನೆಗಳೇ ಬದುಕಾಗದಿರಲಿ.

Leave a comment

Top