An unconventional News Portal.

ಇನ್ನು ಮುಂದೆ ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ: ಯಾರಿಗೇನು ಲಾಭ?

ಇನ್ನು ಮುಂದೆ ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ: ಯಾರಿಗೇನು ಲಾಭ?

ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಜೂನ್ 16ರಿಂದ ಬೆಂಗಳೂರು ಸೇರಿದಂತೆ ದೇಶದ ಐದು ಮಹಾನಗರಗಳ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನಿನಿತ್ಯದ ಆಧಾರದ ಮೇಲೆ ಬದಲಾವಣೆಯಾಗಲಿದೆ.

ಇಲ್ಲೀವರೆಗೆ ಮುಂದುವರಿದ ದೇಶಗಳಲ್ಲಿ ಇಂಧನ ಬೆಲೆಯಲ್ಲಿ ಹೀಗೊಂದು ಸಂಪ್ರದಾಯವನ್ನು ಪಾಲಿಸಲಾಗುತ್ತಿತ್ತು. ಆಯಾ ದಿನದ ಕಚ್ಚಾತೈಲ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪ್ರತಿ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿತ್ತು. ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂದು ಕರೆಯುವ ಈ ಪದ್ಧತಿಯನ್ನು ಭಾರತದಲ್ಲಿಯೂ ಜಾರಿಗೆ ತರಲು ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ತೀರ್ಮಾನಿಸಿವೆ.

ಇಷ್ಟಕ್ಕೂ ಈ ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂದರೇನು? ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು? ಪೆಟ್ರೋಲಿಂ ಕಂಪನಿಗಳ ಈ ತೀರ್ಮಾನದಿಂದ ಆಗುವ ರಾಜಕೀಯ ಪರಿಣಾಮಗಳೇನು? ಇದಕ್ಕೆ ಇಂಧನ ಮಾರಾಟಗಾರರ ಪ್ರತಿಕ್ರಿಯೆ ಏನಿದೆ? ಈ ಕುರಿತು ವಿಸ್ತೃತ ವರದಿ ಇಲ್ಲಿದೆ.

ಇಂಧನ ಮಾರುಕಟ್ಟೆ:

ಭಾರತದ ದೊಡ್ಡ ಮಾರುಕಟ್ಟೆಗಳ ಪೈಕಿ ಒಂದಾದ ಇಂಧನ ಮಾರುಕಟ್ಟೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಇತರೆ ದೇಶಗಳಿಗೆ ಹೋಲಿಸಿದರೆ ಇಲ್ಲಿ ಪೈಪೋಟಿ ಕಡಿಮೆ. ಇದಕ್ಕೆ ಕಾರಣ, ಪೆಟ್ರೋಲಿಂ ಮಾರುಕಟ್ಟೆಯನ್ನು ಆಳುತ್ತಿರುವುದು ಸರಕಾರಿ ಸ್ವಾಮ್ಯದ ಮೂರು ಕಂಪನಿಗಳು ಹಾಗೂ ರಾಜ್ಯ ಹಾಗೂ ಕೇಂದ್ರ ಸರಕಾರಿಗಳಿಗೆ ಇದು ಆದಾಯದ ಮೂಲವಾಗಿರುವುದು.

ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್‌ಗಳು ದೇಶದ ತೈಲ ಮಾರುಕಟ್ಟೆಯ ಸುಮಾರು ಶೇ. 95ರಷ್ಟು ಆವರಿಸಿಕೊಂಡಿವೆ. ಬಾಕಿ ಶೇ. 5ರಷ್ಟು ಮಾರುಕಟ್ಟೆಯನ್ನು ರಿಲಯನ್ಸ್, ಶೆಲ್‌ನಂತಹ ಖಾಸಗಿ ಕಂಪನಿಗಳು ಆಳುತ್ತಿವೆ.

ನಮ್ಮಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಸರಕಾರಿ ಸ್ವಾಮ್ಯದ ಕಂಪನಿಗಳೇ ತಿಂಗಳಿಗೆ ಎರಡು ಬಾರಿ ಬದಲಾವಣೆ ಮಾಡುತ್ತಿದ್ದವು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹಾಗೂ ರೂಪಾಯಿ ವಿನಿಮಯ ದರವನ್ನು ಆಧರಿಸಿ ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯಲ್ಲಿ ವ್ಯತ್ಯಾಸ ಮಾಡಲಾಗುತ್ತಿತ್ತು. ಇದೀಗ, ಪ್ರತಿ ದಿನದ ಆಧಾರದ ಮೇಲೆ ಪ್ರತಿ ಲೀಟರ್ ತೈಲ ಇಂಧನ ದರವನ್ನು ನಿರ್ಧರಿಸಲು ಪೆಟ್ರೋಲಿಯಂ ಕಂಪನಿಗಳು ಮುಂದಾಗಿವೆ. ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂದು ಕರೆಯುವ ಈ ಪದ್ಧತಿ ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಪಾಲನೆ ಮಾಡಲಾಗುತ್ತಿತ್ತು. ಭಾರತದ ಇಂಧನ ಮಾರುಕಟ್ಟೆ ಕೂಡ ಅಂತಾರಾಷ್ಟ್ರೀಯ ಪದ್ಧತಿಯನ್ನು ಅನುಸರಿಸಲು ಈಗ ಮುಂದಾಗಿದೆ.

ಮೇ. 1ರಂದು ದೇಶದ ಐದು ಕಡೆಗಳಲ್ಲಿ ಪ್ರತಿ ದಿನದ ಆಧಾರದ ಮೇಲೆ ತೈಲ ಬೆಲೆಯನ್ನು ನಿರ್ಧಾರ ಮಾಡುವ ಪರೀಕ್ಷಾರ್ಥ ಪ್ರಯೋಗ ಜಾರಿಯಾಗಿತ್ತು. ಪಾಂಡಿಚೇರಿ, ಚಂಡೀಘಡ್, ಜೇಮ್ಶೆಡ್‌ಪುರ, ಉದಯಪುರ ಹಾಗೂ ವಿಶಾಖಪಟ್ಟಣಗಳಲ್ಲಿ ನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಳಿತಗಳನ್ನು ಪ್ರಯೋಗ ಮಾಡಿ ನೋಡಲಾಗಿದೆ. ನಾಡಿದ್ದು (ಜೂನ್ 16)ರಿಂದ ಬೆಂಗಳೂರು ಸೇರಿದಂತೆ ದೇಶದ ಐದು ಮಹಾನಗರಗಳಲ್ಲಿ ಇದೇ ಪದ್ಧತಿ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಇದೇ ಮಾದರಿಯ ಬೆಲೆ ನಿಗದಿ ವ್ಯವಸ್ಥೆ ಅನಿಷ್ಟಾನಗೊಳ್ಳಲಿದೆ.

 

ಪರಿಣಾಮಗಳೇನು?:

opec-oil-petrol-prices

ಹೀಗೆ, ದಿನನಿತ್ಯದ ಅಧಾರದ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಮಾಡುವುದರಿಂದ ಗ್ರಾಹಕರಿಗೆ ದೊಡ್ಡ ಮಟ್ಟದ ಬದಲಾವಣೆ ಕಾಣಿಸುವುದಿಲ್ಲ. ಪೈಸೆಗಳ ಲೆಕ್ಕದಲ್ಲಿ ತೈಲ ಇಂಧನ ಬೆಲೆಯಲ್ಲಿ ಏರಿಳಿತಗಳಾಗುವುದರಿಂದ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ. ಆದರೆ ಇಂಧನ ಕಂಪನಿಗಳಿಗೆ ತಮ್ಮ ಆದಾಯವನ್ನು ನಿಖರವಾಗಿ ಅಳೆಯಲು ಇದು ಸಹಾಯ ಮಾಡುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗುವ ಬದಲಾವಣೆಯ ಅನುಸಾರ ಬೆಲೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದರಿಂದ ಲಾಭದ ಅಂಶದಲ್ಲಿ ಹೆಚ್ಚಳವಾಗಲಿದೆ. ದೇಶಾದ್ಯಂತ ಇದೇ ಪದ್ಧತಿ ಜಾರಿಯಾದರೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳ ವಾರ್ಷಿಕ ಆದಾಯದಲ್ಲಿ ಶೇ.5-7ರಷ್ಟು ಹೆಚ್ಚಳಾಗಲಿದೆ ಎಂದು ಕೆಲವು ವಿಶ್ಲೇಷಣೆಗಳು ಹೇಳುತ್ತವೆ.

ಇದನ್ನು ಹೊರತು ಪಡಿಸಿದರೆ, ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಜಾರಿಗೆ ಬಂದರೆ, ತೈಲ ಬೆಲೆಯ ವಿಚಾರದಲ್ಲಿ ರಾಜಕೀಯದ ಹಸ್ತಕ್ಷೇಪ ಸಂಪೂರ್ಣವಾಗಿ ದೂರವಾಗಲಿದೆ. ಚುನಾವಣೆ ಸಮಯದಲ್ಲಿ ಇಂಧನ ಬೆಲೆ ಇಳಿಸುವುದು, ಉಳಿದ ಸಮಯದಲ್ಲಿ ಹೆಚ್ಚಳ ಮಾಡುವುದು ಸಂಪೂರ್ಣವಾಗಿ ನಿಂತು ಹೋಗಲಿದೆ.

ಅತಿ ವೇಗವಾಗಿ ಬಳಕೆಯಾಗುವ ವಸ್ತುಗಳ ಮಾರುಕಟ್ಟೆಯ ಮೇಲೆ ಇದು ಪರೋಕ್ಷ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಆದರೆ ಸಂಪೂರ್ಣ ಸ್ವಯಂ ಚಾಲಿತ ವ್ಯವಸ್ಥೆ ಜಾರಿಯಲ್ಲಿ ಇಲ್ಲದ ನಮ್ಮ ದೇಶದಲ್ಲಿ ಗ್ರಾಹಕರು ಬಳಸುವ ನಿತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತಗಳನ್ನು ಇಷ್ಟು ಬೇಗ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇತರೆ ಗ್ರಾಹಕ ಮಾರುಕಟ್ಟೆಗಳ ಮೇಲೆಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಏರಿಳಿತಗಳು ಪರಿಣಾಮಗಳನ್ನು ಬೀರಬಹುದು.

ಡೀಲರ್ಸ್ ಏನಂತಾರೆ?: 

ಸರಕಾರಿ ಸ್ವಾಮ್ಯದ ತೈಲ ಕಂಪನಿಗಳ ಈ ನಿರ್ಧಾರದ ಬಗ್ಗೆ ಡೀಲರ್ಸ್ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಕೆಲವು ಪೆಟ್ರೋಲಿಯಂ ಡೀಲರ್ಸ್ ಸಂಘಟನೆಗಳು ಬಂಕ್‌ಗಳನ್ನು ಬಂದ್ ಮಾಡಲು ಕರೆ ನೀಡಿವೆ. ಕೆಲವು ಸಂಸ್ಥೆಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್‌ ಸಂಪರ್ಕಿಸಿದಾಗ, “ಅಭಿವೃದ್ಧಿ ಹೊಂದಿನ ದೇಶಗಳಲ್ಲಿ ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್ ಜಾರಿಗೆ ತರಲು ಅಗತ್ಯ ಮೂಲ ಸೌಕರ್ಯ ಇದೆ. ನಮ್ಮಲ್ಲಿ ಏನಿದೆ?,” ಎಂದು ಉತ್ತರ ಲಭ್ಯವಾಯಿತು. ಅಸೋಸಿಯೇಶನ್‌ನ ಕಾರ್ಯದರ್ಶಿ ಲೋಕೇಶ್, ”ಇದೊಂದು ಸರಕಾರದ ಆತುರದ ನಿರ್ಧಾರ,” ಎನ್ನುತ್ತಾರೆ.

“ಇದರಿಂದ ಗ್ರಾಹಕರಿಗೆ ದೊಡ್ಡ ವ್ಯತ್ಯಾಸ ಏನೂ ಕಾಣಿಸುವುದಿಲ್ಲ. ಶೇ. 99ರಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರಿಗೆ ಲೀಟರ್ ಬೆಲೆ ಎಷ್ಟಿದೆ ಎಂಬುದು ಗೊತ್ತೇ ಇರುವುದಿಲ್ಲ. ಆದರೆ ಡೀಲರ್ಸ್ ಮಾತ್ರ ದಿನವೂ ಬೆಲೆಯ ಏರಿಳಿತಕ್ಕೆ ತಕ್ಕ ಹಾಗೆ ಬಂಕ್‌ಗಳಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ. ಇದು ಸಮಯವನ್ನು ಬೇಡುವ ಪ್ರಕ್ರಿಯೆ. ನಮ್ಮಲ್ಲಿ ಎಲ್ಲಾ ಬಂಕ್‌ಗಳೂ ಇನ್ನೂ ಸ್ವಯಂ ಚಾಲಿತ ವ್ಯವಸ್ಥೆಯನ್ನು ಹೊಂದಿಲ್ಲ. ಹೀಗಾಗಿ ದಿನವೂ ಬೆಲೆಯಲ್ಲಿ ವ್ಯತ್ಯಾಸ ಮಾಡಿದರೆ ಡೀಲರ್ಸ್ಗೆ ಸಮಸ್ಯೆಯಾಗುತ್ತದೆ,” ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ ಸುಮಾರು 600 ಪೆಟ್ರೋಲ್ ಬಂಕ್‌ಗಳಿವೆ. ಇವುಗಳಲ್ಲಿ ಮಾರಾಟವಾಗುವ ಪ್ರತಿ ಲೀಟರ್‌ ಪೆಟ್ರೋಲ್‌ಗೆ 2.5 ರೂಪಾಯಿ ಹಾಗೂ ಡೀಸೆಲ್‌ಗೆ 1.8 ರೂಪಾಯಿ ಡೀಲರ್ಸ್‌ಗೆ ಸಿಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ತೆರಿಗೆ ರೂಪದಲ್ಲಿ ಗ್ರಾಹಕರಿಂದ ಶೇ. 22ರಿಂದ 18ರಷ್ಟು ವಸೂಲಿ ಮಾಡುತ್ತವೆ. ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್ ಜಾರಿಗೆ ಬಂದಾಕ್ಷಣ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ, ಗ್ರಾಹಕರಿಗೆ ಪೈಸೆಗಳ ಲೆಕ್ಕದಲ್ಲಿ ಮಾತ್ರವೇ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ವ್ಯತ್ಯಾಸವಾದರೆ ಮಾತ್ರವೇ ಇಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸುತ್ತದೆ.

“ನಾವು ದಿನನಿತ್ಯದ ಆಧಾರದ ಮೇಲೆ ಬೆಲೆ ನಿರ್ಧಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ತೀರ್ಮಾನ ತೆಗೆದುಕೊಳ್ಳುವ ಮುನ್ನ ಎಲ್ಲಾ ಬಂಕ್‌ಗಳನ್ನೂ ಸ್ವಯಂ ಚಾಲಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಸಮಯ ನೀಡಬೇಕು. ಮೂಲಸೌಕರ್ಯ ಇಲ್ಲದೆ ಹೊಸ ಬೆಲೆ ನಿಗದಿ ಪದ್ಧತಿಯನ್ನು ಜಾರಿಗೆ ತರುವುದು ಕಷ್ಟ,” ಎನ್ನುತ್ತಾರೆ ಲೋಕೇಶ್.

ಒಟ್ಟಾರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ನಿತ್ಯ ಬದಲಾವಣೆಯಾದರೂ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ದೊಡ್ಡ ವ್ಯತ್ಯಾಸವೇನೂ ಕಾಣಿಸದೇ ಹೋಗಬಹುದು. ಆದರೆ ಭಾರತದ ತೈಲ ಮಾರುಕಟ್ಟೆ ಕೂಡ ಅಂತರಾಷ್ಟ್ರೀಯ ಮಾರುಕಟ್ಟೆಯ ಗುಣಮಟ್ಟವನ್ನು ಹೊಂದಿದಂತೆ ಆಗುತ್ತದೆ. ಅದಾರಚೆಗೆ ನೂರು ರೂಪಾಯಿ ಪೆಟ್ರೋಲ್ ತುಂಬಿಸಿಕೊಳ್ಳುವವರು ನೂರು ರೂಪಾಯಿ ಪೆಟ್ರೋಲ್‌ನ್ನೇ ತುಂಬಿಸಿಕೊಳ್ಳತ್ತಾರೆ. ಅವರ ಪಾಲಿಗೆ ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂಬುದು ಸಂಬಂಧಪಡದ ಕಸರತ್ತು ಅಷ್ಟೆ.

 

Leave a comment

Top