An unconventional News Portal.

‘ನೋಟಿನ ಬೆಲೆಗೆ ತಕ್ಕ ಬೆಲೆಯ ನೋಟು’: ಮುಚ್ಚಿಟ್ಟವರಿಂದಾಗಿ ‘ಸಾಸಿವೆ ಡಬ್ಬಿಯ ಹಣ’ಕ್ಕೂ ಲೆಕ್ಕ ಕೊಡುವ ಕಾಲ ಬಂತು!

‘ನೋಟಿನ ಬೆಲೆಗೆ ತಕ್ಕ ಬೆಲೆಯ ನೋಟು’: ಮುಚ್ಚಿಟ್ಟವರಿಂದಾಗಿ ‘ಸಾಸಿವೆ ಡಬ್ಬಿಯ ಹಣ’ಕ್ಕೂ ಲೆಕ್ಕ ಕೊಡುವ ಕಾಲ ಬಂತು!

ಆಳುವ ವರ್ಗದ ಒಂದು ಸಣ್ಣ ನಿರ್ಧಾರ ಇವತ್ತಿನ ಪರಿಸ್ಥಿತಿಯಲ್ಲಿ ದೇಶವನ್ನು ‘ಬದಲಾಯಿಸಿ’ ಬಿಡಲು ಸಾಧ್ಯನಾ?

ಖಂಡಿತಾ ಸಾಧ್ಯವಿಲ್ಲ. ಆದರೆ, ದೇಶವಾಸಿಗಳಲ್ಲಿ ಸಂಚಲವನ್ನು, ಆಲೋಚನೆಗಳನ್ನು ಹುಟ್ಟು ಹಾಕಬಹುದು. ಅದಕ್ಕೆ ತಾಜಾ ಉದಾಹರಣೆ, ನೋಟುಗಳ ಬದಲಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜಂಟಿಯಾಗಿ ತೆಗೆದುಕೊಂಡ ನಿರ್ಧಾರ. ಕಳೆದ 48 ಗಂಟೆಗಳ ಅವಧಿಯಲ್ಲಿ ದೇಶದ ಮೂಲೆಮೂಲೆಗಳಲ್ಲಿ ನೋಟಿನ ಬಗ್ಗೆ, ಚಿಲ್ಲರೆಗಳ ಬಗ್ಗೆ ಜನ ಮಾತನಾಡಿಕೊಳ್ಳುವಂತೆ ಮಾಡಿದೆ 500 ಹಾಗೂ 1000 ಮುಖಬೆಲೆಯ ನೋಟುಗಳ ಬದಲಾವಣೆ ವಿಚಾರ. ಅದರಲ್ಲಿ ಎಲ್ಲಾ ವರ್ಗದ ಜನರೂ ಸೇರಿದ್ದಾರೆ ಎಂಬುದು ಗಮನಾರ್ಹ. ಹಿರಿಯ ನಾಗರೀಕರಿಗೆ ಈ ಹಿಂದೆ ದೇಶದಲ್ಲಿ ನಡೆದ ಇಂತಹದ್ದೇ ‘ಅರ್ಥಿಕ ಸಂಚಲನ’ ಮೂಡಿಸಿದ ನಿರ್ಧಾರಗಳು ನೆನಪಾಗುತ್ತಿವೆ. (ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ)

ರಾತ್ರೋರಾತ್ರಿ 500 ಹಾಗೂ 1000 ಮುಖಬೆಲೆಯ ನೋಟುಗಳಿಗೆ ಮೌಲ್ಯವಿಲ್ಲ ಎಂದು ಸರಕಾರ ಘೋಷಸಿಸುತ್ತಿದ್ದಂತೆ ದೇಶದಲ್ಲಿ ಹಣದ ಸುತ್ತ ಆಲೋಚನೆಗಳು ಗಿರಕಿ ಹೊಡೆಯಲು ಶುರುವಾಗಿವೆ. ಜತೆಗೆ, ಕಳ್ಳ ನೋಟುಗಳು ಹಾಗೂ ಕಪ್ಪು ಹಣವನ್ನು ಸರಕಾರದ ಈ ಗಟ್ಟಿ ನಿರ್ಧಾರ ನಿರ್ನಾಮ ಮಾಡಲಿದೆ ಎಂಬ ಮಾತುಗಳು ಚಲಾವಣೆಗೆ ಬಂದವು. ವಿಶೇಷವಾಗಿ ಕಪ್ಪು ಹಣವನ್ನು ಇಟ್ಟ ಸಿರಿವಂತರು ದೊಡ್ಡ ಸಂಖ್ಯೆಯಲ್ಲಿ ಬೆತ್ತಲಾಗುತ್ತಾರೆ ಎಂಬ ಭ್ರಮೆ ಸಾಮಾನ್ಯ ಪ್ರಜೆಗಳಲ್ಲಿ ಆನಂದವನ್ನು ಮೂಡಿಸಿತು. ಕೆಲವರಿಗೆ, ಇಡೀ ದೇಶ ಬದಲಾಗುತ್ತಿದೆ ಎಂಬ ಸುರಕ್ಷತಾ ಭಾವವೊಂದು ಹುಟ್ಟಿಕೊಂಡಿತು. ಅದರಾಚೆಗೆ, ಜಾಗತೀಕರಣದ ಹೆಸರಿನಲ್ಲಿ ‘ಹೊಸ ಆರ್ಥಿಕ ನೀತಿ’ಗಳು ಜಾರಿಗೆ ಬಂದು 25 ವರ್ಷಗಳ ನಂತರ, ಮೊದಲ ಬಾರಿಗೆ ದೇಶದ ಆರ್ಥಿಕತೆ ಕುರಿತು ಸಾಮಾನ್ಯ ಜನ ಸಾಮೂಹಿಕವಾಗಿ ಮಾತನಾಡಲು ಶುರುಮಾಡಿದ್ದಾರೆ; ಚರ್ಚಿಸಲು ಆರಂಭಿಸಿದ್ದಾರೆ; ಆಲೋಚಿಸುತ್ತಿದ್ದಾರೆ… ಇದು ಸ್ವಾಗತಾರ್ಹ ಬೆಳವಣಿಗೆ.

ವಿಪರ್ಯಾಸ ಏನೆಂದರೆ, ಕಳೆದ 5 ವರ್ಷಗಳ ಅಂತರದಲ್ಲಿ ರಾಜಕಾರಣಿ ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು ಮತ್ತು ನಂತರ ಈ ದೇಶದಲ್ಲಿ ನಡೆದುಕೊಂಡು ಬರುತ್ತಿರುವ ಪರ- ವಿರೋಧದ ಚರ್ಚೆಗಳಿಗೆ ಈ ‘ಆರ್ಥಿಕ ಕ್ಷೇತ್ರದ ಸಂಚಲನ’ ಕೂಡ ಬಲಿಯಾಗಿದೆ. ವಿರೋಧಿಸಬೇಕು ಎಂದು ಹೊರಡುವವರ ದನಿಯಲ್ಲಿ ಉಳಿದೆಲ್ಲವನ್ನೂ ಪಕ್ಕಕ್ಕಿಟ್ಟು ವಿರೋಧ ಮಾತ್ರವೇ ಎದ್ದು ಕಾಣಿಸುತ್ತಿದೆ. ಈ ಬೆಳವಣಿಗೆಯ ಪರಿಣಾಮಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ದೂರಗಾಮಿ ನೆಲೆಯಲ್ಲಿ ಆಗುವ ಬದಲಾವಣೆಗಳು ಮತ್ತು ಇತಿಹಾಸವನ್ನು ಮಾತ್ರವೇ ಇವರು ಮಾನದಂಡವಾಗಿಟ್ಟುಕೊಂಡಂತೆ ಕಾಣಿಸುತ್ತಿದೆ. ಪರವಾಗಿರುವವರು, ಮತ್ತದೇ ಯಥಾಸ್ಥಿತಿಯ ಕುರುಡು ಅಭಿಮಾನ, ವ್ಯಕ್ತಿ ಪೂಜೆ ಮತ್ತು ಭಕ್ತಿಯ ಸಮರ್ಪಣೆಗೆ ಸೀಮಿತರಾಗಿದ್ದಾರೆ. ಇವರ ಆಚೆಗೂ, ಕೇಂದ್ರ ಸರಕಾರದ ನೋಟು ಬದಲಾವಣೆ ನಿರ್ಧಾರ ಸಾಮಾನ್ಯ ಜನರ ನಿತ್ಯ ಬದುಕನ್ನು ಅಲ್ಯತ್ಪ ಅವಧಿಯಲ್ಲಿ ಏರು ಪೇರು ಮಾಡಿದೆ ಎಂಬುದನ್ನು ಗಮನಿಸಬೇಕಿದೆ.

ಪ್ರಮುಖವಾಗಿ, ಮನೆಯಲ್ಲಿ ಸಾಸಿವೆ ಡಬ್ಬ, ಕತ್ತಲೆಯ ಕಪಾಟುಗಳಲ್ಲಿ ಕಷ್ಟಕ್ಕಿರಲಿ ಎಂದು 500, 1000 ರೂಪಾಯಿಗಳ ಕೆಲವು ನೋಟುಗಳನ್ನು ಎತ್ತಿಟ್ಟುಕೊಂಡ ಮಹಿಳೆಯರು; ಗೃಹಿಣಿಯರು ಪೇಚಾಟಕ್ಕೆ ಸಿಲುಕಿಕೊಂಡಂತಿದೆ. ಬ್ಯಾಂಕುಗಳಿಂದ, ವ್ಯವಹಾರಗಳಿಂದ ದೂರವೇ ಉಳಿದ ದೊಡ್ಡ ಜನವರ್ಗ ಅದು. ಇವತ್ತು ಅನಿವಾರ್ಯವಾಗಿ, ತಾವು ಜತನದಿಂದ ಕಾಪಾಡಿಕೊಂಡು ಬಂದಿದ್ದ ನೋಟುಗಳನ್ನು ಮನೆಯ ವ್ಯವಹಾರ ನೋಡಿಕೊಳ್ಳುವವರಿಗೆ ಹಸ್ತಾಂತರಿಸಬೇಕಾಗಿ ಬಂದಿದೆ. ‘ನೋಟಿನ ಬೆಲೆಗೆ ತಕ್ಕ ಬೆಲೆಯ ನೋಟು’ಗಳು ಅವರಿಗೆ ಮರಳಿ ತಲುಪುತ್ತವೆ ಎಂಬ ಖಾತರಿ ಏನಿಲ್ಲ. ಇದು ಸಾಮಾಜಿಕ ರಚನೆಯ ಕೊನೆಯ ಅಂಗ ಕುಟುಂಬಗಳ ಮಟ್ಟದಲ್ಲಿ ಕೇಂದ್ರ ಸರಕಾರದ ನಿರ್ಧಾರ ಮೂಡಿಸಿರುವ ಪರಿಣಾಮಗಳಾದರೆ, ದೊಡ್ಡ ಮಟ್ಟದಲ್ಲಿ ಆಸ್ತಿ ಪಾಸ್ತಿಗಳನ್ನು ಹೊಂದಿರುವ ಶ್ರೀಮಂತ ವರ್ಗವೊಂದು ಬಚ್ಚಿಟ್ಟುಕೊಂಡ ನೋಟುಗಳನ್ನು ಏನು ಮಾಡುತ್ತದೆ ಎಂಬ ಕುತೂಹಲ ದೊಡ್ಡ ಮಟ್ಟದಲ್ಲಿ ಹುಟ್ಟಿಕೊಂಡಿದೆ.

ಶ್ರೀಮಂತ ವರ್ಗ(ರಾಜಕಾರಣಿಗಳು, ಅಧಿಕಾರಿಗಳು, ಕಾರ್ಪೊರೇಟ್ ಕುಟುಂಬಗಳು) ಮನೆಯಲ್ಲಿ ನೋಟುಗಳನ್ನು ಹಾಸಿಗೆ ಕೆಳಗೆ, ಟಾಯ್ಲೆಟ್ ರೂಮಿನಲ್ಲಿ ಬಚ್ಚಿಡುತ್ತದೆ ಎಂಬ ಆಲೋಚನೆಯನ್ನು ಭಿತ್ತುವಲ್ಲಿ ಅಕ್ಷಯ್ ಕುಮಾರ್ ಅಭಿನಯದ ‘ಸೂಪರ್ ಚಬ್ಭೀಸ್’ ತರಹದ ಬಾಲಿವುಡ್ ಮತ್ತು ಪ್ರಾದೇಶಿಕ ಭಾಷಾ ಸಿನೆಮಾಗಳ ಕೊಡುಗೆಯೂ ಅಪಾರವಾಗಿದೆ. ವಾಸ್ತವದಲ್ಲಿ ಇವತ್ತು ಈ ವರ್ಗ ಹಣವನ್ನು (ಕಪ್ಪು ಅಥವಾ ಬಿಳಿ) ನೋಟಿನ ರೂಪದಲ್ಲಿ ಇಟ್ಟುಕೊಳ್ಳುವ ದಿನಗಳು ದೂರವಾಗಿವೆ. ಇದಕ್ಕೆ ಸಾಕ್ಷಿ ಬೇಕಿದ್ದರೆ, ಲೋಕಾಯುಕ್ತ ಅಥವಾ ಇತ್ತೀಚಿನ ಸಿಬಿಐ ದಾಳಿಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅಂತಹ ಸರಕಾರಿ ಅಧಿಕಾರಿಗಳ ಮನೆಯ ಮೇಲಿನ ದಾಳಿಗಳಲ್ಲಿ ನೋಟುಗಳಿಗಿಂತ ಹೆಚ್ಚು ಸಿಗುವುದು ಕೇಜಿ ಕೇಜಿ ಚಿನ್ನಾಭರಣಗಳು ಮತ್ತು ಇಕ್ವಿಟಿ ಶೇರುಗಳು. ಇದರ ಆಚೆಗೆ ರಾಜಕಾರಣಿಗಳು ಎಲೆಕ್ಷನ್ ಖರ್ಚಿಗಾಗಿ 500- 1000 ರೂಪಾಯಿ ನೋಟುಗಳನ್ನು ಬಚ್ಚಿಟ್ಟುಕೊಂಡಿದ್ದಾರೆ ಎಂದು ಒಂದು ವಲಯ ಒಪ್ಪುತ್ತದೆ. ಇದು ನಿಜವೇ ಆಗಿದ್ದರೆ ಎಷ್ಟು?

ಅಸಲಿ ಈ ದೇಶದಲ್ಲಿ ನೋಟುಗಳ ಲೆಕ್ಕಾಚಾರ ಕುತೂಹಲಕಾರಿ ಅಂಕಗಣಿತ. ಸದ್ಯ ನಮ್ಮ ನೋಟುಗಳನ್ನು, ನ್ಯಾಣ್ಯಗಳನ್ನು ಮುದ್ರಿಸುವ ‘ಭಾರತೀಯ ರಿಸರ್ವ್ ಬ್ಯಾಂಕ್’ ಈವರೆಗೆ ಮುದ್ರಿಸಿರುವ ನೋಟುಗಳ ಪೈಕಿ ಮೌಲ್ಯಗಳನ್ನು ಉಳಿಸಿಕೊಂಡಿರುವ ಹಣದ ಮೊತ್ತವೇ ಸುಮಾರು 16 ಲಕ್ಷ ಕೋಟಿ. ಇದರಲ್ಲಿ ಶೇ. 86ರಷ್ಟು 500 ಹಾಗೂ 1000 ಮುಖಬೆಲೆಯ ನೋಟುಗಳು. ಅಂದರೆ, ಹೆಚ್ಚು ಕಡಿಮೆ 14- 15 ಲಕ್ಷ ಕೋಟಿ ಮೊತ್ತದ ಹಣದ ನೋಟುಗಳು ಚಲಾವಣೆಯಲ್ಲಿವೆ. ಇವುಗಳಲ್ಲಿ 6- 7 ಲಕ್ಷ ಕೋಟಿಯಷ್ಟು ಕಪ್ಪು ಹಣವಾಗಿ ಬದಲಾಗಿದೆ ಎಂದು ತಜ್ಞರು ಅಂದಾಜಿಸುತ್ತಾರೆ. “ಇದರ ಜತೆಗೆ, 10-15 ಸಾವಿರ ಕೋಟಿಯಷ್ಟು ಕಳ್ಳನೋಟುಗಳು ಸೇರಿಕೊಂಡಿವೆ,” ಎನ್ನುತ್ತಾರೆ ಹಣಕಾಸಿನ ಕುರಿತು ಮಾಹಿತಿ ನೀಡುವ ‘ಇಂಡಿಯನ್ ಮನಿ’ಯ ಸಿಇಓ ಸುಧೀರ್.

ಅಂದರೆ, ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಮುಂದಿನ ಕೆಲವು ತಿಂಗಳುಗಳ ಅಂತರದಲ್ಲಿ ದೇಶದ ನಾನಾ ಬ್ಯಾಂಕುಗಳ ಮೂಲಕ ಜನರ ಕೈಲಿರುವ 500- 1000 ಸಾವಿರ ಮುಖಬೆಲೆಯ ನೋಟುಗಳು ಜಮಾವಣೆಗೊಳ್ಳುತ್ತವೆ. ಅವುಗಳ ಮೊತ್ತ ಸುಮಾರು 7-8 ಲಕ್ಷ ಕೋಟಿ ಆಗಬಹುದು. ಉಳಿದ 6- 7 ಲಕ್ಷ ಕೋಟಿ ಮೌಲ್ಯದ ನೋಟುಗಳು ಇದ್ದ ಜಾಗದಲ್ಲಿಯೇ ಅಪಮೌಲ್ಯಗೊಳ್ಳುತ್ತವೆ. ಆಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಷ್ಟೆ ಮೌಲ್ಯದ ನೋಟುಗಳನ್ನೋ, ನ್ಯಾಣ್ಯಗಳನ್ನೋ ಮುದ್ರಿಸಿ ಸರಕಾರದ ಬೊಕ್ಕಸವನ್ನು ತುಂಬಿಸುತ್ತದೆ. “ಅದನ್ನು ಮುಂದಿನ ಸರಕಾರಗಳು ಜನರ ಅಭಿವೃದ್ಧಿಗಾಗಿ ಅಥವಾ ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದು,” ಎನ್ನುತ್ತಾರೆ ಸುಧೀರ್.

ಮುಂದಿನ ದಿನಗಳಲ್ಲಿ ಸಾಮಾನ್ಯ ಜನ ಕಟ್ಟುತ್ತಿರುವ ಮೀಟರ್ ಬಡ್ಡಿಗೆ ಕಡಿವಾಣ ಬಿದ್ದರೆ, ತುಂಬುತ್ತಿರುವ ವಿಮೆಗಳಿಗೆ ನ್ಯಾಯ ಸಿಕ್ಕರೆ, ಮಾಡುತ್ತಿರುವ ಕೆಲಸಕ್ಕೆ ನಿವೃತ್ತಿ ವೇತನ, ಪಿಂಚಣಿಗಳು ಸಿಕ್ಕರೆ, ಅದಕ್ಕಿಂತ ಹೆಚ್ಚಾಗಿ ಕಪ್ಪು ಹಣವನ್ನು ಬಚ್ಚಿಡುವ ಯಾವ ಸಾಮರ್ಥ್ಯವನ್ನೂ ಹೊಂದಿಲ್ಲದ ಜನರ ಅಭಿವೃದ್ಧಿಗೆ ಇಷ್ಟೆಲ್ಲಾ ಸರ್ಕಸ್ ಮೂಲಕ ಸೃಷ್ಟಿಸಿಕೊಂಡ ಹಣವನ್ನು ಸರಕಾರ ಬಳಸಿದರೆ ‘ನೋಟಿನ ಆಟ’ಕ್ಕೆ ಬೆಲೆ. ಇಲ್ಲದಿದ್ದರೆ, ಇನ್ನಷ್ಟು ವಿಜಯ್ ಮಲ್ಯಗಳು ಹುಟ್ಟಿಕೊಳ್ಳಬಹುದೇ ಹೊರತು, ಯಾವ ಆರ್ಥುಕ ನೀತಿಗಳು ‘ಕ್ಯಾಪಿಟಲಿಸ್ಟ್ ಡೆಮಾಕ್ರಸಿ’ಯನ್ನು ರಕ್ಷಿಸಲಾರವು.

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top