An unconventional News Portal.

‘ನಾನೂ ತಿನ್ನಲ್ಲ; ತಿನ್ನಲೂ ಬಿಡಲ್ಲ’: ಅಮಿತ್‌ ಶಾ ಪುತ್ರನ ಕಂಪನಿ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ

‘ನಾನೂ ತಿನ್ನಲ್ಲ; ತಿನ್ನಲೂ ಬಿಡಲ್ಲ’: ಅಮಿತ್‌ ಶಾ ಪುತ್ರನ ಕಂಪನಿ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ

ಆಂಗ್ಲಭಾಷೆಯ ಅಂತರ್ಜಾಲ ಸುದ್ದಿತಾಣ ‘ದಿ ವೈರ್’ ಪ್ರಕಟಿಸಿದ ಸುದ್ದಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಒಡೆತನ ಕಂಪನಿಯೊಂದು ಕಳೆದ ಮೂರು ವರ್ಷಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬೆಳೆದ ಪರಿಯನ್ನು ವರದಿ ಬಿಚ್ಚಿಟ್ಟಿತ್ತು. ಭಾನುವಾರ ವರದಿ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ, ಶಾ ಪತ್ರನ ಕಂಪನಿ ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಆದೇಶಿಸಬೇಕು ಎಂದು ಅದು ಒತ್ತಾಯಿಸಿದೆ.

ಈ ನಡುವೆ, ವರದಿಯನ್ನು ‘ತಪ್ಪು ಮಾಹಿತಿ’ ಹಾಗೂ ‘ಮಾನಹಾನಿಕರ’ ಎಂದು ಜರಿದಿರುವ ಬಿಜೆಪಿ, ‘ದಿ ವೈರ್‌’ ವಿರುದ್ಧ 100 ಕೋಟಿ ರೂಪಾಯಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.

ಏನಿದು ಪ್ರಕರಣ?: 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪುತ್ರ ಜೇ ಅಮಿತ್‌ಭಾಯ್ ಶಾ ಒಡೆತನದ ‘ಟೆಂಪಲ್‌ ಎಂಟರ್‌ಪ್ರೈಸಸ್‌ ಲಿ., ವಹಿವಾಟು ಕಳೆದ ಮೂರು ವರ್ಷಗಳಲ್ಲಿ 16 ಸಾವಿರ ಪಟ್ಟು ಹೆಚ್ಚಳವಾಗಿದೆ. ಅದೂ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಂಪನಿ ಬೆಳವಣಿಗೆ ಅಚ್ಚರಿಯಾಗುವ ರೀತಿಯಲ್ಲಿ ಜಾಸ್ತಿಯಾಗಿದೆ ಎಂಬುದನ್ನು ‘ದಿ ವೈರ್‌’ ವರದಿ ಹೇಳಿತ್ತು. ಸದರಿ ಕಂಪನಿಯು ‘ರಿಜಿಸ್ಟ್ರಾರ್‌ ಆಫ್‌ ಕಂಪನಿ (ಆರ್‌ಓಸಿ)ಗೆ ಸಲ್ಲಿಸಿದ ವಾರ್ಷಿಕ ಲೆಕ್ಕಪತ್ರವನ್ನು ಅಂತರ್ಜಾಲ ಸುದ್ದಿತಾಣ ವರದಿಯ ಮೂಲವಾಗಿ ಬಳಸಿಕೊಂಡಿದೆ.

ವರದಿಯಲ್ಲಿ, ‘ಕಂಪನಿಯ ವಾರ್ಷಿಕ ಲೆಕ್ಕಪತ್ರಗಳು ಹೇಳುವ ಪ್ರಕಾರ 2013 ಮತ್ತು 2014ರ ಆರ್ಥಿಕ ವರ್ಷಗಳ ಕೊನೆಯಲ್ಲಿ  ಟೆಂಪಲ್‌ ಎಂಟರ್‌ಪ್ರೈಸಸ್ ಪ್ರೈ ಲಿ., ಕ್ರಮವಾಗಿ 6,230 ಮತ್ತು 1,724 ರೂಪಾಯಿ ನಷ್ಟವನ್ನು ತೋರಿಸಿತ್ತು. 2014-15ನೇ ಆರ್ಥಿಕ ವರ್ಷದಲ್ಲಿ ವಾರ್ಷಿಕ ಆದಾಯವನ್ನು 50 ಸಾವಿರ ಎಂದು ತೋರಿಸಿದ್ದ ಕಂಪನಿ, 18,728 ರೂಪಾಯಿ ಲಾಭವಾಗಿದೆ ಎಂದು ಲೆಕ್ಕಪತ್ರವನ್ನು ಸಲ್ಲಿಸಿತ್ತು. ಆದರೆ, 2015-16ನೇ ಸಾಲಿನಲ್ಲಿ ಕಂಪನಿ ಸಲ್ಲಿಸಿದ ಲೆಕ್ಕಪತ್ರಗಳ ಪ್ರಕಾರ, ಅದರ ವಹಿವಾಟು ಒಂದೇ ವರ್ಷದಲ್ಲಿ 80.5 ಕೋಟಿಗೆ ಏರಿಕೆಯಾಗಿದೆ’ ಎಂಬುದನ್ನು ದಾಖಲೆಗಳ ಆಧಾರದಲ್ಲಿ ಹೇಳಿತ್ತು.

ಹೀಗೆ, ಅಮಿತ್ ಶಾ ಪುತ್ರನ ಒಡೆತನ ಕಂಪನಿಯ ವಹಿವಾಟು ಹೆಚ್ಚಾಗುವ ಹಿಂದೆ, 15.78 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದೂ ಕಾರಣ ಎಂಬುದನ್ನು ದಾಖಲೆಗಳು ಹೇಳುತ್ತಿವೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ, ರಿಲಯನ್ಸ್‌ ಕಂಪನಿಯ ಗುಜರಾತ್‌ ರಾಜ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಪರಿಮಲ್‌ ನತ್ವಾನಿ ಎಂಬುವವರಿಗೆ ಸೇರಿದ ಸಮ್ಧಿ ಎಂಬ ಕಂಪನಿಯಿಂದ ಜೇ ಅಮಿತ್‌ಭಾಯ್‌ ಶಾ ಒಡೆತನದ ಕಂಪನಿ ಸಾಲ ಪಡೆದಿದ್ದಾಗಿ ಹೇಳಿಕೊಂಡಿದೆ. ಆದರೆ, ಸಮ್ದಿ ಕಂಪನಿ ಸಲ್ಲಿಸಿದ ಲೆಕ್ಕಪತ್ರಗಳಲ್ಲಿ ಸಾಲ ನೀಡಿದ ಅಂಶವೇ ನಾಪತ್ತೆಯಾಗಿದೆ ಎಂದು ‘ದಿ ವೈರ್‌’ ವರದಿ ಹೇಳುತ್ತದೆ.

‘ದಿ ವೈರ್’ ಪ್ರಕಟಿಸಿದ ಮೂಲ ವರದಿ ಇಲ್ಲಿದೆ.

ಮೋದಿ ಕ್ರಮ ಕೈಗೊಳ್ಳಲಿ:

2014ರಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ನಾ ಖಾಯೇಗಾ, ನಾ ಖಾನೇದೂಂಗ’ (ನಾನೂ ತಿನ್ನಲ್ಲ, ತಿನ್ನಲೂ ಬಿಡೋಲ್ಲ’ ಎಂದು ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದರು. ಇದೀಗ ಅವರ ಆಪ್ತ, ಬಿಜೆಪಿ ರಾಜ್ಯಧ್ಯಕ್ಷ ಅಮಿತ್‌ ಶಾ ಪುತ್ರನ ಒಡೆತನದಲ್ಲಿದ್ದ ಕಂಪನಿಯ ವಹಿವಾಟಿನಲ್ಲಿ ಅಕ್ರಮ ನಡೆದಿರುವ ಸಾಧ್ಯತೆಯನ್ನು ವರದಿ ಬಯಲಿಗೆ ಎಳೆದಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷ ಪ್ರಕರಣವನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಹಾಗೂ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದೆ.

ಅಮಿತ್‌ ಶಾ ನೇತೃತ್ವದಲ್ಲಿ ಕೇರಳದಲ್ಲಿ ಬಿಜೆಪಿ ‘ಜನ ಸುರಕ್ಷಾ ಯಾತ್ರೆ’ಯನ್ನು ಆಯೋಜನೆ ಮಾಡಿದೆ. ಅದರ ಉದ್ಘಾಟನೆ ನಂತರ ಅಮಿತ್‌ ಶಾ ಕೇರಳದಿಂದ ವಾಪಾಸಾಗಿ ರಾಜಧಾನಿ ದಿಲ್ಲಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ಅದೇ ಸಮಯದಲ್ಲಿ ಅವರ ಪುತ್ರನ ಕಂಪನಿಯ ಅನುಮಾನಾಸ್ಪದ ವಹಿವಾಟಿನ ವಿವರಗಳು ಬಹಿರಂಗವಾಗಿವೆ.

ಅಧಿಕಾರಕ್ಕೆ ಬಂದ ಆರಂಭದಿಂದಲೂ ಭ್ರಷ್ಟಾಚಾರದ ವಿರುದ್ಧ ಗುಡುಗುತ್ತಲೇ ಬಂದವರು ಪ್ರಧಾನಿ ಮೋದಿ. ಯುಪಿಎ-2 ಅವಧಿಯಲ್ಲಿ ಕೋಲ್ಗೇಟ್, ಕಾಮಲ್‌ವೆಲ್ತ್‌, 2ಜಿಯಂತಹ ಬಹುಕೋಟಿ ಹಗರಣಗಳಿಂದ ಬೇಸತ್ತಿದ್ದ ದೇಶದ ಜನತೆ, ಮೋದಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಿದ್ದರು. ಮೂರೂವರ್ಷಗಳ ಆಡಳಿತದ ನಂತರವೂ ಜನ, ಭ್ರಷ್ಟ್ರಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ.

ಇಂತಹ ಸಮಯದಲ್ಲಿಯೇ, ಬಿಜೆಪಿ ರಾಷ್ಟ್ರಾಧ್ಯಕ್ಷರ ಪುತ್ರನ ಅನುಮಾನಾಸ್ಪದ ವಹಿವಾಟಿನ ವಿವರ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ತಮಗಿರುವ ಭ್ರಷ್ಟಾಚಾರ ವಿರೋಧಿ ಮನಸ್ಥಿತಿಯ ಇಚ್ಚಾಶಕ್ತಿಯ ಪ್ರದರ್ಶನವನ್ನು ಮಾಡಬೇಕಿದೆ. ಅದನ್ನು ಹೊರತುಪಡಿಸಿ, ಸುದ್ದಿಯನ್ನು ಪ್ರಕಟಿಸಿದ ಅಂತರ್ಜಾಲ ತಾಣದ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಲು ಬಿಜೆಪಿ ಮುಂದಾಗಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಚಿತ್ರ: ದಿ ವೈರ್‌ ಡಾಟ್‌ ಇನ್.

 

Leave a comment

Top