An unconventional News Portal.

‘ಯುದ್ಧ ನಡೆದರೆ 10 ದಿನಗಳಲ್ಲಿ ಮದ್ದುಗುಂಡುಗಳು ಖಾಲಿ’: ಸೇನೆಯ ಅಂತರಂಗ ಬಿಚ್ಚಿಟ್ಟ ಸಿಎಜಿ ವರದಿ

‘ಯುದ್ಧ ನಡೆದರೆ 10 ದಿನಗಳಲ್ಲಿ ಮದ್ದುಗುಂಡುಗಳು ಖಾಲಿ’: ಸೇನೆಯ ಅಂತರಂಗ ಬಿಚ್ಚಿಟ್ಟ ಸಿಎಜಿ ವರದಿ

ಭಾರತೀಯ ಸೇನೆ ಮದ್ದು ಗುಂಡುಗಳ ಕೊರತೆಯನ್ನು ಎದುರಿಸುತ್ತಿದೆ. ಒಂದು ವೇಳೆ ಯುದ್ಧ ನಡೆದರೆ 10 ದಿನಗಳ ಒಳಗಾಗಿ ಸೈನಿಕರ ಕೈಲಿರುವ ಬಹುತೇಕ ಮದ್ದು ಗುಂಡುಗಳು ಖಾಲಿಯಾಗುತ್ತವೆ…

ಹೀಗೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ ಶುಕ್ರವಾರ ಸಂಸತ್‌ನಲ್ಲಿ ಮಂಡನೆಯಾದ ‘ಸಿಎಜಿ’ ವರದಿ.

ಯುದ್ಧದ ಕಾರ್ಮೋಡವನ್ನು ಆವರಿಸಿರುವ ಈ ಸಮಯದಲ್ಲಿ ದೇಶದ ಸೇನೆಯ ಕಾರ್ಯಕ್ಷಮತೆಯ ಕುರಿತು ಅಬ್ಬರ ಪ್ರಚಾರ ನಡೆಯುತ್ತಿದೆ. ಭಾರತೀಯ ಸೇನೆ ಹೊಂದಿರುವ ಅತ್ಯಾಧುನಿಕ ಆಯುಧಗಳ ಮಾಹಿತಿ ಹರಿದು ಬರುತ್ತಿದೆ. ಅದೇ ಸಮಯದಲ್ಲಿ ಸಾಮಾನ್ಯ ಸೈನಿಕರಿಗೆ ಅಗತ್ಯವಾಗಿರುವ ಮದ್ದು ಗುಂಡುಗಳ ಸರಬರಾಜಿನಲ್ಲಿ ಇರುವ ಕೊರತೆಯನ್ನು ಸಿಎಜಿ ವರದಿ ಬಹಿಂಗಪಡಿಸಿದೆ.

ವರದಿಯಲ್ಲೇನಿದೆ?: 

ಸೇನೆಗೆ ಮದ್ದು ಗುಂಡುಗಳನ್ನು ಸರಬರಾಜು ಮಾಡುವ ‘ಆರ್ಡಿನೆನ್ಸ್‌ ಫ್ಯಾಕ್ಟರಿ ಬೋರ್ಡ್‌ (ಓಎಫ್‌ಸಿ)ನ ಕಾರ್ಯಕ್ಷಮತೆಯಲ್ಲಿ ಹೆಚ್ಚಳವಾಗಿಲ್ಲ. 2013ರಲ್ಲಿ ಅದರ ಪರಿಸ್ಥಿತಿ ಹೇಗಿತ್ತೋ, ಈಗಲೂ ಹಾಗೆ ಇದೆ ಎಂದು ಲೆಕ್ಕ ಪರಿಶೋಧಕರ ವರದಿ ಹೇಳಿದೆ.

ವರದಿಯಲ್ಲಿ ಎರಡು ಪ್ರಮುಖ ವಿಚಾರಗಳನ್ನು ಮುಂದಿಡಲಾಗಿದೆ. ಕಾಲಾಳುಗಳು ಬಳಸುವ ಗುಂಡುಗಳು ಹಾಗೂ ಟ್ಯಾಂಕ್‌ಗಳು ಬಳಸುವ ಮದ್ದುಗಳನ್ನು ಸರಬರಾಜು ಮಾಡುವಲ್ಲಿ ಓಎಫ್‌ಸಿ ಸೋತಿದೆ. 2013ರಲ್ಲಿ ಮುಂದಿನ ವರ್ಷಗಳಲ್ಲಿ ಎಷ್ಟು ಪ್ರಮಾಣದ ಮದ್ದು ಮತ್ತು ಗುಂಡುಗಳನ್ನು ಸೇನೆಗೆ ಒದಗಿಸಬೇಕು ಎಂದು ಸರಕಾರಿ ಸ್ವಾಮ್ಯದ ಓಎಫ್‌ಸಿಗೆ ಗುರಿ ನೀಡಲಾಗಿತ್ತು. ಆದರೆ ಸೆ. 2016ರ ಹೊತ್ತಿಗೂ ಗುರಿಯನ್ನು ತಲುಪುವಲ್ಲಿ ಅದು ವಿಫಲವಾಗಿದೆ ಎಂದು ವರದಿ ಹೇಳಿದೆ.

ಸದ್ಯ ಸೇನೆಯಲ್ಲಿ ಲಭ್ಯ ಇರುವ ಮದ್ದುಗಳ ಸಂಖ್ಯೆ ಆತಂಕ ಮೂಡಿಸುವಷ್ಟು ಕಡಿಮೆಯಾಗಿದೆ. ‘ಇರುವ ದಾಸ್ತಾನು 10 ದಿನಗಳಿಗೂ ಸಾಕಾಗುವುದಿಲ್ಲ’ ಎಂದು ವರದಿ ಹೇಳಿದೆ.

ಸೇನೆಗೆ ಮೀಸಲಿಟ್ಟ ಹಣದಲ್ಲಿ ಅನಗತ್ಯ ವಿಚಾರಗಳಿಗೆ ಖರ್ಚು ಮಾಡಿರುವ ಅಂಶಗಳನ್ನು ಸಿಎಜಿ ಪತ್ತೆ ಹಚ್ಚಿದೆ. “ಔಟ್‌ಬೋರ್ಟ್‌ ಮೋಟರ್ಸ್‌ಗಳಿಗಾಗಿ 1. 26 ಕೋಟಿ ವೆಚ್ಚ ಮಾಡಲಾಗಿದೆ. ಇವುಗಳನ್ನು ಸೇನೆಯ ಕಮಾಂಡರ್‌ಗಳಿಗೆ ನೀಡಲಾಗಿರುವ ವಿಶೇಷ ಆರ್ಥಿಕ ಅಧಿಕಾರವನ್ನು ಬಳಸಿ ಖರೀದಿ ಮಾಡಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಸೇನೆಯು ಖರೀದಿಸಿದ 50 ಔಟ್‌ಬೋರ್ಡ್‌ ಮೋಟರ್‌ಗಳ ಪೈಕಿ ಕೇವಲ 46ನ್ನು ಬರೀ 10 ಗಂಟೆಗಳ ಅವಧಿಗೆ ಬಳಸಲಾಗಿದೆ,” ಎಂದು ವರದಿ ಬಹಿರಂಗಪಡಿಸಿದೆ.

ಸೇನೆಯ ಮದ್ದುಗುಂಡಗಳ ಸರಬರಾಜಿನ ಜತೆಗೆ ಸೇನೆಗೆ ಇನ್ನಿತರ ತಾಂತ್ರಿಕ ನೆರವು ನೀಡುವ ಡಿಫೆನ್ಸ್‌ ರಿಸರ್ಚ್‌ ಅಂಡ್ ಡೆವೆಲೆಪ್‌ಮೆಂಟ್‌ ಆರ್ಗನೈಸೇಶನ್ (ಡಿಆರ್‌ಡಿಓ) ಬಗ್ಗೆಯೂ ಸಿಎಜಿ ವರದಿಯಲ್ಲಿ ಆರೋಪಗಳನ್ನು ಮಾಡಲಾಗಿದೆ. ಏರೋಸ್ಟಾಟ್‌ ಸರ್ವೆಲೆನ್ಸ್‌ ಸಿಸ್ಟಮ್‌ ಹೆಸರಿನಲ್ಲಿ ಆಕಾಶದಿಂದ ಮೇಲ್ವಿಚಾರಣೆ ನಡೆಸುವ, ಗುಪ್ತ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯೊಂದನ್ನು ಸುಮಾರು 6. 20 ಕೋಟಿ ವೆಚ್ಚದಲ್ಲಿ ಡಿಆರ್‌ಡಿಓ ರೂಪಿಸಿತ್ತು. ಆದರೆ ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಎಂಬುದನ್ನು ವರದಿ ಹೇಳಿದೆ.

ಇದರ ಜತೆಗೆ, ಅಗ್ನಿ ಅವಘಡಗಳು ನಡೆದಾಗ ತಡೆಯಲು ಸರಿಯಾದ ತುರ್ತು ಸೇವಾ ವ್ಯವಸ್ಥೆಗಳು ಇಲ್ಲದಿರುವುದನ್ನು ಸಿಎಜಿ ವರದಿ ಹೇಳಿದೆ. ತುರ್ತು ಅಗ್ನಿ ಶಾಮಕ ದಳದಲ್ಲಿ ಸಿಬ್ಬಂದಿಗಳ ಹಾಗೂ ಸೌಲಭ್ಯಗಳ ಕೊರತೆ ಇರುವುದನ್ನು ವರದಿ ಪ್ರಸ್ತಾಪಿಸಿದೆ.

ಇವುಗಳ ಜತೆಗೆ ಸೇನೆಗೆ ಒದಗಿಸಬೇಕಿರುವ ಟ್ಯಾಂಕರ್‌ಗಳು ಹಾಗೂ ಇನ್ನಿತರೆ ಯುದ್ಧ ವಿಮಾನಗಳ ಪೂರೈಕೆಯಲ್ಲಿಯೂ ನಿಧಾನಗತಿಯನ್ನು ವರದಿ ಬಹಿರಂಗಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ಸೇನೆಯ ಒಳಗಿನ ಹಲವು ನ್ಯೂನತೆಗಳನ್ನು ವರದಿ ಬಹಿರಂಗಪಡಿಸಿದೆ.

ಹಿಂದೆ, ಭಾರತ ಮತ್ತು ಚೈನಾ ಯುದ್ಧ ಸಮಯದಲ್ಲಿ ಭಾರತೀಯ ಸೈನಿಕರು ಮದ್ದು ಗುಂಡುಗಳಿಲ್ಲದೆ ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರು ಎಂಬ ಜನಪ್ರಿಯವಾದ ಆರೋಪ ಅಂದಿನ ಸರಕಾರದ ಮೇಲಿತ್ತು. ಇವತ್ತಿಗೂ ಕೂಡ ಚೈನಾ ಗಡಿಯಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಿರುವಾಗಲೇ ಭಾರತೀಯ ಸೇನೆಯಲ್ಲಿ ಮದ್ದು ಗುಂಡುಗಳು ಹಾಗೂ ಯುದ್ಧ ಸಾಮಗ್ರಿಗಳ ಸರಬರಾಜಿನಲ್ಲಿ ಕೊರತೆ, ಸೇನೆಗೆ ಮೀಸಲಿಟ್ಟ ಹಣದಲ್ಲಿ ಅನಗತ್ಯ ವೆಚ್ಚಗಳ ಮಾಹಿತಿ ಹೊರಬಿದ್ದಿದೆ.

 

Top