An unconventional News Portal.

ಕೇಂದ್ರದ ಮುಂದೆ ಹೊಸ ಪ್ರಸ್ತಾಪ: ದಾರಿತಪ್ಪಿಸುವ ಜಾಹೀರಾತುಗಳಿಗೆ ಸೆಲೆಬ್ರೆಟಿಗಳೇ ಹೊಣೆ

ಕೇಂದ್ರದ ಮುಂದೆ ಹೊಸ ಪ್ರಸ್ತಾಪ: ದಾರಿತಪ್ಪಿಸುವ ಜಾಹೀರಾತುಗಳಿಗೆ ಸೆಲೆಬ್ರೆಟಿಗಳೇ ಹೊಣೆ

ದಾರಿ ತಪ್ಪಿಸುವ ಜಾಹೀರಾತುಗಳಿಗೆ ಇನ್ನು ಮುಂದೆ ಅವುಗಳನ್ನು ಪ್ರತಿನಿಧಿಸುವ ರಾಯಭಾರಿ (ಬ್ರಾಂಡ್ ಅಂಬಾಸಿಡರ್) ಗಳನ್ನೇ ಹೊಣೆಯಾಗಿಸಬೇಕು ಎಂಬ ಸಂಸದೀಯ ಸಮಿತಿ ಶಿಫಾರಸ್ಸನ್ನು ಕೇಂದ್ರ ಸರಕಾರ ಚರ್ಚೆಗೆ ಎತ್ತಿಕೊಂಡಿದೆ.

2015ರ ಆಗಸ್ಟಿನಲ್ಲಿ ಕೇಂದ್ರ ಸರಕಾರ ‘ಗ್ರಾಹಕ ಸುರಕ್ಷತೆ ಮಸೂದೆ-2015’ನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮೂಲಕ 30 ವರ್ಷ ಹಳೆಯ ‘ಗ್ರಾಹಕ ಸುರಕ್ಷಾ ಕಾಯ್ದೆ’ಯ ಬದಲಾವಣೆಗೆ ಕೈ ಹಾಕಿತ್ತು. ಅದರ ಭಾಗವಾಗಿ ತೆಲುಗು ದೇಶಂ ಸಂಸದ ಜೆಸಿ ದಿವಾಕರ್ ರೆಡ್ಡಿ ನೇತೃತ್ವದ ಸಂಸದೀಯ ಸಮಿತಿಗೆ, ಈ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಲಾಗಿತ್ತು. ಸಮಿತಿ ಅಧ್ಯಯನ ನಡೆಸಿ ತನ್ನ ಶಿಫಾರಸ್ಸುಗಳು ಇದೇ ವರ್ಷ ಏಪ್ರಿಲಿನಲ್ಲಿ ಕೇಂದ್ರಕ್ಕೆ ಸಲ್ಲಿಸಿತ್ತು.

ಸಂಸದೀಯ ಸಮಿತಿಯ ವರದಿಯನ್ನು ಪಡೆದುಕೊಂಡ ಗ್ರಾಹಕ ವ್ಯವಹಾರ ಮಂತ್ರಾಲಯ, ಇದೀಗ ಅಧ್ಯಯನ ನಡೆಸಿ ಕೆಲವು ಪ್ರಮುಖ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದೆ. ಅವುಗಳಲ್ಲಿ ಉತ್ಪನ್ನಗಳ ಗುಣಮಟ್ಟದ ವಿಚಾರದಲ್ಲಿ, ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ‘ಬ್ರಾಂಡ್ ಅಂಬಾಸಡರ್’ಗಳಾಗುವ ಸೆಲೆಬ್ರಿಟಿಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಕಲಬೆರಕೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿದೆ.

ಸಮಿತಿ ತನ್ನ ಶಿಫಾರಸ್ಸಿನಲ್ಲಿ ಮೊದಲ ಬಾರಿ ತಪ್ಪು ಮಾಡಿದವರಿಗೆ 10 ಲಕ್ಷ ದಂಡ ಅಥವಾ ಎರಡು ವರ್ಷ ಜೈಲು ಶಿಕ್ಷೆ, ಎರಡನೇ ಬಾರಿ ತಪ್ಪು ಮಾಡಿದರೆ 50 ಲಕ್ಷ ದಂಡ ಮತ್ತು 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು ಪ್ರಸ್ತಾಪಿಸಿದೆ.

ಸಂಸದೀಯ ಸಮಿತಿಯ ಶಿಫಾರಸ್ಸುಗಳ ಕುರಿತು ಸ್ಪಷ್ಟ ಚಿತ್ರಣ ಮಂಗಳವಾರದ ಸಭೆಯ ಬಳಿಕ ತಿಳಿದು ಬರಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತರಾಮನ್, ಪಿಯೂಷ್ ಗೋಯಲ್, ಜೆಪಿ ನಡ್ಡಾ, ರಾಮ್ ವಿಲಾಸ್ ಪಾಸ್ವಾನ್ ಭಾಗವಹಿಸಿಲಿದ್ದಾರೆ. ಸಭೆಯಲ್ಲಿ ಶಿಫಾರಸ್ಸುಗಳ ಕುರಿತು ಚರ್ಚೆ ನಡೆಯಲಿದ್ದು ಮಸೂದೆಯಲ್ಲಿ ಸೇರಿಸಬೇಕಾದ ಅಂಶಗಳ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನಂತರ ಮಸೂದೆಯನ್ನು ಸಂಪುಟದ ಮುಂದಿಡಲಾಗುತ್ತಿದೆ.

ಒಂದೊಮ್ಮೆ ಸಮಿತಿಯ ಶಿಫಾರಸ್ಸುಗಳು ಜಾರಿಗೆ ಬಂದರೆ ಸೆಲೆಬ್ರಿಟಿಗಳಿಗೆ ಸಂಕಷ್ಟ ತರಲಿದೆ. ಪ್ರತಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸೆಲೆಬ್ರಿಟಿಗಳು ಎಚ್ಚರಿಕೆಯಿಂದಿರಬೇಕಾದ ಪ್ರಮೇಯ ಒದಗಿ ಬರಲಿದೆ.

“ಒಂದು ಹಂತಕ್ಕೆ ಸೆಲೆಬ್ರಿಟಿಗಳನ್ನು ಜವಾಬ್ದಾರಿ ಮಾಡುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಉತ್ಪನ್ನ ಅಥವಾ ಜಾಹೀರಾತಿನಲ್ಲಿ ತಾಂತ್ರಿಕ ಅಂಶಗಳಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಉತ್ಪನ್ನಗಳಿಗೆ ಬಳಸಿದ ಕಚ್ಚಾ ವಸ್ತುಗಳ ಬಗ್ಗೆ ವೈಜ್ಞಾನಿಕ ಜ್ಞಾನ ಇರಬೇಕಾಗುತ್ತದೆ. ಹಾಗಾಗಿ ಜವಾಬ್ದಾರರಾಗಿ ಮಾಡುವುದು ಸರಿಯಲ್ಲ,” ಎಂದು ಹಿಂದೊಮ್ಮೆ ಮ್ಯಾಡಿಸನ್ ವರ್ಲ್ಡ್ ಅಧ್ಯಕ್ಷ ಸ್ಯಾಮ್ ಬಾಲ್ಸಾರಾ ಹೇಳಿದ್ದರು.

ಸದ್ಯ ದೇಶದಲ್ಲಿ ರಾಯಭಾರಿತ್ವದ ಮಾರುಕಟ್ಟೆ ಸುಮಾರು 5000 ದಿಂದ 7000 ಸಾವಿರ ಕೋಟಿ ರೂಪಾಯಿ ಇದೆ. ಒಂದು ಕಂಪೆನಿಯ ರಾಯಭಾರಿಯಾಗಲು ಪುರುಷ ಸೆಲೆಬ್ರಿಟಿಗಳು ವಾರ್ಷಿಕ 12 ರಿಂದ 25 ಕೋಟಿ ಪಡೆಯುತ್ತಾರೆ. ಅದೇ ಮಹಿಳೆಯರ ವಿಚಾರಕ್ಕೆ ಬಂದರೆ 6 ರಿಂದ 12 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ. ಜನಪ್ರಿಯ ತಾರೆಗಳು ವರ್ಷದಲ್ಲಿ 8 – 12 ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿ ಸಹಿ ಹಾಕುತ್ತಾರೆ. ಅಂದರೆ, ಇದೊಂದು ವ್ಯವಹಾರದಿಂದ ಅವರುಗಳು ಗಳಿಸುವ ಹಣವೇ ವಾರ್ಷಿಕ ಸುಮಾರು 5- 100 ಕೋಟಿ ರೂಪಾಯಿಗಳಾಗುತ್ತವೆ.

ಇದು ಮಾರುಕಟ್ಟೆಯ ವಿಚಾರವಾದರೆ, ಎಲ್ಲಾ ತಾರೆಗಳೂ ಇದ್ದ ಬದ್ದ ಜಾಹಿರಾತುಗಳಲ್ಲೆಲ್ಲಾ ಕಾಣಿಸಿಕೊಳ್ಳುವುದೂ ಇಲ್ಲ. ಹಾಟ್ ಡ್ರಿಂಕ್ಸ್ ಒಂದಕ್ಕೆ ರಾಯಭಾರಿಯಾಗಿ ಬರುವಂತೆ ಸಚಿನ್ ತೆಂಡೂಲ್ಕರ್ ಬಳಿ ಕೇಳಿದಾಗ ಅವರು ನಿರಾಕರಿಸಿದ್ದರು. ಸೂಪರ್ ಸ್ಟಾರ್ ರಜನೀಕಾಂತ್ ಯಾವುದೇ ಜಾಹಿರಾತಿನಲ್ಲೂ ನಟಿಸುವುದಿಲ್ಲ. ಇನ್ನು ಅಮೀರ್ ಖಾನ್ ತಾನು ಅಂಬಾಸಿಡರ್ ಆಗಬೇಕಾದರೆ ಬ್ರ್ಯಾಂಡನ್ನು ಅಳೆದೂ ತೂಗಿ ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಅಮಿತಾಬ್ ಬಚ್ಛನ್ ಕೂಡಾ ಕೆಲವು ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಲು ಒಪ್ಪುತ್ತಿಲ್ಲ. ಸಾರ್ವಜನಿಕ ಅಭಿಪ್ರಾಯ ಇವರಲ್ಲಿ ಇಂಥಹದ್ದೊಂದ ಬದಲಾವಣೆಯನ್ನು ಸದ್ದಿಲ್ಲದೆ ಹುಟ್ಟುಹಾಕಿದೆ.

2015ರಲ್ಲಿ ‘ನೆಸ್ಟ್ಲೇ ಮ್ಯಾಗಿ’ಯಲ್ಲಿ ಹೆಚ್ಚುವರಿ ಸೀಸ ಮತ್ತು ಮೋನೋ ಸೋಡಿಯಂ ಗ್ಲುಟಮೇಟ್ ಇದೆ ಎಂದು ಪತ್ತೆಯಾದ ನಂತರ ಉತ್ಪನ್ನಗಳನ್ನು ಜಾಹೀರಾತು ರಾಯಭಾರಿಗಳನ್ನೂ ಜವಾಬ್ದಾರರನ್ನಾಗಿ ಮಾಡಬೇಕು ಎಂಬ ಕೂಗು ದೇಶಾದ್ಯಂತ ಬಲವಾಗಿ ಎದ್ದಿತ್ತು. ಮ್ಯಾಗಿಯನ್ನ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಮುಂತಾದ ಖ್ಯಾತನಾಮರೇ ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದರಿಂದ, ಜನರ ಆಕ್ರೋಷ ತಾರೆಗಳತ್ತ ತಿರುಗಿದ್ದನ್ನು ಇಲ್ಲಿ ಸ್ಮರಿಸಬಹುದು.

Top