An unconventional News Portal.

‘ಹೆಲಿಕ್ಯಾಪ್ಟರ್ ಹಗರಣ’: ಗಾಂಧಿ- ಮೋದಿ ಒಂದೇ ನಾಣ್ಯದ ಎರಡು ಮುಖಗಳು!

‘ಹೆಲಿಕ್ಯಾಪ್ಟರ್ ಹಗರಣ’: ಗಾಂಧಿ- ಮೋದಿ ಒಂದೇ ನಾಣ್ಯದ ಎರಡು ಮುಖಗಳು!

ಗಣ್ಯರ ಓಡಾಟಕ್ಕೆ ಯುಪಿಎ ಸರಕಾರ ಖರೀದಿಸಲು ಹೊರಟಿದ್ದ ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣ’ ಮಂಗಳವಾರ ಸಂಸತ್ ಅಧಿವೇಶನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿತು. ಹಠಕ್ಕೆ ಬಿದ್ದವರಂತೆ, ಪ್ರತಿಪಕ್ಷದ ನಾಯಕರು “ದಾಖಲೆಗಳಿದ್ದರೆ ಒದಗಿಸಿ,” ಎಂದು ಸವಾಲು ಹಾಕಿದರು. ವಾಸ್ತವದಲ್ಲಿ ಸದರಿ ಹಗರಣದ ವಿಚಾರದಲ್ಲಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು; ಸತ್ಯವನ್ನು ಮರೆಯಲ್ಲಿಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನಷ್ಟೆ ಮಾಡುತ್ತಿವೆ ಎನ್ನುತ್ತವೆ ಅಂತರಾಳದ ಸತ್ಯಗಳು.

ಈ ಹಿನ್ನೆಲೆಯಲ್ಲಿ ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ದ ಸಂಪೂರ್ಣ ಜಾತಕವನ್ನು ‘ಸಮಾಚಾರ’ ಇಲ್ಲಿ ಬಿಚ್ಚಿಡಲಿದೆ.

ನಿಷೇಧ ಯಾಕಿಲ್ಲ?: 

ಕಳೆದ ಮೂರು ವರ್ಷಗಳಿಂದ ಆಗಾಗ್ಗೆ ಸದ್ದು ಮಾಡುವ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ‘ಆಗಸ್ಟಾ ವೆಸ್ಟ್ ಲ್ಯಾಂಡ್’ ಹಾಗೂ ಅದರ ಮಾತೃ ಸಂಸ್ಥೆ ‘ಫಿನ್ಮೆಸಾನಿಕ’ ಕಂಪನಿಗಳ ಮೇಲೆ ಭಾರತ ಈವರೆಗೂ ನಿಷೇಧ ಹೇರಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಸದರಿ ಕಂಪನಿಗಳ ಮೇಲೆ ನಿಷೇಧ ಹೇರುವ ಪ್ರಕ್ರಿಯೆ ಶುರುವಾದರೂ, ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ, ನಿಷೇಧ ಪ್ರಕ್ರಿಯೆಗಳಿಗೆ ತಿಲಾಂಜಲಿ ಇಡಲಾಯಿತು. ಯಾಕೆ? ಎಂಬುದನ್ನು ಎರಡೂ ಪಕ್ಷಗಳು ಚರ್ಚೆಗೆ ಎತ್ತಿಕೊಳ್ಳುತ್ತಿಲ್ಲ, ಉತ್ತರವನ್ನೂ ನೀಡಲು ಬಯಸುತ್ತಿಲ್ಲ.

ಈ ಪ್ರಶ್ನೆಗೆ ಉತ್ತರ ಬೇಕು ಎಂದರೆ, ಹಗರಣದ ಕೇಂದ್ರಬಿಂದುವಾಗಿರುವ ಫಿನ್ಮೆಸಾನಿಕ ಕಂಪನಿಯ ಮೂಲಕ್ಕೆ ಇಳಿಯಬೇಕಿದೆ.

ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಮಾತೃ ಸಂಸ್ಥೆ, ಫಿನ್ಮೆಸಾನಿಕ.

ನಂಟು ಯಾರಿಗಿದೆ?:

2013ರಲ್ಲಿ ಹೆಲಿಕಾಪ್ಟರ್ ಖರೀದಿಯ ಡೀಲ್ಗಾಗಿ ಲಂಚ ನೀಡಿದ ಆರೋಪದ ಮೇಲೆ ಆಗಸ್ಟಾ ವೆಸ್ಟ್ ಲ್ಯಾಂಡ್ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಇಟಲಿ ಪೊಲೀಸರು ಬಂಧಿಸಿದರು. ಇದು ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರ ಒತ್ತಡಕ್ಕೆ ಮಣಿದು, ಯುಪಿಎ ಸರ್ಕಾರ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಭವಿಷ್ಯದ ಮಿಲಿಟರಿ ಯೋಜನೆಗಳಿಂದ ಫಿನ್ಮೆಸಾನಿಕ ಕಂಪೆನಿಯನ್ನು ದೂರವಿಡುವ ಮಹತ್ವದ ನಿರ್ಧಾರ (ದೈತ್ಯ ಕಂಪೆನಿ ಫಿನ್ಮೆಸಾನಿಕಾದ ಹೆಲಿಕಾಪ್ಟರ್ಗಳ ವಿನ್ಯಾಸ ಮತ್ತು ಉತ್ಪಾದನೆ ಮಾಡುವ ಅಂಗ ಸಂಸ್ಥೆಯೇ ಆಗಸ್ಟಾ ವೆಸ್ಟ್ ಲ್ಯಾಂಡ್)ವನ್ನು ಅದು ಕೈಗೊಂಡಿತ್ತು. ಆದರೆ ಕಂಪನಿಯನ್ನು ‘ಕಪ್ಪು ಪಟ್ಟಿ’ಗೆ ಸೇರಿಸುವ ನಿರ್ಧಾರಕ್ಕೆ ಬರಲಿಲ್ಲ ಎಂಬುದನ್ನು ಗಮನಿಸಬೇಕಿದೆ. ಇದಕ್ಕೆ ಕಾರಣವಾಗಿದ್ದು ಭಾರತದ ರಕ್ಷಣಾ ಇಲಾಖೆಗೂ, ಫಿನ್ಮೆಸಾನಿಕ ಕಂಪೆನಿಗೂ ಇರುವ ನಂಟು.

ಫಿನ್ಮೆಸಾನಿಕಾ ಜಾಗತಿಕ ರಕ್ಷಣಾ ಮತ್ತು ಏರೋಸ್ಪೇಸ್ ವಲಯದ ಮುಂಚೂಣಿ ಕಂಪೆನಿಗಳಲ್ಲೊಂದು. ಆಗಸ್ಟಾ ‘ಡೀಲ್’ ಆಚೆಗೂ, ಕಂಪೆನಿಯ ಜತೆ ಭಾರತದ ರಕ್ಷಣಾ ಇಲಾಖೆಗೆ ಸಂಬಂಧವೊಂದು ಬೆಸೆದುಕೊಂಡಿದೆ. ಹೀಗಾಗಿ, ಕಂಪನಿಯನ್ನು ನಿಷೇಧಿಸುವ ಇಚ್ಚಾಶಕ್ತಿಯನ್ನು ಯುಪಿಎ ಪ್ರಕಟಿಸಲಿಲ್ಲ.

ಭಾರಿ ವಹಿವಾಟು: 

ಫಿನ್ಮೆಸಾನಿಕಾ ಮೇಲೆ ನಿಷೇಧದ ತೂಗು ಕತ್ತಿ ನೇತಾಡಿದರೆ ಅದರ ನೇರ ಪರಿಣಾಮ ಬೀಳುವುದು ಭಾರತದ ರಕ್ಷಣಾ ಕ್ಷೇತ್ರದ ಮೇಲೆ. ನೇರವಾಗಿ ಇಲ್ಲವೇ, ಪರೋಕ್ಷವಾಗಿ ಫಿನ್ಮೆಸಾನಿಕಾ ಹಾಗೂ ಅವರ ಅಂಗ ಸಂಸ್ಥೆಗಳನ್ನು ಭಾರತದ ರಕ್ಷಣಾ ಇಲಾಖೆ ನೆಚ್ಚಿಕೊಂಡಿದೆ. ಭಾರತ ಜಂಟಿಯಾಗಿ ಅಭಿವೃದ್ಧಿ ಪಡಿಸಲು ಅಥವಾ ಖರೀದಿಸಲು ಹೊರಟಿರುವ ಆಯುಧಗಳು ಹಾಗೂ ಬಿಡಿಭಾಗಗಳ ತಯಾರಿಕೆಯಲ್ಲಿ ಫಿನ್ಮೆಸಾನಿಕ ಕಂಪನಿಯ ನೆರಳು ದಟ್ಟವಾಗಿದೆ.

  • ಫ್ರಾನ್ಸ್ ಡಸಾಲ್ಟ್ ವಿಮಾನಯಾನ ಸಂಸ್ಥೆ ಮೂಲಕ ರಾಫೇಲ್ ಜೆಟ್ ಖರೀದಿ ಮತ್ತು ಜಂಟಿ ಅಭಿವೃದ್ಧಿ
  • ‘ಸೆಲೆಕ್ಸ್ ಇಎಸ್’ನಿಂದ ಸ್ವದೇಶಿ ವಿಮಾನಗಳಿಗೆ ಬೇಕಾದ ರಾಡಾರ್ ಖರೀದಿ
  • ‘ಡಬ್ಲೂಎಎಸ್ಎಸ್’ ನಿಂದ 13 ಸಬ್ ಮೆರೀನ್ಗಳ ಸಿಡಿತಲೆ ಸುಧಾರಣೆ
  • ನೌಕಾ ದಳಕ್ಕೆ ಎನ್ಎಚ್-90 ಮಲ್ಟಿ ರೋಲ್ ಹೆಲಿಕಾಫ್ಟರ್ ಖರೀದಿ ಪ್ರಸ್ತಾಪ
  • ಯುದ್ಧ ವಿಮಾನ ಮತ್ತು ಮಧ್ಯಮ ಗಾತ್ರದ ಸಿ-27ಜೆ ವಿಮಾನಗಳ ಜಂಟಿ ಅಭಿವೃದ್ಧಿ ಪ್ರಸ್ತಾಪ
  • ಟಾಟಾ ಸಂಸ್ಥೆಯಿಂದ ದೇಶದಲ್ಲಿ ಎಡಬ್ಲ್ಯೂ-119 ಹೆಲಿಕಾಪ್ಟರ್ ಜೋಡಣೆ
  • 76 mm ನೌಕಾ ಗನ್ಗಳ ಪೂರೈಕೆ

ಹೀಗೆ ಸಾಲು ಸಾಲು ಯೋಜನೆಗಳಲ್ಲದೇ, ಫಿನ್ಮೆಸಾನಿಕಾ ರೈಲ್ವೇ ಟ್ರಾಫಿಕ್ ಮ್ಯಾನೇಜ್ಮೆಂಟ್ ಮತ್ತು ಸಿಗ್ನಲ್ ನಿರ್ವಹಣೆ ಯೋಜನೆಗಳನ್ನೂ ಭಾರತದಲ್ಲಿ ಕೈಗೊಂಡಿದೆ.

ಒಂದೊಮ್ಮೆ ಕಂಪೆನಿಯನ್ನು ‘ಕಪ್ಪು ಪಟ್ಟಿ’ಗೆ ಸೇರಿಸಿದ್ದೇ ಆದರೆ, ಈ ಎಲ್ಲಾ ಯೋಜನೆಗಳು ಅರ್ಧಕ್ಕೆ ನಿಂತುಬಿಡುತ್ತವೆ. ಈ ಕಾರಣಕ್ಕೆ ಕೇಂದ್ರದಲ್ಲಿ ಸರಕಾರ ಬದಲಾದರೂ, ಫಿನ್ಮೆಸಾನಿಕದ ಭವಿಷ್ಯ ಬದಲಾಗಲಿಲ್ಲ.

ಮೇಕ್ ಇನ್ ಇಂಡಿಯಾ:

ಹಾಗೆ ನೋಡಿದರೆ, ಯುಪಿಎ ಹೇರಿದ್ದ ನಿಯಂತ್ರಣಗಳನ್ನೂ ಮೋದಿ ಸರ್ಕಾರ ಕಿತ್ತೊಗೆದಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ‘ಮೇಕ್ ಇನ್ ಇಂಡಿಯಾ’ ಘೋಷಣೆ ವೇಳೆ, ಸದರಿ ಕಂಪನಿ ಮೇಲೆ ಯುಪಿಎ ಹೇರಿದ್ದ ನಿಯಂತ್ರಣಗಳನ್ನು ಮೋದಿ ಹಿಂತೆದುಕೊಂಡಿದ್ದಾರೆ.

ಹೀಗಿರುವಾಗ, ಅಧಿವೇಶನದಲ್ಲಿ ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ವನ್ನು ಇಟ್ಟುಕೊಂಡು ಸೋನಿಯಾ ಗಾಂಧಿಯವರನ್ನು ನರೇಂದ್ರ ಮೋದಿ ಅಥವಾ ಬಿಜೆಪಿ ಹಣಿಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯನಾ?

ಅಭಿಮಾನದ ಆಚೆಗಿರುವ ಸತ್ಯಗಳಿವು.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top