An unconventional News Portal.

‘ಎನ್‌ಡಿಟಿವಿ’ ಆಯ್ತು ಈಗ ‘ಪ್ರತಿದಿನ್ ಟೈಮ್ಸ್’ ಸರದಿ; ಮಾಧ್ಯಮಗಳ ಬುಡಕ್ಕೆ ಮೋದಿ ಕೊಡಲಿ ಏಟು!

‘ಎನ್‌ಡಿಟಿವಿ’ ಆಯ್ತು ಈಗ ‘ಪ್ರತಿದಿನ್ ಟೈಮ್ಸ್’ ಸರದಿ; ಮಾಧ್ಯಮಗಳ ಬುಡಕ್ಕೆ ಮೋದಿ ಕೊಡಲಿ ಏಟು!

‘ಎನ್‌ಡಿಟಿವಿ ಇಂಡಿಯಾ’ ನಂತರ ಇದೀಗ ‘ಪ್ರತಿದಿನ್ ಟೈಮ್ಸ್’ ಬುಡಕ್ಕೆ ಮೋದಿ ಸರಕಾರ ಕೈ ಹಾಕಿದೆ. ನವೆಂಬರ್ 9 ರಂದೇ ಅಸ್ಸಾಂನ ಪ್ರಮುಖ ವಾಹಿನಿ ‘ಪ್ರತಿದಿನ್ ಟೈಮ್ಸ್ (ಹಿಂದಿನ ‘ನ್ಯೂಸ್ ಟೈಮ್ ಅಸ್ಸಾಂ’) ಚಾನಲ್ ಪ್ರಸಾರಕ್ಕೆ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯ ನಿಷೇಧ ಹೇರಿದೆ.

ಇದಕ್ಕೆ ‘ಪ್ರೊಗ್ರಾಮಿಂಗ್ ನಿಯಮಾವಳಿ’ಗಳನ್ನು ಉಲ್ಲಂಘಿಸಿದ ಕಾರಣವನ್ನು ಸರಕಾರ ಮುಂದಿಟ್ಟಿದೆ.

ವಾಹಿನಿಯು ಮನೆ ಕೆಲಸಕ್ಕಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಕ್ರೂರ ಹಲ್ಲೆಯ ದೃಶ್ಯ ಪ್ರಸಾರ ಮಾಡಿತ್ತು. ಈ ಮೂಲಕ ಆಕೆಯ ಗುರುತು ಬಿಟ್ಟುಕೊಟ್ಟಿತ್ತು. ಇದು ‘ಪ್ರೋಗ್ರಾಮಿಂಗ್ ನಿಯಮಾವಳಿ’ಗಳ ಸ್ಪಷ್ಟ ಉಲ್ಲಂಘನೆ ಎಂದು ಸರಕಾರ ನವೆಂಬರ್ 2ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಪ್ರಸಾರ ಮಾಡಿದ ವೀಡಿಯೋದಲ್ಲಿ ಬಾಲಕಿಯ ಗೌರವ ಮತ್ತು ಖಾಸಗಿತನಕ್ಕೆ ವಾಹಿನಿಯು ಧಕ್ಕೆ ತಂದಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಚಾನಲ್ಲಿಗೆ ಅಕ್ಟೋಬರ್ 2013ರಂದೇ ನೋಟಿಸ್ ಜಾರಿಮಾಡಲಾಗಿತ್ತು. ಪ್ರಕರಣದ ಸಂಬಂಧ ತನಿಖೆ ನಡೆಸಿದ ಸಚಿವಾಲಯದ ಆಂತರಿಕ ಸಮಿತಿ (ಎಮ್ಐಸಿ) ಚಾನಲ್ಲಿಗೆ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ಶಿಕ್ಷೆ ವಿಧಿಸಿದೆ.

ಉಳಿದ ಚಾನಲ್ಲುಗಳೂ ಇದೇ ರೀತಿಯ ವಿಡಿಯೋ ಪ್ರಸಾರ ಮಾಡಿವೆ. ಆದರೆ ಆ ಚಾನಲ್ಲುಗಳಿಗೆ ಎಚ್ಚರಿಕೆ ನೀಡಿ ಬಿಟ್ಟಿರುವ ಸಮಿತಿ, ‘ಪ್ರತಿದಿನ್ ಟೈಮ್ಸ್’ಗೆ ಮಾತ್ರ  ಒಂದು ದಿನದ ಮಟ್ಟಿಗೆ ಪ್ರಸಾರ ಸ್ಥಗಿತಗೊಳಿಸುವ ಶಿಕ್ಷೆಯನ್ನು ನೀಡಿದೆ. ಮೂರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಂದು ದಿನ ಪ್ರಸಾರ ಸ್ಥಗಿತಗೊಳಿಸುವ ಶಿಕ್ಷೆಯನ್ನಷ್ಟೇ ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ‘ಕೇಬಲ್ ಟಿವಿ ಜಾಲ (ನಿಯಂತ್ರಣ) ಕಾಯ್ದೆ’ಯ ಉಲ್ಲೇಖ ಮಾಡಿ ಈ ಆದೇಶ ಹೊರಡಿಸಲಾಗಿದೆ. 9 ನವೆಂಬರ್ 00:01 ಗಂಟೆಯಿಂದ 10 ನವೆಂಬರ್ 00:01ಗಂಟೆಯವರೆಗೆ ಪ್ರಸಾರ ಸ್ಥಗಿತ ಮಾಡುವಂತೆ ಆದೇಶಿಸಲಾಗಿದೆ. ಮೃತದೇಹಗಳ ವಿಡಿಯೋ ಪ್ರಸಾರ ಮಾಡಿದ ಆರೋಪವೂ ಚಾನಲ್ ಮೇಲಿದೆ.

ಈ ಹಿಂದೆ ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ವೇಳೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಸುದ್ದಿಯನ್ನು ಭಿತ್ತರಿಸಿದ ಆರೋಪದ ಮೇಲೆ ಎನ್ ಡಿಟಿವಿ ಸಮೂಹದ ಹಿಂದಿ ಸುದ್ದಿ ವಾಹಿನಿ, ‘ಎನ್ಡಿಟಿವಿ ಇಂಡಿಯಾ’ ವಿರುದ್ಧವೂ ಕೇಂದ್ರ ಇದೇ ರೀತಿ ಒಂದು ದಿನದ ಪ್ರಸಾರ ನಿಷೇಧ ಶಿಕ್ಷೆ ವಿಧಿಸಿತ್ತು.

ಪ್ರತಿಭಟನೆ, ಆಕ್ರೋಶ

ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆ

ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆ

ಕೇಂದ್ರ ಸರಕಾರದ ಈ ನಿರ್ಧಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗಿವೆ. ದೇಶಾದಾದ್ಯಂತ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ.

ಬೆಂಗಳೂರಿನಲ್ಲಿ ಶನಿವಾರ ‘ಕರ್ನಾಟಕ ಜರ್ನಲಿಸಂ ಸ್ಟಡಿ ಸೆಂಟರ್’ ಮತ್ತು ಪ್ರೆಸ್ ಕ್ಲಬ್ ಬೆಂಗಳೂರು ವತಿಯಿಂದ ‘ಎನ್ ಡಿಟಿವಿ ಇಂಡಿಯಾ’ ವಿರುದ್ದ ಸರಕಾರದ ಕಾರ್ಯಾಚರಣೆ ವಿರೋಧಿಸಿ ಪ್ರೆಸ್ ಕ್ಲಬ್ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ನವೆಂಬರ್ 09 ರಂದು ಟಿವಿ ಸ್ಥಗಿತಗೊಳಿಸುವ ಅದೇಶವನ್ನು ಕೇಂದ್ರ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭ ಒತ್ತಾಯಿಸಿದರು. ಒಂದೊಮ್ಮೆ ಸರಕಾರ ತನ್ನ ನಿರ್ಧಾರ ಹಿಂಪಡೆಯದಿದ್ದಲ್ಲಿ ಅಂದು (ನವೆಂಬರ್ 9) ಮತ್ತೆ ತೀವ್ರ ಸ್ವರೂಪದ ಹೋರಾಟವನ್ನು ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

Leave a comment

Top