An unconventional News Portal.

‘ನುಡಿದಂತೆ ನಡೆದ’ ಪತ್ರಕರ್ತ ತನ್ನ ಅಂಕಣವನ್ನೇ ಖಾದ್ಯ ಮಾಡಿ ತಿಂದ!

‘ನುಡಿದಂತೆ ನಡೆದ’ ಪತ್ರಕರ್ತ ತನ್ನ ಅಂಕಣವನ್ನೇ ಖಾದ್ಯ ಮಾಡಿ ತಿಂದ!

ಪತ್ರಿಕೋದ್ಯಮ ನೈತಿಕತೆ ಕಳೆದುಕೊಳ್ಳುತ್ತಿದೆ ಎನ್ನುವ ಆಪಾದನೆಗಳ ಹೊತ್ತಲ್ಲಿ, ‘ನುಡಿದಂತೆ ನಡೆದ’ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಡೇನಾ ಮಿಲ್’ಬ್ಯಾಂಕ್ ಜಾಗತಿಕ ಪತ್ರಿಕೋದ್ಯಮದಲ್ಲಿ ಅಚ್ಚರಿಗೆ ಕಾರಣರಾಗಿದ್ದಾರೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದರೆ ತಾನು ತನ್ನ ಅಂಕಣವನ್ನೇ ತಿನ್ನುತ್ತೇನೆ (ಐ ವಿಲ್ ಈಟ್ ಮೈ ಕಾಲಂ) ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ಕಾಲಮಿಸ್ಟ್ ಡೇನಾ ಮಿಲ್’ಬ್ಯಾಂಕ್ ಅಂಕಣವೊಂದರಲ್ಲಿ ಬರೆದುಕೊಂಡಿದ್ದರು.

ಇದೀಗ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಿದ್ದಂತೆ  ತನ್ನ ಮಾತನ್ನು ಉಳಿಸಿಕೊಂಡಿರುವ ಮಿಲ್’ಬ್ಯಾಂಕ್ ತನ್ನ ಅಂಕಣ ಪ್ರಕಟವಾದ ಪತ್ರಿಕೆಯ ಕಾಗದದ ಪುಟದಿಂದಲೇ ಖಾದ್ಯ ತಯಾರಿಸಿ ತಿಂದಿದ್ದು ಸುದ್ದಿಯಾಗಿದೆ.

ಅಮೆರಿಕಾದ ಅಗ್ರಗಣ್ಯ ಪತ್ರಕರ್ತರ ಸಾಲಿನಲ್ಲಿ ನಿಲ್ಲುವ ಹೆಸರು ಡೇನಾ ಮಿಲ್’ಬ್ಯಾಂಕ್. ಅಮೆರಿಕಾದ ರಾಜಕೀಯ ವರದಿಗಾರಿಕೆಯಲ್ಲಿ ಇವರದ್ದು ದೊಡ್ಡ ಹೆಸರು. 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯನ್ನು ಕವರ್ ಮಾಡಿದ ಡೇನಾ, ಆ ನಂತರ 2004 ಚುನಾವಣೆಯನ್ನೂ ವರದಿ ಮಾಡಿದ್ದರು. ಇದಾದ ಬಳಿಕ  ನಡೆದ 2008 ಮತ್ತು 2012ರ ಅಧ್ಯಕ್ಷೀಯ ಚುನಾವಣೆಗಳನ್ನೂ ಮಿಲ್’ಬ್ಯಾಂಕ್ ಹತ್ತಿರದಿಂದ ನೋಡಿದವರು. ‘ದಿ ನ್ಯೂ ರಿಪಬ್ಲಿಕ್’, ‘ದಿ ವಾಲ್’ಸ್ಟ್ರೀಟ್ ಜರ್ನಲ್’ನಂಥ ಖ್ಯಾತ ಪತ್ರಿಕೆಗಳಿಗೆ ‘ವೈಟ್ ಹೌಸ್’ ಬೀಟ್ ಮಾಡುತ್ತಿದ್ದವರು ಡೇನಾ ಮಿಲ್’ಬ್ಯಾಂಕ್.

ಸದ್ಯ ಅಮೆರಿಕಾದ ಪ್ರತಿಷ್ಠತ ಪತ್ರಿಕೆ ‘ವಾಷಿಂಗ್ಟನ್ ಪೋಸ್ಟ್’ನಲ್ಲಿ ಅಂಕಣಕಾರರಾಗಿರುವ ಡೇನಾ 7 ತಿಂಗಳ ಹಿಂದೆ ಪತ್ರಿಕೆಗೆ ಅಂಕಣವೊಂದನ್ನು ಬರೆದಿದ್ದರು. 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯನ್ನು ವಸ್ತುವಾಗಿಸಿಕೊಂಡ ಅಂಕಣವದು. ಅದರಲ್ಲಿ ತಮ್ಮ ರಾಜಕೀಯ ವರದಿಗಾರಿಕೆಯ ಅನುಭವದ ಆಧಾರದ ಮೇಲೆ ಟ್ರಂಪ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಡೇನಾ ಮಂಡಿಸಿದ್ದರು. ಟ್ರಂಪ್ ಸೋಲುತ್ತಾರೆ, ಇಲ್ಲದಿದ್ದರೆ ನಾನು ಈ ಕಾಲಂ ಅನ್ನು ತಿನ್ನುತ್ತೇನೆ ಎನ್ನುವ ತಲೆಬರಹ (Trump will lose, or I will eat this column) ದೊಂದಿಗೆ ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಿಲ್ಲ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೆಲ್ಲಾ ನಡೆದಿದ್ದು ಅಕ್ಟೋಬರ್ 2, 2015ರ ಅಂಕಣದಲ್ಲಿ. ಆಗಿನ್ನೂ ಅಮೆರಿಕಾದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷಗಳೊಳಗೆ ಆಂತರಿಕ ಚುನಾವಣೆಗಳು ಆರಂಭವಾಗಿದ್ದವು ಅಷ್ಟೇ.

ಇದೆಲ್ಲಾ ನಡೆದು ಏಳು ತಿಂಗಳು ಕಳೆದಿದೆ. ಕಳೆದ ವಾರ ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಗಳು ಮುಗಿದು ಡೊನಾಲ್ಡ್ ಟ್ರಂಪ್ ಆ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯೂ ಆಯ್ತು. ಇಷ್ಟೆಲ್ಲಾ ಆದಾಗ ಇಕ್ಕಟ್ಟಿಗೆ ಸಿಲುಕಿದವರು ಡೇನಾ ಮಿಲ್’ಬ್ಯಾಂಕ್. ವಿಧಿ ಇಲ್ಲದೇ ಅವರು ಹೇಳಿದ ಮಾತನ್ನು ಉಳಿಸಿಕೊಳ್ಳಲೇಬೇಕಾಗಿ ಬಂತು.

ಕಳೆದ ವಾರವೇ ತಮ್ಮ ಚಾಲೆಂಜನ್ನು ಪೂರೈಸಲು ಮುಂದಾದ ಪತ್ರಕರ್ತ ಡೇನಾ, ವಾಷಿಂಗ್ಟನ್’ನ ಖ್ಯಾತ ಬಾಣಸಿಗ ವಿಕ್ಟರ್ ಅಲ್ಬಿಸು ತಯಾರಿಸಿಕೊಟ್ಟ ನಾಲ್ಕು ಬಗೆಯ ವಿಶೇಷ ಖಾದ್ಯಗಳನ್ನು ತುಂಬಾ ನೋವಿನಿಂದಲೇ ತಿಂದು ಮುಗಿಸಿದರು. ಈ ಖಾದ್ಯಗಳನ್ನು ಡೇನಾ ಅಕ್ಟೋಬರ್ 4ರಂದು ಬರೆದಿದ್ದ ಪತ್ರಿಕೆಯ ಅಂಕಣದ ಕಾಗದದ ತುಂಡುಗಳಿಂದ ತಯಾರಿಸಲಾಗಿತ್ತು ಎಂಬುದು ವಿಶೇಷ.

ಪತ್ರಿಕೋದ್ಯಮದಲ್ಲಿ ಆಡುವ ಮಾತುಗಳು, ಬರೆಯುವ ಶಬ್ದಗಳ ಬಗ್ಗೆ ಎಷ್ಟರಮಟ್ಟಿಗೆ ಜಾಗರೂಕರಾಗಿರಬೇಕು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.

Top