An unconventional News Portal.

ರೈಲ್ವೆ ಟಿಕೆಟ್ ದರಕ್ಕೆ ಇಳಿದ ಏರ್ ಇಂಡಿಯಾ ಟಿಕೆಟ್ ಬೆಲೆ: ದಿಲ್ಲಿ- ಬೆಂಗಳೂರು ಮಾರ್ಗದಲ್ಲಿ ‘ಸೂಪರ್ ಸೇವರ್’!

ರೈಲ್ವೆ ಟಿಕೆಟ್ ದರಕ್ಕೆ ಇಳಿದ ಏರ್ ಇಂಡಿಯಾ ಟಿಕೆಟ್ ಬೆಲೆ: ದಿಲ್ಲಿ- ಬೆಂಗಳೂರು ಮಾರ್ಗದಲ್ಲಿ ‘ಸೂಪರ್ ಸೇವರ್’!

ಇನ್ನು ಮುಂದೆ ದಿಲ್ಲಿ- ಬೆಂಗಳೂರು ನಡುವಿನ ಏರ್ ಇಂಡಿಯಾ ವಿಮಾನಯಾನ ದರದಲ್ಲಿ ಭಾರಿ ಇಳಿಕೆಯಾಗಲಿದೆ. ಕೊನೆಯ ನಾಲ್ಕು ಗಂಟೆಗಳ ಅವಧಿಯಲ್ಲಿ ನಿಗದಿತ ಸೀಟುಗಳಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 2 ಟೈರ್ ಎಸಿ ಬೋಗಿಗಳ ಟಿಕೆಟ್ ದರವನ್ನು ಏರ್ ಇಂಡಿಯಾ ಪ್ರಕಟಿಸಿದೆ.

ವಿಮಾನಯಾನ ಕ್ಷೇತ್ರದಲ್ಲಿ ದರ ಪೈಪೋಟಿ ಹಾಗೂ ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥತಿಯ ಹಿನ್ನೆಲೆಯಲ್ಲಿ, ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಮಾರ್ಗಗಳ ನಡುವಿನ ಪ್ರಯಾಣ ದರವನ್ನು ಕಡಿತಗೊಳಿಸಲು ಮುಂದಾಗಿದೆ. ದಿಲ್ಲಿ- ಮುಂಬೈ, ದಿಲ್ಲಿ- ಚೆನ್ನೈ, ದಿಲ್ಲಿ- ಕೋಲ್ಕತ್ತಾ ಹಾಗೂ ದಿಲ್ಲಿ- ಬೆಂಗಳೂರು ನಡುವೆ ರೈಲ್ವೆ ದರದಲ್ಲಿ ವಿಮಾನಯಾನ ಮಾಡಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಲೋಹಾನಿ, “ಕೊನೆಯ ಹಂತದಲ್ಲಿ ವಿಮಾನ ಏರಲು ಬಯಸುವಾಗ ಪ್ರಯಾಣಿಕರು ದುಬಾರಿ ಮೊತ್ತದ ದರವನ್ನು ಪಾವತಿಸಬೇಕಾಗುತ್ತದೆ. ಅಂತಹ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಸಂಸ್ಥೆ ಈ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ,” ಎಂದಿದ್ದಾರೆ.

ಏರ್ ಇಂಡಿಯಾ ದೇಶದ ವಿಮಾನಯಾನ ಮಾರ್ಗಗಳಲ್ಲಿ ಶೇ. 74ರಷ್ಟು ಪ್ರಯಾಣ ನಡೆಸುತ್ತಿದೆ. ಇವುಗಳಲ್ಲಿ ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಮಾರ್ಗಗಳನ್ನು ದರ ಇಳಿಕೆಯ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಲಾಗಿದೆ.

ದಿಲ್ಲಿ ಮತ್ತು ಮುಂಬೈ ನಡುವೆ ರಾಜಧಾನಿ ಎಕ್ಸ್ಪ್ರೆಸ್ ಎಸಿ 2 ಟೈರ್ ಟಿಕೆಕ್ ದರ 2, 870 ರೂಪಾಯಿಗಳಿವೆ. ದಿಲ್ಲಿ ಹಾಗೂ ಚೆನೈ ನಡುವೆ 3, 905 ರೂಪಾಯಿಗಳಿವೆ. ದಿಲ್ಲಿ- ಕೋಲ್ಕತ್ತಾ ನಡುವೆ 2, 890 ಹಾಗೂ ದಿಲ್ಲಿ- ಬೆಂಗಳೂರು ನಡುವೆ 4, 095 ರೂಪಾಯಿಗಳಿವೆ. ಇದೀಗ ಇದೇ ದರದಲ್ಲಿ ವಿಮಾನ ಹಾರಾಟಕ್ಕೆ ನಾಲ್ಕ ಗಂಟೆಗಳ ಮೊದಲ ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಬೆಳೆಸಬಹುದು.

“ಕೊನೆಯ ಕ್ಷಣಗಳಲ್ಲಿ ಖಾಲಿ ಸೀಟುಗಳನ್ನು ತುಂಬುವುದು ನಮ್ಮ ಗುರಿಯಾಗಿದೆ. ಜನಸಾಮಾನ್ಯರಿಗೂ ಅನುಕೂಲವಾಗುವ ದರವನ್ನು ನಿಗದಿ ಮಾಡುವ ಮೂಲಕ ರೈಲ್ವೆ ಪ್ರಯಾಣಿಕರು ವಿಮಾನಯಾನದ ಬಗ್ಗೆ ಆಲೋಚನೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ,” ಎಂದು ಲೋಹಾನಿ ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಏರ್ ಇಂಡಿಯಾ ನಷ್ಟದಲ್ಲಿದೆ. ಬಹುತೇಕ ಮಾರ್ಗಗಳಲ್ಲಿ ಶೇ. 80ರಷ್ಟು ಮಾತ್ರವೇ ಸೀಟುಗಳು ಭರ್ತಿಯಾಗುತ್ತಿವೆ.

ಇದೀಗ ಸಾಮಾನ್ಯ ದರಕ್ಕಿಂತ 2-3 ಪಟ್ಟು ಇಳಿಕೆ ಮಾಡಿರುವುದು ಖಾಸಗಿ ವಿಮಾನಯಾನ ಕಂಪನಿಗಳಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಕೊನೆಯ ಕ್ಷಣಗಳಲ್ಲಿ ವಿಮಾನ ಏರುವ ಅನಿವಾರ್ಯತೆ ಬಿದ್ದಾಗ ಖಾಸಗಿ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ದುಪ್ಪಟ್ಟು ಮಾಡುತ್ತಿದ್ದವು. ಹೀಗಾಗಿ ಏರ್ ಇಂಡಿಯಾ ಪ್ರಕಟಿಸಿರುವ ಈ ‘ಸೂಪರ್ ಸೇವರ್’ ಸ್ಕೀಂ ಬಗ್ಗೆ ಅವುಗಳ ಪ್ರತಿಕ್ರಿಯೆ ಏನಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a comment

Top