An unconventional News Portal.

ಅದಾನಿ ಕಂಪನಿಗೆ ಪರಿಸರ ಸಂಘಟನೆಗಳ ಲಾತ: 1600 ಕೋಟಿ ಕಲ್ಲಿದ್ದಲ ಗಣಿ ಯೋಜನೆ ಕೈ ಬಿಟ್ಟ ‘ಮೋದಿ ಸ್ನೇಹಿತ’!

ಅದಾನಿ ಕಂಪನಿಗೆ ಪರಿಸರ ಸಂಘಟನೆಗಳ ಲಾತ: 1600 ಕೋಟಿ ಕಲ್ಲಿದ್ದಲ ಗಣಿ ಯೋಜನೆ ಕೈ ಬಿಟ್ಟ ‘ಮೋದಿ ಸ್ನೇಹಿತ’!

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶದಲ್ಲಿ ಉದ್ದೇಶಿತ 1600 ಕೋಟಿ ಕಲ್ಲಿದ್ದಲ ಗಣಿಗಾರಿಕೆ ಯೋಜನೆಯಿಂದ ಭಾರತ ಮೂಲದ ಉದ್ಯಮಿ ಗೌತಮ್ ಅದಾನಿ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಈ ಮೂಲಕ ಅದಾನಿ ಕಂಪನಿ ಯೋಜನೆಗಳ ವಿರುದ್ಧ ಭಾರಿ ಹೋರಾಟವನ್ನು ಸಂಘಟಿಸಿದ್ದ ಪರಿಸರ ಸಂಘಟನೆಗಳಿಗೆ ಮೊದಲ ಹಂತದ ಜಯ ಲಭಿಸಿದಂತಾಗಿದೆ. ಕಂಪನಿಯ ಯೋಜನೆ ಪರಿಸರಕ್ಕೆ ಮಾರಕ ಎಂದು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಉದ್ದೇಶಿತ ಕಲ್ಲಿದ್ದಲ ಗಣಿಗಾರಿಕೆ ಯೋಜನೆ ಆರಂಭಕ್ಕೆ ಮುನ್ನವೇ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅದಾನಿ ಮತ್ತವರ ಕಂಪನಿ ಯೋಜನೆಯನ್ನು ಕೈಬಿಡಲು ತೀರ್ಮಾನಿಸಿದೆ ಎಂದು ವರದಿ ಹೇಳುತ್ತಿವೆ.
‘ದಿ ಆಸ್ಟ್ರೇಲಿಯನ್’ ಮಾಧ್ಯಮಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಅದಾನಿ, “ಯೋಜನೆ ಕೆಲಸಗಳು ನಿಧಾಗತಿಯಲ್ಲಿ ಸಾಗುತ್ತಿವೆ. ಇದನ್ನು ನಂಬಿಕೊಂಡು ಕಾಯುತ್ತ ಕೂರುವುದರಲ್ಲಿ ಅರ್ಥವಿಲ್ಲ,” ಎಂದಿದ್ದಾರೆ.
ಮಹತ್ವಾಕಾಂಕ್ಷಿ ಯೋಜನೆ:
adani-protest-australia-1ಅದಾನಿ ಮಾಲೀಕತ್ವದ ಕಂಪನಿಯು ಜಗತ್ತಿನ ಅತೀ ದೊಡ್ಡ ಕಲ್ಲಿದ್ದಲ ಗಣಿಗಾರಿಕೆಯನ್ನು ಅಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶದಲ್ಲಿ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಗಣಿಗಾರಿಕೆ, ಕಲ್ಲಿದ್ದಲ ಸಾಗಾಟಕ್ಕೆ ರಸ್ತೆ ಹಾಗೂ ರಫ್ತು ಮಾಡಲು ಬಂದರು ನಿರ್ಮಾಣ ಯೋಜನೆಯ ಉದ್ದೇಶವಾಗಿತ್ತು. ಇಲ್ಲಿ ಗಣಿಗಾರಿಕೆಯಿಂದ ಸುಮಾರು 1100 ಕೋಟಿ ಟನ್ ಕಲ್ಲಿದ್ದಲನ್ನು ತೆಗೆದು ಭಾರತದ ಅದಾನಿ ಪವರ್ ಪ್ಲಾಂಟ್ಗೆ ಸಾಗಿಸಲು ಆಸ್ಟ್ರೇಲಿಯಾ ಸರಕಾರ ಅನುಮತಿ ನೀಡಿತ್ತು. ಆದರೆ, ಪರಿಸರ ಸಂಘಟನೆಗಗಳು ಕಳೆದ ಏಪ್ರಿಲ್ ತಿಂಗಳಿನಲ್ಲಿ ಯೋಜನೆಗೆ ನೀಡಿರುವ ಅಂಗೀಕಾರವನ್ನು ಮರು ಪರಿಶೀಲನೆ ನಡೆಸುವಂತೆ ಅಲ್ಲಿನ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದವು. ಅದರ ಜತೆಗೆ, ಅದಾನಿ ಯೋಜನೆಗೆ ಸಾಲ ನೀಡಲು ಮುಂದೆ ಬಂದ ಬ್ಯಾಂಕುಗಳ ಮುಂದೆ ಪ್ರತಿಭಟನೆ ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಲವು ಆರ್ಥಿಕ ಸಂಸ್ಥೆಗಳು ಯೋಜನೆಗೆ ಹಣಕಾಸು ಸಹಾಯ ನೀಡುವ ಒಪ್ಪಂದದಿಂದ ಹಿಂದೆ ಸರಿದಿದ್ದವು.
 ‘2010ರಲ್ಲಿ ಆಸ್ಟ್ರೇಲಿಯಾ ಕಾರ್ಮೈಕಲ್ ಪ್ರದೇಶದಲ್ಲಿ ಕಲ್ಲಿದ್ದಲ ಗಣಿಗಾರಿಕೆ ಸಂಬಂಧ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಜಾಗತಿಕ ಕಲ್ಲಿದ್ದಲ ಬೇಡಿಕೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗುತ್ತಿದೆ,’ ಎಂದು ಅದಾನಿ ಮೈನಿಂಗ್ ವೆಬ್ ಸೈಟ್ ಹೇಳಿಕೊಂಡಿತ್ತು.
ವಿರೋಧ ಯಾಕೆ?:
ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಜನವರಿಯಲ್ಲಿ ನಡೆದ ಜಿ-7 ದೇಶಗಳ ಶೃಂಗಸಭೆಯಲ್ಲಿ ಜಾಗತಿಕ ಇಂಧನ ಬೇಡಿಕೆ ಪೂರೈಸಲು ಕಲ್ಲಿದ್ದಲ ಬಳಕೆಯನ್ನು ನಿಲ್ಲಿಸಬೇಕು ಎಂಬ ಒಪ್ಪಂದವನ್ನು ಮಾಡಿಕೊಂಡಿದ್ದವು. ಇದರ ಜತೆಗೆ, ಜಾಗತಿಕವಾಗಿ ಇಂಧನ ಮೂಲವಾಗಿ ಕಲ್ಲಿದ್ದಲ ಬಳಕೆಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಇರುವುದನ್ನು ವಿಶ್ವಸಂಸ್ಥೆ ಒತ್ತಿ ಹೇಳಿತ್ತು. ಹೀಗಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಸಂಘಟನೆಗಳು ಕಲ್ಲಿದ್ದಲ ಗಣಿಗಾರಿಕೆ ವಿರುದ್ಧ ಹೋರಾಟವನ್ನು ಆರಂಭಿಸಿವೆ. ಇದರ ಭಾಗವಾಗಿ ಆಸ್ಟ್ರೇಲಿಯಾದಲ್ಲಿ ಉದ್ದೇಶಿತ ಅದಾನಿ ಕಂಪನಿಯ ಕಲ್ಲಿದ್ದಲ ಗಣಿಗಾರಿಕೆ ಯೋಜನೆ ಕುರಿತು ಭಾರಿ ವಿರೋಧ ವ್ಯಕ್ತವಾಗಿತ್ತು.
ಭಾರತದ ಕತೆ ಏನು?:

coal-india-1

ಭಾರತದಲ್ಲಿ ಪ್ರಮುಖ ಇಂಧನ ಮೂಲವಾಗಿ ಇಂದಿಗೂ ಕಲ್ಲಿದ್ದಲನ್ನೇ ಅವಲಂಬಿಸಲಾಗಿದೆ. ಇಂಡಿಯಾ ಕೋಲ್ ಲಿಮಿಟೆಡ್ (ಸಿಐಎಲ್) ಎಂಬ ಸರಕಾರಿ ಸ್ವಾಮ್ಯದ ಕಂಪನಿ ಕಲ್ಲಿದ್ದಲ ಗಣಿಗಾರಿಕೆಯನ್ನು ನಿರ್ವಹಿಸುತ್ತಿದೆ. ದೇಶದ ಕಲ್ಲಿದ್ದಲ ಗಣಿಗಾರಿಕೆಯಲ್ಲಿ ಶೇ. 90ರಷ್ಟ ಪಾಲನ್ನು ಸಿಐಎಲ್ ಹೊಂದಿದೆ. ಗಣಿಗಾರಿಕೆ ನಡೆಸಿದ ಕಲ್ಲಿದ್ದಲನ್ನು ಸರಕಾರಿ ಹಾಗೂ ಖಾಸಗಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇವತ್ತು ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಪೈಕಿ ಶೇ. 78ರಷ್ಟು ಕಲ್ಲಿದ್ದಲನ್ನೇ ಕಚ್ಚಾ ವಸ್ತುವಾಗಿ ಬಳಕೆ ಮಾಡಲಾಗುತ್ತಿದೆ. ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ಆರ್ಥಿಕವಾಗಿ ಲಾಭದಾಯಕ ಅನ್ನಿಸಿಕೊಂಡಿದ್ದರೂ, ಪರಿಸರಕ್ಕೆ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರುತ್ತಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಿನ್ನೆಲೆಯಲ್ಲಿ ಕಲ್ಲಿದ್ದಲಿಗೆ ಭಾರಿ ಬೇಡಿಕೆ ಇದೆ. ಈ ಮಾರುಕಟ್ಟೆಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಅದಾನಿ ಕಂಪನಿ ಆಸ್ಟ್ರೇಲಿಯಾದಿಂದ ಕಲ್ಲಿದ್ದನ್ನು ಪೂರೈಕೆ ಮಾಡುವ ಯೋಜನೆಗೆ ಕೈ ಹಾಕಿತ್ತು.

ಯಾರು ಈ ಅದಾನಿ?: 

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಉದ್ಯಮಿಗಳ ಪೈಕಿ ಅದಾನಿ ಪ್ರಮುಖರು. ಹಿಂದೆ, ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರಿಗೆ ಸಿಐಐನಲ್ಲಿ ಅವಮಾನಕ್ಕೆ ಪ್ರತಿಯಾಗಿ, ಅದಾನಿ ‘ರಿಸರ್ಜಂಟ್ ಗ್ರೂಪ್ ಆಫ್ ಗುಜರಾತ್’ ಎಂಬ ಪ್ರತ್ಯೇಕ ಉದ್ಯಮಿಗಳ ಸಂಘವನ್ನು ಹುಟ್ಟು ಹಾಕಿದ್ದವು. ಮೋದಿ ಪ್ರಧಾನಿಯಾದ ನಂತರ ಅದಾನಿ ಅವರ ಜತೆ ವಿದೇಶ ಪ್ರವಾಸದಲ್ಲಿ ಪಾಲ್ಗೊಂಡಿದ್ದರು ಎಂಬುದು ಸುದ್ದಿಯಾಗಿತ್ತು.

Top