An unconventional News Portal.

ಆಂಧ್ರ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ: ಮನೆಯಲ್ಲಿ ಸಿಕ್ಕಿದ್ದು ಚಿನ್ನಾಭರಣಗಳ ರಾಶಿ!

ಆಂಧ್ರ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ: ಮನೆಯಲ್ಲಿ ಸಿಕ್ಕಿದ್ದು ಚಿನ್ನಾಭರಣಗಳ ರಾಶಿ!

ಕಳೆದ ಮೂರು ದಿನಗಳಿಂದ ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ‘ಭ್ರಷ್ಟಾಚಾರ ನಿಗ್ರಹ ದಳ’ ನಡೆಸುತ್ತಿರುವ ಕಾರ್ಯಾಚರಣೆಗೆ  ಜನ ಬೆಚ್ಚಿ ಬಿದ್ದಿದ್ದಾರೆ. ರಾಜ್ಯ ಕಂಡ ಭ್ರಷ್ಟ ಅಧಿಕಾರಿಯೊಬ್ಬನ ಮನೆಯಲ್ಲಿ ಸಿಕ್ಕ ಅಕ್ರಮ ಆಸ್ತಿ ಪ್ರಮಾಣವೇ ದಂಗುಬಡಿಸುವಂತಿದೆ.

ರಾಜ್ಯದ ಸಾರಿಗೆ ಇಲಾಖೆಯ ಉಪ ಆಯುಕ್ತ ಎ. ಮೋಹನ್, ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಕ್ಕಿಬಿದ್ದಾತ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಈತ ಮಾಡಿರುವ ಸ್ಥಿರಾಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಒಟ್ಟು 9 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳಿಗೆ ಲೋಡುಗಟ್ಟಲೆ ಚಿನ್ನಾಭರಣ, ಹಣ ಹಾಗೂ ದಾಖಲೆ ಪತ್ರಗಳು ಸಿಕ್ಕಿವೆ.

“ನಾನಾ ಕಡೆಗಳಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳಿಗೆ ಸಿಗುತ್ತಿರುವ ಚಿನ್ನಾಭರಣಗಳು, ಕಪ್ಪು ಹಣ, ಸ್ಥಿರಾಸ್ತಿಯ ಒಟ್ಟು ಮೌಲ್ಯವೇ ಈವರೆಗೆ 800 ಕೋಟಿ ರೂಪಾಯಿ ದಾಟಿದೆ,” ಎಂದು ಇಂಗ್ಲಿಷ್ ದೈನಿಕ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪರಮ ಭ್ರಷ್ಟ:

ಸಾರಿಗೆ ಇಲಾಖೆ ಎಂಬುದು ಆಯಾ ರಾಜ್ಯಗಳಲ್ಲಿ ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಒಂದು. ಹೀಗಾಗಿ, ಭ್ರಷ್ಟಾಚಾರದ ಪ್ರಮಾಣವೂ ಹೆಚ್ಚಿರುತ್ತದೆ. ಇದಕ್ಕೆ ಆಂಧ್ರ ಪ್ರದೇಶದ ಸಾರಿಗೆ ಇಲಾಖೆ ಹೊರತಾಗಿರಲಿಲ್ಲ. 1988ರಲ್ಲಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ ಎ. ಮೋಹನ್, ಮರು ವರ್ಷವೇ ಸಾರಿಗೆ ಇಲಾಖೆಗೆ ವರ್ಗಾವಣೆ ಪಡೆದುಕೊಂಡಿದ್ದ. ಅವಿಭಜಿತ ಆಂಧ್ರ ಪ್ರದೇಶದ ಚಿತ್ತೂರು, ಅನಂತಪುರ, ಪ್ರಕಾಸಂ, ಕಡಪ ಹಾಗೂ ಹೈದ್ರಾಬಾದ್ ನಗರಗಳಲ್ಲಿ ಈತ ಸೇವೆ ಸಲ್ಲಿಸಿದ್ದ.

“ಸಾರಿಗೆ ಇಲಾಖೆಯಲ್ಲಿ ಈತನ ಭ್ರಷ್ಟತೆಗೆ ಇತಿಹಾಸವೇ ಇತ್ತು. ತನ್ನ ಅಕ್ರಮ ದುಡಿಮೆಯನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಇಲಾಖೆಯಲ್ಲಿ ಖುಷಿ ತಂದಿದೆ,” ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ಮುಂದುವರಿದ ತನಿಖೆ: 

ಎ. ಮೋಹನ್ ಕುಮಾರ್ ವಿಚಾರದಲ್ಲಿ ‘ಭ್ರಷ್ಟಾಚಾರ ನಿಗ್ರಹ ದಳ’ ಕೈ ಇಟ್ಟಲೆಲ್ಲಾ ಅಕ್ರಮ ಆಸ್ತಿಗಳು ಸಿಗುತ್ತಿವೆ. ಇನ್ನೂ ಕೆಲವು ಬ್ಯಾಂಕ್ ಲಾಕರ್ಗಳನ್ನು ಅಧಿಕಾರಿಗಳು ತೆರೆಯಬೇಕಿದೆ. ಸದ್ಯ, ಈತನನ್ನು ವಿಜಯವಾಡ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

ಹೈದ್ರಾಬಾದಿನ ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಸಿಕ್ಕ ಚಿನ್ನಾಭರಣದ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗುಡ್ಡೆಯಾಗಿ ಬಿದ್ದಿರುವ ಆಭರಣ ರಾಶಿ ಎಲ್ಲರ ಗಮನ ಸೆಳೆಯುತ್ತಿದೆ.

andra-acb-raid-2

Top