An unconventional News Portal.

‘ಸ್ಟಾಕ್ ಬೈ ಬ್ಯಾಕ್’: ಶೇರು ಮಾರುಕಟ್ಟೆಯಲ್ಲಿ ಭಾರತದ ಐಟಿ ಕಂಪನಿಗಳ ಹೊಸ ಟ್ರೆಂಡ್

‘ಸ್ಟಾಕ್ ಬೈ ಬ್ಯಾಕ್’: ಶೇರು ಮಾರುಕಟ್ಟೆಯಲ್ಲಿ ಭಾರತದ ಐಟಿ ಕಂಪನಿಗಳ ಹೊಸ ಟ್ರೆಂಡ್

ಕಳೆದ ಕೆಲವು ದಿನಗಳಿಂದ ದೇಶದ ಐಟಿ ಕಂಪನಿಗಳ ಅಂತರಂಗದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ.

ಇನ್ಫೋಸಿಸ್ ಒಳಗಿನ ಇತ್ತೀಚಿನ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಕಾಗ್ನಿಝೆಂಟ್ ಆಡಳಿತ ಮಂಡಳಿ, ತಮ್ಮ ಕಂಪನಿಯ ಶೇರುಗಳನ್ನು ಕೊಂಡುಕೊಳ್ಳುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಭಾರತ ಮೂಲದ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಕೂಡ ತನ್ನ ಶೇರುಗಳನ್ನು ‘ಬೈ ಬ್ಯಾಕ್’ ಮಾಡಲು ಹೊರಟಿದೆ. ಇದೇ ಫೆ. 20ರಂದು ನಡೆಯಲಿರುವ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಮಹತ್ವ ತೀರ್ಮಾನ ಹೊರಬೀಳಲಿದೆ.

ಕಂಪನಿಯ ಈ ನಡೆಯ ಕುರಿತು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಗುರುವಾರ ಮುಂಜಾನೆಯೇ ಶೇರು ಪೇಟೆಯಲ್ಲಿ ಟಿಸಿಎಸ್‌ ಶೇರುಗಳ ಮೌಲ್ಯ 2, 447 ರೂಪಾಯಿ ತಲುಪಿದೆ. ಒಟ್ಟಾರೆ, ಶೇ. 1.3 ರಷ್ಟು ಶೇರು ಮೌಲ್ಯ ಹೆಚ್ಚುವ ಮೂಲಕ ಟಿಸಿಎಸ್ ಶೇರುದಾರರಲ್ಲಿ ಹೊಸ ಭರವಸೆ ಮೂಡಿದೆ.

ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುತ್ತಲೇ ಹೊಸ ವೀಸಾ ನೀತಿಯನ್ನು ತರಲು ಮುಂದಾಗಿದ್ದರು. ಇದರಿಂದಾಗಿ ಭಾರತ ಐಟಿ ಕಂಪನಿಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿತ್ತು. ಜತೆಗೆ, ಕಂಪನಿಯ ಶೇರುಗಳ ಮೌಲ್ಯವೂ ಕುಸಿತಲಾರಂಭಿಸಿತ್ತು.

“ಸಾಮಾನ್ಯವಾಗಿ ಕಂಪನಿಗಳಲ್ಲಿ ನಗದು ಹಣ ಹೆಚ್ಚಿರುವಾಗ ಅಥವಾ ಮಾರುಕಟ್ಟೆಯಲ್ಲಿ ಕಂಪನಿಯ ಶೇರುಗಳ ಮೌಲ್ಯ ಕಡಿಮೆ ಇದೆ ಅನ್ನಿಸಿದಾಗ ತಮ್ಮ ಶೇರುಗಳನ್ನು ಕಂಪನಿಯೇ ಖರೀದಿರುವ ಪರಿಪಾಠ ಇದೆ,” ಎನ್ನುತ್ತಾರೆ ಇಂಡಿಯನ್ ಮನಿ ಕಂಪನಿಯ ಸಿಇಓ ಸಿ. ಎಸ್‌. ಸುಧೀರ್.

ಸದ್ಯ ಟಿಸಿಎಸ್‌ ಕಂಪನಿಯ ಬಳಿ 43, 100 ಕೋಟಿ ರೂಪಾಯಿ ಹಣ ಇದೆ ಮತ್ತು ಇದು ಮಾರುಕಟ್ಟೆಯ ಹೂಡಿಕೆ ಶೇ. 9ರಷ್ಟಾಗುತ್ತದೆ ಎನ್ನುತ್ತವೆ ವರದಿಗಳು. ಇದರ ಜತೆಗೆ ಟಿಸಿಎಸ್‌ ಶೇರುಗಳ ಮೌಲ್ಯ ಕಳೆದ ಐದು ತಿಂಗಳುಗಳ ಅಂತರದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯೇ ಶೇರುಗಳನ್ನು ಕೊಳ್ಳಲು ಮುಂದಾಗುವ ಮೂಲಕ ಹೂಡಿಕೆ ಮಾಡಲು ತೀರ್ಮಾನಿಸಿದೆ. ಈ ಕುರಿತು ಶೇರುಮಾರುಕಟ್ಟೆಗೆ ನೀಡಿರುವ ಪತ್ರದಲ್ಲಿ ಶೇರುಗಳನ್ನು ಕೊಂಡುಕೊಳ್ಳುವ ಸಂಬಂಧ ಫೆ. 20ರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕಂಪನಿ ಹೇಳಿದೆ.

tcs-1

ಕಳೆದ ವಾರ ನಡೆದ ಇನ್ಫೋಸಿಸ್ ಆಡಳಿತ ಮಂಡಳಿ ಸಭೆಯಲ್ಲಿಯೂ ಶೇರುಗಳನ್ನು ಕೊಂಡುಕೊಳ್ಳುವ ಕುರಿತು ಮಾತುಕತೆ ನಡೆದಿದೆ. ಇದೇ ವೇಳೆ ಕಂಪನಿ ಮುಂಬೈನ ದಾಲಾಲ್ ರಸ್ತೆಯಲ್ಲಿರುವ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (ಬಿಎಸ್‌ಸಿ)ಗೆ ನೀಡಿರುವ ಪತ್ರದಲ್ಲಿ ’12 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿ ಶೇರುಗಳನ್ನು ಖರಿದೀಸುವ ಕುರಿತು ಮಾತುಕತೆ ನಡೆಯುತ್ತಿದೆ’ ಎಂದು ಸ್ಪಷ್ಟಪಡಿಸಿವೆ. ಕಂಪನಿ ಒಳಗೆ ಸಂಸ್ಥಾಪಕರು ಮತ್ತು ಪದಾಧಿಕಾರಿಗಳ ನಡುವೆ ಶುರುವಾದ ಬಿಕ್ಕಟ್ಟಿನಿಂದಾಗಿ ಇನ್ಫೋಸಿಸ್ ಶೇರುಗಳ ಮೌಲ್ಯದಲ್ಲಿ ಕುಸಿತ ಕಂಡು ಬಂದಿತ್ತು.

ಭಾರತದಲ್ಲಿ ಬ್ಯಾಂಕುಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ನಗದು ಹಣ ಶೇಖರಣೆಯಾಗಿರುವುದು ಐಟಿ ಕಂಪನಿಗಳಲ್ಲಿ ಎನ್ನುತ್ತವೆ ಮಾರುಕಟ್ಟೆಯ ಅಂಕಿ ಅಂಶಗಳು. ಇದೀಗ ಐಟಿ ಕಂಪನಿಗಳ ತಮ್ಮ ಶೇರುಗಳನ್ನು ತಾವೇ ಖರೀದಿಸಲು ಮುಂದಾಗುವ ಮೂಲಕ ನಗದು ಹಣದ ಹೂಡಿಕೆಗೆ ಮುಂದಾಗಿವೆ. ಮುಂದಿನ ಕೆಲವು ದಿನಗಳಲ್ಲಿ ಇದು ಹೊಸ ಟ್ರೆಂಡ್‌ ಒಂದನ್ನು ಸೃಷ್ಟಿಸುವ ಸಾದ್ಯತೆ ಕಾಣಿಸುತ್ತಿದೆ.

ಇತ್ತೀಚಿಗೆ ದೇಶದಲ್ಲಿ ಅನಾಣ್ಯೀಕರಣದಿಂದಾಗಿ ಅಘೋಷಿತ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರ ಜತೆಗೆ ಅಮೆರಿಕಾದ ಆಡಳಿತ ವೀಸಾ ಮತ್ತು ವಲಸೆ ವಿಚಾರಗಳಲ್ಲಿ ತೆಗೆದುಕೊಂಡ ತೀರ್ಮಾನಗಳೂ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದ್ದವು. ಇದೀಗ ಕಂಪನಿಗಳೇ ಶೇರು ಮಾರುಕಟ್ಟೆಯಲ್ಲಿ ಹೂಡಕೆಗೆ ಮುಂದಾಗಿರುವುದು ಗಮನ ಸೆಳೆಯುತ್ತಿದೆ. “ಇದರ ಪರಿಣಾಮಗಳು ಸಮಾಜದ ಕೆಳಹಂತದಲ್ಲಿ ಕಾಣಿಸದಿದ್ದರೂ, ನಗದು ರೂಪದಲ್ಲಿ ಶೇಖರಣೆಗೊಂಡ ಹಣ ಚಲಾವಣೆಗೆ ಬರಲಿದೆ ಎನ್ನುತ್ತಾರೆ,” ಮಾರುಕಟ್ಟೆ ತಜ್ಞರು.

Top