An unconventional News Portal.

‘ಸಾಕ್ಷ್ಯಚಿತ್ರಗಳ ವಿವಾದಸೌಧ’: ನಿರ್ದೇಶಕರ ಬಿನ್ನಹಗಳೂ, ಸಾಮಾಜಿಕ ನ್ಯಾಯದ ಆಗ್ರಹಗಳೂ

‘ಸಾಕ್ಷ್ಯಚಿತ್ರಗಳ ವಿವಾದಸೌಧ’: ನಿರ್ದೇಶಕರ ಬಿನ್ನಹಗಳೂ, ಸಾಮಾಜಿಕ ನ್ಯಾಯದ ಆಗ್ರಹಗಳೂ

ಇದು ಕರ್ನಾಟಕದ ‘ಶಕ್ತಿಕೇಂದ್ರ’; ಜನ ಓಟು ಹಾಕಿ ಆಯ್ಕೆ ಮಾಡಿ ಕಳುಹಿಸುವ ಪ್ರತಿನಿಧಿಗಳು ‘ಸರಕಾರ ಕೆಲಸ’ವನ್ನು ‘ದೇವರ ಕೆಲಸ’ ಎಂದುಕೊಂಡು ಹೊಣೆಗಾರಿಕೆ ನಿಭಾಯಿಸಲು ಕಛೇರಿಗಳಿರುವ ಬೃಹತ್ ಕಟ್ಟಡ. ವಾಸ್ತುಶಿಲ್ಪದಲ್ಲಿ ಬ್ರಿಟನ್ ರಾಣಿಯ ಮನಸ್ಸನ್ನೂ ಕದ್ದ ಶಿಲ್ಪಕಲೆ ಇದು.  ಅಂದಿನ ಪ್ರಧಾನಿ ನೆಹರೂ ಅವರಿಂದ ಶಂಕುಸ್ಥಾಪನೆಗೊಂಡು, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೇಲ್ವಿಚಾರಣೆಯಲ್ಲಿ ಕಣ್ಮನ ಸೆಳೆಯುವಂತೆ ನಿರ್ಮಾಣಗೊಂಡ ಲ್ಯಾಂಡ್‌ಮಾರ್ಕ್‌ ವಿಧಾನಸೌಧ.

ಐತಿಹಾಸಿಕ ಕಟ್ಟಡ ವಿಧಾನಸೌಧಕ್ಕೂ, ವಿವಾದಗಳಿಗೂ ಹತ್ತಿರದ ನಂಟಿದೆ. ಎಷ್ಟರ ಮಟ್ಟಿಗೆ ಎಂದರೆ; ಕಟ್ಟಡದ ನೀಲನಕ್ಷೆಯನ್ನು ಕಾರ್ಯರೂಪಕ್ಕೆ ತಂದ ಕೆಂಗಲ್ ಹನುಮಂತಯ್ಯ ಅವರೇ ಅದರ ಉದ್ಘಾಟನೆ ಸಮಯದಲ್ಲಿ ಬದಲಾಗಿ ಹೋಗಿದ್ದರು. ಹಂಗಾಮಿ ಮುಖ್ಯಮಂತ್ರಿಯಾಗಿ ಕೆಲ ಕಾಲ ಅಧಿಕಾರವಹಿಸಿಕೊಂಡಿದ್ದ ಕಡಿದಾಳು ಮಂಜಪ್ಪ ವಿಧಾನಸೌಧ ಉದ್ಘಾಟನೆ ಸಮಯದಲ್ಲಿ ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದರು. ಅದು, ಸ್ವತಂತ್ರ ಭಾರತದ ಆರಂಭದ ವರ್ಷ, ಇಸವಿ- 1956.

2016ಕ್ಕೆ ವಿಧಾನಸೌಧ ಉದ್ಘಾಟನೆಗೊಂಡು 60 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯ ವಜ್ರ ಮಹೋತ್ಸವವನ್ನು ಆಚರಿಸಲು ಸಂಭ್ರಮದಿಂದ ಸಿದ್ಧತೆಯನ್ನು ಮಾಡಿಕೊಂಡಿತ್ತು. ಅದಕ್ಕಾಗಿ 27 ಕೋಟಿ ವೆಚ್ಚದಲ್ಲಿ ಇದೇ ತಿಂಗಳ 25-26ರಂದು ಎರಡು ದಿನಗಳ ಕಾರ್ಯುಕ್ರಮಕ್ಕೆ ಯೋಜನೆ ರೂಪಿಸಲಾಗಿತ್ತು. ಈ ಸಮಯದಲ್ಲಿ ಹೂವಿನ ಅಲಂಕಾರಕ್ಕೆ 75 ಲಕ್ಷ, ಟೀ- ಕಾಫಿಗೆ 35 ಲಕ್ಷ, ಭೋಜನಕ್ಕೆ 3.75 ಕೋಟಿ,  ಕಸ ಗುಡಿಲು 50 ಲಕ್ಷ ಹೀಗೆ ಒಟ್ಟು 26.87 ಕೋಟಿ ವೆಚ್ಚ ಮಾಡಲು ಸ್ಪೀಕರ್‌ ಕೆ. ಬಿ. ಕೋಳಿವಾಡ ನೇತೃತ್ವದಲ್ಲಿ ಸಿದ್ಧತೆಗಳು ಶುರುವಾಗಿದ್ದವು.

ನಾಡಿನ ಸಮಸ್ಯೆಗಳ ನಡುವೆ, ವಜ್ರಮಹೋತ್ಸವಕ್ಕೆ ದುಬಾರಿ ವೆಚ್ಚ ಮಾಡುವುದು ವಿವಾದಕ್ಕೆ ಒಳಗಾಯಿತು. ಕೊನೆಗೆ, ಸರಕಾರದ ಮಧ್ಯಪ್ರವೇಶದಿಂದ 27 ಕೋಟಿ ವೆಚ್ಚದ ಕಾರ್ಯಕ್ರಮ 10 ಕೋಟಿಗೆ ಇಳಿದಿದೆ. ಎರಡು ದಿನಗಳ ಕಾರ್ಯಕ್ರಮ ಒಂದೇ ದಿನಕ್ಕೆ ಸೀಮಿತಗೊಂಡಿದೆ. ಚರ್ಚೆಯ ಕೇಂದ್ರದಲ್ಲಿದ್ದ 3 ಸಾಕ್ಷ್ಯಚಿತ್ರಗಳಿಗೂ ಅಂದಾಜಿಸಿದ್ದ ಮೊತ್ತದಲ್ಲಿಯೂ ಕಡಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಕ್ಷ್ಯಚಿತ್ರಗಳ ಸರಣಿ: 

ವಿಧಾನಸೌಧದ ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕರುಗಳಾದ ಟಿ. ಎನ್‌. ಸೀತಾರಾಮ್‌ ಅವರ ನೇತೃತ್ವದಲ್ಲಿ ‘ಶಾಸನಸಭೆ ನಡೆದುಬಂದ ದಾರಿ’ ಹೆಸರಿನಲ್ಲಿ ಸಾಕ್ಷ್ಯ ಚಿತ್ರಗಳ ತಯಾರಿಕೆಗೆ ಸರಕಾರ 1.58 ಕೋಟಿ ವೆಚ್ಚದ ಯೋಜನೆ ರೂಪಿಸಿತ್ತು. ‘ವಿಧಾನಸಭೆ ಕಟ್ಟಡ ವಾಸ್ತುಶಿಲ್ಪ’ದ ಕುರಿತು ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕೆ 1 ಕೋಟಿ ಹಾಗೂ ಮಾಸ್ಟರ್ ಕಿಶನ್‌ ಅವರ ಕಂಪನಿಗೆ ‘ವಿಧಾನಸೌಧದ ತ್ರಿಡಿ ವಿಡಿಯೋಗಳ ನಿರ್ಮಾಣಕ್ಕೆ 1 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇದೀಗ ಬಂದ ಮಾಹಿತಿ ಪ್ರಕಾರ ಸಾಕ್ಷ್ಯಚಿತ್ರಗಳಿಗೆ ನೀಡಲಾಗಿರುವ ಮೊತ್ತವನ್ನು ವಿವಾದಗಳ ಹಿನ್ನೆಲೆಯಲ್ಲಿ ಕಡಿತಗೊಳಿಸಲಾಗಿದೆ. ‘ಸಮಾಚಾರ’ ಜತೆ ಮಾತನಾಡಿದ ಮಾಸ್ಟರ್ ಕಿಶನ್, “3ಡಿ ಸ್ಟಿರಿಯೋಸ್ಕೋಪಿಕ್ 360 ಡಿಆರ್‌ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ವಿಧಾನಸೌಧವನ್ನು ತೋರಿಸಲು 8 ತಿಂಗಳ ಹಿಂದೆ ನಾನೇ ಒಂದು ಪ್ರಪೋಸಲ್ ನೀಡಿದ್ದೆ. ಹಲವು ಸುತ್ತಿನ ಮಾತುಕತೆಯ ನಂತರ ಯೋಜನೆ ಅಂಗೀಕಾರವಾಗಿತ್ತು. ಭವಿಷ್ಯದ ತಂತ್ರಜ್ಞಾನ ಬಳಸಿಕೊಂಡು ವಿಧಾನಸೌಧವನ್ನು ವಿನೂತನ ಆಯಾಮದಲ್ಲಿ ಜನರ ಮುಂದಿಡುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಒಂದು ಕೋಟಿ ರೂಪಾಯಿ ಮಂಜೂರು ಆಗಿತ್ತು. ಅದೀಗ 40 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ. ಹೀಗಾಗಿ ವಿಧಾನಸೌಧದ ಆನಿಮೇಶನ್ ವಿಡಿಯೋ ಯೋಜನೆಯನ್ನು ಕೈಬಿಟ್ಟಿದ್ದೇವೆ,” ಎಂದರು.

ವಿವಾದ ಯಾಕೆ?:

ಸಾಮಾನ್ಯವಾಗಿ ಸಾಕ್ಷ್ಯಚಿತ್ರಗಳು ಕಡಿಮೆ ವೆಚ್ಚವನ್ನು ಬೇಡುವ ಕಲಾಕೃತಿಗಳು. ಹೀಗಿರುವಾಗ, ಹಿರಿಯ ನಿರ್ದೇಶಕರು ಹಾಗೂ ಒಬ್ಬ ಯುವ ನಿರ್ದೇಶಕನಿಗೆ ತಲಾ ಒಂದು ಕೋಟಿ ನೀಡಿ ವಿಧಾನಸೌಧದ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಲು ಹೇಳಿದ್ದು ಸಹಜವಾಗಿಗೇ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಲವರು ‘ಅನುಮಾನ’ಗಳನ್ನೂ ವ್ಯಕ್ತಪಡಿಸಿದ್ದರು. ಇದರ ಜತೆಗೆ, ವಜ್ರ ಮಹೋತ್ಸವ ಕಾರ್ಯಕ್ರಮದ ದುಂದು ವೆಚ್ಚವೂ ಸೇರಿಕೊಂಡಿತು.

ಈ ಹಿನ್ನೆಲೆಯಲ್ಲಿ, ‘ಸಮಾಚಾರ’,  ನಿರ್ದೇಶಕ ಟಿ. ಎನ್‌. ಸೀತಾರಾಮ್‌ ಅವರನ್ನು ಸಂಪರ್ಕಿಸಿದಾಗ ನೋವಿನಿಂದಲೇ ಮಾತನಾಡಿದರು. “ಇದು ಒಂದು ಸಾಕ್ಷ್ಯಚಿತ್ರ ಎಂಬ ತಪ್ಪು ಮಾಹಿತಿ ಜನರಿಗೆ ಸಿಕ್ಕಿದೆ. ನಿಜ ಹೇಳಬೇಕು ಎಂದರೆ ಇದು ಒಂದು ಚಿತ್ರವಲ್ಲ. ತಲಾ 25- 30 ನಿಮಿಷಗಳ ಒಟ್ಟು 7 ಸರಣಿ ಸಾಕ್ಷ್ಯಚಿತ್ರಗಳನ್ನು ನಾವು ತಯಾರಿಸುತ್ತಿದ್ದೇವೆ. ಇದರಲ್ಲಿ 136 ವರ್ಷಗಳ ಮೈಸೂರು ಶಾಸನಸಭೆಯಿಂದ ಹಿಡಿದು ಇವತ್ತಿನವರೆಗಿನ ಘಟನಾವಳಿಗಳು ಬರುತ್ತವೆ. ಇದಕ್ಕಾಗಿ ಎಲ್ಲಾ ಮುಖ್ಯಮಂತ್ರಿಗಳು, ವಿರೋಧಪಕ್ಷಗಳ ನಾಯಕರು ಹಾಗೂ ಅವರ ಕಾಲಘಟ್ಟದಲ್ಲಿ ನಡೆದ ಘಟನೆಗಳ ಕುರಿತು ಅಧ್ಯಯನ ಮಾಡಲು ಪ್ರತ್ಯೇಕ ತಂಡವನ್ನು ರಚಿಸಿದ್ದೇವೆ. ಕಳೆದ ನಾಲ್ಕೈದು ತಿಂಗಳುಗಳಿಂದ ಕೆಲಸ ನಡೆಯುತ್ತಿದೆ. ಇನ್ನೂ ಐದಾರು ತಿಂಗಳುಗಳ ಅಗತ್ಯವಿದೆ. ಇಷ್ಟು ದಿನಗಳ ಕಾಲ, ದೊಡ್ಡ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡಬೇಕಾದರೆ ಹಣ ಬೇಕಾಗುತ್ತದೆ. ಜೆ. ಎಚ್‌. ಪಟೇಲ್‌ ಒಬ್ಬರ ಪಾತ್ರಕ್ಕಾಗಿ ಸುಮಾರು 200 ಜನರ ಆಡಿಷನ್ ಮಾಡಿದ್ದೇವೆ. ಇಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿರುವುದು ಕೇವಲ ಸಾಕ್ಷ್ಯಚಿತ್ರವನ್ನು ತಯಾರಿಸಲು ಮಾತ್ರವಲ್ಲ, ಇತಿಹಾಸವನ್ನೇ ಪುನರ್‌ಸೃಷ್ಟಿ ಮಾಡುತ್ತಿದ್ದೇವೆ,” ಎಂದರು.

ಇನ್ನೊಬ್ಬ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ. ಅವರ ತಂಡದ ಜತೆ ಕೆಲಸ ಮಾಡುತ್ತಿರುವ ಆಪ್ತರೊಬ್ಬರು, “ವಿಧಾನಸೌಧದ ವಾಸ್ತುಶಿಲ್ಪಕ್ಕೆ ಸಂಬಂಧಪಟ್ಟಂತೆ ಅಧ್ಯಯನ ತಂಡವೂ ಸೇರಿದಂತೆ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಕಳೆದ ಐದಾರು ತಿಂಗಳುಗಳಿಂದ ಕೆಲಸ ಭರದಿಂದ ಸಾಗಿದೆ. ಈಗ ಹಣದ ವಿಚಾರದಲ್ಲಿ ವಿವಾದ ಎದ್ದಿದೆ. ಆದರೆ ಅದನ್ನು ಪಕ್ಕಕ್ಕಿಟ್ಟು ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ,” ಎಂದರು.

ವಿಧಾನಸೌಧದ ಮಂದೆ ಸಾಕ್ಷ್ಯಚಿತ್ರ ಕೆಲಸದಲ್ಲಿ ನಿರತ ಗಿರೀಶ್ ಕಾಸರವಳ್ಳಿ.

ವಿಧಾನಸೌಧದ ಮಂದೆ ಸಾಕ್ಷ್ಯಚಿತ್ರ ಕೆಲಸದಲ್ಲಿ ನಿರತ ಗಿರೀಶ್ ಕಾಸರವಳ್ಳಿ.

ಅಸಲಿ ಪ್ರಶ್ನೆಗಳು: 

ಸರಕಾರದ ಹಣದಲ್ಲಿ ಯೋಜನೆಗಳು ರೂಪುಗೊಂಡಾಗ ಸಹಜವಾಗಿಯೇ ತೆರಿಗೆದಾರರು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂಬುದರ ಲಕ್ಷಣಗಳು. ಅದು ವಿಧಾನಸೌಧದ ಸಂಬಂಧಪಟ್ಟ ಹಾಗೆ ನಿರ್ಮಾಣಗೊಳ್ಳುತ್ತಿರುವ ಸರಣಿ ಸಾಕ್ಷ್ಯಚಿತ್ರಗಳ ವಿಚಾರದಲ್ಲಿಯೂ ಕಾಣಿಸಿಕೊಂಡಿದೆ. ಹಿಂದೆ, ಕುವೆಂಪು ಅವರ ಹಸ್ತಪ್ರತಿಯನ್ನು ಸರಕಾರದ ಹಣದಲ್ಲಿ ಮುದ್ರಣ ಮಾಡುವ ಯೋಜನೆ ಕೂಡ ವಿವಾದಕ್ಕೆ ಒಳಗಾದ ಇತಿಹಾಸ ಇದೆ. ಅವತ್ತು ಲಂಕೇಶ್ ಪತ್ರಿಕೆಯಲ್ಲಿ ‘ಹಸ್ತಪ್ರತಿಯಲ್ಲಿ ಹಸ್ತಕ್ಷೇಪ’ ಎಂಬ ವರದಿ ಕೂಡ ಪ್ರಕಟವಾಗಿತ್ತು. ಈ ಕಾರಣಕ್ಕಾಗಿಯೇ ಬಹುಕಾಲದ ಒಡನಾಡಿಗಳಾಗಿದ್ದ ಲಂಕೇಶ್ ಮತ್ತು ಕುವೆಂಪು ಪುತ್ರ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ದೂರವಾಗಿದ್ದರು. ಈ ಕುರಿತು ಇನ್ನಷ್ಟು ಒಳನೋಟಗಳನ್ನು ನೀಡುವ ವಕೀಲ ಹಾಗೂ ಲಂಕೇಶ್ ಒಡನಾಡಿ ಸಿ. ಎಸ್‌. ದ್ವಾರಕನಾಥ್, “ಅದು ಎಷ್ಟು ರೂಪಾಯಿಗಳ ಯೋಜನೆ ಎಂಬುದು ನೆನಪಿಲ್ಲ. ಬಹುಶಃ 3-4 ಲಕ್ಷ ರೂಪಾಯಿಗಳಷ್ಟಿರಬಹುದು. ತೇಜಸ್ವಿ ಸರಕಾರದ ಅನುದಾನ ಪಡೆದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯ ಹಸ್ತಪ್ರತಿಯನ್ನು ಮುದ್ರಿಸಲು ಮುಂದಾದರು. ಆ ಸಮಯದಲ್ಲಿಯೇ ಹಸ್ತಪ್ರತಿಯನ್ನು ಕಂಪ್ಯೂಟರ್‌ನಲ್ಲಿ ಎಡಿಟ್‌ ಮಾಡಲು ಹೊರಟಿದ್ದರು. ಇದಕ್ಕೆ ಲಂಕೇಶ್ ಆಕ್ಷೇಪ ಎತ್ತಿದ್ದರು. ಹಸ್ತಪ್ರತಿಯನ್ನು ಪೂರ್ತಿ ಮುದ್ರಣ ಮಾಡಿದರೆ ಉಪಯೋಗ ಇಲ್ಲ. ಅಷ್ಟು ಬೃಹತ್ ಗಾತ್ರದ ಪುಸ್ತಕದ ವೆಚ್ಚ ಹಾಗೂ ಜನರಿಗೆ ಓದಿನ ಅನುಕೂಲವೂ ಕಡಿಮೆ. ಹೀಗಿರುವಾಗ ಯಾಕೆ ದುಂದು ವೆಚ್ಚ ಎಂದಿದ್ದರು,” ಎಂದು ನೆನಪಿಸಿಕೊಳ್ಳುತ್ತಾರೆ.

ಸದ್ಯ, ಸಾಕ್ಷ್ಯಚಿತ್ರಗಳ ವಿಚಾರಕ್ಕೆ ಬರುವ ಅವರು, “ಯಾವುದೇ ಸರಕಾರಗಳು ಇರಲಿ, ‘ಅವರಿಗೇ’ ಯಾಕೆ ಅವಕಾಶ ನೀಡಬೇಕು ಎಂಬುದಷ್ಟೆ ನಮ್ಮ ಪ್ರಶ್ನೆ. ಅಷ್ಟಕ್ಕೂ ಈಗ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಅಂಗೀಕಾರ ಪಡೆದುಕೊಂಡವರ ಸಾಮಾಜಿಕ ಕೊಡುಗೆಗಳಾದರೂ ಏನಿವೆ?” ಎಂದು ಸಿ. ಎಸ್. ದ್ವಾರಕನಾಥ್ ಪ್ರಶ್ನಿಸುತ್ತಾರೆ.

ಕಳೆದ ನಾಲ್ಕು ವರ್ಷಗಳ ಸಿಎಂ ಸಿದ್ದರಾಮಯ್ಯ ಆಡಳಿತ ಮೂಲ ಕಸವು ಮತ್ತು ಕನಸು ಎರಡೂ ಕೂಡ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ. ಆದರೆ ಸಾಕ್ಷ್ಯಚಿತ್ರಗಳ ನಿರ್ಮಾಣದ ವಿಚಾರ ಬಂದಾಗ ಯಾಕೆ ಸಾಮಾಜಿಕ ನ್ಯಾಯ ನೆನಪಾಗಲಿಲ್ಲ ಎಂದು ಪ್ರಶ್ನಿಸುತ್ತಾರೆ ಹಿರಿಯ ನಿರ್ದೇಶಕ, ನಟ ಬಿ. ಸುರೇಶ್. “ವಜ್ರ ಮಹೋತ್ಸವ ಕಾರ್ಯಕ್ರಮದ ಹೊಣೆಗಾರಿಕೆ ಸ್ವೀಕರ್‌ ಕಚೇರಿಗೆ ಬರುತ್ತದಾರೂ, ಸಾರ್ವಜನಿಕ ಒಪ್ಪಿಗೆ ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡುವ ಮುಂದೆ ಆಡಳಿತ ಮತ್ತು ವಿರೋಧ ಪಕ್ಷಗಳ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಅವುಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡುವ ಮುಂಚೆ ಸಾಮಾಜಿಕ ನ್ಯಾಯವನ್ನು ನೆನಪಿಸಿಕೊಳ್ಳಬೇಕಿತ್ತು. ಇದೀಗ ಮೂವರು ನಿರ್ದೇಶಕರಿಗೆ ಯೋಜನೆ ನೀಡಲಾಗಿದೆ. ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡೇ ಹೇಳುವುದಾದರೆ, ಅವರ ಆಯ್ಕೆಗೆ ಬಳಸಿ ಮಾನದಂಡಗಳು ಏನು ಎಂಬುದನ್ನು ಜನರ ಮುಂದಿಡಬೇಕು. ಜತೆಗೆ, ಅಷ್ಟು ಪ್ರಮಾಣದ ಹಣದ ಅಗತ್ಯವೇನಿದೆ ಎಂಬುದನ್ನು ತಾರ್ಕಿಕವಾಗಿ ಸಮರ್ಥನೆ ಮಾಡಿಕೊಳ್ಳಬೇಕು,” ಎನ್ನುತ್ತಾರೆ ಬಿ. ಸುರೇಶ್.

ಪ್ರಶ್ನೆ ಇರುವುದು, ಸಾಕ್ಷ್ಯಚಿತ್ರಗಳ ನಿರ್ಮಾಣದ ಮೂಲಕ ಮುಂದಿನ ತಲೆಮಾರಿಗೆ ವಿಧಾನಸೌಧದ ಹಿರಿಮೆಯನ್ನು ದಾಟಿಸುವ ಕುರಿತು ಅಲ್ಲ. ಬದಲಿಗೆ, ಅದನ್ನು ದಾಟಿಸುವ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವಾಗಲೀ, ತರ್ಕವಾಗಲೀ ಜನರ ಮುಂದಿಡಲಿಲ್ಲ ಯಾಕೆ? ಎಂಬುದು. ತನ್ನ ಹುಟ್ಟಿನಿಂದ ಹಿಡಿದು ವಜ್ರ ಮಹೋತ್ಸವದ ಸಮಯದಲ್ಲಿಯೂ ವಿಧಾನಸೌಧ ವಿವಾಧಗಳಿಂದ ಮುಕ್ತವಾಗಿಲ್ಲ ಎಂಬುದು ಕಾಲ ಸತ್ಯ ಅಷ್ಟೆ.

Leave a comment

Top